Karnataka Bhagya

ಕ್ರೀಡೆ

ವೈವಾಹಿಕ ಜೀವನಕ್ಕೆ ಕಾಲಿಟ್ಟ ತೇಜಸ್ವಿನಿ ಪ್ರಕಾಶ್

ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿ ಹಾಗೂ ನಟಿ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫಣಿ ವರ್ಮ ನದೀಮ್‌ಪಳ್ಳಿ ಜೊತೆ ಸಪ್ತಪದಿ ತುಳಿದಿರುವ ತೇಜಸ್ವಿನಿ ಪ್ರಕಾಶ್ ಅವರ ಮದುವೆಗೆ ಸ್ನೇಹಿತರು ಹಾಗೂ ಬಂಧುಗಳು ಸಾಕ್ಷಿಯಾಗಿದ್ದಾರೆ. ಅಂದ ಹಾಗೇ ತೇಜಸ್ವಿನಿ ಪ್ರಕಾಶ್ ತಮ್ಮ ಮದುವೆಯ ಬಗ್ಗೆ ಎಂದೂ ತುಟಿ ಬಿಚ್ಚಿರಲಿಲ್ಲ. ತೇಜಸ್ವಿನಿ ಅವರ ಸ್ನೇಹಿತರು ಮದುವೆ ಮನೆಯ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮದುವೆಯಲ್ಲಿ ಅಂದವಾಗಿ ಕಾಣಿಸುತ್ತಿರುವ ತೇಜಸ್ವಿನಿ ಸಾಂಪ್ರದಾಯಿಕ ಸಿಲ್ಕ್ ಸೀರೆ ಉಟ್ಟಿದ್ದಾರೆ. ಅವರ ಪತಿ ಕೂಡಾ ಸಾಂಪ್ರದಾಯಿಕ ಡ್ರೆಸ್ ನಲ್ಲಿ ಹ್ಯಾಂಡ್ ಸಮ್ ಆಗಿ ಕಾಣಿಸಿದ್ದಾರೆ. ಇನ್ನು ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೇಜಸ್ವಿನಿ ಅವರಿಗೆ ನೆಟ್ಟಿಗರು ಶುಭ ಕೋರುತ್ತಿದ್ದಾರೆ. ನನ್ನರಸಿ ರಾಧೆ ಧಾರಾವಾಹಿಯಲ್ಲಿ ಖಳನಾಯಕಿ ಲಾವಣ್ಯ ಆಗಿ ಅಭಿನಯಿಸಿದ್ದ ತೇಜಸ್ವಿ‌ನಿ ಪ್ರಕಾಶ್ ಮಸಣದ ಮಕ್ಕಳು ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟರು.ಮಸಣದ ಮಕ್ಕಳು ಚಿತ್ರದ ನಟನೆಗೆ ರಾಜ್ಯ ಪ್ರಶಸ್ತಿ ಪಡೆದಿರುವ ತೇಜಸ್ವಿನಿ ವಿಷ್ಣುವರ್ಧನ್ ನಟನೆಯ ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದಲ್ಲಿ ವಿಷ್ಣವರ್ಧನ್ ಮಗಳಾಗಿ ನಟಿಸಿದರು. ಗಜ ಸಿನಿಮಾದಲ್ಲಿ ದರ್ಶನ್ ತಂಗಿಯಾಗಿ, ಬಂಧುಬಳಗ ಚಿತ್ರದಲ್ಲಿ ಶಿವರಾಜ್ ಕುಮಾರ್ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಗೋಲ್ಡನ್ ಸ್ಟಾರ್ಗಣೇಶ್ ಅಭಿನಯದ ಅರಮನೆ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದ ಈಕೆ ಸವಿಸವಿ ನೆನಪು ಚಿತ್ರದಲ್ಲಿ ಪ್ರೇಮ್ ಜೊತೆ ತೆರೆ ಹಂಚಿಕೊಂಡಿದ್ದರು. ತಮಿಳಿನ ಮನಲ್ ನಗರ , ಮಲೆಯಾಳಂನ ಸ್ಯಾನ್ ಸಿಟಿ ,ತೆಲುಗಿನ ಸಿನಿಮಾಹಲ್, ಪ್ರತಿಕ್ಷಣಂ ,ಕಣ್ಣಲ್ಲೋ ನೀ ರೂಪಮೇ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ತೇಜಸ್ವಿನಿಕಿರುತೆರೆಯಲ್ಲಿಯೂ ಮಿಂಚಿದ ಪ್ರತಿಭೆ.ವಿನುಬಳಂಜ ನಿರ್ದೇಶನದ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಿಹಾರಿಕಾ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದರು. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ತೇಜಸ್ವಿನಿ ಆ ಶೋ ಮೂಲಕ ವೀಕ್ಷಕರ ಮನ ಸೆಳೆದರು. ವೀಕ್ಷಕರಿಗೆ ಮಗದಷ್ಟು ಹತ್ತಿರವಾದರು. ಮುಂದೆ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಲಾವಣ್ಯ ಆಗಿ ನಟಿಸಿದ್ದ ಈಕೆ ಕಳೆದ ವರ್ಷದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ತೇಜಸ್ವಿನಿ ಪ್ರಕಾಶ್ Read More »

