Karnataka Bhagya

ಇತರೆ

ಪುಟ್ಟಕ್ಕನ ಮಗಳಾಗಿ ಸಂಜನಾ ಬುರ್ಲಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರವಾಹಿ ಖ್ಯಾತಿಯ ಸಂಜನಾ ಬುರ್ಲಿ ಅವರ ಕುರಿತು ವಿಶೇಷವಾಗಿ ಹೇಳಬೇಕಾಗಿಲ್ಲ. ಸಾಧಾರಣ ಹುಡುಗಿ ಅಲ್ಲದೆ ದಂಗೆ ಹೇಳುವ ಗುಣ ಹೊಂದಿರುವ ನಾಯಕಿಯಾಗಿ ಅವರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅವರ ಜೀವನದಲ್ಲೂ ಈ ತರದ ಪಾತ್ರ ಮೊದಲನೆಯದ್ದು. ಇನ್ಸ್ಟಾಗ್ರಾಮ್ ನಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ‘ಲುಕ್ ಟೆಸ್ಟ್’ ಫೋಟೋವನ್ನು ಈ ಹಿಂದೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಹಳ್ಳಿಯ ಸುಂದರ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಫೋಟೋವನ್ನು ಹಂಚಿಕೊಂಡ ನಟಿ ”ನಾನು ಆಯ್ಕೆಯಾದರೆ ಅದನ್ನು ನೆನಪಿಟ್ಟುಕೊಳ್ಳಲು ಈ ಸೆಲ್ಫಿ ತೆಗೆದುಕೊಂಡಿದ್ದೆ. ಇಲ್ಲದಿದ್ದರೂ ನನ್ನ ಜೀವನದ ಮಹತ್ವದ ಘಟನೆಗಳನ್ನು ನೆನಪಿಸಲು ಚಿತ್ರಗಳನ್ನು ತೆಗೆದಿಡುವ ಅಭ್ಯಾಸ ನನಗಿದೆ. ರಿಮೈಂಡರ್ ಗಾಗಿ ಗೂಗಲ್ ಗೆ ಧನ್ಯವಾದಗಳು” ಎಂದಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸಂಜನಾ ಅವರ ಸ್ನೇಹಾ ಪಾತ್ರ ಎಲ್ಲರ ಮೆಚ್ಚುಗೆ ಪಡೆಯುವುದರೊಂದಿಗೆ ನಟಿ ಕಡಿಮೆ ಸಮಯದಲ್ಲಿ ಹೆಚ್ಚು ಖ್ಯಾತಿಗೊಳಿಸಿದವರಾಗಿದ್ದಾರೆ. ಧಾರಾವಾಹಿಯ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅವರು ”ಒಂದು ಹಳ್ಳಿಯ ಹುಡುಗಿಯಾಗಿ ಪಾತ್ರನಿರ್ವಹಿಸುವುದು ನನ್ನ ಪಾಲಿಗೆ ಕಠಿಣ ಸವಾಲೇ ಆಗಿತ್ತು. ನಾನು ಈ ಧಾರಾವಾಹಿಯಲ್ಲಿ ಗ್ಲಾಮರಸ್ ಆಗಿ ಗುರುತಿಸಿಕೊಳ್ಳುವ ಪಾತ್ರವಲ್ಲ. ನನ್ನನ್ನು ಹೊರತುಪಡಿಸಿ ಎಲ್ಲವೂ ಸರಿಯಾಗಿಯೇ ಇತ್ತು. ನಾನು ನಟನೆಗಾಗಿ ಬಹುತೇಕ ಒಂದು ವಾರಗಳ ಕೋಚಿಂಗ್ ಕ್ಲಾಸ್ ನ್ನು ತೆಗೆದುಕೊಂಡಿದ್ದೇನೆ. ಸ್ವರ ಸಮನ್ವಯತೆಯ ಬಗ್ಗೆ ತುಂಬಾ ಗಮನ ಹರಿಸಿದ್ದೇನೆ. ತುಂಬಾ ಪರಿಶ್ರಮವಹಿಸಿ ನಿರ್ವಹಿಸಿದ ಪಾತ್ರವಿದು”ಎಂದರು.

ಪುಟ್ಟಕ್ಕನ ಮಗಳಾಗಿ ಸಂಜನಾ ಬುರ್ಲಿ Read More »

