Karnataka Bhagya
ಕರ್ನಾಟಕ

ಮಳಿ ಬಂದ್ ಎಲ್ಲಾ ಬೆಳಿ ಮಕ್ಕೊಂಡ್ ಬಿಟ್ಟಾವ್ರಿ

ಮಳಿ ಬಂದ್ ಎಲ್ಲಾ ಬೆಳಿ ಮಕ್ಕೊಂಡ್ ಬಿಟ್ಟಾವ್ರಿ

ಯಾದಗಿರಿ ಮತಕ್ಷೇತ್ರದ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ರವರಿಂದ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ


ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ಹೆಸರು, ತೊಗರಿ, ಹತ್ತಿ ಯಾವುದ್ ಇಲ್ಲರೀ ಎಲ್ಲಾ ಮಳಿ ಬಂದ್ ಬೆಳಿ ಎಲ್ಲಾ ಮಕ್ಕೊಂಡ್ ಬಿಟ್ತಿರಿ, ಎಲ್ಲಾ ಬೆಳಿ ಸತ್ತೋಗ್ಯಾವ, ನಮ್ ಹೊಲದಾಗ ನೀರ್ ನಿಂತ್ ಕೆರಿ ಆದಂಗ ಆಗ್ಯಾವ ಇವು ಮುಷ್ಟೂರು, ಪಗಲಾಪೂರ ರೈತರ ಅಳಲಿನ ಮಾತುಗಳು.
ಬುಧವಾರ ಬೆಳಗ್ಗೆ ಯಾದಗಿರಿ ಮತಕ್ಷೇತ್ರದ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗಾಗಿ ತೆರಳಿದ ಸಂದರ್ಭದಲ್ಲಿ ರೈತರಾಡಿದ ನೋವಿನ ನುಡಿಗಳು ಸ್ಥಳದಲ್ಲಿದ್ದ ಅಧಿಕಾರಿಗಳಾದಿಯಾಗಿ ಜನಪ್ರತಿನಿಧಿಗಳಿಗೂ ಮನಕಲುಕುವಂತಿತ್ತು.
ರೈತರ ನೋವಿನ ನುಡಿಗಳನ್ನಾಲಿಸಿದ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ, ಮಳಿ ಬಂದ್ ಎಲ್ಲಾ ಬೆಳಿ ಹಾಳಾಗ್ಯಾದ ಅಂತ ಗೊತ್ತಿದೆ ಅದಕ್ಕಾ ನಾವ್ ಇದನ್ನ ನೋಡಲಿಕ್ಕೆ ಬಂದೀವಿ, ನಮ್ ಸರ್ಕಾರ ನಿಮ್ ಜೊತಿ ಆದ ನೀವು ಯಾರ್ ಧೈರ್ಯ ಕಳ್ಕೊಬ್ಯಾಡ್ರಿ, ನಾವ್ ನಿಮ್ ಜೊತಿ ಇದ್ದೀವಿ ಎಂದು ರೈತ ಮಸ್ತೆಪ್ಪ ಮುಷ್ಟೂರ ಹೆಗಲ ಮೇಲೆ ಕೈ ಹಾಕಿ ಸಾಂತ್ವಾನ ಹೇಳಿದರು.
ಸ್ಥಳದಲ್ಲಿದ್ದ ಯಾದಗಿರಿ ತಹಸೀಲ್ದಾರ ಸುರೇಶ ಅಂಕಲಿಗಿ ಮತ್ತವರ ಕಂದಾಯ ಇಲಾಖೆಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ, ನೋಡ್ರಿ ಬಡವರ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ, ಯಾವುದೇ ಕಾರಣಕ್ಕೂ ಯಾವೊಬ್ಬ ರೈತರ ಹೆಸರು ಪರಿಹಾರ ವ್ಯವಸ್ಥೆಯಿಂದ ಕೈಬಿಡಬಾರದು, ಸಮೀಕ್ಷೇ ಮಾಡುವಾಗ ಪ್ರತಿಯೊಬ್ಬರನ್ನು ಗಮನದಲ್ಲಿಟ್ಟುಕೊಂಡು ಬೆಳೆಹಾನಿ ಸಮೀಕ್ಷೆ ಮಾಡಬೇಕು, ಒಂದು ವೇಳೆ ಯಾವುದಾದರೂ ರೈತರೂ ನಮ್ ಕಚೇರಿಗೆ ಬಂದು ನಮಗೆ ಪರಿಹಾರ ಸಿಕ್ಕಿಲ್ಲವೆಂದು ಹೇಳಿದರೆ ನಾನು ಸುಮ್ಮನಿರಲ್ಲ, ಎಲ್ಲಾ ರೈತರಿಗೆ ಕಡ್ಡಾಯವಾಗಿ ನ್ಯಾಯ ಸಿಗಬೇಕು, ಸರ್ಕಾರ ಪರಿಹಾರ ಕೊಡಬೇಕಾದ್ರೆ ಅಧಿಕಾರಿಗಳು ನೀವು ಕೆಲಸ ಸರಿಯಾಗಿ ಮಾಡಿ, ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸಲಹೆ ನೀಡಿದರು.
ಯಪ್ಪಾ ಸಾಬ್ ನಮ್ ಹೊಲ ಆಕಡಿ ಆದ ಸ್ವಲ್ಪ ರ‍್ರಿ, ನಮ್ ಮನಿ ಮುಂದ ನೀರು ನಿಂತು ಬಾಳ್ ತ್ರಾಸ್ ಆಗ್ಯಾದ ನೋಡ್ರಿ, ಗ್ರಾಮ ಪಂಚಾಯತಿ ಪಿಡಿಒ ಕೇರ್ ಮಾಡ್ತಿಲ್ಲ, ಎಂದು ಅಂಗಲಾಚಿದ ಮತ್ತೋರ್ವನ ಮಾತು ಕೇಳಿ ಮುಷ್ಟೂರು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಅಲ್ಲಿನ ಪರಿಸ್ಥಿತಿ ಕಂಡು ಸ್ಥಳದಿಂದಲೇ ಯಾದಗಿರಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪೋನ್ ಮುಖಾಂತರ ಸಂಪರ್ಕಿಸಿ, ಕೂಡಲೇ ಮುಷ್ಠೂರು ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿ ನೊಡ್ರಿ, ಮೊದಲು ಇಲ್ಲಿನ ನೀರ್ ಖಾಲಿ ಮಾಡಿಸಿ, ತಗ್ಗು ಪ್ರದೇಶಗಳಲ್ಲಿ ಎಲ್ಲೇ ನೀರ್ ನಿಂತರೂ ಖಾಲಿ ಮಾಡಿಸಿ, ರೋಗ ರುಜಿನಿಗಳು ಬರುವ ಸಮಯವಿದು, ಅಲ್ಲಿಗೆ ಮರುಮು ಹಾಕಿಸಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಸಾಯಿಬಣ್ಣ ಕೆಂಗೂರಿ, ಮುಖಂಡರಾದ ಬಸವರಾಜಪ್ಪಗೌಡ ದಳಪತಿ, ಅಮರೇಶ ಜಾಕಾ, ಮಲ್ಲಿಕಾರ್ಜುನ ಈಟೆ, ಲಚಮಾರೆಡ್ಡಿ, ಸಿದ್ದು ಮುಷ್ಟೂರು, ಸಂತೋಷಕುಮಾರ, ಸುರೇಶ ಮಡ್ಡಿ, ತಿಮ್ಮಣ್ಣ ನಾಯಕ ಸೇರಿದಂತೆ ಇತರರಿದ್ದರು.

