Karnataka Bhagya

ಕ್ರೀಡೆ

ಟಾಲಿವುಡ್ ಅಂಗಳದಲ್ಲಿ ದಾಖಲೆ ಸೃಷ್ಟಿ ಮಾಡಿದ ಕಲಾವತಿ

ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ನಟನೆಯ ಸರ್ಕಾರಿ ವಾರಿ ಪಾಟ ಚಿತ್ರದ ಕಲಾವತಿ ಹಾಡು ಟಾಲಿವುಡ್ ನಲ್ಲಿ ಹೊಸದಾಗಿರುವ ಹವಾ ಎಬ್ಬಿಸಿತ್ತು. ಪ್ರೇಮಿಗಳ ದಿನ ರಿಲೀಸ್ ಆದ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಈಗ ಮತ್ತೊಂದು ದಾಖಲೆ ಬರೆದಿದೆ. ಸಂಗೀತ ನಿರ್ದೇಶಕ ಎಸ್ ತಮನ್ ಅವರ ಮ್ಯೂಸಿಕ್ ನಲ್ಲಿ ಮೂಡಿರುವ ಈ ಹಾಡು ರಿಲೀಸ್ ಆದ 36 ದಿನಗಳಲ್ಲಿ ಹೊಸ ದಾಖಲೆ ಬರೆದಿದೆ. ಸರ್ಕಾರಿ ವಾರಿ ಪಾಟ ಚಿತ್ರದ ಎರಡು ಹಾಡುಗಳು ರಿಲೀಸ್ ಈಗಾಗಲೇ ಆಗಿದ್ದು ಇದರಲ್ಲಿ ಮೊದಲನೇ ಹಾಡು ಕಲಾವತಿ. ಈ ಹಾಡು ರಿಲೀಸ್ ಆದ 36 ದಿನಗಳಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಸಂತಸದ ಸುದ್ದಿಯನ್ನು ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದೆ. ಈ ಸುಂದರ ಹಾಡನ್ನು ಗಾಯಕ ಸಿದ್ ಶ್ರೀರಾಮ್ ಹಾಡಿದ್ದಾರೆ. ತಮನ್ ಹಾಗೂ ಸಿದ್ ಶ್ರೀರಾಮ್ ಇಬ್ಬರ ಕಾಂಬಿನೇಷನ್ ನಲ್ಲಿ ಈ ಹಿಂದೆ ಅಲಾವೈಕುಂಟಪುರಮುಲೋ ಚಿತ್ರದ ಸಾಮಜವರಗಮನಾ ಹಾಡು ಕೂಡಾ ಪ್ರೇಕ್ಷಕರ ಮನ ಗೆದ್ದಿತ್ತು. ಈಗ ಇದೇ ಜೋಡಿಯ ಈ ಹಾಡು ಕೂಡಾ ಕಡಿಮೆ ಸಮಯದಲ್ಲಿ ದಾಖಲೆ ನಿರ್ಮಿಸಿದೆ.

ಟಾಲಿವುಡ್ ಅಂಗಳದಲ್ಲಿ ದಾಖಲೆ ಸೃಷ್ಟಿ ಮಾಡಿದ ಕಲಾವತಿ Read More »

ವಿಲನ್ ಆಗಿ ಕಿರುತೆರೆಯತ್ತ ಮರಳಿದ ಅಮೃತಾ ರಾಮಮೂರ್ತಿ

ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಸದ್ಯ ಮಗಳು ಧೃತಿಯ ಆರೈಕೆಯಲ್ಲಿ ತೊಡಗಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ವಚನಾ ಪಾತ್ರದಲ್ಲಿ ನಟಿಸಿ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಅಮೃತಾ ಇದೀಗ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ.‌ “ಇದೊಂದು ತನ್ನ ಜೀವನದ ಉತ್ತಮ ಹಂತ “ಎಂದಿದ್ದಾರೆ. ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅಮೃತಾ ಗರ್ಭಿಣಿಯ ಕಾರಣದಿಂದಾಗಿ ಅರ್ಧದಿಂದ ತೊರೆದಿದ್ದರು. ಈಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. “ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ನಾನು ಪ್ರಮುಖ ಖಳನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಬಹುಶಃ ಇದೇ ಮೊದಲ ಬಾರಿಗೆ ಖಳನಾಯಕಿಯಾಗಿ ಕಾಣಿಸಿಕೊಳ್ಳುತ್ತದ್ದೇನೆ ಎನ್ನಬಹುದು.ವಚನಾ ಪಾತ್ರ ಸ್ವಲ್ಪ ನೆಗೆಟಿವ್ ಅಂಶ ಹೊಂದಿತ್ತು. ಆದರೆ ಈ ಪಾತ್ರ ಹಾಗಲ್ಲ. ಇದು ಸಂಪೂರ್ಣವಾಗಿ ನೆಗೆಟಿವ್ ಪಾತ್ರವಾಗಿದೆ” ಎನ್ನುತ್ತಾರೆ ಅಮೃತಾ ರಾಮಮೂರ್ತಿ. ಮಗಳು ಧೃತಿಗೆ ಮೂರು ತಿಂಗಳು ಆಗಿದ್ದಾಗ ಅಮೃತಾ ಅವರಿಗೆ ಬಹಳ ಆಫರ್ಸ್ ಬಂದಿದ್ದರೂ ತಿರಸ್ಕರಿಸಿದ್ದಾರೆ. “ನನಗೆ ಆಶ್ಚರ್ಯವಾಯಿತು. ಏಕೆಂದರೆ ಮಗಳಿಗೆ ಮೂರು ತಿಂಗಳು ಆಗಿದ್ದಾಗ ನನಗೆ ತುಂಬಾ ಆಫರ್ಸ್ ಬಂದವು. ತಮಿಳು ಹಾಗೂ ತೆಲುಗು ಇಂಡಸ್ಟ್ರಿಯಿಂದಲೂ ನಟಿಸುವ ಅವಕಾಶ ಸಿಕ್ಕಿತ್ತು. ಹಾಗೂ ಇದು ಕಷ್ಟದ ಆಯ್ಕೆ ಆಗಿತ್ತು. ನಾನು ಕೊನೆಯದಾಗಿ ಕೆಂಡಸಂಪಿಗೆ ಧಾರಾವಾಹಿ ಒಪ್ಪಿಕೊಂಡೆ” ಎಂದು ಕಿರುತೆರೆಗೆ ಮರಳಿ ಬಂದುದರ ಬಗ್ಗೆ ಹೇಳುತ್ತಾರೆಅಮೃತಾ.

ವಿಲನ್ ಆಗಿ ಕಿರುತೆರೆಯತ್ತ ಮರಳಿದ ಅಮೃತಾ ರಾಮಮೂರ್ತಿ Read More »

ತೆಲುಗು ಸಿನಿಮಾದ ವಿರುದ್ಧ ಅಸಮಾಧಾನ ವ್ಯಕಪಡಿಸಿದ ಶರ್ಮಿಳಾ ಮಾಂಡ್ರೆ… ಕಾರಣ ಏನು ಗೊತ್ತಾ?

ನಟಿ ಶರ್ಮಿಳಾ ಮಾಂಡ್ರೆ ನಿರ್ಮಾಪಕಿಯಾಗಿ ಭಡ್ತಿ ಪಡೆದಿದ್ದು, ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್ ವತಿಯಿಂದ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೌದು, ನೀನಾಸಂ ಸತೀಶ್ ಮುಖ್ಯಭೂಮಿಕೆಯಲ್ಲಿರುವ ದಸರ ಸಿನಿಮಾದ ನಿರ್ಮಾಣವನ್ನು ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್ ಮಾಡುತ್ತಿದೆ. ಸದ್ಯ ಸಿನಿಮಾದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಕೂಡಾ ನಡೆಯುತ್ತಿದೆ. ಇದೀಗ ತೆಲುಗು ಸ್ಟಾರ್ ನಟರ ಸಿನಿಮಾದ ಟೀಸರ್ ಕೂಡಾ ರಿಲೀಸ್ ಆಗಿದ್ದು ಅದಕ್ಕೂ ಅವರು ದಸರ ಎಂದು ಹೆಸರಿಟ್ಟಿದ್ದು ಶರ್ಮಿಳಾ ಮಾಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ತೆಲುಗು ಸಿನಿಮಾ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ. ಫಿಲಂ ಛೇಂಬರ್ ಗೆ ಪತ್ರ ಬರೆದಿರುವ ಶರ್ಮಿಳಾ ಮಾಂಡ್ರೆ “ನಾನು ಮೊದಲ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು ದಸರ ಎನ್ನುವ ಟೈಟಲ್ ಅನ್ನು 2020 ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಣಿ ಮಾಡಿಸಿದ್ದೆ. ನೊಂದಣಿಗೆ ಸಂಬಂಧಪಟ್ಟಿರುವಂತಹ ದಾಖಲೆಗಳು ಎಲ್ಲವೂ ನನ್ನ ಬಳಿ ಇದೆ.ಸದ್ಯ ಸಿನಿಮಾದ ಚಿತ್ರೀಕರಣವು ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಇಸೀಗ ಸುಧಾಕರ್ ಚೆರುಕುರಿ ಎಂಬುವರು ಎಸ್‌ಎಲ್‌ವಿ ಬ್ಯಾನರ್‌ ಅಡಿಯಲ್ಲಿ ‘ದಸರ’ ಹೆಸರಿನ ಸಿನಿಮಾದ ಟೀಸರ್ ನ್ನು ಕನ್ನಡದ ಜೊತೆಗೆ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಮುಂದೆ ಇದು ನಮಗೆ ಸಮಸ್ಯೆ ಆಗಲಿದೆ” ಎಂದು ಬರೆದುಕೊಂಡಿದ್ದಾರೆ. “ಈಗಾಗಲೇ ನಾವು ನಮ್ಮ ಸಿನಿಮಾದ ಹೆಸರನ್ನು ಬಹಿರಂಗಗೊಳಿಸಿದ್ದೇವೆ. ಇದರ ಜೊತೆಗೆ ಸಿನಿಮಾದ ಪ್ರಚಾರ ಕೂಡಾ ಶುರು ಮಾಡಿದ್ದೇವೆ. ಈಗ ಇದೇ ಹೆಸರಿನಲ್ಲಿ ತೆಲುಗು ನಿರ್ಮಾಪಕರು ತಮ್ಮ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿದರೆ ನಮಗೆ ಕಷ್ಟ ಆಗುತ್ತದೆ. ಇದರಿಂದ ಬಾಕ್ಸ್ ಆಫೀಸ್‌ ಕಲೆಕ್ಷನ್ ಮೇಲೆಯೂ ಹೊಡೆತ ಬೀಳುತ್ತದೆ” ಎಂದಿದ್ದಾರೆ ಶರ್ಮಿಳಾ. ಇದರ ಜೊತೆಗೆ “ಕನಿಷ್ಟ ಪಕ್ಷ ಕನ್ನಡ ಡಬ್ಬಿಂಗ್ವರ್ಷನ್ ನಲ್ಲಿಯಾದರೂ ತಮ್ಮ ಸಿನಿಮಾದ ಹೆದರನ್ನು ಬದಲಾಯಿಸುವಂತೆ ತೆಲುಗು ನಿರ್ಮಾಪಕರ ಬಳಿ ಸೂಚಿಸಿ” ಎಂದು ಮನವಿಯನ್ನು ಕೂಡಾ ಅವರು ಮಾಡಿದ್ದಾರೆ.

ತೆಲುಗು ಸಿನಿಮಾದ ವಿರುದ್ಧ ಅಸಮಾಧಾನ ವ್ಯಕಪಡಿಸಿದ ಶರ್ಮಿಳಾ ಮಾಂಡ್ರೆ… ಕಾರಣ ಏನು ಗೊತ್ತಾ? Read More »

