Karnataka Bhagya

ಕ್ರೀಡೆ

ಲೂಸ್ ಮಾದ ಈಗ “ಕಿರಿಕ್ ಶಂಕರ್”.

ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿರುವ ” ಕಿರಿಕ್ ಶಂಕರ್ ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನೂತನ ಪ್ರತಿಭೆ ಅದ್ವಿಕ ಈ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಎಂ.ಎನ್.ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಆರ್ ಅನಂತರಾಜು ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ. ತುಂಬಾ ದಿನಗಳ ನಂತರ ನಮ್ಮ ಭೇಟಿಯಾಗುತ್ತಿದೆ. ಕೊರೋನ ಕಾರ್ಮೋಡ ಕಳೆದು ಸಂಭ್ರಮದ ವಾತಾವರಣ ಮರಳಿಬಂದಿದೆ. ಇದೇ ಏಪ್ರಿಲ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ಧನ್ಯವಾದ ಎಂದರು ಎಂ.ಎನ್.ಕುಮಾರ್. ಇದೊಂದು ನಗರದ ಹೊರವಲಯದಲ್ಲಿ ನಡೆಯುವ ಕಥೆ. ನಾಯಕನಿಗೆ ಇಬ್ಬರು ತಂಗಿಯರು. ತುಂಬು ಕುಟುಂಬ. ಸಂಸಾರದ ಜವಾಬ್ದಾರಿ ಹೆಗಲ ಮೇಲಿದ್ದರೂ, ಯಾವುದಕ್ಕೂ ತಲೆ ಕೆಡಸಿಕೊಳ್ಳದಾತ. ಆತನ ಜೀವನದಲ್ಲಿ ನಾಯಕಿಯ ಆಗಮನವಾಗುತ್ತಿದಂತೆ ಏನೆಲ್ಲಾ ಆಗುತ್ತದೆ ಎಂಬುದೆ ಕಥಾಸಾರಾಂಶ. ಕಥೆ ಎಲ್ಲರಿಗೂ ಹಿಡಿಸಿದರೆ ಆ ಕ್ರೆಡಿಟ್ ಯೋಗೀಶ್ ಹುಣಸೂರು ಅವರಿಗೆ ಹೋಗಬೇಕು. ಅವರೆ ಈ ಚಿತ್ರದ ಕಥೆಗಾರರು. ತಾಂತ್ರಿಕವರ್ಗದವರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಅನಂತರಾಜು. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಅವಕಾಶ ನೀಡಿದ ಎಂ.ಎನ್ ಕುಮಾರ್ ಅವರಿಗೆ ಧನ್ಯವಾದ. ಅನಂತರಾಜು ಅವರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ಪ್ರತಿಯೊಂದು ಸಿನಿಮಾದಲ್ಲೂ ಕಲಿಯುವುದು ಇರತ್ತೆ. ಈ ಚಿತ್ರದಲ್ಲೂ ಸಾಕಷ್ಟು ಕಲಿತ್ತಿದ್ದೇನೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು ಲೂಸ್ ಮಾದ ಯೋಗಿ.. ನಾನು ರಂಗಭೂಮಿ ಕಲಾವಿದೆ ನಿರ್ದೇಶಕ ಗಿರಿರಾಜ್ ಅವರು ನನ್ನ ಗುರುಗಳು. ಅವರ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದೇನೆ. ಹಿರಿತೆರೆಯಲ್ಲಿ ಇದು ನನ್ನ ಮೊದಲ ಚಿತ್ರ. ಪಾತ್ರ ತುಂಬಾ ಚೆನ್ನಾಗಿದೆ. ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ವಂದನೆಗಳನ್ನು ಸಲ್ಲಿಸಿದರು ನಾಯಕಿ‌ ಅದ್ವಿಕ. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ವೀರ ಸಮರ್ಥ್ ಮಾತನಾಡಿದರು.ಅದ್ವಿಕರಿಗೆ ಅಭಿನಯ ತರಭೇತಿ ನೀಡಿದ ನಿರ್ದೇಶಕ ಗಿರಿರಾಜ್ ಅತಿಥಿಯಾಗಿ ಆಗಮಿಸಿ ಶುಭಕೋರಿದರು. ಕಥೆ, ಚಿತ್ರಕಥೆ, ಸಂಭಾಷಣೆ ಬರೆದರುವ ಯೋಗೀಶ್ ಹುಣಸೂರು ಹಾಗೂಅಭಿನಯಿಸಿರುವ ರಿತೇಶ್ ಅನುಭವದ ಮಾತುಗಳಾಡಿದರು. ಆನಂದ್ ಆಡಿಯೋ ಶ್ಯಾಮ್ ಹಾಗೂ ಗೀತರಚನೆಕಾರ ಕಿನ್ನಾಳ್ ರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಲೂಸ್ ಮಾದ ಈಗ “ಕಿರಿಕ್ ಶಂಕರ್”. Read More »

ಈಕೆ ನಾಯಕಿ ಮಾತ್ರವಲ್ಲ ಗಾಯಕಿಯೂ ಹೌದು!

