Karnataka Bhagya

ಕ್ರೀಡೆ

ನಿನ್ನನ್ನು ಸ್ವಾಗತಿಸಲು ಕಾಯುತ್ತಿದ್ದೇವೆ ಎಂದ ಸೋನಂ ಕಪೂರ್…

ಬಾಲಿವುಡ್ ನಟಿ ಸೋನಂ ಕಪೂರ್ ತಾಯಿಯಾಗುತ್ತಿದ್ದಾರೆ. ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಕುಟುಂಬಕ್ಕೆ ಮುದ್ದು ಅತಿಥಿ ಬರುತ್ತಿರುವ ಸಂತಸದ ವಿಚಾರವನ್ನು ಆನಂದ್ ಅಹುಜಾ ಹಾಗೂ ಸೋನಂ ದಂಪತಿ ಇತ್ತೀಚೆಗಷ್ಟೇ ಹಂಚಿಕೊಂಡಿದ್ದು ಅವರಿಗೆ ಶುಭಾಶಯಗಳು ಹರಿದುಬರುತ್ತಿವೆ. “ನಾಲ್ಕು ಕೈಗಳು, ನಿನ್ನನ್ನು ನಾವು ಸಾಧ್ಯವಾದಷ್ಟು ಉತ್ತಮವಾಗಿ ಬೆಳೆಸಲು.‌. ಈ ಎರಡು ಹೃದಯಗಳು ಸದಾ ನಿನಗಾಗಿ ಮಿಡಿಯುತ್ತದೆ. ಒಂದು ಕುಟುಂಬ ನಿನಗೆ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತದೆ. ಒಟ್ಟಾರೆಯಾಗಿ ನಿನ್ನನ್ನು ಸ್ವಾಗತಿಸಲು ನಾವು ಕಾಯುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ತಮ್ಮ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸೋನಂ ಕಪೂರ್ ಮಗು ಶರತ್ಕಾಲದಲ್ಲಿ ಜನಿಸಲಿದೆ ಎಂದು ತಿಳಿಸಿದ್ದು ಕಪೂರ್ ಕುಟುಂಬದ ಮೂಲಗಳು ಹೇಳುವಂತೆ ಸೋನಂ ಈಗ ನಾಲ್ಕು ತಿಂಗಳ ಗರ್ಭಿಣಿ. ಬರುವ ಆಗಸ್ಟ್ ನಲ್ಲಿ ಹೆರಿಗೆ ಆಗುವ ಸಾಧ್ಯತೆ ಇದೆ. ಸೋನಂ ತಂದೆ ತಾಯಿ ಅನಿಲ್ ಕಪೂರ್ ಹಾಗೂ ಸುನೀತಾ ಕಪೂರ್ ಅಜ್ಜ ಅಜ್ಜಿ ಆಗುತ್ತಿರುವ ಸಂತಸವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮೂರು ವರ್ಷಗಳ ಡೇಟಿಂಗ್ ಬಳಿಕ 2018ರಲ್ಲಿ ಆನಂದ್ ಅಹುಜಾ ಅವರನ್ನು ವರಿಸಿದ್ದ ಸೋನಂ ಕಪೂರ್ ಮದುವೆಯ ನಂತರವೂ ಸಿನಿಮಾಗಳಲ್ಲಿ ನಟಿಸಿದ್ದರು.

ನಿನ್ನನ್ನು ಸ್ವಾಗತಿಸಲು ಕಾಯುತ್ತಿದ್ದೇವೆ ಎಂದ ಸೋನಂ ಕಪೂರ್… Read More »