ಕಿರುತೆರೆ,ಹಿರಿತೆರೆ ನಡುವೆ ವ್ಯತ್ಯಾಸ ಅನುಭವಿಸಿಲ್ಲ – ಶ್ರುತಿ ಹರಿಹರನ್

ಹಿರಿತೆರೆ ನಟಿ ಶ್ರುತಿ ಹರಿಹರನ್ ಮತ್ತೆ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರ್ತಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದ ಶ್ರುತಿ ಹರಿಹರನ್ ಈಗ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ‌‌. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ “ಕಾಮಿಡಿ ಗ್ಯಾಂಗ್ ಶೋ” ವಿನ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶಿವರಾಜ್ ಕೆಆರ್ ಪೇಟೆ ನಿರೂಪಣೆ ಹೊಂದಿರುವ ಈ ಶೋನಲ್ಲಿ ಕುರಿ ಪ್ರತಾಪ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರೂ ಕೂಡಾ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. “ಮತ್ತೆ ಕಿರುತೆರೆಗೆ ಮರಳುತ್ತಿದ್ದೇನೆ. ತುಂಬಾ ಖುಷಿಯಾಗಿದ್ದೇನೆ. ಈ ಶೋನಲ್ಲಿ ಆರು ತಂಡಗಳು ಸ್ಪರ್ಧಿಸುತ್ತಿವೆ. ಕಾರ್ಯಕ್ರಮದ ಸಾರ ಹಾಸ್ಯವಾಗಿದ್ದರೂ ಅದು ಹಾಸ್ಯವನ್ನು ಮೀರಿಸುತ್ತದೆ. ಇದು ಸೂಕ್ತವಾದ ಹಾಗೂ ಸಂಬಂಧಿತ ವಿಷಯಗಳನ್ನು ತರುವ ಭರವಸೆ ನೀಡುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ” ಎನ್ನುತ್ತಾರೆ. ಈ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ಶ್ರುತಿ ಈಗ ವಿಭಿನ್ನ ಶೋ ಮಾಡುತ್ತಿದ್ದಾರೆ. “ನಾನು ಈ ಕಾರ್ಯಕ್ರಮದಲ್ಲಿ ಕೇವಲ ನಟಿಯಾಗಿ ಮಾತ್ರವಲ್ಲದೇ ಪರ್ಫಾಮರ್ ಆಗಿಯೂ ಗುರುತಿಸಿಕೊಳ್ಳಲಿದ್ದೇನೆ. ಈ ಶೋ ಭಾವನೆಗಳ ಮೂಲಕ ವ್ಯಕ್ತಪಡಿಸಿಕೊಳ್ಳುವುದಾಗಿದೆ. ಇದು ನನಗೆ ಕನೆಕ್ಷನ್ ಇದೆ ಎಂದೆನಿಸುತ್ತದೆ” ಎಂದಿದ್ದಾರೆ. “ಕಿರುತೆರೆ ಹಾಗೂ ಹಿರಿತೆರೆಯ ನಡುವಿನ ವ್ಯತ್ಯಾಸವನ್ನು ನಾನು ಎಂದಿಗೂ ಅನುಭವಿಸಲಿಲ್ಲ. ಈ ವ್ಯತ್ಯಾಸ ಇಂದು ಇಲ್ಲ. ಕಿರುತೆರೆಯಲ್ಲಿ ನನ್ನ ಹಿಂದಿನ ಅನುಭವ ಹೇಳುವುದಾದರೆ ಜನರಿಂದ ಪ್ರೀತಿ ಹಾಗೂ ಪ್ರೋತ್ಸಾಹ ಸಿಕ್ಕಿದೆ. ಅವರು ನಿಮ್ಮನ್ನು ಅವರ ಮನೆಗಳಲ್ಲಿ ನೋಡುತ್ತಾರೆ ಎಂಬ ಅಂಶವು ಅವರನ್ನು ನಿಮ್ಮ ಹತ್ತಿರಕ್ಕೆ ಸೆಳೆಯುತ್ತದೆ. ಇದು ನಿಮ್ಮ ಚಿತ್ರ ಬಿಡುಗಡೆ ಆದಾಗ ಅವರ ಆಸಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಅವರು ನಿಮ್ಮನ್ನು ಬಹಳ ತಿಳಿದಿರುವ ವ್ಯಕ್ತಿಯಂತೆ ನೋಡುತ್ತಾರೆ” ಎಂದಿದ್ದಾರೆ. ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿರುವ ಶ್ರುತಿ ಹರಿಹರನ್ ಸದ್ಯ ಸ್ಟ್ರಾಬೆರಿ , ಹೆಡ್ ಬುಷ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಕಿರುತೆರೆ,ಹಿರಿತೆರೆ ನಡುವೆ ವ್ಯತ್ಯಾಸ ಅನುಭವಿಸಿಲ್ಲ – ಶ್ರುತಿ ಹರಿಹರನ್ Read More »

ಖಳನಾಯಕಿಯಾಗಿ ಸೈ ಎನಿಸಿಕೊಂಡಿರುವ ಸುಕೃತಾ ನಾಗ್ ಹೇಳಿದ್ದೇನು ಗೊತ್ತಾ?

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ಅಗ್ನಿಸಾಕ್ಷಿಯೂ ಒಂದು. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ತಂಗಿ ಅಂಜಲಿಯಾಗಿ ಅಭಿನಯಿಸಿದ್ದ ಸುಕೃತಾ ನಾಗ್ ಲಕ್ಷಣ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವುದು ವೀಕ್ಷಕರಿಗೆ ತಿಳಿದೇ ಇದೆ. ಲಕ್ಷಣ ಧಾರಾವಾಹಿಯಲ್ಲಿ ಖಳನಾಯಕಿ ಶ್ವೇತಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದ ಸುಕೃತಾ ಗೆ ವೀಕ್ಷಕರ ಮೆಚ್ಚುಗೆಗಿಂತ ಬೈಗಳು ಸಿಕ್ಕಿದ್ದೇ ಜಾಸ್ತಿ. ಮೊದಲ ಬಾರಿಗೆ ಖಳನಾಯಕಿ ಆಗಿ ನಟಿಸಿದರೂ ಸೀರಿಯಲ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಸುಕೃತಾ ನಾಗ್ “ಶ್ವೇತಾ ಆಗಿ ನಟಿಸುವುದಕ್ಕೆ ಮೊದಲ ಬಾರಿ ನಿಜವಾಗಿಯೂ ತುಂಬಾನೇ ಕಷ್ಟವಾಗಿತ್ತು. ಅಗ್ನಿಸಾಕ್ಷಿಯ ಅಂಜಲಿ ಪಾತ್ರದಿಂದಲೇ ವೀಕ್ಷಕರು ನನ್ನನ್ನು ಗುರುತಿಸುತ್ತಿದ್ದರು. ಮಾತ್ರವಲ್ಲ ಆ ಪಾತ್ರವನ್ನು ಕೂಡಾ ಅವರು ಇಷ್ಟಪಟ್ಟಿದ್ದರು. ಇದೀಗ ಸಡನ್ ಆಗಿ ನೆಗೆಟಿವ್ ರೋಲ್ ಎಂದಾಗ ವೀಕ್ಷಕರು ಸ್ವೀಕರಿಸುತ್ತಾರಾ ಎಂಬ ಭಯ ಇತ್ತು. ಮೊದಮೊದಲು ನನ್ನ ನಟನೆಗೆ ಬೈಗುಳ ಸಿಕ್ತಿತ್ತು. ಆದರೆ ಈಗ ಅವರೇ ನನ್ನ ನಟನೆಯನ್ನು ಹೊಗಳುತ್ತಿದ್ದಾರೆ” ಎಂದು ಹೇಳುತ್ತಾರೆ. “ಧಾರಾವಾಹಿ ನಟ, ನಿರ್ಮಾಪಕ ಜಗನ್ ಅವರು ಫೋನ್ ಮಾಡಿ ಪಾತ್ರದ ಬಗ್ಗೆ ಹೇಳಿದಾಗ ನನಗೆ ಆಶ್ಚರ್ಯವಾಯಿತು. ಯಾಕೆಂದರೆ ನನ್ನ ಮುಖ ಚಿಕ್ಕದಾಗಿದೆ. ಸೋ ನಾನು ವಿಲನ್ ಆಗಿ ನಟಿಸುವುದಕ್ಕೆ ಸಾಧ್ಯನಾ ಎಂಬ ಅನುಮಾನ ಮೂಡಿತ್ತು. ಜೊತೆಗೆ ನಾನು ಜಗನ್ ಅವರ ಬಳಿಯೇ ನಿಮಗೆ ನಾನು ಶ್ವೇತಾ ಪಾತ್ರದಲ್ಲಿ ನಟಿಸಬಲ್ಲೆಯಾ ಎಂಬ ನಂಬಿಕೆ ಇದೆಯಾ ಎಂದು ಕೇಳಿದ್ದೆ” ಎಂದು ಹೇಳುತ್ತಾರೆ ಸುಕೃತಾ ನಾಗ್. “ನಟನೆ ಎಂದ ಮೇಲೆ, ನಟಿ ಎಂದ ಮೇಲೆ ಯಾವುದೇ ಪಾತ್ರ ದೊರೆತರೂ ಸರಿ ಅದಕ್ಕೆ ಜೀವ ತುಂಬಲು ತಯಾರಾಗಿರಬೇಕು‌. ಒಂದೇ ಪಾತ್ರಕ್ಕೆ ಬ್ರಾಂಡ್ ಆಗುವುದಂತೂ ನನಗೆ ಇಷ್ಟವೇ ಇಲ್ಲ. ಜೊತೆಗೆ ಬೇರೆ ಬೇರೆ ಪಾತ್ರಗಳಾದರೆ ನಟಿಸುವ ಅವಕಾಶವೂ ಜಾಸ್ತಿ ಇರುತ್ತದೆ. ಮಾತ್ರವಲ್ಲ ಸದಾ ಹೊಸ ಹೊಸ ವಿಚಾರಗಳನ್ನು ಕಲಿಯಲು ಸಾಧ್ಯವಾಗುತ್ತದೆ” ಎನ್ನುವ ಸುಕೃತಾ ನಾಗ್ ಈಗಾಗಲೇ ಪಾರ್ಟ್ನರ್ ಸಿನಿಮಾದಲ್ಲಿ ನಟಿಸಿದ್ದು ಸದ್ಯದಲ್ಲಿಯೇ ಅದು ಬಿಡುಗಡೆಯಾಗಲಿದೆ.