2021 ರ ಬ್ಲಾಕ್ ಬಾಸ್ಟರ್ ಸಿನಿಮಾ ರಾಬರ್ಟ್ ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಆಶಾ ಭಟ್ ಮೊದಲ ಸಿನಿಮಾದಲ್ಲಿಯೇ ಮನೆ ಮಾತಾದಾಕೆ. ನಟನೆಯ ಹೊರತಾಗಿ ಇದೀಗ ಈಕೆ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಾಡುಗಳ ವಿಡಿಯೋದ ತುಣುಕುಗಳನ್ನು ಶೇರ್ ಮಾಡುತ್ತಿದ್ದ ಆಶಾ ಭಟ್ ತಮ್ಮ ಫಸ್ಟ್ ಕವರ್ ಸಾಂಗ್ ನ್ನು ಬಿಡುಗಡೆ ಮಾಡಿದ್ದಾರೆ. ಕನ್ನಡದ ಸಿನಿ ರಂಗದ ಎವರ್ ಗ್ರೀನ್ ಹಾಡು ಎನಿಸಿಕೊಂಡಿರುವ ತುಂತುರು ಅಲ್ಲಿ ನೀರ ಹಾಡು ಎನ್ನುವ ಸುಮಧುರ ಹಾಡಿಗೆ ದನಿಯಾಗಿರುವ ಆಶಾ ತಮ್ಮ ಸುಂದರ ಧ್ವನಿಯಿಂದ ಕನ್ನಡಿಗರ ಮನಗೆದ್ದಿದ್ದಾರೆ. ತಮ್ಮ ಕವರ್ ಸಾಂಗ್ ನ ಝಲಕ್ ನ್ನು ಆಶಾ ಭಟ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ನೆಟ್ಟಿಗರ ಜೊತೆಗೆ ಸಂಗೀತ ಪ್ರಿಯರ ಮನ ಸೆಳೆದಿದ್ದಾರೆ ಆಶಾ ಭಟ್. ಕನ್ನಡದ ಸೂಪರ್ ಹಿಟ್ ಚಿತ್ರ ಅಮೃತವರ್ಷಿಣಿ ಯ “ತುಂತುರು ಅಲ್ಲಿ ನೀರ ಹಾಡು” ಹಾಡುವ ಮೂಲಕ ತಮ್ಮ ಮಧುರ ಕಂಠದ ಪರಿಚಯ ಮಾಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಆಶಾ ಭಟ್” ಕೊನೆಗೂ ನನ್ನ ಮೊದಲ ಕವರ್ ಸಾಂಗ್ ಬಿಡುಗಡೆಯಾಗಿದೆ. ನನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಈ ವಿಡಿಯೋವು ಈಗಾಗಲೇ 9.6k ವೀಕ್ಷಣೆ ಪಡೆದಿದೆ. ನಿಮ್ಮೆಲ್ಲರ ಪ್ರೀತಿಗೆ ಚಿರ ಋಣಿ. ಈ ವಿಡಿಯೋ ಮಾಡಲು ಸಹಾಯ ಮಾಡಿದ ನನ್ನ ತಂಡಕ್ಕೆ ಧನ್ಯವಾದಗಳು”ಎಂದು ಬರೆದುಕೊಂಡಿದ್ದಾರೆ. 2014ರಲ್ಲಿ ಮಿಸ್ ಸುಪ್ರ ನ್ಯಾಷನಲ್ ಅವಾರ್ಡ್ ಗೆದ್ದಿರುವ ಆಶಾ ಭಟ್ ಈ ಅವಾರ್ಡ್ ಪಡೆದ ಮೊದಲ ಭಾರತೀಯ ಮಹಿಳೆಯೂ ಹೌದು. ಹಿಂದಿಯ ಜಂಗ್ಲಿ ಸಿನಿಮಾದಲ್ಲಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಆಶಾ ಭಟ್ ರಾಬರ್ಟ್ ಮೂಲಕ ಚಂದನವನದಲ್ಲಿ ಛಾಪು ಮೂಡಿಸಿದ್ದಾರೆ.

ಈಕೆ ನಾಯಕಿ ಮಾತ್ರವಲ್ಲ ಗಾಯಕಿಯೂ ಹೌದು! Read More »

ನಿರೀಕ್ಷೆ ಹುಟ್ಟಿಸಿದ ಚಕ್ರವರ್ತಿ ಚಂದ್ರಚೂಡ್ ಮತ್ತು ಪವಿತ್ರಾ ಜೋಡಿ

ಹರಳು ಮಾಫಿಯಾದ ಅಪರೂಪದ ಕಂಟೆಟ್ ಹೊತ್ತ ಮೇಲೊಬ್ಬ ಮಾಯಾವಿ’ ಚಿತ್ರ 2022ರ ಎಪ್ರಿಲ್ 29ಕ್ಕೆ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಇರುವೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರಣ್ಯಪ್ರದೇಶವನ್ನೇ ಹೊದ್ದುಕೊಂಡಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ನಡೆಯುತ್ತಿರುವ ಹರಳು ಕಲ್ಲು ದಂಧೆಯ ಕರಾಳಮುಖವನ್ನು ತಮ್ಮ ಪಾತ್ರದ ಮೂಲಕ ಬಿಚ್ಚಿಡಲಿದ್ದಾರೆ.ಮೇಲೊಬ್ಬ ಮಾಯಾವಿ’ ಚಿತ್ರದ ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಹಾಡುಗಳ ಸಾಹಿತ್ಯ ಮತ್ತು ಸಂಗೀತದಿAದ ಪ್ರೇಕ್ಷಕರನ್ನು ತಲುಪುವಲ್ಲಿ ಸಫಲವಾಗಿದೆ. ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ಅನನ್ಯ ಶೆಟ್ಟಿ ನಾಯಕಿಯಾಗಿದ್ದು, ಸಕ್ಕರೆ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಮೊಟ್ಟ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಟನಾಗಿ ಕಾಣಿಕೊಳ್ಳುತ್ತಿದ್ದಾರೆ. ಕಿರುತೆರೆ ನಟಿ ಪವಿತ್ರಾ ಜಯರಾಮ್, ಚಕ್ರವರ್ತಿ ಚಂದ್ರಚೂಡ್ ಅವರ ಕಾಂಬೀನೇಶನ್ ಸ್ಟಿಲ್ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಉಳಿದಂತೆ ಚಿತ್ರದಲ್ಲಿ ಕೃಷ್ಣಮೂರ್ತಿ ಕವತ್ತಾರ್, ಬೆನಕ ನಂಜಪ್ಪ, ಎಮ್.ಕೆ.ಮಠ, ನವೀನ್ಕುಮಾರ್, ಲಕ್ಷ್ಮಿ ಅರ್ಪಣ್, ಮುಖೇಶ್ ಹಾಗೂ ಡಾ.ಮನೋನ್ಮಣಿ ಹೀಗೆ ಸಾಕಷ್ಟು ರಂಗಭೂಮಿ ಪ್ರತಿಭೆಗಳನ್ನು ಚಿತ್ರದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕಾಣಬಹುದು. ಆಭರಣ, ಉಂಗುರುಗಳಿಗೆ ಬಳಸುವ ಈ ಹರಳಿನ ಕಲ್ಲಿಗಾಗಿ ಅಕ್ರಮ ದಂಧೆಕೋರರ ಹುಡುಕಾಟ ಹೇಗಿರುತ್ತದೆ..? ಹುಡುಕಾಟದಲ್ಲಿ ಸಂಭವಿಸುವ ಸಾವು-ನೋವುಗಳ ಹಿಂದಿನ ಅಸಲಿ ಸತ್ಯ ಏನು..? ಅರಣ್ಯ ಇಲಾಖೆ ಈ ದಂಧೆಯ ವಿಚಾರದಲ್ಲಿ ಸುಮ್ಮನಿರುವುದ್ಯಾಕೆ..? ದಶಕಗಳಿಂದ ನಡೆಯುತ್ತಿರುವ ಈ ಹರಳು ಮಾಫಿಯಾದ ಹಿಂದಿರುವ ಪೈಶಾಚಿಕ ಮನಸ್ಥಿಗಳು ಯಾವುವು..? ಹರಳು ದಂಧೆ ಇಡೀ ಪರಿಸರವನ್ನು ನಾಶಗೊಳಿಸುವುದರ ಜೊತೆಗೆ, ಇಡೀ ಮನುಕುಲವನ್ನೇ ಹೇಗೆ ವಿನಾಶದ ಅಂಚಿಗೆ ಕೊಂಡತಯ್ಯಬಹುದಾದ ಬಗೆ ಹೇಗೆ..? ಇಂತಹ ಸಾಕಷ್ಟು ಪ್ರಶ್ನೆಗಳಿಗೆಮೇಲೊಬ್ಬ ಮಾಯಾವಿ’ ಚಿತ್ರ ಉತ್ತರ ನೀಡಲಿದೆ. ಇನ್ನು, ನಾನು ಅವನಲ್ಲ ಅವಳು’ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಸಂಚಾರಿ ವಿಜಯ್ ಅವರ ಈ ಚಿತ್ರದಲ್ಲಿನಇರುವೆ’ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಬಿ.ನವೀನ್ಕೃಷ್ಣ ನಿರ್ದೇಶನ ಮಾಡಿರೋ ಮೇಲೊಬ್ಬ ಮಾಯಾವಿ’ ಸಿನಿಮಾವನ್ನು,ಶ್ರೀ ಕಟೀಲ್ ಸಿನಿಮಾಸ್’ ಬ್ಯಾನರ್ನ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ ನಿರ್ಮಾಣ ಮಾಡಿದ್ದಾರೆ.