ರಗಡ್ ಅವತಾರದಲ್ಲಿ ಟಾಲಿವುಡ್ ನಲ್ಲಿ ಮೋಡಿ ಮಾಡಲಿದ್ದಾರೆ ದೀಕ್ಷಿತ್ ಶೆಟ್ಟಿ

ನಾಗಿಣಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ನಟಿಸಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ದೀಕ್ಷಿತ್ ಶೆಟ್ಟಿಗೆ ಬ್ರೇಕ್ ನೀಡಿದ್ದು ದಿಯಾ ಸಿನಿಮಾ. ದಿಯಾ ಸಿನಿಮಾದಲ್ಲಿ ನಾಯಕ ರೋಹಿತ್ ಆಗಿ ನಟಿಸಿದ್ದ ದೀಕ್ಷಿತ್ ಶೆಟ್ಟಿ ಅವರ ಮುದ್ದಾದ ಅಭಿನಯಕ್ಕೆ ಮಾರುಹೋಗದವರಿಲ್ಲ. ದಿಯಾ ಸಿನಿಮಾದ ನಂತರ ಒಂದಾದ ಮೇಲೆ ಒಂದರಂತೆ ಸಿನಿಮಾದಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ದೀಕ್ಷಿತ್ ಸ್ಯಾಂಡಲ್ ವುಡ್ ಜೊತೆಗೆ ಟಾಲಿವುಡ್ ನಲ್ಲೂ ಮೋಡಿ ಮಾಡುತ್ತಿದ್ದಾರೆ. ತೆಲುಗಿನ ನ್ಯಾಚುರಲ್‌ ಸ್ಟಾರ್‌ ಎಂದೇ ಫೇಮಸ್ಸು ಆಗಿರುವ ನಾನಿ ಅಭಿನಯದ ‘ದಸರಾ’ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ನಟಿಸಲಿದ್ದು ಸೂರಿ ಎಂಬ ರಗಡ್‌ ಅವತಾರದಲ್ಲಿ ಇವರು ಕಾಣಿಸಿಕೊಳ್ಳುತ್ತಿದ್ದಾರೆ. ದೀಕ್ಷಿತ್ ಅವರಿಗೆ ತೆಲುಗು ಸಿನಿರಂಗ ಹೊಸದೇನಲ್ಲ. ಮೂರು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದು ಅದರಲ್ಲಿ ನಾನಿ ಬ್ಯಾನರ್ ನಲ್ಲಿ ಮೂಡಿ ಬಂದ ಮೀಟ್ ಕ್ಯೂಟ್ ಕೂಡಾ ಒಂದು. “ನಾನಿ ಬ್ಯಾನರ್‌ನ ‘ಮೀಟ್‌ ಕ್ಯೂಟ್‌’ ಸಿನಿಮಾದಲ್ಲಿ ಅಭಿನಯಿಸಿದ್ದೆ. ಆ ಸಿನೊಮಾದಲ್ಲಿ ನನ್ನ ನಟನೆಯನ್ನು ನೋಡಿದ ನಾನಿ ನಟನೆಯನ್ನು ಮೆಚ್ಚಿಕೊಂಡಿದ್ದರು. ಮಾತ್ರವಲ್ಲ ಈ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡರು. ಇನ್ನು ಈ ಸಿನಿಮಾನಾನಿ, ನಾನು ಮತ್ತು ಕೀರ್ತಿ ಸುರೇಶ್‌ ಇವರ ಮೂರರ ಮಧ್ಯೆ ನಡೆಯುತ್ತದೆ”ಎನ್ನುತ್ತಾರೆ ದೀಕ್ಷಿತ್ ಶೆಟ್ಟಿ. ದಿಯಾ ಸಿನಿಮಾದ ನಂತರ ಬೇರೆ ಸಿನಿಮಾಗಳಲ್ಲಿ ನಾನು ನಟಿಸಿದ್ದರೂ ಎಲ್ಲ ಕಥೆ ಬೇರೆ ಬೇರೆಯಾಗಿದೆ. ಸಿನಿಮಾದ ಕಥೆಗಳಲ್ಲಿ ಭಿನ್ನತೆಯಿದೆ. ‘ದಸರಾ’ ಸಿನಿಮಾದಲ್ಲಿ ಬಣ್ಣ ಹಚ್ಚಲು ಅವಕಾಶ ಸಿಕ್ಕಿರುವುದು ನನ್ಮ ಪರಿಶ್ರಮದ ಫಲ. ಜೊತೆಗೆ ಕೆಲಸಕ್ಕೆ ತಕ್ಕ ಪ್ರತಿಫಲವುಇ ಹೌದು. ಕ್ಷೇತ್ರ ಯಾವುದೇ ಆಗಿರಲಿ, ಕೆಲಸ ಮಾಡುತ್ತಿದ್ದರೆ ಅಥವಾ ಮಾಡಿದರೆ ಮುಂದಿನ ದಿನಗಳಲ್ಲಿ ಅವಕಾಶಗಳು ಜಾಸ್ತಿ ಸಿಗುತ್ತದೆ ಎಂಬುದು ನನ್ನ ಅಭಿಪ್ರಾಯ” ಎನ್ನುತ್ತಾರೆ ದೀಕ್ಷಿತ್ ಶೆಟ್ಟಿ.

ರಗಡ್ ಅವತಾರದಲ್ಲಿ ಟಾಲಿವುಡ್ ನಲ್ಲಿ ಮೋಡಿ ಮಾಡಲಿದ್ದಾರೆ ದೀಕ್ಷಿತ್ ಶೆಟ್ಟಿ Read More »

‘ನಟಭಯಂಕರ’ನಿಗೆ ‘ರೋರಿಂಗ್ ಸ್ಟಾರ್’ ಸಾಥ್.