ರಿಯಾಲಿಟಿ ಶೋವಿಗೂ ಸೀರಿಯಲ್ ಗೂ ವ್ಯತ್ಯಾಸವಿದೆ – ಇಶಿತ ವರ್ಷ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಯಲ್ಲಿ ಮಾಯಾಳಾಗಿ ನಟಿಸಿದ್ದ ಇಶಿತ ವರ್ಷ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಆದರೆ ಈ ಬಾರಿ ಸಣ್ಣ ಬದಲಾವಣೆಯಿದೆ. ಇಶಿತ ಅವರು ಕಿರುತೆರೆಗೆ ಮರಳಿರುವುದೇನೋ ನಿಜ. ಆದರೆ ಈ ಬಾರಿ ಅವರು ನಟಿಯಾಗಿ ಮರಳಿಲ್ಲ. ಬದಲಿಗೆ ಸ್ಪರ್ಧಿಯಾಗಿ ಕಂ ಬ್ಯಾಕ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ಸ್ ರಿಯಾಲಿಟಿ ಶೋವಿನ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಇಶಿತ ವರ್ಷ “ಇದೊಂದು ಅದ್ಭುತವಾದ ಜರ್ನಿ” ಎಂದು ಹೇಳಿದ್ದಾರೆ. “ಇದೇ ಮೊದಲ ಬಾರಿಗೆ ನೃತ್ಯಕ್ಕೆ ಸಂಬಂಧಪಟ್ಟ ಶೋ ವಿನಲ್ಲಿ ಕಾಣಿಸಿಕೊಂಡಿದ್ದೇನೆ. ಖುಷಿಯಾಗುತ್ತಿದೆ. ನಿಜವಾಗಿ ಹೇಳಬೇಕೆಂದರೆ ಇದು ನನಗೂ ಒಂದು ರೀತಿಯ ಚಾಲೆಂಜ್ ಹೌದು. ಡ್ಯಾನ್ಸ್ ಶೋ ಎಂದ ಮಾತ್ರಕ್ಕೆ ಅದೆಂಥ ಸುಲಭವಲ್ಲ. ಅದ‌ನ್ನು ಇಷ್ಟಪಟ್ಟು ಹಾಗೂ ಕಷ್ಟಪಟ್ಟು ಮಾಡಬೇಕು” ಎನ್ನುತ್ತಾರೆ. “ರಿಯಾಲಿಟಿ ಶೋ ವಿನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಾಗ ಬೇಕಾ ಬೇಡ್ವಾ ಎಂದು ಕನ್ ಫ್ಯೂಶನ್ ಆಗಿತ್ತು. ಆದರೆ ಚಾಲೆಂಜಿಗ್ ಆದುದರಿಂದ ಒಪ್ಪಿಕೊಂಡೆ. ಖುಷಿಯಾಗುತ್ತಿದೆ” ಎನ್ನುವ ಇಶಿತ ವರ್ಷ “ರಿಯಾಲಿಟಿ ಶೋವಿಗೂ, ಸೀರಿಯಲ್ ಗೂ ತುಂಬಾ ವ್ಯತ್ಯಾಸವಿದೆ” ಎನ್ನುತ್ತಾರೆ. “ಧಾರಾವಾಹಿಯಲ್ಲಾದರೆ ಎಷ್ಟು ಬೇಕಾದರೂ ಟೇಕ್ಸ್ ತೆಗೆದುಕೊಳ್ಳಬಹುದು. ಆದರೆ ಶೋ ವಿನಲ್ಲಿ ಹಾಗಲ್ಲ. ಕೇವಲ ಒಂದೇ ಟೇಕ್. ಇನ್ನು ಈ ಶೋಗಾಗಿ ನಾವು ವಾರದಲ್ಲಿ 2 ರಿಂದ 3 ದಿನ ಪ್ರಾಕ್ಟೀಸ್ ಮಾಡಬೇಕಾಗುತ್ತದೆ. ಮುಖ್ಯವಾಗಿ ಕೊನೆ ಹಂತದಲ್ಲಿ ಏನಾದರೂ ಬದಲಾವಣೆಯಾದರೆ ಅದನ್ನು ಸ್ವೀಕರಿಸಲು ತಯಾರಿರಬೇಕು. ಸರಳವಾಗಿ ಹೇಳಬೇಕೆಂದರೆ ಮೆಂಟಲಿ ಪ್ರೀಪೇರ್ ಆಗಿರಬೇಕು ಅಷ್ಟೇ” ಎಂದು ನಗುನಗುತ್ತಾ ಹೇಳುವ ಇಶಿತ ವರ್ಷ ಡ್ಯಾನ್ಸಿಂಗ್ ಶೋವಿನ ಭಾಗವಾಗಿರುವುದಕ್ಕೆ ಖುಷಿಯಿಂದಿದ್ದಾರೆ. ಇನ್ನು ಇಶಿತ ಅವರಿಗೆ ರಿಯಾಲಿಟಿ ಶೋ ಹೊಸದೇನಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಕ್ಕು ವಿಥ್ ಕಿರಿಕ್ ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಂಡಿರುವ ಇಶಿತ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಶೋವಿನಲ್ಲಿ ಪತಿ ಕೊರಿಯೋಗ್ರಾಫರ್ ಮುರುಗಾನಂದ ಜೊತೆಗೆ ಕಾಣಿಸಿಕೊಂಡಿದ್ದರು. ಮಾತ್ರವಲ್ಲ ಅವರು ಆ ಶೋವಿನ ರನ್ನರ್ ಅಪ್ ಕೂಡಾ ಆಗಿ ಹೊರಹೊಮ್ಮಿದ್ದರು.

ರಿಯಾಲಿಟಿ ಶೋವಿಗೂ ಸೀರಿಯಲ್ ಗೂ ವ್ಯತ್ಯಾಸವಿದೆ – ಇಶಿತ ವರ್ಷ Read More »

‘ರಾಕಿ ಭಾಯ್’ ಜೊತೆಗೆ ಬರಲಿದ್ದಾನೆ ‘ಬೀಸ್ಟ್’!!!

ಯುದ್ಧ ಮುಗಿಸಿ ಸುಸ್ತಾಗಿ ಗನ್ ಹಿಡಿದು ಕೂತಿರುವಂತ ತಳಪತಿ ವಿಜಯ್ ಅವರನ್ನ ನೋಡಿ ಅಭಿಮಾನಿಗಳು ರೋಮಾಂಚಿತಗೊಂಡರೆ, ಅದರ ಜೊತೆಗೆ ಇದ್ದ ಸಿನಿಮಾದ ಬಿಡುಗಡೆ ದಿನಾಂಕವನ್ನ ನೋಡಿ ಅಚ್ಚರಿಗೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಮಾತುಗಳು ಆರಂಭವಾದವು ಈಗಲೂ ಆಗುತ್ತಲೇ ಇವೆ. ಯಾಕೆಂದರೆ ‘ಬೀಸ್ಟ್’ ಚಿತ್ರತಂಡ ಹೊರಕೊಟ್ಟ ಬಿಡುಗಡೆ ದಿನಾಂಕ ಏಪ್ರಿಲ್ 13. ಭಾರತದಾದ್ಯಂತ ಪ್ರತೀ ಭಾಷೆಯ ಸಿನಿರಸಿಕನು ಸಹ ಕಾಯುತ್ತಿರುವ ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಯಗುವುದು ಏಪ್ರಿಲ್ 14ಕ್ಕೆ. ನರಾಚಿಯ ಬಾಗಿಲು ತೆಗೆಯೋ ಈ ದಿನಾಂಕವನ್ನ ಸುಮಾರು 7 ತಿಂಗಳ ಹಿಂದೆಯೇ ಚಿತ್ರತಂಡ ಬಿಟ್ಟುಕೊಟ್ಟಿತ್ತು. ಆದರೀಗ ತಮಿಳಿನ ನಾಯಕರ ನಾಯಕ ‘ತಳಪತಿ ವಿಜಯ್’ ಅವರ ‘ಬೀಸ್ಟ್’ ಈ ಬಹುನಿರೀಕ್ಷಿತ ಚಿತ್ರಕ್ಕಿಂತ ಒಂದು ದಿನ ಮುಂಚೆ ಬರುತ್ತಿರುವುದು, ಪ್ರತಿಯೊಬ್ಬ ಅಭಿಮಾನಿಗೂ ಆಶ್ಚರ್ಯ ಆರಂಭ ಮಾಡಿದೆ. ಇಲ್ಲಿವರೆಗೆ ಗಾಳಿ ಸುದ್ದಿಯಾಗಿದ್ದ ಈ ವಿಷಯ ನಿನ್ನೆ(ಮಾರ್ಚ್ 22) ಲೋಕಾರ್ಪಣೆಯಾದಾಗ ಒಂದಷ್ಟು ಜನಕ್ಕೆ ಅಚ್ಚರಿಯಾದರೆ, ಇನ್ನೊಂದಷ್ಟು ಜನಕ್ಕೆ ಈ ಮಹಾಸಾಮರವನ್ನು ನೋಡಲು ಕಾತುರತೆ ಹೆಚ್ಚಾಗುತ್ತಾ ಹೋಯ್ತು. ‘ಡಾಕ್ಟರ್’ ಸಿನಿಮಾ ಖ್ಯಾತಿಯ ನೆಲ್ಸನ್ ದಿಲೀಪಕುಮಾರ್ ಅವರ ಕಥೆ ಹಾಗು ನಿರ್ದೇಶನದ ಜೊತೆಗೆ ಮೂಡಿಬರುತ್ತಿರೋ ಈ ಚಿತ್ರಕ್ಕೂ ಸಹ ಭಾರತದಾದ್ಯಂತ ವಿಜಯ್ ಅಭಿಮಾನಿಗಳು ಮಹಾ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ಅನಿರುಧ್ ಸಂಗೀತ ಚಿತ್ರಕ್ಕಿರಲಿದ್ದು, ಈಗಾಗಲೇ ಬಿಡುಗಡೆ ಆಗಿರೋ ‘ಅರೇಬಿಕ್ ಕುತು’ ಹಾಗು ‘ಜಾಲಿ ಒ ಜಿಮ್ಕಾನ’ ಹಾಡುಗಳು ನೆಟ್ಟಿಗರ ನಿರೀಕ್ಷೆಗಳನ್ನ ನೆಟ್ಟಗೆ ನಿಲ್ಲಿಸಿವೆ. ಚಿತ್ರದಲ್ಲಿ ವಿಜಯ್ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ.