ನಿರೀಕ್ಷೆ ಹುಟ್ಟಿಸಿದ ಚಕ್ರವರ್ತಿ ಚಂದ್ರಚೂಡ್ ಮತ್ತು ಪವಿತ್ರಾ ಜೋಡಿ Read More »

ಕನ್ನಡತಿ ಹೃದಯಕ್ಕೆ ಹತ್ತಿರವಾದ ಧಾರಾವಾಹಿ – ರಂಜನಿ ರಾಘವನ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ನಾಯಕಿ ಭುವನೇಶ್ವರಿ ಆಲಿಯಾಸ್ ಸೌಪರ್ಣಿಕಾ ಆಗಿ ಅಭಿನಯಿಸುತ್ತಿರುವ ರಂಜಿನಿ ರಾಘವನ್ ಪಾತ್ರವನ್ನು ತುಂಬಾ ಪ್ರೀತಿಸುತ್ತಿದ್ದಾರೆ. ಇದರ ಬಗ್ಗೆ ಮಾತನಾಡಿರುವ ರಂಜಿನಿ “ಕನ್ನಡತಿ ನನ್ನ ಹೃದಯಕ್ಕೆ ಹತ್ತಿರವಾದ ಧಾರಾವಾಹಿ. ನನಗೆ ಈ ಧಾರಾವಾಹಿಯು ಉದ್ಯೋಗ ತೃಪ್ತಿ ನೀಡಿದೆ. ಜೊತೆಗೆ ಇದು ನನ್ನ ದಿನಚರಿಯಾಗಿಬಿಟ್ಟಿದೆ.ಈ ಧಾರಾವಾಹಿಯ ಭಾಗವಾಗಿರುವುದಕ್ಕೆ ನನಗೆ ಸಂತಸವಿದೆ”ಎಂದಿದ್ದಾರೆ. “ನನ್ನ ಪಾತ್ರ ಭುವಿ ಯಾವುದೇ ವಯಸ್ಸಿನ ಹಂಗಿಲ್ಲದೇ ಎಲ್ಲರಿಗೂ ಇಷ್ಟವಾಗಿದೆ. ವೀಕ್ಷಕರಿಂದ ತುಂಬಾ ಪ್ರೀತಿಯನ್ನು ಗಳಿಸುವುದು ಅತಿವಾಸ್ತವಿಕ ಭಾವನೆಯಾಗಿದೆ. ಭುವಿ ಪಾತ್ರ ವೀಕ್ಷಕರಿಗೆ ಇಷ್ಟು ಹತ್ತಿರವಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ” ಎಂದಿದ್ದಾರೆ. “ಧಾರಾವಾಹಿಯ ಭಾಗವಾಗಿ ಹಾಗೂ ಯುವಕರ ಹೃದಯ ಗೆಲ್ಲುವುದು ಸುಲಭದ ಕೆಲಸವೇನಲ್ಲ. ಯುವಕರು ಅವರ ಇಷ್ಟ ಹಾಗೂ ಇಷ್ಟಪಡದಿರುವುದರ ಬಗ್ಗೆ ತುಂಬಾ ಆಯ್ಕೆ ಮಾಡುತ್ತಾರೆ. ಅವರು ನನ್ನ ಭುವಿ ಪಾತ್ರವನ್ನು ಇಷ್ಟಪಟ್ಟಿದ್ದಾರೆ. ಕಥೆಯ ನಿರೂಪಣೆ ಯುವಜನತೆಗೆ ಸಂಬಂಧಿಸಿದಂತೆ ಇದೆ ಅನಿಸುತ್ತದೆ. ಧಾರಾವಾಹಿಯಲ್ಲಿ ಅಸ್ವಾಭಾವಿಕ ಘಟನೆ ಅಥವಾ ದೃಶ್ಯಗಳು ಇಲ್ಲ. ಯುವಜನತೆಗೆ ಇದನ್ನು ಇಷ್ಟಪಡುತ್ತಾರೆ” ಎಂದಿದ್ದಾರೆ ರಂಜಿನಿ. ಕನ್ನಡತಿಯ ಭುವಿ ಹಾಗೂ ಹರ್ಷ ಪಾತ್ರ ಇತ್ತೀಚೆಗೆ ಜನ ಇಷ್ಟಪಡುವ ಜೋಡಿಗಳಾಗಿದ್ದಾರೆ. ಇದರ ಬಗ್ಗೆ ಮಾತನಾಡಿರುವ ರಂಜಿನಿ ” ನಾನು ಹೊರಗಡೆ ಹೋದಾಗ ಯುವಜನತೆ ಅಥವಾ ಮಧ್ಯಮ ವಯಸ್ಸಿನ ಜನ ಅಥವಾ ಹಿರಿಯರು ಎಲ್ಲರೂ ಕೇಳುವ ಪ್ರಶ್ನೆ “ಹರ್ಷ ಎಲ್ಲಿ?”. ಒಂದೆರಡು ಬಾರಿ ಅಲ್ಲ ಇದು ಹಲವು ಬಾರಿ ನಡೆದಿವೆ. ಹರ್ಷ ಹಾಗೂ ಭುವಿ ಜೊತೆಯಾಗಿ ಹೋಗಬೇಕೆಂದು ಜನ ಬಯಸುತ್ತಾರೆ. ನಮ್ಮ ಆನ್ ಸ್ಕ್ರೀನ್ ಪಾತ್ರ ಜನರಿಂದ ರೀಲ್ ಲೈಫ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ” ಎಂದಿದ್ದಾರೆ ಇನ್ನೊಂದು ಸನ್ನಿವೇಶವನ್ನು ಹಂಚಿಕೊಂಡಿರುವ ರಂಜಿನಿ” ನಾನು ಇತ್ತೀಚೆಗೆ ಒಂದು ಮದುವೆಗೆ ತೆರಳಿದ್ದಾಗ ಜನ ನನ್ನನ್ನು ನೋಡಿದರು. ನೀವ್ಯಾಕೆ ಹರ್ಷನ ಜೊತೆಯಲ್ಲಿ ಕರೆದುಕೊಂಡು ಬರಲಿಲ್ಲ ಎಂದು ಕೇಳಿದರು. ನನಗೆ ಮಾತ್ರ ಆಹ್ವಾನ ನೀಡಿದ್ದಾರೆ ಎಂದು ಹೇಳಿದೆ. ಈ ರೀತಿಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಹೆಚ್ಚಾಗಿದೆ”ಎಂದಿದ್ದಾರೆ. ಕನ್ನಡತಿ ಎರಡು ವರ್ಷ ಪೂರೈಸಿರುವ ಕುರಿತು ಮಾತನಾಡಿರುವ ರಂಜಿನಿ ” ಕನ್ನಡತಿ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದೆ ಎಂಬುದನ್ನು ನಂಬಲಾಗುತ್ತಿಲ್ಲ. ಆರಂಭದಿಂದ ಈಗಿನ ಕಥೆಯವರೆಗೂ ತುಂಬಾ ದೂರ ಬಂದಿದೆ ಹಾಗೂ ವೀಕ್ಷಕರನ್ನು ಇನ್ನೂ ರಂಜಿಸಲಿದೆ. ನಾನು ಮಾತ್ರವಲ್ಲ ನಮ್ಮ ಇಡೀ ಕನ್ನಡತಿ ತಂಡ ನಮ್ಮ ಅತ್ಯುತ್ತಮವಾದದನ್ನು ನೀಡುತ್ತಿದ್ದೇವೆ. ಕನ್ನಡತಿಯ ಪ್ರತಿಯೊಂದು ಪಾತ್ರವೂ ಪ್ರತಿ ದೃಶ್ಯಗಳಲ್ಲಿ ಉತ್ತಮವಾದ ಕೊಡುಗೆಯನ್ನು ನೀಡುತ್ತಿದೆ. ನಮ್ಮ ಕೆಲಸಕ್ಕೆ ನಾವು ನ್ಯಾಯ ಕೊಡುತ್ತಿದ್ದೇವೆ.ವೀಕ್ಷಕರೂ ಸ್ವೀಕರಿಸಿದ್ದಾರೆ. ಕಥೆ ಯಾವಾಗಲೂ ರಿಯಾಲಿಟಿಗೆ ಗಮನ ನೀಡುತ್ತಿದೆ” ಎಂದಿದ್ದಾರೆ.