ಬ್ಯೂಟಿಷಿಯನ್ ಆಗಿ ತೆರೆ ಮೇಲೆ ಮಿಂಚಲಿದ್ದಾರೆ ಕಾರುಣ್ಯಾ ರಾಮ್

2019ರಲ್ಲಿ ತೆರೆಕಂಡ ‘ಮನೆ ಮಾರಾಟಕ್ಕಿದೆ’ ಸಿನಿಮಾದ ಮೂಲಕ ಕೊನೆಯ ಬಾರಿ ತೆರೆಯಲ್ಲಿ ಕಾಣಿಸಿಕೊಂಡಿದ್ದ ನಟಿ ಕಾರುಣ್ಯ ರಾಮ್ ಇದೀಗ ಹಾಸ್ಯ ಚಿತ್ರ ‘ಪೆಟ್ರೋಮ್ಯಾಕ್ಸ್’ ಮೂಲಕ ಮತ್ತೆ ಸಿನಿರಂಗಕ್ಕೆ ಮರಳಿದ್ದಾರೆ.ಎರಡೂವರೆ ವರ್ಷಗಳ ನಂತರ ತಮ್ಮ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ ನಟಿ ಕಾರುಣ್ಯ. ಜುಲೈ 15ರಂದು ತೆರೆ ಕಾಣಲು ಸಿದ್ಧವಾಗಿರುವ ಪೆಟ್ರೋಮ್ಯಾಕ್ಸ್ ಬಗ್ಗೆ ಮಾತನಾಡಿದ ಅವರು ”ಯುನಿಸೆಟ್ ಸಲೂನ್ ಒಂದರಲ್ಲಿ ಬ್ಯೂಟಿಷಿಯನ್ ಆಗಿರುವ ಕವಿತಾ ಕೃಷ್ಣಮೂರ್ತಿ ಎಂಬ ಪಾತ್ರವನ್ನು ನಾನು ನಿಭಾಯಿಸುತ್ತಿದ್ದೇನೆ. ಇದು ನನ್ನ ವೃತ್ತಿ ಜೀವನದಲ್ಲಿ ತುಂಬಾ ಸವಾಲು ಭರಿತ ಪಾತ್ರವಾಗಿತ್ತು. ಅನಾಥ ಹುಡುಗಿಯಾಗಿ ಕವಿತಾ ಮೂರು ಹುಡುಗರೊಂದಿಗೆ ಬೆಳೆಯುತ್ತಾಳೆ. ಹಾಗಾಗಿ ಅವಳ ಗುಣ ನಡವಳಿಕೆಯಲ್ಲಿ ಸಾಧಾರಣ ಹುಡುಗಿಯರಂತಿರದೇ ವಿಶೇಷವಾಗಿರುತ್ತಾಳೆ. ಶೂಟಿಂಗ್ ಆರಂಭವಾದ ದಿನಗಳಲ್ಲಿ ನನ್ನ ಪಾತ್ರವನ್ನು ಆಹ್ವಾನಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿತ್ತು. ಬರು ಬರುತ್ತಾ ನನ್ನ ಪಾತ್ರವನ್ನು ತುಂಬಾ ಖುಷಿಯಿಂದ ನಿಭಾಯಿಸಲು ಕಲಿತೆ” ಎನ್ನುತ್ತಾರೆ. ”ಕಥೆಯ ಹೆಣೆ ಬೆಳೆಯುತ್ತಾ ಹೋದಂತೆ ನನ್ನ ಪಾತ್ರ ಕೂಡ ಒಂದು ಎಮೋಷನ್ ಟಚ್ ಅನ್ನು ಹೊಂದಲಿದ್ದು, ಇದೊಂದು ಸಂದೇಶಾತ್ಮಕ ಪಾತ್ರವಾಗಿದೆ. ನಾನಂತೂ ಖಂಡಿತವಾಗಿ ಹೇಳಬಲ್ಲೆ, ಏನೆಂದರೆ ಈ ಸಿನಿಮಾ ನೋಡಿದ ಮೇಲೆ ಜನರು ನನ್ನನ್ನು ಪೆಟ್ರೋಮ್ಯಾಕ್ಸ್ ಕಾರುಣ್ಯ ಎಂದು ಕರೆಯುತ್ತಾರೆ. ಯಾಕೆಂದರೆ ಇದು ಅಷ್ಟೊಂದು ಪ್ರಭಾವವನ್ನು ಬೀರಬಲ್ಲಂತಹ ಪಾತ್ರ. ಇದರೊಂದಿಗೆ ನೀನಾಸಂ ಸತೀಶ್, ನಾಗಭೂಷಣ್ ಹಾಗೂ ಅರುಣ್ ಕುಮಾರ್ ಅವರೊಂದಿಗಿನ ಚಿತ್ರೀಕರಣ ಸಂದರ್ಭ ನಮ್ಮನ್ನು ಆಪ್ತರನ್ನಾಗಿ ಮಾಡಿತು” ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಬ್ಯೂಟಿಷಿಯನ್ ಆಗಿ ತೆರೆ ಮೇಲೆ ಮಿಂಚಲಿದ್ದಾರೆ ಕಾರುಣ್ಯಾ ರಾಮ್ Read More »

ಹಿರಿತೆರೆ ಏರಿರೋ ‘ಪೆಟ್ರೋಮ್ಯಾಕ್ಸ್’ನ ಕಿರುತೆರೆ ಪ್ರವೇಶ!!

‘ನೀರ್ದೋಸೆ’ ಎಲ್ಲರ ಮೆಚ್ಚುಗೆಯ ಮೇಲೆಯೇ ಸೂಪರ್ ಹಿಟ್ ಆದ ಸಿನಿಮಾ. ಹಲವು ತರಲೆಯುಳ್ಳ ಮಾತುಗಳ ಮೂಲಕ ಜೀವನದ ಕೆಲವು ಮುಖ್ಯ ನೀತಿಗಳನ್ನ ಹೇಳುವಂತಹ ಪ್ರಯತ್ನ ‘ನೀರ್ದೋಸೆ’ಯ ಮೂಲಕ ಮಾಡಲಾಗಿತ್ತು. ಅದೇ ನಿರ್ದೇಶಕರಾದ ವಿಜಯ್ ಪ್ರಸಾದ್ ಅವರು ಮಾಡಿದ ಮುಂದಿನ ಸಿನಿಮಾ ‘ಪೆಟ್ರೋಮ್ಯಾಕ್ಸ್’. ಸತೀಶ್ ನೀನಾಸಂ ನಾಯಕರಾಗಿ ನಟಿಸಿರುವ ಈ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ. ಇದೀಗ ಸಿನಿಮಾದ ಡಿಜಿಟಲ್ ಹಾಗು ಸಾಟೆಲೈಟ್ ಹಕ್ಕುಗಳ ಮಾರಾಟದ ಬಗೆಗೆ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಚಿತ್ರ ಯಾವ ಒಟಿಟಿಯಲ್ಲಿ ಬರಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸತೀಶ್ ನೀನಾಸಂ ಅವರ ಜೊತೆ, ನಾಗಭೂಷಣ, ಹರಿಪ್ರಿಯಾ, ಕಾರುಣ್ಯ ರಾಮ್ ಹಾಗು ಮುಂತಾದವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿರೋ ಈ ಸಿನಿಮಾ ಇದೇ ಜುಲೈ 15ರಂದು ತೆರೆಕಂಡಿತ್ತು. ಒಂದಷ್ಟು ಮಿಶ್ರ ಪ್ರತಿಕ್ರಿಯೆಗಳನ್ನ ಪಡೆಯುತ್ತಾ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ ‘ಪೆಟ್ರೋಮ್ಯಾಕ್ಸ್’. ಈ ನಡುವೆ ‘ಪೆಟ್ರೋಮ್ಯಾಕ್ಸ್’ನ ಸಾಟೆಲೈಟ್ ಹಕ್ಕುಗಳನ್ನು ಕಲರ್ಸ್ ಕನ್ನಡ ಹಾಗು ಡಿಜಿಟಲ್ ಹಕ್ಕುಗಳನ್ನು ‘ವೂಟ್’ ಕೊಂಡುಕೊಂಡಿವೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ಹಾಗಾಗಿ ಬೆಳ್ಳಿತೆರೆಯ ನಂತರ ಕಲರ್ಸ್ ಕನ್ನಡ ಹಾಗು ವೂಟ್ ಆಪ್ ಗಳ ಮೂಲಕ ‘ಪೆಟ್ರೋಮ್ಯಾಕ್ಸ್’ನ ಕಿರುತೆರೆಯ ಪಯಣ ಮುಂದುವರೆಯಲಿದೆ ಎಂಬ ವಿಷಯ ಖಾತ್ರಿಯಾಗಿದೆ. ಸದ್ಯ ದಿನಾಂಕವನ್ನ ಇನ್ನು ಹೊರಹಾಕದಿರುವುದರಿಂದ, ಕಾದು ನೋಡಬೇಕಿದೆ.