‘ರಾಕಿ ಭಾಯ್’ ಜೊತೆಗೆ ಬರಲಿದ್ದಾನೆ ‘ಬೀಸ್ಟ್’!!! Read More »

‘ಕಬ್ಜ’ ಚಿತ್ರದ ಕಲಾವಿದರ ದಂಡಿಗೆ ಎರಡು ದೊಡ್ಡ ಹೆಸರುಗಳ ಸೇರ್ಪಡೆ.

ಇಡೀ ಭಾರತದಲ್ಲೇ ಸಂಚಲನ ಸೃಷ್ಟಿಸುತ್ತಿರೋ ಕನ್ನಡದ ಹೊಸ ಪಾನ್-ಇಂಡಿಯನ್ ಸಿನಿಮಾ ‘ಕಬ್ಜ’. ಆರ್. ಚಂದ್ರು ನಿರ್ದೇಶನದ ಈ ಚಿತ್ರ ತಾನು ಬಿಡುಗಡೆಗೊಳಿಸಿದಂತ ನಿಮಿಷವನ್ನು ಮೀರದ ಟೀಸರ್ ಗಳಿಂದಲೇ ಬಹಳ ನಿರೀಕ್ಷೆಗಳನ್ನ ಹುಟ್ಟುಹಾಕುತ್ತಿದೆ. ಇನ್ನು ಇದರ ತಾರಾಗಣ ಜನರ ಆಕಾಂಕ್ಷೆಗಳನ್ನು ಮುಗಿಲಿನೆತ್ತರಕ್ಕೆ ಏರಿಸುತ್ತಲಿದೆ. ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟರಾಗಿ ಬಣ್ಣ ಹಚ್ಚಿದರೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ‘ಭಾರ್ಗವ ಭಕ್ಷಿ’ ಎಂಬ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಂಡಿರೋ ಭಾರ್ಗವ ಭಕ್ಷಿಯ ಮೊದಲ್ನೋಟದ ಪೋಸ್ಟರ್ ಒಂದು ಕೂಡ ಬಹಳ ಹಿಂದೆಯೇ ಮಿಂಚೊಂದನ್ನು ಹುಟ್ಟು ಹಾಕಿತ್ತು. ಇತ್ತೀಚಿಗಷ್ಟೇ ಕಬ್ಜದ ರಾಣಿಯನ್ನ ಜನರೆದುರಿಗಿರಿಸುವ ಮೂಲಕ ಚಿತ್ರತಂಡ ‘ಶ್ರೀಯ ಶರಣ್’ ಅವರನ್ನು ತಮ್ಮ ಚಿತ್ರದ ನಾಯಕಿಯಾಗಿ ವಿಡಿಯೋ ಒಂದರ ಮೂಲಕ ಘೋಷಿಸಿತ್ತು. ಈಗ ಈ ತಾರಾಗಣ ಇನ್ನಷ್ಟು ದೊಡ್ಡದಾಗುತ್ತಿದೆ. ತೆಲುಗಿನ ಪ್ರಖ್ಯಾತ ನಟರಾದ ಪೊಸನ್ನಿ ಕೃಷ್ಣ ಮುರಳಿ ಹಾಗು ಮುರಳಿ ಶರ್ಮ ಅವರು ‘ಕಬ್ಜ’ ಚಿತ್ರಕ್ಕೆ ಬಣ್ಣ ಹಚ್ಚಲಿರುವಂತ ಇನ್ನಿಬ್ಬರು ಪಾನ್-ಇಂಡಿಯನ್ ಘಟ್ಟದ ನಟರು. ತಮ್ಮ ನಟನೆಯಿಂದ ಭಾರತದೆಲ್ಲೆಡೆಯ ಸಿನಿರಸಿಕರಿಂದ ಸೈ ಎನಿಸಿಕೊಂಡ ನಟರಿವರು. ಸದ್ಯ ಚಿತ್ರತಂಡಕ್ಕೆ ಇವರ ಸೇರ್ಪಡೆ ಆಗಿರುವುದು ಚಿತ್ರದ ಮೇಲಿನ ಆಕಾಂಕ್ಷೆಗಳನ್ನ ಇನ್ನಷ್ಟು ಹೆಚ್ಚಿಸುತ್ತಿದೆ. ಉಪ್ಪಿ-ಕಿಚ್ಚರಂತಹ ಕನ್ನಡದ ಮೇರುನಟರು ಅಭಿನಯಿಸುತ್ತಿರೋ ‘ಕಬ್ಜ’ ಸಿನಿಮಾದ ತಾರಗಣದಲ್ಲಿ ಭಾರತದ ವಿವಿಧ ಚಿತ್ರರಂಗಗಳ ಹಲವು ಹೆಸರಾಂತ ಕಲಾವಿದರಿರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