ಬಿಗ್ ಬಾಸ್ ಕನ್ನಡದ ನಾಲ್ಕನೇ ಆವೃತ್ತಿಯ ವಿಜಯಶಾಲಿ, ‘ಒಳ್ಳೆ ಹುಡುಗ ಪ್ರಥಮ್’ ಎಂದೇ ಜನಪ್ರಿಯರಾಗಿರುವ ಪ್ರಥಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಚೊಚ್ಚಲ ಚಿತ್ರ ‘ನಟಭಯಂಕರ’. ಬಿಡುಗಡೆಗೆ ಸಿದ್ದವಾಗಿರೋ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ‘ರೋರಿಂಗ್ ಸ್ಟಾರ್’ ಶ್ರೀಮುರುಳಿ ನಡೆಸಿಕೊಟ್ಟಿದ್ದಾರೆ. ಈ ವೇಳೆಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಥಮ್ ಸಿನಿಮಾದ ಬಿಡುಗಡೆ ದಿನಾಂಕವನ್ನ ಹೊರಹಾಕಿದ್ದಾರೆ. “ಪ್ರಥಮ್ ಒಬ್ಬ ಕಾನ್ಫಿಡೆನ್ಸ್ ಇರುವ ಯುವಪ್ರತಿಭೆ. ಬಿಗ್ ಬಾಸ್ ಆರಂಭದಲ್ಲಿ ಇವರನ್ನು ನೋಡಿ ‘ಏನಪ್ಪಾ ಹಿಂಗ್ ಮಾತಾಡ್ತಾನೆ’ ಅಂದುಕೊಂಡಿದ್ದ ನಾನೇ ಕೊನೆಕೊನೆಗೆ ಇವರ ಅಭಿಮಾನಿಯಾದೆ. ಚಿತ್ರದ ಹಾಡುಗಳು ಚೆನ್ನಾಗಿವೆ, ಅದರಲ್ಲೂ ನಾನು ರಘು ದೀಕ್ಷಿತ್ ಅವರು ಇಷ್ಟಪಟ್ಟ ಹಾಡು, ಉಪೇಂದ್ರ ಅವರು ಹಾಡಿದ ಹಾಡು. ಸಿನಿಮಾ ಕೂಡ ಅದ್ಭುತವಾಗಿರಲಿದೆ ಎಂದು ನಂಬಿದ್ದೇನೆ” ಎಂದು ಹೇಳುವ ಮೂಲಕ ಆಡಿಯೋ ಬಿಡುಗಡೆ ಮಾಡಿದ ಶ್ರೀಮುರಳಿ ಚಿತ್ರತಂಡಕ್ಕೆ ಹಾರೈಸಿದರು. ಇವರ ಜೊತೆ, ಗೀತರಚನಕಾರ ವಿ. ನಾಗೇಂದ್ರ ಪ್ರಸಾದ್, ಲಹರಿ ಸಂಸ್ಥೆಯ ವೇಲು, ಜಿಲ್ಲಾಧಿಕಾರಿ ದಯಾನಂದ್, ಅರ್ಜುನ್ ಕುಮಾರ್ ಬಂಗಾರಪ್ಪ ಮೊದಲಾದ ಗಣ್ಯರು ಈ ಕಾರ್ಯಕ್ರಮಕ್ಕೆ ಹಾಜರಿದ್ದರು. ಈ ವೇಳೆ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಥಮ್, ” ಇದು ನಮ್ಮ ಸಿನಿಮಾದ ಮೊದಲ ಸುದ್ದಿಗೋಷ್ಠಿ. ನನ್ನ ನಿರ್ದೇಶನದ ಮೊದಲ ಚಿತ್ರ ಕೂಡ. ಒಬ್ಬ ತುಂಬ ಅಹಂಕಾರಿಯಾದ ವ್ಯಕ್ತಿ, ಒಬ್ಬರಿಗೆ ಮಾತು ಕೊಟ್ಟರೆ ಹೇಗೆಲ್ಲ ಬದಲಾಗಬೇಕಾಗುತ್ತದೆ ಎನ್ನುವುದೇ ಚಿತ್ರದ ಮುಖ್ಯ ಕಥಾವಸ್ತು. ಈಗ ಆಡಿಯೋ ರಿಲೀಸ್ ಆಗಿದೆ. ಸದ್ಯದಲ್ಲೇ ಟ್ರೈಲರ್ ಕೂಡ ಹೊರಬರುತ್ತದೆ. ಮೇ 13ರಂದು ಚಿತ್ರವನ್ನ ಬಿಡುಗಡೆಗೋಳಿಸೋ ಯೋಜನೆಯಿದೆ” ಎಂದರು. ನಿರ್ದೇಶನದ ಜೊತೆ ನಾಯಕರಾಗಿಯೂ ನಟಿಸಿರೋ ಪ್ರಥಮ್ ಗೆ ನಾಯಕಿಯಾಗಿ ಫ್ರಾನ್ಸ್ ನ ನಿವಾಸಿ ನಿಹಾರಿಕಾ ಬಣ್ಣ ಹಚ್ಚಿದ್ದಾರೆ. ಉದಯ್. ಕೆ. ಮೆಹ್ತ ಅವರು ಬರೆದ ಕಥೆಗೆ, ಚಿತ್ರಕತೆ ಹಾಗು ಸಂಭಾಷಣೆಯನ್ನ ಬರೆದಿರೋ ಪ್ರಥಮ್, ನಿರ್ದೇಶನವನ್ನ ಕೂಡ ಮಾಡಿದ್ದಾರೆ. ಓಂ ಪ್ರಕಾಶ್ ರಾವ್, ಕುರಿ ಪ್ರತಾಪ್, ಸಾಯಿಕುಮಾರ್, ಸ್ಪರ್ಶ ರೇಖಾ, ಶೋಭರಾಜ್ ಮುಂತಾದ ದೊಡ್ಡ ದೊಡ್ಡ ಹೆಸರುಗಳು ಚಿತ್ರದ ತಾರಾಗಣದಲ್ಲಿದೆ. ಪ್ರದ್ಯೋತನ್ ಅವರ ಸಂಗೀತದ ನಾಲ್ಕು ಹಾಡುಗಳು ಚಿತ್ರದಲ್ಲಿದ್ದು, ಬಹಳ ಸಮಯದ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರ ಕಂಠದಲ್ಲೂ ಒಂದು ಹಾಡು ಮೂಡಿಬಂದಿರುವುದು ಸಿನಿಮಾದ ವಿಶೇಷ. ಇಡೀ ಚಿತ್ರದುದ್ದಕ್ಕೂ ಧ್ರುವ ಸರ್ಜ ಅವರ ಧ್ವನಿ ಕೇಳಲಿದೆಯಂತೆ. ‘ಸ್ವಾರಸ್ಯ ಸಿನಿ ಕ್ರಿಯೇಷನ್ಸ್’ ನಿರ್ಮಾಣವಾಗಿರೋ ಈ ಚಿತ್ರ ಮೇ 13ರಂದು ತೆರೆಕಾಣೋ ಸಾಧ್ಯತೆಗಳಿವೆ.

‘ನಟಭಯಂಕರ’ನಿಗೆ ‘ರೋರಿಂಗ್ ಸ್ಟಾರ್’ ಸಾಥ್. Read More »

ಎದೆ ಹಾಲಿನ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ರಾಧಿಕಾ ಪಂಡಿತ್ ಹೇಳಿದ್ದೇನು ಗೊತ್ತಾ?