ಹಿರಿತೆರೆ ಏರಿರೋ ‘ಪೆಟ್ರೋಮ್ಯಾಕ್ಸ್’ನ ಕಿರುತೆರೆ ಪ್ರವೇಶ!! Read More »

ಕಿರುತೆರೆಯ ಕಡೆಗೆ ಹೊರಟಿದೆ ‘ಕೆಜಿಎಫ್ ಚಾಪ್ಟರ್ 2’.

‘ಕೆಜಿಎಫ್’ ಈ ಹೆಸರು ಯಾರಿಗೇ ಗೊತ್ತಿಲ್ಲ? ನಾಡಿನ ಚಿನ್ನದ ಗಣಿ ಒಂದು ಕಡೆಯಾದರೆ, ನಾಡಿನ ಚಿತ್ರರಂಗಕ್ಕೇ ಚಿನ್ನದಂತ ಸಿನಿಮಾಗಳಾದ ಪ್ರಶಾಂತ್ ನೀಲ್ ಅವರ ‘ಕೆಜಿಎಫ್’ ಸರಣಿ ಇನ್ನೊಂದು ಕಡೆ. ಸದ್ಯ ಚಿತ್ರಮಂದಿರಗಳಲ್ಲಿ ತನ್ನ ರಾಜ್ಯಭಾರ ನಡೆಸಿ ಮುಗಿಸಿರುವ ‘ಕೆಜಿಎಫ್ ಚಾಪ್ಟರ್ 2’ ಒಟಿಟಿ ಪರದೆ ಮೇಲೆ ಸುದ್ದಿ ಮಾಡುತ್ತಿದೆ. ಇದೀಗ ‘ಕೆಜಿಎಫ್ ಚಾಪ್ಟರ್ 2’ ಕಿರುತೆರೆ ಪರದೆ ಮೇಲೆ ಬರಲು ಸಿದ್ಧವಾಗಿದೆ. ಏಪ್ರಿಲ್ 14ರಂದು ಥೀಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಎಲ್ಲಾ ಧಾಖಲೆಗಳನ್ನು ಮುರಿದು ಯಶಸ್ಸಿನ ಶಿಖರದ ಮೇಲೆ ನಿಂತಿತ್ತು. ಸುಮಾರು ಸಾವಿರದ ಮುನ್ನೂರು ಕೋಟಿಯಷ್ಟು ಗಳಿಕೆ ಕಂಡಿದ್ದ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಸದ್ಯ ನೋಡಲು ಸಿಗುತ್ತಿದೆ. ಇದಷ್ಟೇ ಅಲ್ಲದೇ ಇದೀಗ ‘ಕೆಜಿಎಫ್ ಚಾಪ್ಟರ್ 2’ ಕಿರುತೆರೆಗೆ ಬರಲು ಸಿದ್ದವಾಗಿದ್ದು ಶೀಘ್ರದಲ್ಲೇ ‘ಜೀ ಕನ್ನಡ’ ವಾಹಿನಿಯಲ್ಲಿ ಬರುತ್ತಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದ್ದರೆ, ಜೀ ವಾಹಿನಿ ಸಾಟೆಲೈಟ್ ಹಕ್ಕುಗಳನ್ನು ತನ್ನದಾಗಿಸಿಕೊಂಡಿತ್ತು. ದಿನಾಂಕ ಇನ್ನು ತಿಳಿಸದ ಜೀ ವಾಹಿನಿ, ವಿಡಿಯೋ ಒಂದರ ಮೂಲಕ ಆದಷ್ಟು ಬೇಗ ಸಿನಿಮಾ ‘ಜೀ ಕನ್ನಡ’ ವಾಹಿನಿಯಲ್ಲಿ ಬರಲಿದೆ ಎಂದು ಘೋಷಣೆ ಮಾಡಿದ್ದಾರೆ.

ಕಿರುತೆರೆಯ ಕಡೆಗೆ ಹೊರಟಿದೆ ‘ಕೆಜಿಎಫ್ ಚಾಪ್ಟರ್ 2’. Read More »

ಒಂಬತ್ತು ವರ್ಷಗಳ ಸಂಭ್ರಮದಲ್ಲಿ ಯಶ್ ಹಿಟ್ ಸಿನಿಮಾ.