‘ಕಬ್ಜ’ ಚಿತ್ರದ ಕಲಾವಿದರ ದಂಡಿಗೆ ಎರಡು ದೊಡ್ಡ ಹೆಸರುಗಳ ಸೇರ್ಪಡೆ. Read More »

ಭಾವುಕ ಪತ್ರ ಹಂಚಿಕೊಂಡ ಸಹನಾ ಅಪ್ಪಣ್ಣ ಹೇಳಿದ್ದೇನು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಘುಚರಣ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯು ಸೀರಿಯಲ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅತಿ ಹೆಚ್ಚು ಟಿ ಆರ್ ಪಿ ಯನ್ನು ಪಡೆಯುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಎಲ್ಲಾ ಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆ ಇರುವುದು ತುಂಬಾ ವಿಶೇಷ. ಇಂತಿಪ್ಪ ಕನ್ಯಾಕುಮಾರಿಯಲ್ಲಿ ನಾಯಕ ಚರಣ್ ಅಕ್ಕ ಭಾಗ್ಯಲಕ್ಷ್ಮಿಯಾಗಿ ಅಭಿನಯಿಸುತ್ತಿರುವ ಸಹನಾ ಅಪ್ಪಣ್ಣ ಇದೀಗ ತಮ್ಮ ಪಾತ್ರಕ್ಕೆ ವಿದಾಯ ಹೇಳಲಿದ್ದಾರೆ. ಹೌದು, ಕಾರಣಾಂತರಗಳಿಂದ ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ಹೊರಬಂದಿರುವ ಸಹನಾ ಅಪ್ಪಣ್ಣ ಭಾವುಕ ಪತ್ರವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಭಾಗ್ಯ ಲಕ್ಷ್ಮಿ ಪಾತ್ರಕ್ಕೆ ತೆರೆ ಎಳೆಯುವ ಸಮಯ. ನೀವೆಲ್ಲರೂ ಭಾಗ್ಯ ಲಕ್ಷ್ಮಿ ಪಾತ್ರಕ್ಕೆ, ನನಗೆ ನೀಡಿದ ಪ್ರೀತಿ ಪ್ರೋತ್ಸಾಹಕ್ಕೆ ನಾನೆಷ್ಟು ಧನ್ಯವಾದಗಳನ್ನು ಹೇಳಿದರೂ ಅದು ಕಡಿಮೆಯೇ. ಆದರೆ ಇದೀಗ ನಾನು ಆ ಪಾತ್ರಕ್ಕೆ ವಿದಾಯ ಹೇಳಲಿದ್ದೇನೆ. ಇನ್ನು ಮುಂದೆ ನಾನು ಭಾಗ್ಯಲಕ್ಷ್ಮಿಯಾಗಿ ನಟಿಸುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ ಸಹನಾ ಅಪ್ಪಣ್ಣ. “ಕನ್ಯಾಕುಮಾರಿ ಧಾರಾವಾಹಿಯನ್ನು ನಾನು ಯಾಕೆ ಅರ್ಧದಲ್ಲಿಯೇ ಬಿಡುತ್ತಿದ್ದೇನೆ ಎನ್ನುವುದಕ್ಕೆ ಕಾರಣವನ್ನು ನನ್ನ ಧಾರಾವಾಹಿ ತಂಡಕ್ಕೆ ಹಾಗೂ ನಿರ್ಮಾಣ ಸಂಸ್ಥೆಗೆ ತಿಳಿಸಿದ್ದೇನೆ. ಭಾಗ್ಯಲಕ್ಷ್ಮಿ ಪಾತ್ರವನ್ನು ತುಂಬ ಸೊಗಸಾಗಿ ನಿಮ್ಮ ಮುಂದೆ ತಂದಿರುವರಘು ಚರಣ್ ಅವರಿಗೆ ಧನ್ಯವಾದಗಳು” ಎಂದಿದ್ದಾರೆ ಸಹನಾ ಅಪ್ಪಣ್ಣ. ಇದರ ಜೊತೆಗೆ “ನಾನು ಜೋಗಿ ಹಟ್ಟಿ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತೀನಿ. ಅನೇಕ ವಿಚಾರಗಳನ್ನು ಕಲಿಸಿರುವಂತಹ ಪ್ರದೀಪ್‌ ತಿಪಟೂರು ಅವರಿಗೂ ಧನ್ಯವಾದಗಳು. ಇನ್ನು ನೀವು ನಿಮ್ಮ ಸಂಸ್ಥೆಯಿಂದ ಅನೇಕರಿಗೆ ವಿದ್ಯೆ ಹಂಚುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇನ್ನು ನಾನು ಇಡೀ ಧಾರಾವಾಹಿ ತಂಡದವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿರುವ ಸಹನಾ ಅಪ್ಪಣ್ಣ ಮತ್ತೆ ಕಿರುತೆರೆಯಲ್ಲಿ ಬಣ್ಣ ಹಚ್ಚುತ್ತಾರಾ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಭಾವುಕ ಪತ್ರ ಹಂಚಿಕೊಂಡ ಸಹನಾ ಅಪ್ಪಣ್ಣ ಹೇಳಿದ್ದೇನು ಗೊತ್ತಾ? Read More »