ಕನ್ನಡತಿ ಹೃದಯಕ್ಕೆ ಹತ್ತಿರವಾದ ಧಾರಾವಾಹಿ – ರಂಜನಿ ರಾಘವನ್ Read More »

ವೇದಿಕೆ ಮೇಲೆಯೇ ಕಣ್ಣೀರಿತ್ತ ಶಿವಣ್ಣ

ಮಾರ್ಚ್ 13ರಂದು ಅದ್ದೂರಿಯಾಗಿ ‘ಜೇಮ್ಸ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ನಡೆದಿರುವುದು ನಮಗೆಲ್ಲ ಗೊತ್ತಿರೋ ವಿಷಯ. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಲ್ಲಿ ಭಾವುಕರಾಗದ ನಟ-ನಟಿಯರಿಲ್ಲ. ಅರ್ಧ ದಾರಿಯಲ್ಲೇ ಅಗಲಿಹೋದ ಅಪ್ಪುವನ್ನು ನೆನೆದು ಕಂಬನಿಮಿಡಿಯದ ಹೃದಯವೇ ಇಲ್ಲ ಎನ್ನಬಹುದು. ಇನ್ನು ಅವರ ಸ್ವಂತ ಮನೆಯವರ ಸ್ಥಿತಿ ವಿವರಿಸುವುದು ಕಷ್ಟಸಾಧ್ಯ. ವೇದಿಕೆ ಮೇಲೆ ಬಂದು ಮಾತನಾಡಿದ ಶಿವಣ್ಣ ರಾಘಣ್ಣ ಇರ್ವರೂ ಕಣ್ತುಂಬಿಕೊಂಡೆ ಕೆಳಗಿಳಿದರು. ಅಪ್ಪುವಿನ ಬಗ್ಗೆ ಗದ್ಗದ ಕಂಠದಿಂದಲೇ ಮಾತನಾಡಿದ ಶಿವಣ್ಣ, “ಅಪ್ಪುವನ್ನು ‘ಪ್ರೇಮದ ಕಾಣಿಕೆ’ ಚಿತ್ರದಿಂದಲೂ ನೋಡಿಕೊಂಡೆ ಬಂದಿದ್ದೇವೆ. ಇಂದು ಅವನು ನಮ್ಮೊಂದಿಗಿಲ್ಲ ಎಂದು ನೆನಪಾದಾಗೆಲ್ಲ ದುಃಖವಾಗುತ್ತದೆ. ರಾಘು ಮಾತನಾಡುವುದು ಕೇಳಿದರೆ ದುಃಖ ಹೆಚ್ಚಾಗುತ್ತದೆ. ಇವರೆಲ್ಲರಿಗಿಂತ ವಯಸ್ಸಿನಲ್ಲಿ ಹಿರಿಯವ ನಾನು. ನನ್ನ ಕಣ್ಣೆದುರೇ ಅಪ್ಪುಗೆ ರಾಘುಗೆ ಹೀಗೆಲ್ಲ ಆಗೋದು ನೋಡಿದರೆ ಏನು ಮಾಡಬೇಕೋ ತಿಳಿಯೋದಿಲ್ಲ. ಅಪ್ಪಾಜಿ-ಅಮ್ಮ ಕೂಡ ನೂರು ವರ್ಷ ಬದುಕಬೇಕೆಂಬ ಆಸೆಯಿತ್ತು ನಮಗೆ, ಎಲ್ಲ ಮಕ್ಕಳ ಹಾಗೇ. ಆದರೀಗ ಅವರು ಇಲ್ಲ ಕಿರಿಯವನು ಇಲ್ಲ ಎಂದರೆ ಎದೆ ಚುಚ್ಚಿದಂತಾಗುತ್ತದೆ. ನಾನು, ರಾಘು, ಅಪ್ಪು, ಲಕ್ಷ್ಮಿ ಹಾಗು ಪೂರ್ಣಿಮಾ ಜೊತೆಯಲ್ಲೇ ಬೆಳೆದವರು. ಐವರಲ್ಲಿ ಒಬ್ಬರಿಲ್ಲದಿದ್ದರೂ ಸಹಿಸಲಾಗುವುದಿಲ್ಲ.” ಎಂದು ಭಾವುಕರಾಗಿ ನುಡಿದರು. “ಅಪ್ಪು ಅಗಲಿಕೆ ಕನ್ನಡಿಗರಿಗಷ್ಟೇ ಅಲ್ಲದೇ, ಬಹುಪಾಲು ಭಾರತೀಯರಿಗೆ ಕಣ್ಣೀರು ಕೊಟ್ಟಿದೆ. ಅವನ ಕೀರ್ತಿ ಅಂತದ್ದು. ನಟನೆ-ಸಿನಿಮಾ ಮಾತ್ರವಲ್ಲದೆ ಅವನಿಂದಾದ ಸಮಾಜಸ್ನೇಹಿ ಕೆಲಸಗಳನ್ನು ಜನ ಇಂದಿಗೂ ನೆನೆಯುತ್ತಾರೆ. ಕಳೆದ ವಾರ ಶೂಟಿಂಗ್ ಸಲುವಾಗಿ ಕೃಷ್ಣಗಿರಿಗೆ ಹೋಗಿದ್ದೆವು, ಅಲ್ಲಿನ ಜನ ಅಪ್ಪು ಬಗ್ಗೆ ಮಾತನಾಡುವುದು ಕೇಳಿ, ಅವನನ್ನು ತಮ್ಮನಾಗಿ ಪಡೆದದ್ದಕ್ಕೆ ಹೆಮ್ಮೆ ಜಾಸ್ತಿಯಾಗುತ್ತದೆ” ಎನ್ನುತ್ತಾರೆ. ಜೇಮ್ಸ್ ಚಿತ್ರದ ಬಗ್ಗೆ ಮಾತನಾಡುತ್ತಾ, ” ಈ ಚಿತ್ರದಲ್ಲಿ ನಾನು ಅವನ ಜೊತೆ ನಟಿಸಿದ್ದೇನೆ, ಅವನಿಗೆ ಧ್ವನಿಯಾಗಿದ್ದೇನೆ. ಅಪ್ಪುವಿಗೆ ಧ್ವನಿಯಗಬೇಕೆಂದು ಕೇಳಿದಾಗ ಬಹಳ ದುಃಖವಾಗಿತ್ತು. ನಾವು ನಗುನಗುತ್ತಲೇ ನಮ್ಮ ಕೆಲಸಗಳನ್ನೆಲ್ಲ ಮಾಡುತ್ತೇವೆ, ಶೂಟಿಂಗ್ ನಲ್ಲಿ ತೊಡಗಿಕೊಳ್ಳುತ್ತೇವೆ. ಆದರೆ ದುಃಖ ನಮ್ಮನ್ನೆಂದು ಬಿಡುವುದೇ ಇಲ್ಲ” ಎಂದು ಭಾವುಕರಾದರು.