ನಮ್ಮ ದೇಶದಾದ್ಯಂತ ‘ರಾಕಿ ಭಾಯ್’ ಎಂದೇ ಖ್ಯಾತರಾಗಿರುವ ನಮ್ಮ ಕನ್ನಡದ ‘ರಾಕಿಂಗ್ ಸ್ಟಾರ್’ ಯಶ್ ಅವರು ಕೆಜಿಎಫ್ ಚಿತ್ರದಿಂದ ಪ್ರಪಂಚದಾದ್ಯಂತ ಪ್ರಸಿದ್ದರಾದವರು. ಆದರೆ ಇದಕ್ಕಿಂತಲೂ ಮೊದಲು ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನ ಯಶ್ ಅವರು ನೀಡಿದ್ದಾರೆ. ಅದರಲ್ಲಿ ಒಂದು ‘ಗೂಗ್ಲಿ’ ಸಿನಿಮಾ. 2013ರಲ್ಲಿ ಬಿಡುಗಡೆಯಾದ ಈ ಸಿನಿಮಾ ಕನ್ನಡಿಗರ ಮನಗೆದ್ದು ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಇದೀಗ ಒಂಬತ್ತು ವರ್ಷಗಳ ಸಂಭ್ರಮದಲ್ಲಿರೋ ಈ ಸಿನಿಮಾ ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿದೆ. ಪವನ್ ಒಡೆಯರ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ರೋಮ್ಯಾಂಟಿಕ್-ಕಾಮಿಡಿ ಸಿನಿಮಾ ಯಶ್ ಅವರ ಸಿನಿಪಯಣಕ್ಕೆ ಹೊಸ ತಿರುವು ನೀಡಿತ್ತು. ಸಿನಿಮಾದಲ್ಲಿನ ಅವರ ಲುಕ್, ನಟನೆ ಎಲ್ಲದರಿಂದ ಯಶ್ ಪ್ರಖ್ಯಾತಿ ಪಡೆದಿದ್ದರು. ಕೃತಿ ಕರಬಂಧ ನಾಯಕಿಯಾದರೆ, ಪ್ರಮುಖ ಪಾತ್ರಗಳಲ್ಲಿ ಅನಂತ್ ನಾಗ್, ಸುಧಾ ಬೆಳವಾಡಿ, ಸಾಧು ಕೋಕಿಲ ಮುಂತಾದವರು ನಟಿಸಿದ್ದರು. ಇದೀಗ ಪ್ರಖ್ಯಾತ ನಿರ್ಮಾಪಕ ಮಹೇಶ್ ದಾನಣ್ಣನವರ್ ಅವರು ಸಿನಿಮಾದ ರಿಮೇಕ್ ಹಕ್ಕನ್ನು ಕೊಂಡುಕೊಂಡಿದ್ದಾರೆ. ಹಿಂದಿ, ಗುಜರಾತಿ, ಪಂಜಾಬಿ ಹಾಗು ಮರಾಠಿ ಭಾಷೆಗಳಲ್ಲಿ ‘ಗೂಗ್ಲಿ’ ಸಿನಿಮಾವನ್ನು ರಿಮೇಕ್ ಮಾಡುತ್ತಿದ್ದಾರೆ. ಇದರ ಮಾತುಕತೆಗಳು ಸದ್ಯ ನಡೆಯುತ್ತಿದೆಯಷ್ಟೇ ಆದ್ದರಿಂದ ವಿವರವಾದ ಘೋಷಣೆಯನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದಾರೆ. ಈ ಬಗ್ಗೆ ಮಾತನಾಡುವ ಮಹೇಶ್ ಅವರು, “ನನಗೆ ಕನ್ನಡ ಚಿತ್ರರಂಗದ ಜೊತೆಗೆ ಒಳ್ಳೆಯ ನಂಟಿದೆ. ಹಾಗೆಯೇ ಯಶ್ ಅವರ ಸಿನಿಪಯಣವನ್ನ ನಾನು ಹತ್ತಿರದಿಂದಲೇ ನೋಡಿಕೊಂಡು ಬಂದಿದ್ದೇನೆ. ಈಗ ಎಲ್ಲರೂ ಅವರನ್ನು ಒಬ್ಬ ಆಕ್ಷನ್ ಹೀರೋ ಆಗಿ ಸಂಭ್ರಮಿಸುತ್ತಿದ್ದಾರೆ. ಆದರೆ ಅವರು ನಟಿಸಿರೊ ಇಂತಹ ರೋಮ್ಯಾಂಟಿಕ್ ಸಿನಿಮಾಗಳು ಅವರ ಇನ್ನೊಂದು ಪರಿಯ ನಟನೆಯ ಬಗ್ಗೆ ಹೇಳುತ್ತವೆ. ಈ ಸಿನಿಮಾವನ್ನು ನೋಡದ ಕನ್ನಡಿಗರಲ್ಲದವರಿಗೆ ಬೇರೆ ಬೇರೆ ಭಾಷೆಗಳಲ್ಲಿ ಈ ಅದ್ಭುತ ಸಿನಿಮಾವನ್ನು ಚೆನ್ನಾಗಿ ತೋರಿಸುವ ಪ್ರಯತ್ನ ಮಾಡುತ್ತೇವೆ ” ಎಂದಿದ್ದಾರೆ.

ಒಂಬತ್ತು ವರ್ಷಗಳ ಸಂಭ್ರಮದಲ್ಲಿ ಯಶ್ ಹಿಟ್ ಸಿನಿಮಾ. Read More »

‘ಗುಮ್ಮ’ನನ್ನೇ ಕರೆಯುತ್ತಿದ್ದಾನೆ ‘ವಿಕ್ರಾಂತ್ ರೋಣ’!!

‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರ ಅಭಿನಯದ ಅತೀ ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ತೆರೆಮೇಲೆ ಬರೋ ದಿನಾಂಕkke ದಿನಗಣನೆ ನಡೆಯುತ್ತಿದೆ. ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವ ಭರದಲ್ಲಿದೆ ಚಿತ್ರತಂಡ. ಅದೇ ನಿಟ್ಟಿನಲ್ಲಿ ಸುದ್ದಿಗೋಷ್ಠಿಗಳು, ಯೂಟ್ಯೂಬ್ ಇಂಟರ್ವ್ಯೂಗಳು, ಹಾಡುಗಳು ಮುಂತಾದವು ನಡೆಯುತ್ತಿವೆ. ಇದೀಗ ಹೊಸ ಹಾಡೊಂದನ್ನು ಬಿಡಲು ಚಿತ್ರತಂಡ ನಿರ್ಧರಿಸಿದ್ದು, ‘ಗುಮ್ಮ ಬಂದ ಗುಮ್ಮ’ ಎಂಬ ಈ ಹಾಡು ಸಿನಿಮಾದಿಂದ ಹೊರಹೋಮ್ಮವ ಬಹುನಿರೀಕ್ಷಿತ ಹಾಡುಗಳಲ್ಲಿ ಒಂದಾಗಿತ್ತು. ‘ವಿಕ್ರಾಂತ್ ರೋಣ’ ಸಿನಿಮಾ ಆರಂಭದಿಂದ ಎಲ್ಲೆಡೆ ಕೇಳಿಬರುತ್ತಿದ್ದ ಒಂದು ಪದ ‘ಗುಮ್ಮ’. ಅನೂಪ್ ಭಂಡಾರಿಯವರ ಮೊದಲ ಚಿತ್ರ ಪ್ರಖ್ಯಾತ ‘ರಂಗಿತರಂಗ’ ಕೂಡ ‘ಗುಡ್ಡದ ಭೂತ’ ಎಂಬ ಅಂಶವನ್ನೇ ತನ್ನ ಜೀವಾಳವಾಗಿಟ್ಟುಕೊಂಡಿತ್ತು. ಅವರೇ ಹೇಳುವ ಹಾಗೇ ಮಿಸ್ಟರಿ, ನಿಗೂಢತೆ ಇಂತಹದ್ದೆಲ್ಲ ಅವರಿಗೆ ಬಹು ಇಷ್ಟವಾಗಿರುವುದರಿಂದ ‘ವಿಕ್ರಾಂತ್ ರೋಣ’ ಕೂಡ ಇಂತಹದ್ದೇ ಒಂದು ಹಿನ್ನೆಲೆಯಲ್ಲಿ ಮೂಡಿಬಂದಿದೆ ಎಂಬುದನ್ನು ಎಲ್ಲರೂ ಊಹಿಸಬಹುದು. ಅದಕ್ಕೇ ಸಾಕ್ಷಿಯೇ ಈ ‘ಗುಮ್ಮ ಬಂದ ಗುಮ್ಮ’ ಯಾನೆ ‘ಡೆವಿಲ್ಸ್ ಫ್ಯೂರಿ’ ಹಾಡು. ಇದೇ ಜುಲೈ 21ರಂದು ಬೆಳಿಗ್ಗೆ 11:05ಕ್ಕೆ ಹಾಡು ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಈ ಹಾಡಿಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಕೊರೋನ ನಂತರ ‘ವಿಕ್ರಾಂt ರೋಣ’ನ ಚಿತ್ರೀಕರಣ ಆರಂಭವಾದಾಗ ಸುದೀಪ್ ಅವರು ಚಿತ್ರತಂಡದ ಪರವಾಗಿ ‘ಫಾಂಟಮ್’ನ ಪ್ರಪಂಚ ಎಂಬಂತೆ ಸಣ್ಣ ದೃಶ್ಯಗಳಿರುವ ಎರಡು ಮೂರು ಮೇಕಿಂಗ್ ವಿಡಿಯೋ ರೀತಿಯದ್ದನ್ನು ಬಿಡುಗಡೆಗೊಳಿಸಿದ್ದರು.ಅದರಲ್ಲಿ ಕೇಳಲು ಸಿಕ್ಕ ಹಿನ್ನೆಲೆ ಸಂಗೀತ ಎಲ್ಲರ ಮೈ-ನವೀರೇಳಿಸಿತ್ತು. ಸದ್ಯ ಆ ಸಂಗೀತವೇ ‘ಡೆವಿಲ್ಸ್ ಫ್ಯೂರಿ’ ಎಂದು ಹೆಸರಿಡಲಾಗಿರುವ ಈ ‘ಗುಮ್ಮ ಬಂದ ಗುಮ್ಮ’ ಹಾಡು ಎನ್ನಲಾಗುತ್ತಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಹಾಡಿನಲ್ಲಿರಲಿದ್ದು, ಹರ್ಷಿಕಾ ದೇವನಾಥ್ ಅವರು ಹಾಡಿಗೆ ಧ್ವನಿಯಗಿದ್ದಾರೆ.

‘ಗುಮ್ಮ’ನನ್ನೇ ಕರೆಯುತ್ತಿದ್ದಾನೆ ‘ವಿಕ್ರಾಂತ್ ರೋಣ’!! Read More »

“ರಕ್ಷಿತ್ ಶೆಟ್ಟಿಯವರ ತಂಡ ಸೇರಿರುವುದು ಅತೀವ ಸಂತಸ ತಂದಿದೆ”:ವಿಹಾನ್.