ಹೀಗಿದೆ ನೋಡಿ ಕಿರುತೆರೆ ರಾಧೆಯ ನಟನಾ ಜರ್ನಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೆಶ್ಯಾಮ ಧಾರಾವಾಹಿಯಲ್ಲಿ ನಾಯಕಿ ರಾಧೆ ಆಗಿ ನಟಿಸುತ್ತಿರುವ ತನ್ವಿ ರಾವ್ ಅವರ ನಟನಾ ಯಾನ ಶುರುವಾಗಿದ್ದು ಹಿರಿತೆರೆಯಿಂದ. ಬಾಲಿವುಡ್ ಮೂಲಕ ಬಣ್ಣದ ಲೋಕದ ನಟು ಬೆಳೆಸಿಕೊಂಡ ತನ್ವಿ ರಾವ್ ಇದೀಗ ರಾಧೆಯಾಗಿ ಸೀರಿಯಲ್ ಪ್ರಿಯರ ಮನದಲ್ಲಿ ಸ್ಥಾನ ಪಡೆದಿದ್ದಾರೆ. ಮಾಧುರಿ ದೀಕ್ಷಿತ್ ನಟಿಸಿರುವ ಗುಲಾಬಿ ಗ್ಯಾಂಗ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ನಟನಾ ಬದುಕಿಗೆ ಪಾದಾರ್ಪಣೆ ಮಾಡಿದ ತನ್ವಿ ರಾವ್ ಮೊದಲ ಬಾರಿಗೆ ಬಣ್ಣ ಹಚ್ಚಿದಾಗ ವಯಸ್ಸು ಕೇವಲ ಹದಿನೈದು ವರ್ಷ. “ಗನ್ಸ್ ಆಫ್ ಬನಾರಸ್ ” ಎಂಬ ಬಾಲಿವುಡ್ ಸಿನಿಮಾದಲ್ಲಿ ಬಣ್ಣ ಹಚ್ಚಿ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ್ದ ತನ್ವಿ ರಾವ್ ರಂಗ್ ಬಿರಂಗಿ ಸಿನಿಮಾದ ಮುಖಾಂತರ ಚಂದನವನಕ್ಕೆ ಕಾಲಿಟ್ಟ ಚೆಲುವೆ. ಉದಯ ವಾಹಿನಿಯಲ್ಲಿ ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿ ಆಕೃತಿಯಲ್ಲಿ ನಾಯಕಿಯಾಗಿ ನಟಿಸಿದ್ದ ತನ್ವಿ ಇದೀಗ ರಾಧೆಯಾಗಿ ಕಿರುತೆರೆಯಲ್ಲಿ ಮೂಲಕ ಮನೆ ಮಾತಾಗಿರುವ ಈಕೆನೃತ್ಯಗಾರ್ತಿಯೂ ಹೌದು. ಚಿಕ್ಕ ವಯಸ್ಸಿನಿಂದಲೂ ನೃತ್ಯದತ್ತ ಒಲವು ಹೊಂದಿದ್ದ ತನ್ವಿ ಮೊದಲು ನೃತ್ಯ ಮಾಡಿದ್ದು ನಾಲ್ಕನೇ ವಯಸ್ಸಿನಲ್ಲಿ. ಭರತನಾಟ್ಯ ಕಲೆಯನ್ನು ಕಲಿತಿರುವ ತನ್ವಿ ರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಾಕೆ. ಒಂದಿಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಈಕೆ ಭರತನಾಟ್ಯದ ಜೊತೆಗೆ ಕಥಕ್, ಸೆಮಿ ಕ್ಲಾಸಿಕಲ್ ನೃತ್ಯದಲ್ಲಿಯೂ ಪ್ರವೀಣೆ. ಯುರೋಪ್ ಮತ್ತು ಏಷ್ಯಾದ ಆರು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹೆಜ್ಜೆ ಹಾಕಿರುವ ತನ್ವಿ ಕಿರುತೆರೆಗೆ ಕಾಲಿಡಲು ಕೂಡಾ ನೃತ್ಯವೇ ಕಾರಣ. ನೃತ್ಯಗಾರ್ತಿಯಾಗಿದ್ದ ಕಾರಣದಿಂದಲೇ ಆಕೃತಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದ ತನ್ವಿ ನಟನೆಯ ಮೂಲಕ ವೀಕ್ಷಕರಿಗೆ ಮಜರಂಜನೆ ನೀಡುವಲ್ಲಿ ಸಫಲರಾದರು. ಇದೀಗ ರಾಧೆಯಾಗಿ ನಟಿಸುತ್ತಿರುವ ತನ್ವಿ ಮುಂದಿನ ದಿನಗಳಲ್ಲಿ ಮತ್ತೆ ಚಂದನವನದಲ್ಲಿ ಮೋಡಿ ಮಾಡುತ್ತಾರಾ ಎಂದು ಕಾದುನೋಡಬೇಕಾಗಿದೆ‌.