ಖಳನಾಯಕಿಯಾಗಿ ಸೈ ಎನಿಸಿಕೊಂಡಿರುವ ಸುಕೃತಾ ನಾಗ್ ಹೇಳಿದ್ದೇನು ಗೊತ್ತಾ? Read More »

ಬಾಲ್ಯದ ಕಥೆ ಹೇಳಲು ಬರುತ್ತಿದೆ ‘ಸ್ಕೂಲ್ ಲವ್ ಸ್ಟೋರಿ’

ಕನ್ನಡ ಚಿತ್ರರಂಗ ಒಂದು ಅಗಾಧ ಆಕಾಶದಂತೆ. ಇಲ್ಲಿ ಬರೋ ಚಿತ್ರಗಳ ವಿವಿಧತೆಯನ್ನ ಎಣಿಸಿಡಲು ಸಾಧ್ಯವಿಲ್ಲ. ಸಂಪೂರ್ಣ ಕಮರ್ಷಿಯಲ್ ಆಕ್ಷನ್ ಸಿನಿಮಾದಿಂದ ಹಿಡಿದು ಮನಸ್ಸಿಗೆ ಮುದ ನೀಡೋ ಒಂದೊಳ್ಳೆ ಕಥೆಯವರೆಗೆ ಇಲ್ಲಿ ಎಲ್ಲವೂ ಲಭ್ಯ. ಈಗ ಇದೇ ರೀತಿಯ ಹೊಸ ಕಥೆಯೊಂದು ಬರಲು ಸಜ್ಜಾಗಿದೆ, ಅದುವೇ ‘ಸ್ಕೂಲ್ ಲವ್ ಸ್ಟೋರಿ’. ಹೆಸರಲ್ಲಿರುವಂತೆ ಇದು ಶಾಲೆಯಲ್ಲಿ ನಡೆಯೋ ಪ್ರೇಮಕತೆಯಷ್ಟೇ ಅಲ್ಲ. ಶಾಲೆಯೊಂದಿಗೆ ಮಕ್ಕಳ ಪ್ರೇಮಕತೆ. ಹಳ್ಳಿಮಕ್ಕಳ ವಿದ್ಯಾಭ್ಯಾಸ, ಅಲ್ಲಿನ ಭೇಧಭಾವಗಳು, ಬಡವ-ಶ್ರೀಮಂತ, ಬಡವಿದ್ಯಾರ್ಥಿಗಳ ಬಾಳಲ್ಲಿನ ಕಷ್ಟಗಳು ಕೊನೆಗೆ ಅವರಿಂದಾಗೊ ಸಾಧನೆಗಳು ಹೀಗೆ ಒಬ್ಬ ಸಾಮಾನ್ಯ ವಿದ್ಯಾರ್ಥಿಯ ಕಥೆಯನ್ನ ಹೊತ್ತುತರುತ್ತಿದೆ ಈ ‘ಸ್ಕೂಲ್ ಲವ್ ಸ್ಟೋರಿ’. ಚಿತ್ರದಲ್ಲಿ ಸೃಷ್ಟಿ, ಪ್ರತೀಕ್, ಸಿದ್ದಾರ್ಥ್ ಎಂಬ ಎಳೆಕಲಾವಿದರು ಬಾಳನಟರಾಗಿ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಹಿರಿಯ ನಟ ಎಂ ಎಸ್ ಉಮೇಶ್ ಅವರು ಕೂಡ ಜೊತೆಯಾಗಿದ್ದಾರೆ. ನಟರಾದ ರವಿಶಂಕರ್, ಅನುಷಾ ಶಿವಕುಮಾರ್, ಅನುಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿರಂಜೀವಿ ನಾಯ್ಕ್ ಪಿ ಎಂಬ ಯುವಕಲಾವಿದರು ಈ ಕಥೆಯ ಸೃಷ್ಟಿಕರ್ಥ. ಕಥೆ- ಚಿತ್ರಕತೆ-ಸಂಭಾಷಣೆ -ಸಂಕಲನದ ಜೊತೆಗೆ ನಿರ್ದೇಶನವನ್ನು ಕೂಡ ಇವರೇ ಮಾಡಿದ್ದಾರೆ. ಅಷ್ಟೇ ಅಲ್ಲದೇ, ‘ಚಿರಂಜೀವಿ ಸಿನಿ ಕ್ರಿಯೇಷನ್ಸ್’ ಎಂಬ ಹೆಸರಿನಲ್ಲಿ ಸಿನಿಮಾದ ನಿರ್ಮಾಣ ಕೂಡ ಇವರದ್ದೇ ಜವಾಬ್ದಾರಿ. ಶಿವಕುಮಾರ್ ಇವರಿಗೆ ನಿರ್ಮಾಣದಲ್ಲಿ ಸಹಾಯವಾಗಿದ್ದಾರೆ. ಎ. ಟಿ. ರವೀಶ್ ಅವರ ಸಂಗೀತ ಚಿತ್ರಕ್ಕಿದ್ದು ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಮೆಹಬೂಬ್ ಸಾಬ್ ಹಾಗು ಇಂದು ನಾಗರಾಜ್ ಅವರು ಹಾಡುಗಳಿಗೆ ಧ್ವನಿಯಗಿದ್ದಾರೆ. ಸಕಲೇಶಪುರ, ಮಡಿಕೇರಿ ಹಾಗು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮುಗಿಸಿರೋ ಚಿತ್ರತಂಡ ಏಪ್ರಿಲ್ ನಲ್ಲಿ ಬೆಳ್ಳಿತೆರೆ ಮೇಲೆ ಬರಲು ಕಾಯುತ್ತಿದ್ದಾರೆ.