ಕನ್ನಡ ಚಿತ್ರರಂಗದಲ್ಲಿ ಸದ್ಯ ಹಲವು ಯುವನಟರು ಯಾವುದೇ ಹಿನ್ನೆಲೆಯಿಲ್ಲದೇ, ತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಅಂತವರಲ್ಲಿ ‘ಪಂಚತಂತ್ರ’ ಸಿನಿಮಾ ಖ್ಯಾತಿಯ ವಿಹಾನ್ ಗೌಡ ಕೂಡ ಒಬ್ಬರು. ಯೋಗರಾಜ್ ಭಟ್ ಅವರ ನಿರ್ದೇಶನದ ‘ಪಂಚತಂತ್ರ’ ಮೂಲಕ ನಾಯಕನಾಗಿ ಚಂದನವನಕ್ಕೆ ಬಂದ ಇವರು, ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣದೇ ಇದ್ದರೂ, ತಮ್ಮ ನಟನೆಯಿಂದ ಕನ್ನಡಿಗರ ಮನಗೆದ್ದರು. ಇದೀಗ ಇದೇ ವಿಹಾನ್ ಕನ್ನಡದ ಖ್ಯಾತ ಸಿನಿ ನಿರ್ಮಾಣ ಸಂಸ್ಥೆಯಾದ ರಕ್ಷಿತ್ ಶೆಟ್ಟಿಯವರ ‘ಪರಮ್ ವಾಹ್ ಸ್ಟುಡಿಯೋಸ್’ನ ಮುಂದಿನ ಸಿನಿಮಾದಲ್ಲಿ ನಟಿಸಲು ಸಿದ್ದರಾಗಿದ್ದಾರೆ. ಈ ಬಗ್ಗೆ ಅವರು ತಮ್ಮ ಮಾತುಗಳನ್ನು ಹೊರಹಾಕಿದ್ದಾರೆ. “ನನಗೆ ಈ ಸಿನಿಮಾದ ಆಫರ್ ಇದ್ದಕ್ಕಿದ್ದಂತೆ ಬಂದದ್ದು. ನಂತರ ನಿರ್ದೇಶಕ ಚಂದ್ರಜಿತ್ ಹಾಗು ಪರಮ್ ವಾಹ್ ಸಂಸ್ಥೆ, ‘ಪಂಚತಂತ್ರ’ ಸಿನಿಮಾದಲ್ಲಿನ ನನ್ನ ನಟನೆ ಕಂಡು, ನನ್ನನ್ನೇ ಆಯ್ಕೆ ಮಾಡಿದ್ದಾರೆ ಎಂದು ತಿಳಿದಾಗ ಅಪಾರ ಆನಂದವಾಗಿತ್ತು. ಯಾವುದೇ ಹಿನ್ನೆಲೆಯಿಲ್ಲದೇ ಬಂದಂತಹ ಒಬ್ಬ ನಟನಿಗೆ ಇದೊಂದು ಹೆಮ್ಮೆ ನೀಡುವ ವಿಚಾರ. ‘ಪರಮ್ ವಾಹ್ ಸ್ಟುಡಿಯೋಸ್’ನಂತಹ ನಿರ್ಮಾಣ ಸಂಸ್ಥೆಯ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಅತೀವ ಸಂತಸ ತಂದಿದೆ” ಎಂದಿದ್ದಾರೆ. ‘ಸೆವೆನ್ ಓಡ್ಸ್’ನ ಚಂದ್ರಜಿತ್ ಬೆಳ್ಳಿಯಪ್ಪ ಅವರು ನಿರ್ದೇಶಿಸುತ್ತಿರುವ ಈ ಹೊಸ ಸಿನಿಮಾದಲ್ಲಿ ವಿಹಾನ್ ಹಾಗು ಅಂಕಿತಾ ಅಮರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಇದಷ್ಟೇ ಅಲ್ಲದೇ ವಿಹಾನ್ ‘ಲೆಗಸಿ’ ಎಂಬ ಎರಡು ಭಾಗಗಳಲ್ಲಿ ಬರುತ್ತಿರುವ ಸಿನಿಮಾವೊಂದರಲ್ಲೂ ನಟಿಸುತ್ತಿದ್ದಾರೆ. ಜೊತೆಗೆ ‘ಪುಷ್ಪಕ ವಿಮಾನ’ ಸಿನಿಮಾ ಖ್ಯಾತಿಯ ರವೀಂದ್ರನಾಥ್ ಅವರ ಮುಂದಿನ ಚಿತ್ರಕ್ಕೆ ವಿಹಾನ್ ಅವರನ್ನು ನಾಯಕನಾಗಿ ಆರಿಸಲಾಗಿದೆ ಎಂಬ ಸುದ್ದಿಗಳು ಓಡಾಡುತ್ತಿವೆ.

“ರಕ್ಷಿತ್ ಶೆಟ್ಟಿಯವರ ತಂಡ ಸೇರಿರುವುದು ಅತೀವ ಸಂತಸ ತಂದಿದೆ”:ವಿಹಾನ್. Read More »