ನಂದಗೋಕುಲ ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದ ರಾಧಿಕಾ ಪಂಡಿತ್ ನಟಿಸಿದ್ದು ಕೇವಲ ಮೂರು ಧಾರಾವಾಹಿಗಳಲ್ಲಿ. ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಬೆಳ್ಳಿತೆರೆಗೆ ಜಿಗಿದ ರಾಧಿಕಾ ಮುಂದೆ ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಧಿಕಾ ಪಂಡಿತ್ ವಿವಾಹದ ಬಳಿಕ ಬಣ್ಣ ಹಚ್ಚಿದ್ದು ಕೊಂಚ ಕಡಿಮೆಯೇ. ಮಗಳು, ಮಗನ ಆರೈಕೆಯಲ್ಲಿ ಬ್ಯುಸಿಯಾಗಿರುವ ರಾಧಿಕಾ ಪಂಡಿತ್ ನಟನೆಯಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಜಾಸ್ತಿಯೇ ಆ್ಯಕ್ಟೀವ್ ಆಗಿದ್ದಾರೆ. ಬಿಡುವಾದಗಲ್ಲೆಲ್ಲಾ ಮುದ್ದು ಮಕ್ಕಳ ಫೋಟೋ, ವಿಡಿಯೋ ಹಂಚಿಕೊಳ್ಳುತ್ತಿರುವ ರಾಧಿಕಾ ಇದೀಗ ಸಮಾಜಕ್ಕೆ ಉಪಯೋಗವಾಗುವಂತಹ ಸಂದೇಶವೊಂದಕ್ಕೆ ದನಿಯಾಗಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ರಾಧಿಕಾ ಪಂಡಿತ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಎದೆ ಹಾಲಿನ ಪ್ರಾಮುಖ್ಯತೆ ಬಗ್ಗೆ ಹೇಳಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ ಎದೆ ಹಾಲು ದಾನ ಮಾಡಿ ಎಂದು ಕೂಡಾ ಅವರು ಹೇಳಿದ್ದಾರೆ. “ಎದೆಹಾಲು ಜೀವನದ ಅಮೂಲ್ಯ ಉಡುಗೊರೆಗಳ ಪೈಕಿ ಒಂದು ಹೌದು. ಯಾಕೆಂದರೆ ಎದೆ ಹಾಲಿನಲ್ಲಿರುವಷ್ಟು ಅಂಶಗಳಿಗೆ ನಾವು ಬೇರೆ ಯಾವುದನ್ನು ಕೂಡಾ ಹೋಲಿಸಲು ಸಾಧ್ಯವಿಲ್ಲ. ನವಜಾತ ಶಿಶುಗಳಿಗಂತೂ ಎದೆ ಹಾಲು ಬೇಕೇ ಬೇಕು. ಎದೆ ಹಾಲು ಪೋಷಕಾಂಶಗಳ ಆಗರ ಮಾತ್ರವಲ್ಲ ಇದು ಅಧಿಕ ಪ್ರಮಾಣದ ರೋಗ ನಿರೋಧಕ ಶಕ್ತಿಯನ್ನು ಕೂಡಾ ಒಳಗೊಂಡಿದೆ” ಎಂದಿದ್ದಾರೆ ರಾಧಿಕಾ ಪಂಡಿತ್. ಮಿಲ್ಕ್ ಬ್ಯಾಂಕ್ ಬಗ್ಗೆ ಮಾತನಾಡಿರುವ ರಾಧಿಕಾ ಪಂಡಿತ್ “ನಮ್ಮ ದೇಶದಲ್ಲಿ ತುಂಬಾ ಮಕ್ಕಳು ಎದೆಹಾಲು ಸಿಗದೆ ವಂಚಿತರಾಗುತ್ತಿದ್ದಾರೆ. ಅಂತಹ ಮಕ್ಕಳಿಗೆ ಎದೆ ಹಾಲು ದಾನ ಮಾಡಬಹುದಾಗಿದೆ. ಅದಕ್ಕೆಂದೇ ಮಿಲ್ಕ್ ಬ್ಯಾಂಕ್ ಅನ್ನು ಕೂಡಾ ಆರಂಭಿಸಲಾಗಿದೆ. ಅಗತ್ಯಕ್ಕಿಂತ ಹೆಚ್ಚಿಗೆ ಇರುವಂತಹ ಎದೆಹಾಲನ್ನು ದಾನ ಮಾಡಬಹುದು. ಇದರಿಂದ ಎದೆ ಹಾಲು ವಂಚಿತ ಮಕ್ಕಳಿಗೆ ಸಹಾಯ ಮಾಡಿದಂತಾಗುತ್ತದೆ” ಎಂದು ಹೇಳಿದ್ದಾರೆ ರಾಧಿಕಾ ಪಂಡಿತ್. ಇನ್ನು ಇದರ ಜೊತೆಗೆ ಎದೆ ಹಾಲು ದಾನದ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಕಾಲ್ನಡಿಗೆ ಜಾಥಾವನ್ನು ಇದೇ ಮಾರ್ಚ್ 27 ರಂದು ಹಮ್ಮಿಕೊಳ್ಳಲಾಗಿದ್ದು ಈ ಜಾಥಾದಲ್ಲಿ ಭಾಗವಹಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ರಾಧಿಕಾ.

ಎದೆ ಹಾಲಿನ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ರಾಧಿಕಾ ಪಂಡಿತ್ ಹೇಳಿದ್ದೇನು ಗೊತ್ತಾ? Read More »

‘ಜೇಮ್ಸ್’ ಪರ ನಿಂತ ಮುಖ್ಯಮಂತ್ರಿಗಳು.