ವೇದಿಕೆ ಮೇಲೆಯೇ ಕಣ್ಣೀರಿತ್ತ ಶಿವಣ್ಣ Read More »

ಪುನೀತ್ ಬದಲಿಗೆ ಬಣ್ಣ ಹಚ್ಚಲಿರೋ ವಿರಾಟ್

ಅಪ್ಪು ಉಸಿರಿನೊಂದಿಗೇ ಸಿನಿಮಾವಾಗದೆ ನಿಂತುಹೋದ ಕಥೆಗಳಿಗೆ ಲೆಕ್ಕವೇ ಇಲ್ಲ. ಅಪ್ಪುವಿಗಾಗೇ ಬರೆದಂತ ಅದೆಷ್ಟೋ ಪುಟದ ಡೈಲಾಗ್ ಗಳನ್ನು ಬೇರೆಯವರ ಕೈಮೇಲೆ ಇಡಬೇಕಾಗಿ ಕೂಡ ಬಂತು. ಪುನೀತ್ ರಾಜಕುಮಾರ್ ಗೆ ಒಮ್ಮೆಯಾದರು ಒಂದು ಸಿನಿಮಾವನ್ನ ನಿರ್ದೇಶಿಸಬೇಕೆಂದು ಕನಸು ಕಂಡಿದ್ದ ಅದೆಷ್ಟೋ ನಿರ್ದೇಶಕರ ಕಂಗಳಿಗೆ ಮರಳೆರಚಿದಂತಾಯಿತು. ನಮ್ಮಗಲಿ ಹೋದ ಅಪ್ಪು ತಮ್ಮ ಜೊತೆಗೆ ಒಂದು ಹುರುಪಿನ ಮಹಾಸಾಗರವನ್ನೇ ಕರೆದುಕೊಂಡು ಹೋದರೆಂದರೆ ತಪ್ಪಾಗಲಾಗದು. ಈಗ ಇಂತಹ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆಯೊಂದಾಗಿದೆ. ಕನ್ನಡದ ಹೆಸರಾಂತ ನಿರ್ದೇಶಕ ದಿನಕರ್ ತೂಗುದೀಪ ಅವರು ಪುನೀತ್ ರಾಜಕುಮಾರ್ ಗೆ ಸಿನಿಮಾವೊಂದನ್ನು ಮಾಡಲಿದ್ದಾರೆ, ಅಪ್ಪುವಿಗಾಗಿಯೇ ಕಥೆಯೊಂದನ್ನ ಹೆಣೆದಿಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಅಪ್ಪು ಅಭಿಮಾನಿಗಳಲ್ಲಂತು ಅಪಾರ ಆನಂದವನ್ನ ಈ ವಿಷಯ ತುಂಬಿತ್ತು. ಆದರೆ ದುರದೃಷ್ಟವಾಶಾತ್ ಇದು ಈಡೇರಲೇ ಇಲ್ಲ. ಸಿನಿಮಾ ಪ್ರಾರಂಭಕ್ಕೂ ಮುಂಚೆಯೇ ಅಂತ್ಯ ಕಂಡಂತಾಗಿತ್ತು ಅಪ್ಪು ಅಗಲಿಕೆಯಿಂದ. ಆದರೆ ಈಗ ಆ ಚಿತ್ರಕ್ಕೆ ಮರಳಿ ಜೀವಬಂದಿದೆ. ಅಪ್ಪುವಿಗಾಗಿ ಬರೆದ ಪಾತ್ರಕ್ಕೆ ನಟ ವಿರಾಟ್ ಬಣ್ಣ ಹಚ್ಚಲಿದ್ದಾರೆ. ವಿರಾಟ್ ಎ ಪಿ ಅರ್ಜುನ್ ಅವರ ‘ಕಿಸ್’ ಸಿನಿಮಾದಿಂದ ಬೆಳ್ಳಿತೆರೆಗೆ ಕಾಲಿಟ್ಟವರು. ಮೊದಲ ಚಿತ್ರದಲ್ಲೇ ಹೆಸರು ಯಶಸ್ಸು ಎಲ್ಲವನ್ನು ಪಡೆದವರು. ಇನ್ನು ಹೆಸರಿಡದ ಈ ಹೊಸ ಸಿನಿಮಾ ವಿರಾಟ್ ಅವರ ಮೂರನೇ ಚಿತ್ರವಾಗಿರಲಿದೆ. ಮಾರ್ಚ್ 11ರಂದು ವಿರಾಟ್ ಜನುಮದಿನದ ಅಂಗವಾಗಿ ಪೋಸ್ಟರ್ ಒಂದನ್ನ ಬಿಡುಗಡೆಗೊಳಿಸಿತ್ತು ಚಿತ್ರತಂಡ. ಜಯಣ್ಣ-ಭೋಗೇಂದ್ರ ಜೋಡಿಯ ನಿರ್ಮಾಣದಲ್ಲಿ ಮೂಡಿಬರುತ್ತಿರೋ ಈ ಚಿತ್ರಕ್ಕೆ ಸದ್ಯ ಹೆಸರಿಡದ ಕಾರಣ, 24 ಎಂಬ ಅಂಕಿಯನ್ನು ಪೋಸ್ಟರ್ ನಲ್ಲಿ ಎದ್ದು ಕಾಣಿಸುವಂತೆ ಇರಿಸಲಾಗಿದೆ, ಕಾರಣ ಜಯಣ್ಣ-ಭೋಗೇಂದ್ರ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರೋ 24ನೇ ಚಿತ್ರ ಇದಾಗಿರುವುದು. ಅಲ್ಲದೇ ವಿರಾಟ್ ಗೆ ‘ಸ್ಟೈಲಿಶ್ ಪ್ರಿನ್ಸ್’ ಎಂದು ಈ ಪೋಸ್ಟರ್ ಕರೆಯುತ್ತದೆ. ಸದ್ಯ ಎ ಪಿ ಅರ್ಜುನ್ ಜೊತೆಗೆ ತಮ್ಮ ಎರಡನೇ ಚಿತ್ರವಾದ ‘ಅದ್ದೂರಿ ಲವರ್’ ಅನ್ನು ಮುಗಿಸಿರೋ ವಿರಾಟ್, ಹೊಸತಾಗಿ ಒಂದು ದೊಡ್ಡ ಸಿನಿಮಾವನ್ನೇ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಪುನೀತ್ ಬದಲಿಗೆ ಬಣ್ಣ ಹಚ್ಚಲಿರೋ ವಿರಾಟ್ Read More »