ಬಾಕ್ಸ್
ಸಾಬ್ರೇ ನಮ್ ಹೊಲಾನು ಸ್ವಲ್ಪ ನೋಡ್ರಿ, ನಾವ್ ಬಾಳ್ ಲಾಸ್ ಆಗಿವಿ ಹೀಗೆ ಹತ್ತು ಹಲವು ರೈತರು ಶಾಸಕರಲ್ಲಿ ಕೈಮುಗಿದು ಕೇಳುತ್ತಿರುವಾಗ ಎಲ್ಲಾ ಹೊಲಾನು ಲಾಸ್ ಆಗ್ಯಾವ ಅಂತ ನಿಮ್ಮೂರವರಲ್ಲಿ ಕೇಳಿ ತಿಳ್ಕೊಂಡಿನಿ, ಅದನ್ನ ನೋಡ್ಲಿಕ್ಕೆ ನಾ ಬಂದಿನಿ, ನಾ ನಿಮ್ ಹೊಲಕ್ಕ ಬಂದರೂ ಅಷ್ಟೇ ಬರದಿದ್ದರೂ ಅಷ್ಟೇ ಎಲ್ಲಾ ರೈತರಿಗೆ ಕಡ್ಡಾಯವಾಗಿ ಪರಿಹಾರ ಸಿಗುವಂತ ಮಾಡ್ತಿನಿ, ನೀವು ಕಾಳಜಿ ಬಿಡ್ರಿ ಎಲ್ಲಾ ರೈತರು ನಮಗ ಅಷ್ಟೇ ಎಂದು ಶಾಸಕರು ರೈತರನ್ನು ಸಮಧಾನಪಡಿಸುತ್ತಿದ್ದರು.

ಬಾಕ್ಸ್
ಹೆಸರು ಬೆಳಿ ರೈತರಿಗೆ ಕೈ ಹಿಡಿಯುವ ಬೆಳಿ ಆದ ಅದಕ್ಕಾ ರೈತರು ಪ್ರತಿಯೊಬ್ಬರೂ ಹೆಸರು ಬೆಳೆಯಲು ಮುಂದಾಗುತ್ತಾರೆ ಎಂದ ಶಾಸಕ ತುನ್ನೂರ ಮಾತಿಗೆ ಧ್ವನಿಗೂಡಿಸಿದ ರೈತರು ಹತ್ ಸಾವಿರ ದಾಣಿ ಇತ್ತರಿ ಧಣಿ ಎಲ್ಲಾ ಹೊಳಿ ನೀರಾಗ ಹುಣಸೆಹಣ್ಣು ತೊಳದಾಂಗ ಆತು, ರೈತರೆಲ್ಲ ದಾನಿ ಹೆಚ್ಚಿದ್ದರಿಂದ ಖುಷಿ ಇದ್ದೀವಿ, ಈ ಮಳಿ ಬಂದ್ ಎಲ್ಲಾ ಹಾಳ್ ಮಾಡಿತು.

Related posts

ಕರ್ನಾಟಕ ರಕ್ಷಣಾ ವೇದಿಕೆ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಕಸಾಪ ಆವರಣದಲ್ಲಿ ಕಾರ್ಯಕ್ರಮ

Mahesh Kalal

“ನಾನಿದನ್ನೆಲ್ಲ ಮಾಡುತ್ತಿರುವುದೇ ನನ್ನ ಕನಸಿನ ‘ಪುಣ್ಯಕೋಟಿ’ಗಾಗಿ”: ರಕ್ಷಿತ್ ಶೆಟ್ಟಿ.

Nikita Agrawal

ಎಕ್ಸ್ ಕ್ಯೂಸ್ ಮೀ.. ಸುದೀರ್ಘ ಗ್ಯಾಪ್ ನಂತರ ಮರಳುತ್ತಿದ್ದಾರೆ ಸುನೀಲ್ ರಾವ್

Nikita Agrawal

Leave a Comment

Share via
Copy link
Powered by Social Snap