ಹೀಗಿದೆ ನೋಡಿ ಕಿರುತೆರೆ ರಾಧೆಯ ನಟನಾ ಜರ್ನಿ Read More »

ಪುಟ್ಟ ಅತಿಥಿಯನ್ನು ಬರಮಾಡಿಕೊಳ್ಳಲಿದ್ದಾರೆ ಸ್ಟಾರ್ ದಂಪತಿ

ತಮ್ಮ ಹಾಸ್ಯದ ಮೂಲಕ ಜನರ ಮೊಗದಲ್ಲಿ ನಗು ತರಿಸುವ ಭಾರತಿ ಸಿಂಗ್ ಜೀವನದಲ್ಲಿ ಈಗ ಸಂತೋಷ ಮೂಡಿಸಲು ಪುಟ್ಟ ಅತಿಥಿ ಬರುತ್ತಿದ್ದಾರೆ. ಭಾರತಿ ಹಾಗೂ ಹರ್ಷ ಲಿಂಬಾಚಿಯಾ ಎಪ್ರಿಲ್ ನಲ್ಲಿ ಈ ಪುಟ್ಟ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಎಂಟನೆಯ ತಿಂಗಳ ಗರ್ಭಿಣಿಯಾಗಿದ್ದರೂ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ ಭಾರತಿ ಸಿಂಗ್ ತಾಯಿಯಾಗುವ ಸಂತಸದಲ್ಲಿದ್ದಾರೆ. ಈ ವಿಶೇಷ ಕ್ಷಣವನ್ನು ಭಾರತಿ ಸಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಶೂಟ್ ನಲ್ಲಿ ಪೆಸ್ಟಲ್ ಸ್ಕೈ ರೋಸಿ ಬಣ್ಣದ ರಫಲ್ಡ್ ಡ್ರೆಸ್ ಧರಿಸಿದ್ದು ಈ ಡ್ರೆಸ್ ನ ತೋಳುಗಳಲ್ಲಿ ರಫೆಲ್ ನನ್ನು ಹೊಂದಿದೆ. ಅದರ ಮೇಲೆ ರಫೆಲ್ ಜಾಕೆಟ್ ಹಾಕಿದ್ದಾರೆ. ಈ ಡ್ರೆಸ್ ಗೆ ಮ್ಯಾಚ್ ಆಗುವಂತೆ ಮೇಕಪ್ ಮಾಡಿಕೊಂಡಿದ್ದಾರೆ. ಕೂದಲನ್ನು ಕರ್ಲಿ ಮಾಡುವ ಮೂಲಕ ಕಟ್ಟದೇ ಹಾಗೆ ಬಿಟ್ಟಿದ್ದಾರೆ. ಗುಲಾಬಿ ಹೂವುಗಳಿಂದ ಮಾಡಿದ ಹಿನ್ನೆಲೆಯಲ್ಲಿ ಬೇಬಿ ಬಂಪ್ ಜೊತೆ ಪೋಸ್ ನೀಡಿದ್ದಾರೆ. “ದಿ ಲೂನಿ ಲೆನ್ಸ್ ” ಈ ಫೋಟೋಶೂಟ್ ಮಾಡಿದೆ. ಪತಿ ಹರ್ಷ ಲಿಂಬಾಚಿಯಾ ಕೂಡಾ ಫೋಟೋಶೂಟ್ ಮಾಡಿಸಿಕೊಂಡಿದ್ದು ಭಾರತಿ ಸಿಂಗ್ ಅವರ ಬೇಬಿ ಬಂಪ್ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಪುಟ್ಟ ಅತಿಥಿಯನ್ನು ಬರಮಾಡಿಕೊಳ್ಳಲಿದ್ದಾರೆ ಸ್ಟಾರ್ ದಂಪತಿ Read More »

ಹೊಸ ಜರ್ನಿ ಶುರು ಮಾಡಲಿರುವ ಸ್ಯಾಂಡಲ್ ವುಡ್ ಕೃಷ್ಣ

ಸ್ಯಾಂಡಲ್ ವುಡ್ ನ ಕೃಷ್ಣ ಅಜಯ್ ರಾವ್ ಅಭಿನಯದ “ಲವ್ ಯೂ ರಚ್ಚು” ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ತಮ್ಮ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಹೇಳಿರಲಿಲ್ಲ. ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿರುವ ಅಜಯ್ ರಾವ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಪಯಣ ಆರಂಭಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಟನೆ ಜೊತೆಗೆ ನಿರ್ದೇಶನದಲ್ಲಿ ಆಸಕ್ತಿ ಹೊಂದಿರುವ ಅಜಯ್ ಈ ವರ್ಷದ ಕೊನೆಯಲ್ಲಿ ತಮ್ಮ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿ ಇರುವ ಅಜಯ್ ಈ ಸಿನಿಮಾಗಳು ಮುಗಿದ ನಂತರ ತಮ್ಮ ನಿರ್ದೇಶನದ ಹೊಸ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಈ ಕುರಿತು ಮಾತನಾಡಿರುವ ಅಜಯ್ ” ಮಂಜು ಸ್ವರಾಜ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರ ರೆಟ್ರೋ ಲವ್ ಸ್ಟೋರಿ ಕಾದಂಬರಿ ಆಧಾರಿತವಾಗಿದೆ. ಇದರೊಂದಿಗೆ ಇನ್ನೊಂದು ಸ್ಕ್ರಿಪ್ಟ್ ಹುಡುಕುತ್ತಿದ್ದೇನೆ. ಮಂಜು ಅವರ ಸಿನಿಮಾ ಮುಗಿದ ಮೇಲೆ ಈ ಸಿನಿಮಾದ ಕೆಲಸ ಆರಂಭಿಸುವ ಯೋಜನೆ ಇದೆ. ನಂತರ ನಾನು ನಿರ್ದೇಶಕನಾಗಿ ಹೊಸ ಜರ್ನಿ ಆರಂಭಿಸುತ್ತೇನೆ ಎಂದಿದ್ದಾರೆ.