‘ಕರ್ನಾಟಕ ರತ್ನ’ ಡಾ| ಪುನೀತ್ ರಾಜಕುಮಾರ್ ಅವರು ಸಂಪೂರ್ಣ ನಾಯಕರಾಗಿ ನಟಿಸಿದಂತಹ ಕೊನೆಯ ಚಿತ್ರ ‘ಜೇಮ್ಸ್’ ಮಾರ್ಚ್ 17ರಂದು ಬಿಡುಗಡೆಗೊಂಡು ಎಲ್ಲೆಡೆ ಚಿತ್ರಮಂದಿರಗಳ ಜೊತೆಗೆ ಕನ್ನಡಿಗರ ಮನಸ್ಸನ್ನು ತುಂಬುತ್ತಿದೆ. ಎಲ್ಲ ಕಡೆ ಹೌಸ್ ಫುಲ್ ಶೋಗಳನ್ನು ಪಡೆಯುತ್ತಿರೋ ಈ ಚಿತ್ರವನ್ನ ಅಲ್ಲಲ್ಲಿ ಚಿತ್ರಮಂದಿರಗಳಿಂದ ತೆಗೆಯುತ್ತಿರುವುದು ಕಂಡುಬಂದದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ಈ ವಿಷಯಕ್ಕೆ ನಾಡಿನ ಮುಖ್ಯಮಂತ್ರಿಗಳೇ ಒಂದು ಮಟ್ಟಿನ ತೆರೆ ಎಳೆದಿದ್ದಾರೆ. ಭಾರತದೆಲ್ಲೆಡೆ ವಿಶೇಷ ಛಾಪು ಮೂಡಿಸುತ್ತಿರೋ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತಿರುವಂತದ್ದೇ. ಭಾಷೆಯ ಹಂಗಿಲ್ಲದೆ ಎಲ್ಲರಿಗೂ ಕಾಶ್ಮೀರದ ಕಥೆ ಹೇಳುತ್ತಿದೆ ಚಿತ್ರ. ಈ ಚಿತ್ರದ ಪ್ರಭಾವ ಎಲ್ಲಿವರೆಗೆ ಬೆಳೆದಿದೆ ಎಂದರೆ ಕರ್ನಾಟಕದ ಹಲವಾರು ಕಡೆ ಕನ್ನಡದ ಸ್ವಂತ ಚಿತ್ರ, ಅದರಲ್ಲೂ ಅಪ್ಪು ಚಿತ್ರವಾದ ‘ಜೇಮ್ಸ್’ ಅನ್ನು ಹೊರಹಾಕುವಷ್ಟು!! ಕಾಶ್ಮೀರ್ ಫೈಲ್ಸ್ ಚಿತ್ರದ ಶೋ ಹೆಚ್ಚಳ ಮಾಡುವ ನಿಟ್ಟಿನಲ್ಲಿ ‘ಜೇಮ್ಸ್’ ಚಿತ್ರದ ಶೋಗಳನ್ನು ನಿಲ್ಲಿಸಲಾಗುತ್ತಿದೆ. ಅಲ್ಲದೇ, ನಾಳೆ(ಮಾ.25)ರಂದು ರಾಜಮೌಳಿಯವರ RRR ಚಿತ್ರ ತೆರೆಕಾಣುತ್ತಿದ್ದು, ಹಲವಾರು ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ಚಿತ್ರದ ಪ್ರದರ್ಶನ ನಿಲ್ಲಿಸುವ ಭೀತಿ ಉಂಟಾಗಿದೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರವನ್ನ ತೆಗೆದಲ್ಲಿ ಸಿನಿಮಂದಿರದೊಳಗೆ ನುಗ್ಗಿ ಗಲಭೆ ಮಾಡುವುದಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, “ಅಭಿಮಾನಿಗಳು ಶಾಂತರಾಗಬೇಕು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅವರ ಜೊತೆಹಾಗು ಶಿವಣ್ಣನವರ ಜೊತೆ ಮಾತನಾಡಿದ್ದೇನೆ. ಎಲ್ಲೇ ಚಿತ್ರವನ್ನು ತೆಗೆದುಹಾಕಿದ್ದು ತಿಳಿದುಬಂದಲ್ಲಿ ನನ್ನ ಗಮನಕ್ಕೆ ತರುವಂತೆ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ‘ಜೇಮ್ಸ್’ ಅನ್ನು ಥೀಯೇಟರ್ ಗಳಿಂದ ತೆಗೆಯುವಂತಿಲ್ಲ” ಎಂದಿದ್ದಾರೆ. ವಿಪರ್ಯಾಸವೆಂದರೆ ಈ ಚಲನಚಿತ್ರಗಳನ್ನು ಸಹ ಪಕ್ಷಗಳು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು. ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ಇಡೀ ದೇಶ ನೋಡಬೇಕೆಂದು ಹೋರಾಡುತ್ತಿರುವ ರಾಜಕಾರಣಿಗಳು ಅದರಲ್ಲೂ ತಮ್ಮ ಲಾಭವನ್ನ ಕಂಡುಕೊಂಡು ಅಪ್ಪು ಅಭಿನಯದ ‘ಜೇಮ್ಸ್’ ಚಿತ್ರವನ್ನ ತೆಗೆಯುತ್ತಿದ್ದಾರೆ. ಜನರೆದುರಿಗೆ ಸುದ್ದಿಗೋಷ್ಠಿಗಳಲ್ಲಿ ಬಂದು ಕಾಂಗ್ರೆಸ್ನವರು ಬಿಜೆಪಿಯವರ ಮೇಲು, ಬಿಜೆಪಿಯವರು ಕಾಂಗ್ರೆಸ್ಸ್ನವರ ಮೇಲು ಪರಸ್ಪರ ಆರೋಪಿಸಿಕೊಳ್ಳುತ್ತಿದ್ದಾರೆ!!