ಬಾಲ್ಯದ ಕಥೆ ಹೇಳಲು ಬರುತ್ತಿದೆ ‘ಸ್ಕೂಲ್ ಲವ್ ಸ್ಟೋರಿ’ Read More »

‘ಕರ್ನಾಟಕದಲ್ಲಿ RRR ಸಿನಿಮಾವನ್ನು ಕನ್ನಡದಲ್ಲೇ ಹೆಚ್ಚು ಬಿಡುಗಡೆ ಮಾಡಿ’: ಶಿವಣ್ಣ

RRR, ಭಾರತದ ಅತ್ಯಂತ ನಿರೀಕ್ಷಿತ ಪಾನ್-ಇಂಡಿಯನ್ ಚಿತ್ರಗಳಲ್ಲಿ ಒಂದು. ‘ಬಾಹುಬಲಿ’ ರಾಜಮೌಳಿಯ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಸಿನಿಮಾ ಎಲ್ಲೆಲ್ಲೂ ಸಂಚಲನವನ್ನ ಈಗಾಗಲೇ ಮೂಡಿಸಿದೆ. ಬೆಳ್ಳಿತೆರೆಯನ್ನ ಬೆಳಗಿ ಅಭಿಮಾನಿಗಳ ಮನಸ್ಸಿನಲ್ಲಿ ಉಳಿಯಲು ಇನ್ನೇನು ಬೆರಳೆಣಿಕೆಯಷ್ಟು ದಿನಗಳಷ್ಟೇ ಬಾಕಿ ಇವೆ. ಇದೇ ಮಾರ್ಚ್ 25ರಂದು ಚಿತ್ರ ಪಂಚಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಸಿನಿಮಾದ ಪ್ರಚಾರ ಕಾರ್ಯಗಳು ಬರದಿಂದ ಸಾಗುತ್ತಿದ್ದು, ಮಾರ್ಚ್ 19ರಂದು ನಮ್ಮ ಕರುನಾಡಿನ ಚಿಕ್ಕಬಳ್ಳಾಪುರದಲ್ಲಿ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಕರ್ನಾಟದ ಗಣ್ಯರು ಸಿನಿಮಾಗೆ ಅತಿಥಿಯಾಗಿ ಆಗಮಿಸಿದ್ದರೆ, ಎರಡು ರಾಜ್ಯದ ಸಿನಿರಸಿಕರು ತಮ್ಮ ನೆಚ್ಚಿನ ನಟರು-ನಿರ್ದೇಶಕರನ್ನ ಕಣ್ತುಂಬಿಕೊಳ್ಳಲು ಸಾಗರದಂತೆ ಹರಿದು ಬಂದಿದ್ದಾರೆ. ಆಂಧ್ರ ಮತ್ತು ಕರ್ನಾಟಕದ ಗಡಿಯನ್ನು ಹಂಚಿಕೊಳ್ಳುವ ಚಿಕ್ಕಬಳ್ಳಾಪುರದಲ್ಲೇ ಬುದ್ದಿವಂತ ರಾಜಮೌಳಿಯವರು RRRನ ಬಹುಮುಖ್ಯದ ಕಾರ್ಯಕ್ರಮವನ್ನ ಆಯೋಜಿಸಿದ್ದರು. ಕನ್ನಡ ನಾಡಿನ ದೊರೆಯಾದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾದರೆ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರ ಗೌರವಯುತ ಉಪಸ್ಥಿತಿಯಿತ್ತು. ಚಿಕ್ಕಬಳ್ಳಾಪುರದ ಶಾಸಕರಾದಂತ ಸುಧಾಕರ್ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ವೇಳೆ ಮಾತನಾಡಿದ ಶಿವಣ್ಣ, ಸಿನಿಮಾತಂಡಕ್ಕೆ ಶುಭಹಾರೈಸಿ “ನಾನು ರಾಜಮೌಳಿಯವರ ದೊಡ್ಡ ಅಭಿಮಾನಿ. ಅವರ ಬಾಹುಬಲಿ ಚಿತ್ರ ಭಾರತದ ಸಿನಿಮಾಗಳ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸಿತ್ತು. ಸಿನಿಮಾ ನೋಡಿದ ತಕ್ಷಣವೇ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದೆ. ಎನ್ ಟಿ ಆರ್, ರಾಮಚರಣ್, ಚಿರಂಜೀವಿ ಇವರೆಲ್ಲರ ಸಿನಿಮಾವನ್ನು ನಾನು ಯಾವಾಗಲೂ ಥಿಯೇಟರ್ ನಲ್ಲೆ ನೋಡುತ್ತೇನೆ.” ಎಂದರು. ಇದರ ಜೊತೆಗೆ ಒಂದು ಮುಖ್ಯವಾದ ವಿಷಯವನ್ನು ಕೂಡ ಚಿತ್ರತಂಡದ ಮುಂದಿಟ್ಟಿದ್ದಾರೆ ಶಿವಣ್ಣ. ” ಕರ್ನಾಟಕದಲ್ಲಿ RRR ಸಿನಿಮಾವನ್ನು ಹೆಚ್ಚು ಕನ್ನಡ ಭಾಷೆಯ ಶೋಗಳಲ್ಲೇ ಬಿಡುಗಡೆಗೊಳಿಸಿ. ಪಾನ್ ಇಂಡಿಯಾ ಸಿನಿಮಾಗಳೆಲ್ಲ ನಮ್ಮಲ್ಲಿ ಸ್ವಂತ ಭಾಷೆಯಲ್ಲೇ ಬಿಡುಗಡೆಯಗುತ್ತವೆ” ಎಂದಿದ್ದಾರೆ. ಶಿವಣ್ಣ ಹೇಳಿದಂತೆ ಈ ಮುಂಚೆ ಬಂದಂತ ‘ಪುಷ್ಪ’, ‘ರಾಧೆ ಶ್ಯಾಮ್’ ಮುಂತಾದ ಪಾನ್ ಇಂಡಿಯಾ ಸಿನಿಮಾಗಳು ಕರ್ನಾಟಕದಲ್ಲೂ ಸಹ ಹೆಚ್ಚು ತೆಲುಗು ಷೋಗಳನ್ನು ಇಟ್ಟಿದ್ದರು. RRRನ ಈ ಹಬ್ಬದಲ್ಲೂ ಸಹ ಅಪ್ಪುವನ್ನ ನೆರೆದಿದ್ದ ಗಣ್ಯರು ನೆನೆವಾಗ ಶಿವಣ್ಣ ಕಣ್ಣೀರಿತ್ತಿದ್ದಾರೆ. ” ಅವನಿಗೆ ಈ ರೀತಿ ದನಿಯಗುತ್ತೇನೆ ಎಂದೆಣಿಸಿರಲಿಲ್ಲ” ಎಂದು ಭಾವುಕರಾದರು ಶಿವಣ್ಣ.