ಹೊಸ ಜರ್ನಿ ಶುರು ಮಾಡಲಿರುವ ಸ್ಯಾಂಡಲ್ ವುಡ್ ಕೃಷ್ಣ Read More »

ನನಗೆ ಗೊತ್ತಿಲ್ಲದೆಯೇ ಪಾತ್ರದಲ್ಲಿ ಬದಲಾವಣೆ ಆಗಿದೆ – ಸ್ವಪ್ನ ದೀಕ್ಷಿತ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕಮಲಿಯಲ್ಲಿ ಇದ್ದಕ್ಕಿದ್ದಂತೆ ಪಾತ್ರವೊಂದರ ಬದಲಾವಣೆಯಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ಪಾತ್ರ ಬದಲಾಗುತ್ತಿರುವ ವಿಚಾರ ಸ್ವತಃ ಪಾತ್ರಧಾರಿಗೆ ತಿಳಿದಿಲ್ಲ. ಮಾತ್ರವಲ್ಲ ಈಗಾಗಲೇ ಆ ಪಾತ್ರಕ್ಕೆ ಬೇರೊಬ್ಬರು ಕೂಡಾ ಆಯ್ಕೆಯಾಗಿದ್ದು, ಅವರು ಶೂಟಿಂಗ್ ಗೆ ಹಾಜರಾಗಿದ್ದು ಕೂಡಾ ಅವರಿಗೆ ತಿಳಿಯದಿರುವುದು ನಿಜಕ್ಕೂ ಬೇಸರದ ಸಂಗತಿಯೇ ಸರಿ. ಅಂದ ಹಾಗೇ ನಾವೀಗ ಹೇಳುತ್ತಿರುವುದು ತಾರಾ ಪಾತ್ರಧಾರಿ ಬಗ್ಗೆ. ಕಮಲಿ ಧಾರಾವಾಹಿಯಲ್ಲಿ ನಾಯಕ ರಿಷಿ ಅಮ್ಮ ತಾರಾ ಆಗಿ ನಟಿಸುತ್ತಿರುವ ಸ್ವಪ್ನ ದೀಕ್ಷಿತ್ ಇನ್ನು ಮುಂದೆ ಆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಸ್ವಪ್ನ ದೀಕ್ಷಿತ್ ಈ ವಿಚಾರವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. “ಕಮಲಿ ಧಾರಾವಾಹಿಯಲ್ಲಿ ಇನ್ನು ಮುಂದೆ ನಾನು ತಾರಾ ಆಗಿ ನಟಿಸುತ್ತಿಲ್ಲ. ಅದಕ್ಕೆ ಇರುವ ಕಾರಣ ಇಷ್ಟೇ. ನನಗೆ ಗೊತ್ತಿಲ್ಲದಂತೆಯೇ ಧಾರಾವಾಹಿಯಲ್ಲಿ ನನ್ನ ಪಾತ್ರದ ಬದಲಾವಣೆ ಆಗಿದೆ. ಕೊನೆಯವರೆಗೂ ಅದು ನನ್ನ ಗಮನಕ್ಕೆ ಬರಲಿಲ್ಲ” ಎಂದು ಹೇಳಿದ್ದಾರೆ ಸ್ವಪ್ನ ದೀಕ್ಷಿತ್. ಇದರ ಜೊತೆಗೆ ” ಕಮಲಿಯಲ್ಲಿ ತಾರಾ ಪಾತ್ರದ ಬದಲಾವಣೆ ಆಗಿದೆ ಎಂದು ನಾನು ಬೇರೆಯವರಿಂದ ತಿಳಿದುಕೊಂಡೆ. ಅಷ್ಟು ಮಾತ್ರವಲ್ಲದೇ ಈಗಾಗಲೇ ಬೇರೊಬ್ಬರು ತಾರಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಎಂಬುದನ್ನು ಕೂಡಾ ನಾನು ಬೇರೆಯವರಿಂದ ತಿಳಿದುಕೊಂಡೆ. ನನಗೆ ಈ ವಿಷಯ ತಿಳಿದಾಗಿನಿಂದ ನಿಜವಾಗಿಯೂ ಬೇಸರವಾಗಿದೆ. ಆದರೂ ಸ್ವತಃ ನಾನೇ ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ”ಎಂದು ಪಾತ್ರ ಬದಲಾವಣೆಯಾದುದರ ಕುರಿತು ವಿವರಣೆ ನೀಡುತ್ತಾರೆ ಸ್ವಪ್ನ ದೀಕ್ಷಿತ್. “ತಾರಾ ಪಾತ್ರ ಇಂದು ಮನೆ ಮಾತಾಗಿದೆ ಎಂದರೆ ಅದಕ್ಕೆ ನೀವು ನೀಡಿದ ಪ್ರೋತ್ಸಾಹವೇ ಕಾರಣ. ಅಷ್ಟರ ಮಟ್ಟಿಗದ ನೀವು ಆ ಪಾತ್ರವನ್ನು, ನನ್ನನ್ನು ಪ್ರೀತಿಸಿದ್ದೀರಿ. ನನ್ನ ಪಾತ್ರವನ್ನು, ನಟನೆಯನ್ನು ಮೆಚ್ಚಿದ ಎಲ್ಲರಿಗೂ ನಾನು ನನ್ನ ಮನಸಾರೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ವಿಡಿಯೋದ ಕೊನೆಯಲ್ಲಿ ಹೇಳಿಕೊಂಡಿದ್ದಾರೆ ಸ್ವಪ್ನ ದೀಕ್ಷಿತ್.

ನನಗೆ ಗೊತ್ತಿಲ್ಲದೆಯೇ ಪಾತ್ರದಲ್ಲಿ ಬದಲಾವಣೆ ಆಗಿದೆ – ಸ್ವಪ್ನ ದೀಕ್ಷಿತ್ Read More »

ಎಲ್ಲೆಡೆ ಧೂಳೆಬ್ಬಿಸುತ್ತಿದೆ ಕೆಜಿಎಫ್ ನ ‘ತೂಫಾನ್’.