‘ಜೇಮ್ಸ್’ ಪರ ನಿಂತ ಮುಖ್ಯಮಂತ್ರಿಗಳು. Read More »

ಕನ್ನಡಿಗರ RRR “ಬಹಿಷ್ಕಾರ”: ಕಥೆಯಲ್ಲೀಗ ಹೊಸ ತಿರುವು.

ಕರ್ನಾಟಕದಲ್ಲೇ ಕನ್ನಡ ಅವತರಣಿಕೆಗಳಿಗೆ ಬರ ಬಂದಿದೆ. ಇದು ಪ್ರೇಕ್ಷಕರನ್ನ ರೊಚ್ಚಿಗೆಳಿಸಿದೆ. ಹೀಗಾಗಿದ್ದು ತೆಲುಗು ಮೂಲದ ಭಾರತದ ಬಹುನಿರೀಕ್ಷಿತ ಪಂಚಾಭಾಷ ಚಿತ್ರ, RRRಗೆ. ಇನ್ನೇನು ಬಿಡುಗಡೆಗೆ ಒಂದು ದಿನವಷ್ಟೇ ಬಾಕಿ ಇರುವಾಗ, ಕನ್ನಡಿಗರಿಂದ ‘#BoycottRRRinKarnataka’, ‘#ಡಬ್ಬಿಂಗ್ಇದುಕನ್ನಡಪರ’, ‘#releaseRRRinKannada’ ಮುಂತಾದ ಟ್ಯಾಗ್ ಗಳು ಎಲ್ಲೆಡೆ ಹರಿದಾಡುತ್ತಿವೆ. ಮಾರ್ಚ್ 25ರಂದು ಪ್ರಪಂಚಾದಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲು RRR ಸಿನಿಮಾ ಕಾಯುತ್ತಿದೆ. ಈ ‘ದೃಶ್ಯಕಾವ್ಯ’ವನ್ನು ತಮ್ಮ ಭಾಷೆಯಲ್ಲೇ ಕಣ್ತುಂಬಿಕೊಳ್ಳಲು ಭಾರತದ ವಿವಿಧ ಭಾಗದ ಅಭಿಮಾನಿಗಳು ಕಾಯುತ್ತಿದ್ದಾರೆ. ಕನ್ನಡಿಗರು ಸಹ. ಆದರೆ ಈ ಬಾರಿಯು ಕೂಡ ‘ಪುಷ್ಪ’ ಸಿನಿಮಾದ ಸಂಧರ್ಭಗಳೇ ಮರುಕಳಿಸೊ ಹಾಗಿದೆ. ಸಿನಿಮಾದ ಕನ್ನಡ ರೂಪಾಂತರಕ್ಕಾಗಿ ನಾಯಕನಟರಾದ ಜೂನಿಯರ್ ಎನ್ ಟಿ ಆರ್ ಹಾಗು ರಾಮ್ ಚರಣ್ ಅವರು ಕನ್ನಡವನ್ನ ಸ್ಪಷ್ಟವಾಗಿ ಕಲಿತು, ಕನ್ನಡದಲ್ಲಿ ತಾವೇ ಖುದ್ದಾಗಿ ಧ್ವನಿ ನೀಡಿದ್ದರು. ಆದರೆ ಇದೀಗ ಕರ್ನಾಟಕದಲ್ಲೇ ಕನ್ನಡದ ಶೋಗಳು ಬೆರಳೆಣಿಕೆಯಷ್ಟು ಕಂಡುಬರುತ್ತಿವೆ. ಇದೆ ಕಾರಣಕ್ಕೆ ಹಲವಾರು ಕನ್ನಡಿಗರು ‘RRRಬಹಿಷ್ಕರಿಸಿ’ ಎಂಬ ಘೋಷಣೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೂಗಿ ಕೂಗಿ ಹೇಳುತ್ತಿದ್ದಾರೆ. ಇತ್ತ ಈ ನಿಲುವು ಭದ್ರವಾಗುತ್ತಿದ್ದಂತೆ ಸಿನಿಮಾದ ಕನ್ನಡ ವಿತರಕರಾದ ‘KVN ಪ್ರೊಡಕ್ಷನ್ಸ್’ ಸಂಸ್ಥೆ ತಮ್ಮ ಕಡೆಯ ಕಥೆಯನ್ನ ಹೊರಹಾಕಿದ್ದಾರೆ. “ಕನ್ನಡ ಅವತರಣಿಕೆಗಾಗಿ ರಾಮ್ ಚರಣ್ ಹಾಗು ಜ್ಯೂನಿಯರ್ ಎನ್ ಟಿ ಆರ್ ಅವರು ವಿಶೇಷ ಪ್ರಯತ್ನ ಪಟ್ಟು, ಮೊದಲ ಬಾರಿಗೆ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ನೀವು ಈ ದೃಶ್ಯಕಾವ್ಯವನ್ನ ಕನ್ನಡದಲ್ಲೇ ನೋಡಬಯಸುತ್ತೀರಿ ಎಂದು ಭಾವಿಸುತ್ತೇವೆ. ಕನ್ನಡ ಅವತರಣಿಕೆಯನ್ನು ಬಿಡುಗಡೆಗೊಳಿಸಲು ಹಿಂಜರಿಯುತ್ತಿರುವ ಚಿತ್ರಮಂದಿರದ ಮಾಲೀಕರುಗಳ ಮನವೊಲಿಸುವ ಕಾರ್ಯ ನಾವು ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚು ಶೋ ನೀಡಲು ನಾವು ಸತತ ಪ್ರಯತ್ನ ಮಾಡುತ್ತಿದ್ದೇವೆ. ಸಿನಿಮಾವನ್ನ ಕನ್ನಡದಲ್ಲೇ ಬಿಡುಗಡೆಗೊಳಿಸಲು ನೀವು ನಮಗೆ ಸಹಾಯ ಮಾಡುತ್ತೀರಿ ನಮ್ಮೊಂದಿಗಿದ್ದು ನಮ್ಮನ್ನು ಬೆಂಬಲಿಸುತ್ತೀರಿ ಎಂದು ಭಾವಿಸುತ್ತೇವೆ” ಎಂದು ಬರೆದುಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ. ಕನ್ನಡದಲ್ಲಿ ಹೀಗಾಗುತ್ತಿರುವುದು ಇದೇನು ಮೊದಲ ಬಾರಿಯಲ್ಲ. ಪುಷ್ಪ ಸಿನಿಮಾದ ಬಿಡುಗಡೆ ವೇಳೆಯಲ್ಲೂ ಕನ್ನಡದ ಅವತರಣಿಕೆ ಹೆಸರಿಗಷ್ಟೇ ಜೀವತಾಳಿತ್ತು. ಬಹುಪಾಲು ಕನ್ನಡಿಗರು ಚಿತ್ರಮಂದಿರಗಳಲ್ಲಿ ತೆಲುಗು ಆವೃತ್ತಿಯನ್ನೇ ಕಣ್ತುಂಬಿಕೊಂಡಿದ್ದರು. ಅದೇ ಕಾರಣಕ್ಕೆ ಈ ಬಾರಿ ಸಿನಿಮಂದಿರದವರು ಹಿಂದೇಟು ಹಾಕುತ್ತಿರುವಂತೆ ಕಾಣುತ್ತಿದೆ. ಸದ್ಯ ಅರ್ಧಪಾಲು ಜವಾಬ್ದಾರಿಯನ್ನು ಪ್ರೇಕ್ಷಕರ ಮೇಲೆ ಹೇರಿರುವ ವಿತರಕರು, ಅತಿಹೆಚ್ಚು ಕನ್ನಡ ಶೋಗಳಿಗಾಗಿ ಪ್ರಯತ್ನಿಸುತ್ತಿದ್ದಾರೆ. ಸದ್ಯ ಕನ್ನಡದ ಶೋಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಆದಷ್ಟು ಬೇಗ ಸಾಕಷ್ಟು ಕನ್ನಡದ ಅವತರಣಿಕೆಗಳು ತೆರೆಮೇಲೆ ಬರುವಂತಾಗಬಹುದು. ಪಾನ್-ಇಂಡಿಯನ್ ಚಿತ್ರ ಎಂದಾದ ಮೇಲೆ ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಅತೀ ಹೆಚ್ಚು ಬಿಡುಗಡೆಯಾಗಬೇಕು ಎಂಬುದು ಅಭಿಮಾನಿಗಳ ಆಶಯ. RRRನ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿಯೇ ಶಿವಣ್ಣ ಈ ಮಾತು ಹೇಳಿದ್ದರು. RRR ಅಂತ ದೊಡ್ಡ ಸಿನಿಮಾಗಳಲ್ಲೇ ಪದೇ ಪದೇ ಹೀಗಾಗುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗುತ್ತಿದೆ.

ಕನ್ನಡಿಗರ RRR “ಬಹಿಷ್ಕಾರ”: ಕಥೆಯಲ್ಲೀಗ ಹೊಸ ತಿರುವು. Read More »

‘ಕೆಜಿಎಫ್’ ಪ್ರಚಾರಕ್ಕೆ ಈ ಬಾರಿ ಅಭಿಮಾನಿಗಳೇ ಮುಂದಾಳುಗಳು!!!