ಅಪ್ಪು ಇನ್ಮೇಲೆ ಡಾ| ಪುನೀತ್ ರಾಜಕುಮಾರ್

ಕನ್ನಡದ ಕಣ್ಮಣಿ, ಯುವರತ್ನ ಪುನೀತ್ ರಾಜಕುಮಾರ್ ಕನ್ನಡ ಸಿನಿರಂಗಕ್ಕೆ ನೀಡಿದ ಕೊಡುಗೆ ಅಪಾರ. ಬಾಲನಟನಾಗಿ ಬಣ್ಣ ಹಚ್ಚಿದ ಅಪ್ಪು, ರಾಷ್ಟ್ರಪ್ರಶಸ್ತಿ ಪಡೆದು ಸಾಧನೆ ಮೆರೆದವರು. ‘ಅಪ್ಪು’ ಚಿತ್ರದಿಂದ ಸಂಪೂರ್ಣ ಪ್ರಮಾಣದ ನಾಯಕನಟನಾಗಿ ತೆರೆಮೇಲೆ ಬಂದ ಪುನೀತ್ ಅಪ್ಪುವಾಗಿಯೇ ಜನಮನದಲ್ಲಿ ಉಳಿದು ಹೋದರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 50 ಚಿತ್ರಗಳಲ್ಲಿ ನಟಿಸಿರುವ ಪುನೀತ್ ಇದೀಗ ಡಾ| ಪುನೀತ್ ರಾಜಕುಮಾರ್ ಆಗಲಿದ್ದಾರೆ. ನಟನೆಯಷ್ಟೇ ಅಲ್ಲದೇ ಇನ್ನು ಹಲವಾರು ರಂಗಗಳಲ್ಲಿ ಅಪ್ಪು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ. ಬಾಲ್ಯದಿಂದಲೇ ಹಾಡುತ್ತಿದ್ದ ಅಪ್ಪು ತಮ್ಮ ಕೊನೆದಿನಗಳವರೆಗೂ ಹಲವಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ. “ಕಾಣದಂತೆ ಮಾಯವಾದನು” ಎಂದು ಆರಂಭಿಸಿ “ಗಿಚ್ಚ್ ಗಿಲಿ ಗಿಲಿ” ತನಕ ಹಲವಾರು ಬಗೆಬಗೆಯ ಹಾಡುಗಳನ್ನು ಬೇರೆ ಬೇರೆ ಚಿತ್ರಗಳಿಗೆ ಅಪ್ಪು ಹಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮದೇ ಸಂಸ್ಥೆಯಾದ ‘ಪಿ ಆರ್ ಕೆ ಪ್ರೊಡಕ್ಷನ್ಸ್’ ಹೆಸರಿನಲ್ಲಿ ಹಲವಾರು ಅತ್ಯುತ್ತಮ ಕಥೆಗಳನ್ನು ತೆರೆಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಚಲನಚಿತ್ರ ಮಾತ್ರವಲ್ಲದೆ, ಕಿರುಚಿತ್ರಗಳನ್ನು ಒಳಗೊಂಡಿದೆ. ಇಷ್ಟೆಲ್ಲಾ ಕೊಡುಗೆಗೆ ಕಾರಣರಾದ ಅಪ್ಪುಗೆ ಅವರ ಸಮಾಜ ಸೇವೆ ಹಾಗು ಸಿನಿಸೇವೆಯನ್ನ ಗುರುತಿಸಿ ನಮ್ಮ ರಾಜ್ಯದ ಶ್ರೇಷ್ಠ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ವನ್ನು ನೀಡಿ ಗೌರವಿಸುವುದಾಗಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ಅದಕ್ಕಿಂತ ಮುಂಚಿತವಾಗಿ ಮೈಸೂರು ವಿಶ್ವವಿದ್ಯಾಲಯ ಅಪ್ಪುವನ್ನು ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲು ಸಿದ್ದವಾಗಿದೆ. ಇದೇ ಮಾರ್ಚ್ 22ರಂದು ನಡೆಯಲಿರುವ 102ನೇ ಕನ್ವಕೇಶನ್ ಸಮಾರಂಭದಲ್ಲಿ ಅಪ್ಪುವಿನ ಸಮಾಜ ಸೇವೆ ಹಾಗು ಸಿನಿರಂಗಕ್ಕೆ ನೀಡಿರೋ ಕೊಡುಗೆಗಳನ್ನು ನೆನೆದು, ಮರಣೋತ್ತರ ಡಾಕ್ಟರೇಟ್ ಅನ್ನು ಅಪ್ಪುವಿನ ಮಡಿಲಿಗಿಡಲಿದೆ. ವಿಶೇಷವೆಂದರೆ ಡಾ| ರಾಜಕುಮಾರ್ ಅವರಿಗೂ ಸಹ ಇದೇ ಮೈಸೂರು ಯೂನಿವರ್ಸಿಟಿ ಡಾಕ್ಟರೇಟ್ ಪದವಿಯಿಂದ ಗೌರವಿಸಿತ್ತು. ಅಪ್ಪುವಿಗೆ ಡಾಕ್ಟರೇಟ್ ಲಭಿಸಲಿರುವುದು ಅಭಿಮಾನಿಗಳಲ್ಲಿ ಸಂತಸ ತುಂಬಿದ್ದರೂ, ಈ ದಿನ ಅಪ್ಪು ನಮ್ಮೊಂದಿಗಿರಬೇಕಿತ್ತು ಅನ್ನೋ ದುಃಖ ಎಲ್ಲರನ್ನೂ ಕಾಡುತ್ತಿದೆ.