‘ಕೆಜಿಎಫ್’ ಕನ್ನಡಿಗರ ಹೆಮ್ಮೆ, ಕನ್ನಡ ಚಿತ್ರರಂಗಕ್ಕೊಂದು ಗರಿಮೆ. ನರಾಚಿಯ ಗೇಟ್ ಗಳು ಅದ್ಯಾವಾಗ ತೆರೆಯುತ್ತವೆಯೋ, ರಾಕಿ ಭಾಯ್ ಆಳ್ವಿಕೆಯನ್ನ ಯಾವಾಗ ನೋಡುತ್ತೇವೋ ಅಂತ ಕನ್ನಡಿಗರಷ್ಟೇ ಅಲ್ಲದೇ ಪ್ರಪಂಚದಾದ್ಯಂತ ಎಲ್ಲ ಭಾಷಿಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇನ್ನೇನು ಎರಡು ವಾರಗಳಲ್ಲಿ ಸಿನಿಮಾ ಬೆಳ್ಳಿತೆರೆಗಳ ಮೇಲೆ ರಾರಾಜಿಸಲಿದೆ. ಮಾರ್ಚ್ 27ಕ್ಕೆ ಪ್ರಶಾಂತ್ ನೀಲ್ ನಿರ್ದೇಶನದ ಈ ಅತಿನಿರೀಕ್ಷಿತ ಚಿತ್ರದ ಟ್ರೈಲರ್ ಅನ್ನು ಜನರಿಗರ್ಪಿಸಲಿರೋ ಚಿತ್ರತಂಡ ಇಂದು ಅಂದರೆ ಮಾರ್ಚ್ 21ರ ಬೆಳಿಗ್ಗೆ 11:07ಕ್ಕೆ ಸರಿಯಾಗಿ ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಮೊದಲ ಅಧ್ಯಾಯದಂತೆ ದ್ವಿತೀಯ ಅಧ್ಯಾಯ ಕೂಡ ರವಿ ಬಸ್ರುರ್ ಸಂಗೀತದಲ್ಲೇ ಜನರನ್ನ ರೋಮಾಂಚನಗೊಳಿಸಲಿರುವುದು ನಮ್ಮೆಲ್ಲರಿಗೂ ಗೊತ್ತಿರೋ ವಿಷಯ. ಬಿಡುಗಡೆಗೊಂಡಿರೋ ‘ತೂಫಾನ್’ಗೂ ಕೂಡ ಎಲ್ಲ ಭಾಷೆಯಲ್ಲೂ ಇವರದ್ದೇ ಸಂಗೀತ. ಕನ್ನಡದಲ್ಲಿ ಹಾಡಿನ ಸಾಹಿತ್ಯವನ್ನು ಕೂಡ ಬಸ್ರುರ್ ಅವರೆ ಬರೆದಿದ್ದಾರೆ. ರವಿ ಬಸ್ರುರ್ ಅವರ ಜೊತೆಗೆ ಸಚಿನ್ ಬಸ್ರುರ್, ಮೋಹನ್ ಕೃಷ್ಣ, ಸಂತೋಷ್ ವೆಂಕಿ, ಪುನೀತ್ ರುದ್ರನಾಗ್ ಹಾಗು ಮನೇಶ್ ದಿನಕರ್ ಪುರುಷನ ಸಾಲುಗಳಿಗೆ ದನಿಯಗಿದ್ದರೆ, ವರ್ಷ ಆಚಾರ್ಯ ಮಹಿಳಾ ಗಾಯಕಿ. ಇನ್ನು ಗಿರಿಧರ್ ಕಾಮತ್, ರಕ್ಷಾ ಕಾಮತ್ ಮುಂತಾದ ಬಾಲಗಾಯಕರು ಸಹ ಈ ಹಾಡಿಗೆ ತಮ್ಮ ಸ್ವರ ನೀಡಿದ್ದಾರೆ. ಲಹರಿ ಮ್ಯೂಸಿಕ್ ಹಾಗು ಟಿ-ಸೀರೀಸ್ ಯೂಟ್ಯೂಬ್ ಚಾನೆಲ್ ನಲ್ಲೆ ಕನ್ನಡ, ಮಲಯಾಳಂ, ತಮಿಳು ಹಾಗು ತೆಲುಗಿನಲ್ಲಿ ಬಿಡುಗಡೆಯಗಿರೋ ಹಾಡಿನ ಹಿಂದಿ ರಾಗ ‘ಎಂ ಆರ್ ಟಿ ಮ್ಯೂಸಿಕ್’ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೇವಲ 34 ನಿಮಿಷದಲ್ಲೇ ಕನ್ನಡದ ವಿಡಿಯೋ ಒಂದು ಲಕ್ಷ ಲೈಕ್ ಗಳನ್ನು ಪಡೆದಿತ್ತು. ಮಿಲಿಯನ್ ಗಟ್ಟಲೆ ಆಗಿರುವ ನೋಡುಗರ ಸಂಖ್ಯೆ ಅತ್ಯಂತ ರಭಸದಲ್ಲಿ ಏರಿಕೆಯಾಗುತ್ತಲೇ ಇದೆ. ಬಹುಪಾಲು ಕೇಳುಗರ ಮೈರೋಮ ನಿಲ್ಲುವಷ್ಟು ರೋಮಾಂಚನಗೊಳಿಸಿರುವ ಹಾಡಿಗೆ ಪ್ರಶಂಸೆ ಹರಿದುಬರುತ್ತಿದೆಯಾದರು, ಅಲ್ಲಲ್ಲಿ ಕೆಲವು ಅಸಮಾಧಾನಗಳು ಕೂಡ ಏಳುತ್ತಿವೆ. ಕನ್ನಡದ ಹಾಡಿನಲ್ಲೂ ಹಿಂದಿಯ ಸಾಲುಗಳು ಬೇಕೇ? ಎಂದು ಕೇಳುತ್ತಿರುವ ಪ್ರಶ್ನೆಗಳು ಕೂಡ ಅಲ್ಲಲ್ಲಿ ಏಳುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಒಂದಿಷ್ಟು ಪರ-ವಿರೋಧದ ಮಾತಿನ ಚಕಮಕಿ ಕೂಡ ನಡೆಯುತ್ತಿದೆ. ಏನೇ ಆದರೂ ಕೆಜಿಎಫ್ ಕನ್ನಡದ ಹೆಮ್ಮೆಯೇ ಸರಿ.

ಎಲ್ಲೆಡೆ ಧೂಳೆಬ್ಬಿಸುತ್ತಿದೆ ಕೆಜಿಎಫ್ ನ ‘ತೂಫಾನ್’. Read More »

Scroll to Top