‘ಕರ್ನಾಟಕದಲ್ಲಿ RRR ಸಿನಿಮಾವನ್ನು ಕನ್ನಡದಲ್ಲೇ ಹೆಚ್ಚು ಬಿಡುಗಡೆ ಮಾಡಿ’: ಶಿವಣ್ಣ Read More »

ಪರಭಾಷೆಯಲ್ಲೂ ಕನ್ನಡದ ಹೆಮ್ಮೆ ‘ಕನ್ನಡತಿ’

ಡಬ್ಬಿಂಗ್ ಅಥವಾ ರಿಮೇಕ್ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ, ಕಿರುತೆರೆಯ ಮೇಲೆ ಬಂದು ಪ್ರತಿದಿನ ಜನಮಾನಸವನ್ನ ಮನರಂಜಿಸೊ ಧಾರವಾಹಿಗಳು ಕೂಡ ಇದಕ್ಕೆ ಒಳಪಟ್ಟಿವೆ. ದಿನವೆಲ್ಲ ದುಡಿದು, ದಣಿದು ಟಿವಿ ಮುಂದೆ ಕೂರೊ ಪ್ರೇಕ್ಷಕರಿಗೆ ಒಂದರ್ಧ ಗಂಟೆಯ ತಮ್ಮ ಕಥಾಹಂದರದಿಂದ, ಪ್ರತಿದಿನ ಆನಂದ ನೀಡೋ ಧಾರಾವಾಹಿಗಳು ಸರ್ವರಿಗೂ ಅಚ್ಚುಮೆಚ್ಚು. ಅದರಲ್ಲು ಕನ್ನಡದಲ್ಲಂತು ಕಿರುತೆರೆ ಬೆಳ್ಳಿತೆರೆ ಎರಡೂ ಕೂಡ ಒಂದೇ ಸಮನಾಗಿ ಬೆಳೆಯುತ್ತಿವೆ. ಇಲ್ಲಿವರೆಗೆ ಬಹುಪಾಲು ಬೇರೆ ಭಾಷೆಗಳಿಂದ ಕನ್ನಡಕ್ಕೆ ಬಂದಂತ ಧಾರಾವಾಹಿಗಳೇ ಹೆಚ್ಚಾಗಿರುವಾಗ ಇಲ್ಲೊಂದು ಕನ್ನಡದ ಸ್ವಂತ ಧಾರಾವಾಹಿ ಮರಾಠಿಯಲ್ಲಿ ಮೋಡಿ ಮಾಡಲು ಸಜ್ಜಾಗಿದೆ. 2020ರ ಜನವರಿಯಲ್ಲಿ ಆರಂಭವಾಗಿ ಸುಮಾರು 550ಕ್ಕೂ ಹೆಚ್ಚಿನ ಸಂಚಿಕೆಗಳೊಂದಿಗೆ ಮುನ್ನುಗ್ಗುತ್ತಿರೋ ‘ಕನ್ನಡತಿ’ ಧಾರಾವಾಹಿ ಕನ್ನಡಿಗರೆಲ್ಲರ ಅಚ್ಚುಮೆಚ್ಚಾಗಿದೆ. ಭುವಿಯ ಸ್ಪಷ್ಟ ಕನ್ನಡ ಹಾಗು ಕನ್ನಡತನ, ಹರ್ಷನ ಒಳ್ಳೆತನ ಹೀಗೆ ಇಲ್ಲಿನ ಕಥೆಗೆ, ಕಥೆಯಲ್ಲಿನ ಪಾತ್ರಗಳಿಗೆ ಹೊಂದಿಕೊಳ್ಳದವರೇ ಇಲ್ಲವೆಂದರೂ ತಪ್ಪಾಗಲಾಗದು. ಈಗ ಈ ಧಾರಾವಾಹಿ ತನ್ನ ಸೆಳೆತವನ್ನ ಕನ್ನಡಿಗರಿಗೆ ಮಾತ್ರವಲ್ಲದೆ, ಮರಾಠಿ ಪ್ರೇಕ್ಷಕರಿಗೂ ಹಬ್ಬಲು ತಯಾರಾಗಿದೆ. ಕಲರ್ಸ್ ಮರಾಠಿ ವಾಹಿನಿಯಲ್ಲಿ ಇದೇ ಏಪ್ರಿಲ್ 4ರಿಂದ ರಾತ್ರಿ 9:30ಕ್ಕೆ ಸರಿಯಾಗಿ ಟಿವಿ ಪರದೆಗಳಲ್ಲಿ ಪ್ರಸಾರವಾಗಲಿರೋ ‘ಭಾಗ್ಯ ದಿಲೆ ತು ಮಲ’ ಎಂಬ ಧಾರಾವಾಹಿಯ ಮೂಲಕ. ಈ ಧಾರವಾಹಿ ‘ಕನ್ನಡತಿ’ಯ ರಿಮೇಕ್ ಎನ್ನುವುದನ್ನು ತಂಡದವರು ಹಾಗು ಕಲರ್ಸ್ ವಾಹಿನಿಯವರು ಸ್ಪಷ್ಟಪಡಿಸಿ ಘೋಷಿಸಿದ್ದಾರೆ. ಮರಾಠಿಯಲ್ಲಿ ಧಾರವಾಹಿಯ ಪ್ರೊಮೊ ವಿಡಿಯೋ ಒಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಎಲ್ಲರ ಮೆಚ್ಚುಗೆಯನ್ನ ಪಡೆಯುತ್ತಿದೆ. ಕನ್ನಡದಲ್ಲಿ ‘ಕನ್ನಡತಿ’ ಮಾಡುತ್ತಿರೋ ಮೋಡಿಯಂತೆ ಮರಾಠಿಯಲ್ಲೂ ಆಗಲಿ ಎಂಬುದೇ ನಮ್ಮಾಸೆ. ಕನ್ನಡದ ‘ಕನ್ನಡತಿ’ಯ ಕೀರ್ತಿ ಎಲ್ಲ ಕಡೆ ಹರಡಲಿ ಎಂದು ಮನದುಂಬಿ ಹಾರೈಸೋಣ.