ಅಪ್ಪು ಇನ್ಮೇಲೆ ಡಾ| ಪುನೀತ್ ರಾಜಕುಮಾರ್ Read More »

ಏಪ್ರಿಲ್‌ ಒಂದರಿಂದ ರಾಜ್ಯಾದ್ಯಂತ “ಲೋಕಲ್ ಟ್ರೈನ್” ಸಂಚಾರ.

ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ “ಲೋಕಲ್ ಟ್ರೈನ್” ಚಿತ್ರ ಇದೇ ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‌ಕೊರೋನ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಗಿತ್ತು. ಚಿತ್ರ ಬಿಡುಗಡೆಗೆ ಕೊರೋನ ಕಾರಣವಾಗಿತ್ತು. ಈಗ ಮೊದಲಿನ ವಾತಾವರಣ ಮರುಕಳಿಸಿದ್ದು, ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರಕ್ಕೆ ಸಹಕಾರ ನೀಡಿದ ನಾಯಕ ಡಾರ್ಲಿಂಗ್ ಕೃಷ್ಣ ಆದಿಯಾಗಿ ಸಮಸ್ತರಿಗೂ ಧನ್ಯವಾದ ಅರ್ಪಿಸಿದರು ನಿರ್ಮಾಪಕ ಸುಬ್ರಾಯ ವಾಳ್ಕೆ. ಬೆಂಗಳೂರಿಗೆ ಸುತ್ತಮುತ್ತಲಿನ ಊರಿನ ಜನರು ಕಾರ್ಯದ ನಿಮಿತ್ತವಾಗಿ, ಓದಿನ ಸಲುವಾಗಿ ಸಾಕಷ್ಟು ಜನರು ದಿನ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಆ ರೈಲಿನಲ್ಲೇ ನಮ್ಮ ಚಿತ್ರದ ಕಥೆ ಸಾಗುತ್ತದೆ. ಭರ್ಜರಿ ಆಕ್ಷನ್ ಸನಿವೇಶಗಳು, ಸುಮಧುರ ಹಾಡುಗಳನ್ನೊಳಗೊಂಡಿರುವ ನಮ್ಮ ಚಿತ್ರ ಎಲ್ಲರಿಗೂ ಹಿಡಿಸಲಿದೆ ಎಂದರು ನಾಯಕ ಡಾರ್ಲಿಂಗ್ ಕೃಷ್ಣ. ನನ್ನದು ಇದರಲ್ಲಿ ಈವರೆಗೂ ಮಾಡಿರದ ಪಾತ್ರ. ನನ್ನ ಅಭಿನಯದ ಹಾಡೊಂದು ಅದ್ದೂರಿಯಾಗಿ ಮೂಡಿಬಂದಿದೆ. ಚಿತ್ರ ಗೆಲುತ್ತದೆ ಎಂಬ ಭರವಸೆಯಿದೆ ಎಂದರು ನಾಯಕಿ ಎಸ್ತರ್ ನರೋನ. ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. “ಲೋಕಲ್ ಟ್ರೈನ್” ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂದರು ಮತ್ತೊಬ್ಬ ನಾಯಕಿ ಮೀನಾಕ್ಷಿ ದೀಕ್ಷಿತ್. ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದೀನಿ. ಆದರೆ ನನ್ನ ಪಾತ್ರ‌ ಹಾಸ್ಯದ ಮೂಲಕ ಸಾಗುತ್ತದೆ. ಇದೊಂದು ವಿಭಿನ್ನ ಪಾತ್ರಎನ್ನಬಹುದು ಎಂದರು ಭಜರಂಗಿ ಲೋಕಿ. ಸಂಕಲನದ ಬಗ್ಗೆ ಪಿ.ಆರ್ ಸೌಂದರ್ ರಾಜ್ ಮಾತನಾಡಿದರು. ರುದ್ರಮುನಿ ನಿರ್ದೇಶನದ ಈ ಚಿತ್ರಕ್ಕೆಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಮೇಶ್ ಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಡಾರ್ಲಿಂಗ್ ಕೃಷ್ಣ, ಮೀನಾಕ್ಷಿ ದೀಕ್ಷಿತ್, ಎಸ್ತರ್ ನರೋನ, ಸಾಧುಕೋಕಿಲ, ಭಜರಂಗಿ ಲೋಕಿ, ಟೆನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಏಪ್ರಿಲ್‌ ಒಂದರಿಂದ ರಾಜ್ಯಾದ್ಯಂತ “ಲೋಕಲ್ ಟ್ರೈನ್” ಸಂಚಾರ. Read More »

ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್

‘ಜೇಮ್ಸ್‘ ಜತೆ ‘ಬೈರಾಗಿ‘ ಟೀಸರ…ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಪುನೀತ್ ರಾಜ್’ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲು ‘ಬೈರಾಗಿ’ ತಂಡ ತೀರ್ಮಾನಿಸಿದೆ. ‘ಜೇಮ್ಸ್‌’ ಬಿಡುಗಡೆಯಾಗುವ ಎಲ್ಲಾ ಪರದೆಗಳಲ್ಲೂ ‘ಬೈರಾಗಿ’ ದರ್ಶನವಾಗಲಿದೆ ಎಂಬುದು ವಿಶೇಷ. ಪುನೀತ್ ಅವರ ಸವಿನೆನಪಿಗಾಗಿ ಈ ಟೀಸರ್ ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ‘ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ತಂಡದ ಜತೆ ಅಪ್ಪು ಒಡನಾಟವಿದೆ. ಹೀಗಾಗಿ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ‘ಬೈರಾಗಿ’ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಇದು ಪುನೀತ್ ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಸಂತಸದ ವಿಷಯ’ ಎಂಬಿದು ಚಿತ್ರತಂಡದ ಅನಿಸಿಕೆ. ವಿಜಯ್ ಮಿಲ್ಟನ್‌ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ ‘ಕೃಷ್ಣ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ‘ಟಗರು’ ಬಳಿಕ ‘ಡಾಲಿ’ ಧನಂಜಯ್ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಜತೆ ನಟಿಸಿದ್ದಾರೆ. ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಕೂಡಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.

ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್ Read More »

ಬೆಂಗಳೂರು ಸಿನಿಮೋತ್ಸವ. ಪ್ರಶಸ್ತಿ ಪಡೆದ ಎಲ್ಲ ಕನ್ನಡ ಸಿನಿಮಾಗಳು

ಮಾರ್ಚ್ 3ನೇ ತಾರೀಕಿನಂದು ಚಾಲನೆಗೊಂಡಿದ್ದ 2022ನೇ ಸಾಲಿನ ‘ಬೆಂಗಳೂರು ಅಂತರ್ರಾಷ್ಟ್ರೀಯ ಸಿನಿಮೋತ್ಸವ’ ಮಾರ್ಚ್ 10ನೇ ತಾರೀಕಿನಂದು ಮುಕ್ತಾಯ ಕಂಡಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಉಪಸ್ಥಿತಿಯಲ್ಲಿ ನೆರವೇರಿದ ಉದ್ಘಾಟನಾ ಸಮಾರಂಭದಿಂದ ಆರಂಭವಾದ ಸಿನಿ ಉತ್ಸವ ಕರುನಾಡ ರಾಜ್ಯಪಾಲರಾದ ತಾವರ್ ಚಂದ್ ಗೆಹಲೊಟ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದೊಂದಿಗೆ ಸಂಪೂರ್ಣಗೊಂಡಿದೆ. 2020 ಹಾಗು 2021ನೇ ಸಾಲಿನಲ್ಲಿ ಬಂದಂತಹ ಉತ್ತಮ ಚಿತ್ರಗಳನ್ನ ಗುರುತಿಸಿ, ಗೌರವಿಸಿ, ಪ್ರಶಸ್ತಿ ಪ್ರಧಾನವನ್ನ ಬೆಂಗಳೂರು ಸಿನಿಮೋತ್ಸವದಲ್ಲಿ ಮಾಡಲಾಗಿದೆ. ಆಗಮಿಸಿದ್ದ ಗಣ್ಯರುಗಳ ಕೈಯಿಂದ ಪುರಸ್ಕೃತರಾದ ಚಿತ್ರತಂಡಗಳು ತಾವು ಪಡೆದ ಪ್ರಶಸ್ತಿ-ಪುರಸ್ಕಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸದಿಂದ ಹಂಚಿಕೊಂಡಿದ್ದಾರೆ. 2020ನೇ ಸಾಲಿನ ಕನ್ನಡ ಸಿನಿಮಾಗಳ ಪೈಕಿ ‘ಪಿಂಕಿ ಎಲ್ಲಿ?’ ಪ್ರಥಮ ಸ್ಥಾನಿಯಾದರೆ, ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಹಾಗು ‘ಓ ನನ್ನ ಚೇತನ’ ದ್ವಿತೀಯ ಹಾಗು ತೃತೀಯ ಸ್ಥಾನಿಯಾಗಿದೆ. ತೀರ್ಪುಗಾರರಿಂದ ನೀಡಲ್ಪಡುವ ವಿಶೇಷ ಪ್ರಶಸ್ತಿಗೆ ‘ಮಸಣದ ಹೂವು’ ಚಿತ್ರ ಭಾಜನವಾಗಿದೆ. 2021ರಲ್ಲಿ ಬಂದಂತಹ ಸಿನಿಮಾಗಳಲ್ಲಿ ‘ದೊಡ್ಡ ಹಟ್ಟಿಯ ಬೋರೇಗೌಡ’ ಚಿತ್ರಕ್ಕೆ ಪ್ರಥಮ ಸ್ಥಾನ, ‘ದಂಡಿ’ ಗೆ ಎರಡನೇ ಸ್ಥಾನ ಹಾಗು ‘ದೇವದ ಕಾಡ್’ ಚಿತ್ರಕ್ಕೆ ಮೂರನೇ ಸ್ಥಾನದ ಪ್ರಶಸ್ತಿಗಳನ್ನು ನೀಡಲಾಗಿದೆ. ‘ಕೇಕ್’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನ ನೀಡಿ ಪುರಸ್ಕಾರಿಸಲಾಗಿದೆ. ಇನ್ನು ಮನರಂಜನೆಯನ್ನ ದೃಷ್ಟಿಕೋನವನ್ನಾಗಿ ಇಟ್ಟುಕೊಂಡು ಕೂಡ ಪ್ರಶಸ್ತಿಗಳನ್ನ ನೀಡಲಾಗಿದೆ. 2020ರ ಸಾಲಿನ ಅತ್ಯುತ್ತಮ ಮನರಂಜನ ಸಿನಿಮಾ ವಿಭಾಗದಲ್ಲಿ ‘ದಿಯಾ’ಗೆ ಮೊದಲ ಪ್ರಶಸ್ತಿ, ‘ಶಿವಾಜಿ ಸುರತ್ಕಲ್’ಗೆ ಎರಡನೇ ಪ್ರಶಸ್ತಿ ಹಾಗು ‘ಲವ್ ಮೊಕ್ಟೇಲ್’ಗೆ ಮೂರನೇ ಪ್ರಶಸ್ತಿ ನೀಡಲಾಗಿದೆ. 2021ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ‘ಯುವರತ್ನ’, ‘ರಾಬರ್ಟ್’ ಹಾಗು ‘ಕೋಟಿಗೊಬ್ಬ 3’ ಸಿನಿಮಾಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗು ತೃತೀಯ ಪ್ರಶಸ್ತಿಗಳನ್ನ ನೀಡಲಾಗಿದೆ. ‘ಪೊಗರು’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ.

ಬೆಂಗಳೂರು ಸಿನಿಮೋತ್ಸವ. ಪ್ರಶಸ್ತಿ ಪಡೆದ ಎಲ್ಲ ಕನ್ನಡ ಸಿನಿಮಾಗಳು Read More »

Scroll to Top