ರಾಕಿ ಭಾಯ್ ಆಳ್ವಿಕೆಯನ್ನ ಪ್ರಪಂಚಕ್ಕೆ ತಿಳಿಸಲು ಇನ್ನೇನು ಸದ್ಯದಲ್ಲೇ ಕೆಜಿಎಫ್ ಚಿತ್ರ ತೆರೆಮೇಲೆ ಬರಲಿದೆ. ಏಪ್ರಿಲ್ 14ಕ್ಕೆ ಪ್ರಪಂಚದಾದ್ಯಂತ ‘ತೂಫಾನ್’ ಹುಟ್ಟುಹಾಕಲು ಚಿತ್ರತಂಡ ಕಾಯುತ್ತಿದ್ದರೆ, ಬೆಳ್ಳಿತೆರೆಯಲ್ಲಿ ಚಿತ್ರವನ್ನ ನೋಡಿ ಆನಂದಿಸಲು ಅಭಿಮಾನಿ ಸಾಗರವೇ ಕಾಯುತ್ತಿದೆ. ಈ ಸಂಧರ್ಭದಲ್ಲಿ ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳು ಬರದಿಂದ ಸಾಗುತ್ತಿವೆ. ‘ಹೊಂಬಾಳೆ’ ಸಂಸ್ಥೆ ಈ ಬಾರಿಯ ಪ್ರಚಾರದಲ್ಲಿ ಹೊಸ ದಾರಿಯೊಂದನ್ನ ತೆರೆದಿಟ್ಟಿದ್ದು, ಅಭಿಮಾನಿಗಳ ಆನಂದವನ್ನ ಹೆಚ್ಚಿಸಿದೆ. ಈ ಬಾರಿಯ ವಿಶೇಷತೆಯೆಂದರೆ, ಪ್ರಚಾರಕ್ಕೆಂದು ಬಳಸೋ ಪೋಸ್ಟರ್ ಗಳ ಸೃಷ್ಟಿಕರ್ತರು ಸಿನಿಮಾದ ಅಭಿಮಾನಿಗಳೇ ಆಗಿರಲಿದ್ದಾರೆ. ಹೌದು, ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಪ್ರಮೋಷನ್ ಚಟುವಟಿಕೆಗಳಲ್ಲಿ ಪೋಸ್ಟರ್ ಗಳದ್ದು ಒಂದು ಅತಿಮುಖ್ಯ ಪಾಲು. ಬಿಡುಗಡೆಯ ದಿನಾಂಕ ಹತ್ತಿರಬರುತ್ತಿರುವ ಹೊತ್ತಿಗೆ ಚಿತ್ರತಂಡ ತಮ್ಮ ಈ ವಿಶೇಷ ನಿರ್ಧಾರವನ್ನ ಹೊರಹಾಕಿದೆ. ಕೆಜಿಎಫ್ ನ ಮೆರವಣಿಗೆ ಹೋಗುವಲ್ಲೆಲ್ಲ ಅಭಿಮಾನಿಗಳ ಕೈಯಲ್ಲಿ ಮೂಡಿಬಂದ ಕಲೆಯೇ ಗುರುತಾಗಲಿದೆ. ಅಭಿಮಾನಿಗಳು ತಮ್ಮ ಕೈಯಾರೆ ಬಿಡಿಸಿದಂತ ‘ಕೆಜಿಎಫ್’ ಸಿನಿಮಾಸಂಭಂದಿ ಚಿತ್ರಗಳು ಪ್ರಚಾರದ ಪೋಸ್ಟರ್ ಗಳಾಗಲಿವೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಹಂಚಿಕೊಂಡಿರೋ ‘ಹೊಂಬಾಳೆ’ ಸಂಸ್ಥೆಯು ‘ಈ ಚಿತ್ರ ಇಷ್ಟು ಬೆಳೆದಿರುವುದು ನಿಮ್ಮಿಂದಲೇ, ಅಭಿಮಾನಿಗಳಿಲ್ಲದೆ ‘ಕೆಜಿಎಫ್’ ಇಲ್ಲ. ಹಾಗಾಗಿ ಈ ಬಾರಿಯು ನಿಮ್ಮ ಸಹಕಾರ ಕೋರುತ್ತೇವೆ.’ ಎಂದು ಬರೆದುಕೊಂಡಿದ್ದಾರೆ. ತಾವು ಬರೆದ ಚಿತ್ರಗಳನ್ನು ಒಪ್ಪಿಸಲು ಮಾರ್ಚ್ 30ರಂದು ಕೊನೆಯ ದಿನಾಂಕವೆಂದು ಕೂಡ ಉಲ್ಲೇಖಿಸಿದೆ.

‘ಕೆಜಿಎಫ್’ ಪ್ರಚಾರಕ್ಕೆ ಈ ಬಾರಿ ಅಭಿಮಾನಿಗಳೇ ಮುಂದಾಳುಗಳು!!! Read More »

ತಂತ್ರಜ್ಞರಿಗಾಗಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ಬಡ್ಡೀಸ್ ಸಿನಿಮಾ ತಂಡ.. ವಿಶೇಷತೆ ಏನು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ನಟಿಸುತ್ತಿರುವ ಕಿರಣ್ ರಾಜ್ ಹಿರಿತೆರೆಯಲ್ಲಿಯೂ ಮಿಂಚಿದ ಪ್ರತಿಭೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಕಿರಣ್ ರಾಜ್ ಅವರ ಭರ್ಜರಿ ಗಂಡು ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಇನ್ನು ಭರ್ಜರಿ ಗಂಡು ಸಿನಿಮಾದ ಟೀಸರ್ ಕೂಡಾ ಬಿಡುಗಡೆಯಾಗಿದ್ದು ಸಿನಿ ಪ್ರಿಯರು ಮೆಚ್ಚಿಕೊಂಡಿದ್ದರು. ಇದೀಗ ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿರುವ ಬಡ್ಡೀಸ್ ಸಿನಿಮಾದ ಶೂಟಿಂಗ್ ಕೂಡಾ ಮುಕ್ತಾಯವಾಗಿದೆ. ಮೇ ತಿಂಗಳಿನಲ್ಲಿ ರಿಲೀಸ್ ಆಗಲಿರುವ ಈ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು ಅದರಲ್ಲಿ ತಂತ್ರಜ್ಞರಿಗೆ ಮನ್ನಣೆ ನೀಡಿರುವುದು ವಿಶೇಷ. ಸಿನಿಮಾ ಪೋಸ್ಟರ್‌ ಎಂದ ಮೇಲೆ ಅದರಲ್ಲಿ ಹೀರೋ ಅಥವಾ ಹೀರೋಯಿನ್ ಫೋಟೋ ಇರುವುದು ಮಾಮೂಲಿ. ಆದರೆ ಬಡ್ಡೀಸ್ ಸಿನಿಮಾದ ಪೋಸ್ಟರ್ ಕೊಂಚ ಭಿನ್ನವಾಗಿದೆ. ಹೌದು, ಬಡ್ಡೀಸ್ ಸಿನಿಮಾ ತಂಡವು ತಂತ್ರಜ್ಞರಿಗಾಗಿಯೇ ಪೋಸ್ಟರ್‌ ಬಿಡುಗಡೆ ಮಾಡಿದೆ. ಪೋಸ್ಟರ್ ನಲ್ಲಿನಿರ್ದೇಶಕ ಗುರುತೇಜ್ ಶೆಟ್ಟಿ, ನಿರ್ಮಾಪಕಿ ಭಾರತಿ ಶೆಟ್ಟಿ, ಛಾಯಾಗ್ರಾಹಕಿ ನಿಭಾ ಶೆಟ್ಟಿ, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಪಿಆರ್‌ಓ ವೆಂಕಟೇಶ್, ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಸಂಕಲನಕಾರ ಕೆ.ಎಂ. ಪ್ರಕಾಶ್ ಹೀಗೆ ಅನೇಕ ತಂತ್ರಜ್ಞರ ಫೋಟೋವನ್ನು ಹಾಕಿದ್ದಾರೆ. ಜೊತೆಗೆ ಈ ಫೋಸ್ಟರ್ ಗಾಗಿ ವಿಭಿನ್ನ ರೀತಿಯ ಫೋಟೋಶೂಟ್ ಕೂಡ ಚಿತ್ರತಂಡ ಮಾಡಿಸಿದ್ದಾರೆ.

ತಂತ್ರಜ್ಞರಿಗಾಗಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ಬಡ್ಡೀಸ್ ಸಿನಿಮಾ ತಂಡ.. ವಿಶೇಷತೆ ಏನು ಗೊತ್ತಾ? Read More »

Scroll to Top