ಪರಭಾಷೆಯಲ್ಲೂ ಕನ್ನಡದ ಹೆಮ್ಮೆ ‘ಕನ್ನಡತಿ’ Read More »

ರಾಜಕಾರಿಣಿಯಾಗಿ ತೆರೆ ಮೇಲೆ ಬರಲಿದ್ದಾರೆ ಸೋನು ಗೌಡ

ರಾಜನಂದಿನಿ ಆಗಿ ಕಿರುತೆರೆಗೆ ಕಾಲಿಟ್ಟು ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ನಟಿ ಸೋನು ಗೌಡ ಅವರು ಖುಷಿಯಲ್ಲಿದ್ದಾರೆ. ಯಾಕೆಂದರೆ ಅವರು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. ಕಾಂತರಾಜ್ ಕನ್ನಳ್ಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಶಬ್ದ ಚಿತ್ರದಲ್ಲಿ ಸೋನು ಗೌಡ ಬಣ್ಣ ಹಚ್ಚಲಿದ್ದಾರೆ. ಇದರ ಹೊರತಾಗಿ ಮಹೇಶ್ ಚಿನ್ಮಯ್ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರ ವಸುಂಧರಾದೇವಿಯಲ್ಲಿ ನಟಿಸುತ್ತಿದ್ದಾರೆ. “ಶಬ್ದ ಚಿತ್ರದಲ್ಲಿ ಪೋಲೀಸ್ ಪಾತ್ರ ಮಾಡುತ್ತಿದ್ದೇನೆ. ಗುಲ್ಟು ಚಿತ್ರದ ನಂತರ ನನ್ನ ಕೆರಿಯರ್ ನಲ್ಲಿ ಎರಡನೇ ಬಾರಿಗೆ ಪೋಲಿಸ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ಶಬ್ದ ಚಿತ್ರ 2019ರಲ್ಲಿಯೇ ಆರಂಭವಾಗಬೇಕಿತ್ತು. ಕೊರೋನಾದಿಂದಾಗಿ ತಡವಾಯಿತು. ಸಿನಿಮಾದ ಚಿತ್ರಕಥೆ ತುಂಬಾ ಚಾಣಾಕ್ಷತನದಿಂದ ಕೂಡಿದೆ. ನನಗೆ ಇನ್ನೊಂದು ಶೆಡ್ಯೂಲ್ ಶೂಟಿಂಗ್ ಇದೆ” ಎಂದಿದ್ದಾರೆ. ಇನ್ನು ವಸುಂಧರಾದೇವಿ ಚಿತ್ರದಲ್ಲಿ ಸೋನು ಗೌಡ ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. “ನನ್ನ ಕೆಲಸಗಳು ಸರಿಯೋ ತಪ್ಪೋ ಎಂದು ನಿರ್ಧರಿಸುವುದು ಪ್ರೇಕ್ಷಕರಿಗೆ ಬಿಟ್ಟಿದ್ದು. ನಾನು ಈ ಚಿತ್ರದಲ್ಲಿ ಶಕ್ತಿಯುತ ರಾಜಕಾರಿಣಿಯಾಗಿ ನಟಿಸಿದ್ದೇನೆ. ಆದ್ದರಿಂದ ನಾನು ಕೆಲವು ಸಾಧಕ ಬಾಧಕ ಹೊಂದಿರುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಧರ್ಮ ಕೀರ್ತಿರಾಜ್ ಜೊತೆಗೆ ಎರಡನೇ ಬಾರಿ ನಟಿಸಿದ್ದೇನೆ” ಎಂದಿದ್ದಾರೆ. ಸೋನು ಅವರ ಕೆರಿಯರ್ ಸುಧಾರಿಸಿರುವುದಕ್ಕೆ ಖುಷಿಯಾಗಿರುವ ಅವರು “ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವುದಕ್ಕೆ ಖುಷಿ ಇದೆ. ನನ್ನ ಕೈಯಲ್ಲಿ 5 ಸಿನಿಮಾಗಳಿವೆ. ಪರ್ಮಾಫೆನ್ಸ್ ಮಾಡುವಂತಹ ಪಾತ್ರಗಳು ಸಿಕ್ಕಿವೆ. ನಾನು ಕೆಲಸವನ್ನು ಎಂಜಾಯ್ ಮಾಡುತ್ತಿದ್ದೇನೆ. ಇದರೊಂದಿಗೆ ಜೊತೆ ಜೊತೆಯಲಿ ಸೀರಿಯಲ್ ಕೂಡಾ ಬಂತು. ಇದು ನನ್ನನ್ನು ಹೊಸ ರೀತಿಯ ಪ್ರೇಕ್ಷಕರ ಬಳಿ ಕರೆದುಕೊಂಡು ಹೋಯಿತು ” ಎಂದಿದ್ದಾರೆ.