ಅಪ್ಪು ಅಭಿಮಾನಿಗಳಿಗೆ ಸಂತಸ ನೀಡಿದ ಟ್ವಿಟರ್.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರತಿಯೊಬ್ಬ ಕನ್ನಡಿಗರ ಮನದ ಮಗ. ಅವರು ನಮ್ಮನ್ನಗಲಿ ವರುಷವೇ ಕಳೆದರೂ ಅವರ ವ್ಯಕ್ತಿತ್ವದ ಜೊತೆಗೆ ಅವರೇ ನಮ್ಮೆಲ್ಲರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಹೀಗಿರುವಾಗ ಮಾಡಿದ್ದ ಒಂದು ಕೆಲಸದಿಂದ ಕನ್ನಡಿಗರ ಅಸಮಾಧಾನಕ್ಕೆ ‘ಟ್ವಿಟರ್’ ಸಂಸ್ಥೆ ಒಳಗಾಗಿತ್ತು. ಪುನೀತ್ ರಾಜಕುಮಾರ್ ಅವರ ಓಫೀಷಿಯಲ್ ಟ್ವಿಟರ್ ಖಾತೆಯಲ್ಲಿದ್ದ ‘ಪರಿಶೀಲನೆ’ಯ ಪ್ರತೀಕವಾದ ಬ್ಲೂ ಟಿಕ್ ಅನ್ನು ತೆಗೆದಿತ್ತು. ಸದ್ಯ ಈ ಬ್ಲೂ ಟಿಕ್ ಮರಳಿ ಬಂದಿದೆ. ಟ್ವಿಟರ್ ನಲ್ಲಿ ಯಾವುದೇ ‘ವೆರಿಫೈಡ್’ ಯಾನೆ ‘ಬ್ಲೂ ಟಿಕ್’ ಹೊಂದಿರುವ ಖಾತೆ ತುಂಬಾ ಸಮಯದವರೆಗೆ ಕಾರ್ಯನಿರತವಾಗದೆ ಇದ್ದರೆ, ಆ ಖಾತೆ ಬಳಕೆಯಾಗದೆ ಇದ್ದರೆ, ಅದರಲ್ಲಿನ ಬ್ಲೂ ಟಿಕ್ ತೆಗೆಯಲಾಗುತ್ತದೆ. ಇದೇ ಮಾದರಿಯಲ್ಲಿ ಅಪ್ಪು ಖಾತೆಯ ಬ್ಲೂ ಟಿಕ್ ತೆಗೆಯಲಾಗಿತ್ತು. ಇದಕ್ಕೆ ಕನ್ನಡಿಗರು ಅಪಾರ ಅಸಮಾಧಾನ ವ್ಯಕ್ತಪಡಿಸಿದ್ದರು. ಎಲ್ಲೆಡೆ ಟ್ವಿಟರ್ ಅನ್ನೆ ಉದ್ದೇಶಿಸಿ ಹಲವು ಪೋಸ್ಟ್ ಗಳನ್ನು ಮಾಡಲಾಗಿತ್ತು ಈ ಎಲ್ಲಾ ಪ್ರಯತ್ನಗಳ ಫಲವಾಗಿ ಪುನೀತ್ ರಾಜಕುಮಾರ್ ಅವರ ಖಾತೆಗೆ ಬ್ಲೂ ಟಿಕ್ ಅನ್ನು ಟ್ವಿಟರ್ ಮರಳಿ ಜೋಡಿಸಿದೆ. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಟ್ವಿಟರ್ ನಲ್ಲೆ ಹಂಚಿಕೊಂಡು, ಟ್ವಿಟರ್ ಗೂ ಹಾಗು ಪುನೀತ್ ಅಭಿಮಾನಿಗಳಿಗೂ ಧನ್ಯವಾದ ತಿಳಿಸಿದ್ದಾರೆ. ಅಪ್ಪು ನಮ್ಮೆಲ್ಲರ ನಡುವೆ ಸದಾ ಜೀವಂತವಾಗಿರುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದೂ ಬರೆದುಕೊಂಡಿದ್ದಾರೆ.

ಅಪ್ಪು ಅಭಿಮಾನಿಗಳಿಗೆ ಸಂತಸ ನೀಡಿದ ಟ್ವಿಟರ್. Read More »

ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್.

‘ಡೈನಾಮಿಕ್ ಪ್ರಿನ್ಸ್’ ಎಂದೇ ಖ್ಯಾತರಾಗಿರುವ ದೇವರಾಜ್ ಅವರ ಪುತ್ರ ಖ್ಯಾತ ನಟ ಪ್ರಜ್ವಲ್ ದೇವರಾಜ್ ಅವರು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಾದ ಮೇಲೆ ಒಂದರಂತೆ ಹೊಸ ಸಿನಿಮಾಗಳ ಮೂಲಕ ಬೆಳ್ಳಿತೆರೆ ಏರುತ್ತಿರುವ ಇವರ ಮುಂದಿನ ಸಿನಿಮಾವೊಂದು ಕೂಡ ಬಿಡುಗಡೆಗೆ ಸಿದ್ದವಾಗಿದ್ದು, ತನ್ನ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದೆ. ಆ ಸಿನಿಮಾವೇ ‘ಅಬ್ಬರ’. ಕೆ ರಾಮನಾರಾಯಣ್ ಅವರು ನಿರ್ದೇಶಿಸಿರುವ ‘ಅಬ್ಬರ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಮೂರು ವಿಭಿನ್ನ ರೀತಿಯ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು(ಜುಲೈ 18) ಸಿನಿಮಾದ ಟೀಸರ್ ಒಂದು ಬಿಡುಗಡೆಯಾಗಿದ್ದು, ಇದೇ ಆಗಸ್ಟ್ 12ರಿಂದ ಸಿನಿಮಾ ಬೆಳ್ಳಿತೆರೆ ಮೇಲೆ ಬರುತ್ತಿದೆ ಎಂಬ ಅಧಿಕೃತ ಘೋಷಣೆಯನ್ನು ಚಿತ್ರತಂಡ ಟೀಸರ್ ನ ಮೂಲಕ ಮಾಡಿದೆ. ಇದೊಂದು ಪಕ್ಕ ಆಕ್ಷನ್ ಎಂಟರ್ಟೈನರ್ ಆಗಿರಲಿದ್ದು, ಪ್ರಜ್ವಲ್ ಅವರ ಜೊತೆಗೆ ರಾಜಶ್ರೀ ಪೊನ್ನಪ್ಪ, ಲೇಖ ಚಂದ್ರ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ನಿರ್ದೇಶಕರಾಗಿ ರವಿ ಬಸ್ರುರ್ ಕೆಲಸ ಮಾಡಿದ್ದು, ಮೈ ನವೀರೇಳಿಸುವ ಬಿಜಿಎಂ ಗಳ ನಿರೀಕ್ಷೆಯಲ್ಲಿ ಪ್ರೇಕ್ಷಕರಿದ್ದಾರೆ. ಇದೇ ಆಗಸ್ಟ್ 12ರಿಂದ ರಾಜ್ಯದಾದ್ಯಂತ ಥೀಯೇಟರ್ ಗಳಲ್ಲಿ ‘ಅಬ್ಬರ’ ಬಿಡುಗಡೆಯಾಗಲಿದ್ದು, ಚಿತ್ರಮಂದಿರಗಳಲ್ಲಿ ಹೇಗೆ ಮೋಡಿ ಮಾಡುತ್ತದೆ ಎಂದು ಕಾದು ನೋಡಬೇಕಿದೆ.

ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್. Read More »

‘ರವಿ ಬೋಪಣ್ಣ’ ತೆರೆಮೇಲೆ!!

ಚಂದನವನದ ‘ಕನಸುಗಾರ’, ‘ಪ್ರೇಮಲೋಕ’ದ ಸರದಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ದಶಕಗಳಿಂದ ಕನ್ನಡಿಗರಿಗೆ ಹಲವು ಅದ್ಭುತ ಸಿನಿಮಾಗಳನ್ನು ನೀಡಿರುವ ಇವರು, ಇದೀಗ ತಮ್ಮ ಹೊಸ ಚಿತ್ರದ ಜೊತೆಗೆ ಚಿತ್ರಮಂದಿರಕ್ಕೇ ಕಾಲಿಡುತ್ತಿದ್ದಾರೆ. ಅದು ಕೂಡ ಅವರದೇ ನಿರ್ದೇಶನದಲ್ಲಿ. ರವಿಮಾಮ ಸಿನೆಮಾ ನಿರ್ದೇಶನ ಮಾಡದೆ ವರ್ಷಗಳೇ ಕಳೆದಿವೆ. ಸದ್ಯ ಇವರ ನಿರ್ದೇಶನದಲ್ಲಿ ತಯಾರಾಗಿರುವ ‘ರವಿ ಬೋಪಣ್ಣ’ನ ಮೇಲೆ ಸಿನಿರಸಿಕರೆಲ್ಲರ ಕಣ್ಣುಗಳಿವೆ. ರವಿಚಂದ್ರನ್ ಅವರದೇ ನಿರ್ಮಾಣ ಸಂಸ್ಥೆಯಾದ ‘ಈಶ್ವರಿ ಪ್ರೊಡಕ್ಷನ್ಸ್’ ಕಡೆಯಿಂದ ಬರುತ್ತಲಿರೋ ಐವತ್ತನೇ ಸಿನಿಮಾ ಈ ‘ರವಿ ಬೋಪಣ್ಣ’.ಇದೇ ಆಗಸ್ಟ್ 12ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ರವಿಚಂದ್ರನ್ ಅವರು ಭಾಗವಹಿಸುತ್ತಿರುವ ಜೀ ಕನ್ನಡದ ರಿಯಾಲಿಟಿ ಶೋ,’ಡ್ರಾಮಾ ಜೂನಿಯರ್ಸ್’ನಲ್ಲಿ ಸ್ವತಃ ಅವರೇ ಘೋಷಣೆ ಮಾಡಿದ್ದಾರೆ. ಚಿತ್ರದಲ್ಲಿ ನಿರ್ದೇಶನ, ನಿರ್ಮಾಣ ಮಾತ್ರವಲ್ಲದೆ, ಸಂಗೀತ ನಿರ್ದೇಶಕರಾಗಿ, ಎಲ್ಲಾ ಹಾಡುಗಳ ಬರಹಗಾರನಾಗಿ, ಎಡಿಟರ್ ಆಗಿ ಜೊತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಹಲವು ರಂಗಗಳಲ್ಲಿ ರವಿ ಸರ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಿನಿಮಾದಲ್ಲಿನ ವಕೀಲನ ಪ್ರಮುಖ ಪಾತ್ರವೊಂದಕ್ಕೆ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ಬಣ್ಣ ಹಚ್ಚಿದ್ದಾರೆ. ಇದಷ್ಟೇ ಅಲ್ಲದೇ ಚಿತ್ರದ ತಾರಗಣದಲ್ಲಿ ರಚಿತ ರಾಮ್, ಸಂಚಿತ ಪಡುಕೋಣೆ, ರಮ್ಯಾ ಕೃಷ್ಣನ್, ಜೈ ಜಗದೀಶ್, ರವಿಶಂಕರ್ ಗೌಡ ಮುಂತಾದ ಮುಂಚೂಣಿ ನಟರಿದ್ದಾರೆ. ಇದೊಂದು ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಎಂದೂ ರವಿಚಂದ್ರನ್ ಅವರು ಹೇಳಿದ್ದು, ‘ಕರ್ಮ ಈಸ್ ಕ್ರೇಜಿ’ ಎಂಬ ಟ್ಯಾಗ್ ಲೈನ್ ಚಿತ್ರದ ಶೀರ್ಷಿಕೆಯ ಜೊತೆಗೆ ಕಾಣಸಿಗುತ್ತದೆ. ಯೋಗರಾಜ್ ಭಟ್ ಅವರ ಬಹುನಿರೀಕ್ಷಿತ ‘ಗಾಳಿಪಟ 2’ ಹಾಗು ಪ್ರಜ್ವಲ್ ದೇವರಾಜ್ ಅವರ ‘ಅಬ್ಬರ’ ಸಿನಿಮಾಗಳ ಜೊತೆಗೆ ಇದೇ ಆಗಸ್ಟ್ 12ರಂದು ‘ರವಿ ಬೋಪಣ್ಣ’ ಕಣಕ್ಕಿಳಿಯಲಿದ್ದಾರೆ.

‘ರವಿ ಬೋಪಣ್ಣ’ ತೆರೆಮೇಲೆ!! Read More »

Scroll to Top