ರಾಜಕಾರಿಣಿಯಾಗಿ ತೆರೆ ಮೇಲೆ ಬರಲಿದ್ದಾರೆ ಸೋನು ಗೌಡ Read More »

ರೆಟ್ರೋ ಅವತಾರದಲ್ಲಿ ರಂಜಿಸಲು ಬರುತ್ತಿದ್ದಾರೆ ವಿಶಾಲ್ ಹೆಗ್ಡೆ

ನಟ ವಿಶಾಲ್ ಹೆಗ್ಡೆ ತಮ್ಮ ಹೊಸ ಸಿನಿಮಾ “ಗಣ” ದ ಶೂಟಿಂಗ್ ನಲ್ಲಿ ಮೈಸೂರಿನಲ್ಲಿ ಇದ್ದಾರೆ. ನಟಿ ವೇದಿಕಾ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಪ್ರಜ್ವಲ್ ದೇವರಾಜ್ ಹಾಗೂ ಕೃಷಿ ತಾಪಂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹರಿಪ್ರಸಾದ್ ಜಕ್ಕ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. “ನಾನು ಗಣ ಸಿನಿಮಾದಲ್ಲಿ ರೆಟ್ರೋ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದೇನೆ.ನಾನೀಗ ನನ್ನ ಪಾತ್ರದ ಬಗ್ಗೆ ಇಷ್ಟೇ ಹೇಳಲು ಸಾಧ್ಯ. ಇದರ ಹೊರತಾಗಿ ಇದೊಂದು ಆಸಕ್ತಿಕರವಾದ ಪಾತ್ರವಾಗಿದ್ದು ಎಲ್ಲರನ್ನೂ ರಂಜಿಸಲಿದೆ” ಎಂದಿದ್ದಾರೆ. ಮೈಸೂರಿನಲ್ಲಿ ಶೂಟಿಂಗ್ ಎಂಜಾಯ್ ಮಾಡುತ್ತಿರುವ ವಿಶಾಲ್ ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದಿದ್ದಾರೆ. “ಸುತ್ತಲೂ ಹಸಿರು ಇದ್ದಾಗ ತಾಜಾತನವಾಗಿರುತ್ತದೆ. ಚಿತ್ರೀಕರಣದ ಸುಲಭದ ವಿಷಯಕ್ಕೆ ಬಂದರೆ ಯಾವುದೇ ಟ್ರಾಫಿಕ್ ಇಲ್ಲ. ಹೀಗಾಗಿ ಲೊಕೇಶನ್ ತಲುಪಲು ಅರ್ಧ ಗಂಟೆ ಸಾಕು. ನನಗೆ ಒಂದೆರಡು ದಿನಗಳ ರಜೆ ಇದ್ದರೆ ಮೈಸೂರಿನಲ್ಲಿ ಇರಲು ನಿರ್ಧರಿಸಿದ್ದೇನೆ” ಎಂದಿದ್ದಾರೆ. ವಿಜಯ ರಾಘವೇಂದ್ರ ಜೊತೆ ರಿಂಗ ರಿಂಗ ರೋಸಸ್ ಸಿನಿಮಾದಲ್ಲಿ ಡಾಕ್ಟರ್ ಪಾತ್ರ ಮಾಡುತ್ತಿರುವ ವಿಶಾಲ್ “ನಾನು ಮೊದಲ ಬಾರಿ ಡಾಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನನ್ನ ಪಾತ್ರ ಯಾವಾಗಲೂ ಸಮಾಜಕ್ಕೆ ದುಡಿಯುವ ವ್ಯಕ್ತಿ, ಸದಾ ಶಕ್ತಿಯುತವಾಗಿದ್ದು ರೋಗಿಗಳ ಚೇತರಿಕೆಗಾಗಿ ಅವರಲ್ಲಿ ವಿಶ್ವಾಸ ತುಂಬಬೇಕು”ಎಂದಿದ್ದಾರೆ. ವಿಜಯ್ ಜೊತೆಗೆ ನಟಿಸಿರುವ ಬಗ್ಗೆ ಹೇಳಿರುವ ವಿಶಾಲ್ ” ನಾವು ನಿನಗಾಗಿ ಸಿನಿಮಾದಲ್ಲಿ ನಟಿಸುವ ಮೂಲಕ ಒಟ್ಟಿಗೆ ಕೆರಿಯರ್ ಆರಂಭಿಸಿದೆವು. ನಾವು ಉತ್ತಮ ಸ್ನೇಹಿತರು. ನಮ್ಮ ಸ್ನೇಹ ಶೂಟಿಂಗ್ ಮಾಡಲು ಸುಲಭ ಮಾಡಿಕೊಟ್ಟಿದೆ” ಎಂದಿದ್ದಾರೆ.

ರೆಟ್ರೋ ಅವತಾರದಲ್ಲಿ ರಂಜಿಸಲು ಬರುತ್ತಿದ್ದಾರೆ ವಿಶಾಲ್ ಹೆಗ್ಡೆ Read More »

ರಂಗಪ್ರವೇಶ ಮಾಡಿದ ಬೆಳದಿಂಗಳ ಬಾಲೆ ನಟನೆಯಲ್ಲಿ ಬ್ಯುಸಿ

ನಟಿ ಸುಮನ್ ನಗರ್ ಕರ್ ಈಗ ರಂಗಪ್ರವೇಶ ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಯಶೋಧಾ ಪ್ರಕಾಶ್ ಈ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ಯಾವುದೇ ಕಮರ್ಷಿಯಲ್ ಅಂಶ ಇರುವುದಿಲ್ಲ. ಇದು ತಾಯಿ ಮಗಳ ಬಾಂಧವ್ಯವನ್ನು ಚಿತ್ರಿಸುತ್ತದೆ. ತನ್ನ ಪಾತ್ರದ ಕುರಿತು ಮಾತನಾಡಿರುವ ಸುಮನ್ ” ಭರತನಾಟ್ಯ ಡ್ಯಾನ್ಸರ್ ಆಗಬೇಕೆಂದು ಬಯಸುವ 15 ವರ್ಷದ ಮಗಳ ಜವಾಬ್ದಾರಿಯುತ ಪಾತ್ರವನ್ನು ಮಾಡುತ್ತಿದ್ದೇನೆ. ತನ್ನ ಗುರಿ ಸಾಧಿಸುವಲ್ಲಿ ಅವಳು ಹಲವಾರು ವೈವಿಧ್ಯತೆಗಳನ್ನು ಎದುರಿಸುತ್ತಾಳೆ. ಮತ್ತು ಅವಳು ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ. ಕನಸನ್ನು ಈಡೇರಿಸಲು ತಾಯಿ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದು ಕಥಾಹಂದರವನ್ನು ರೂಪಿಸುತ್ತದೆ”ಎನ್ನುತ್ತಾರೆ. ಎಂಡಿ ಕೌಶಿಕ್ , ರೇಣುಕಾ ,ಬಸವರಾಜ್ ಹಾಗೂ ಸಾಹಿತಿ ದೊಡ್ಡರಂಗೇಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇನ್ನು ಸದ್ಯ ಸಿನಿಮಾ ರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಸುಮನ್ ನಗರ್ ಕರ್ ಸ್ಟಾಕರ್ ಸಿನಿಮಾದಲ್ಲಿ ಎಟಿಎಸ್ ಆಫೀಸರ್ ಆಗಿ ನಟಿಸಿದ್ದು ಈ ಸಿನಿಮಾ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ವಿಮರ್ಶೆಗಳನ್ನು ಪಡೆದಿದ್ದು ತೆರೆಗೆ ಬರಲು ಸಿದ್ಧವಾಗಿದೆ. ಇದಲ್ಲದೇ ಎಬಿ ಪಾಸಿಟಿವ್ , ಸಿಟ್ ಹಾಗೂ ಬ್ರಾಹ್ಮಿ ಸಿನಿಮಾಗಳು ಅವರ ಕೈಯಲ್ಲಿವೆ.

ರಂಗಪ್ರವೇಶ ಮಾಡಿದ ಬೆಳದಿಂಗಳ ಬಾಲೆ ನಟನೆಯಲ್ಲಿ ಬ್ಯುಸಿ Read More »

ಮಾಡೆಲಿಂಗ್ ನಿಂದ ನಟನೆಯವರೆಗೆ ಆಸಿಯಾ ಪಯಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಾಯಕಿ ಕನ್ನಿಕಾ ಆಗಿ ನಟಿಸುತ್ತಿರುವ ಆಸಿಯಾ ಮೊದಲ ಧಾರಾವಾಹಿಯಲ್ಲಿಯೇ ಸೀರಿಯಲ್ ಪ್ರಿಯರ ಮನ ಸೆಳೆದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿರುವ ಮಹಾನಗರಿಯ ಬೆಡಗಿ ಆಸಿಯಾ ಸದ್ಯ ಕನ್ನಿಮಾ ಆಗಿ ಕಿರುತೆರೆಯಲ್ಲಿ ಸಕತ್ ಬ್ಯುಸಿ. ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕೊಂಚ ಜಾಸ್ತಿಯೇ ಆ್ಯಕ್ಟೀವ್ ಆಗಿರುತ್ತಿದ್ದ ಆಸಿಯಾ ತದ ನಂತರ ಆಯ್ದುಕೊಂಡಿದ್ದು ಮಾಡೆಲಿಂಗ್ ಕ್ಷೇತ್ರವನ್ನು. ಮುಂದೆ ಒಂದಷ್ಟು ಶೋ ಗಳಲ್ಲಿ ಕ್ಯಾಟ್ ವಾಕ್ ಮಾಡಿ ಸೈ ಎನಿಸಿಕೊಂಡಿದ್ದ ಆಸಿಯಾ ಮಾಡೆಲಿಂಗ್ ಲೋಕದ ಆಳ ಅಗಲಗಳನ್ನು ತಿಳಿದುಕೊಂಡರು. ಮನಸ್ಸು ನಟನೆಯತ್ತ ವಾಲಿದ ಕಾರಣ ನಟಿಯಾಗಬೇಕು ಎಂಬ ದೃಢಸಂಕಲ್ಪ ಮಾಡಿದ ಆಸಿಯಾ ನಟನಾ ತರಬೇತಿ ಪಡೆಯುವ ನಿರ್ಧಾರ ಮಾಡಿದರು. ಉಷಾ ಭಂಡಾರಿ ಅವರ ಆ್ಯಪ್ ಸಂಸ್ಥೆ ಸೇರಿದ ಆಸಿಯಾ ಮೂರು ತಿಂಗಳುಗಳ ಕಾಲ ತರಬೇತಿಯನ್ನು ಕೂಡಾ ಪಡೆದರು. ನಂತರ ಒಂದಷ್ಟು ಆಡಿಶನ್ ಗಳಿಗೆ ಹೋದ ಆಸಿಯಾ ಆಯ್ಕೆಯಾಗಲಿಲ್ಲ. ನನಗೂ ನಟನೆಗೂ ಹೊಂದಾಣಿಕೆಯಾಗುವುದಿಲ್ಲ, ನಟನಾ ಲೋಕದಲ್ಲಿ ಮಿಂಚುವುದು ಅಸಾಧ್ಯ ಎಂದ ಅರಿತುಕೊಂಡ ಆಸಿಯಾ ಕಂಪೆನಿಯೊಂದಕ್ಕೆ ಕೆಲಸಕ್ಕೆ ಸೇರಿದರು. ಅದೇ ಸಮಯದಲ್ಲಿ ಆಡಿಶನ್ ನಲ್ಲಿ ಭಾಗವಹಿಸುವಂತೆ ಕರೆ ಬಂದಿತ್ತು. ಕನ್ಯಾಕುಮಾರಿ ಧಾರಾವಾಹಿಯ ನಿರ್ದೇಶಕ ಆಸಿಯಾ ಅವರಿಗೆ ಕರೆ ಮಾಡಿ ಆಡಿಶನ್ ನಲ್ಲಿ ಭಾಗವಹಿಸುವಂತೆ ಹೇಳಿದರು. ಆ ಸಮಯಕ್ಕೆ ಸರಿಯಾಗಿ ಅದೃಷ್ಟ ದೇವತೆಯೂ ಆಕೆಯ ಕೈ ಹಿಡಿದಿದ್ದರು. ಆಡಿಶನ್ ಗೆ ಹೋದ ಆಕೆ ಆಯ್ಕೆಯಾದಾಗ ಸ್ವರ್ಗಕ್ಕೆ ಮೂರೇ ಗೇಣು.ಜೊತೆಗೆ ಮೊದಲ ಧಾರಾವಾಹಿಯಲ್ಲಿಯೇ ನಾಯಕಿ ಪಾತ್ರದಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಆಸಿಯಾ ಬಹು ದಿನದ ಕನಸು ನನಸು ಮಾಡಿಕೊಂಡ ಸಂತಸದಲ್ಲಿದ್ದಾರೆ.

ಮಾಡೆಲಿಂಗ್ ನಿಂದ ನಟನೆಯವರೆಗೆ ಆಸಿಯಾ ಪಯಣ Read More »

Scroll to Top