ಏ.9 ರಿಂದ11ರವರೆಗೆ ರೈತರಿಗೆ ವಿದ್ಯುತ್ ಸಂಪರ್ಕ
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ವಡಗೇರಾ ತಾಲೂಕಿನ ಕೃಷ್ಣಾ ನದಿ ಪಾತ್ರದ ಬೆಂಡೆ ಬೆಂಬಳಿ, ಗೋನಾಲ್, ಅಗ್ನಿಹಾಳ್, ಶಿವಪುರ, ತುಮಕೂರು, ಇಟಗಿ, ಕೊಂಕಲ್, ಚನ್ನೂರ, ಇನ್ನಿತರ ಗ್ರಾಮದ ರೈತರ ನೀರೆತ್ತುವ ವಿದ್ಯುತ್ ಯಂತ್ರಗಳಿಗೆ ವಿದ್ಯುತ್ ಸರಬರಾಜು ಕಡಿತಗೊಳಿಸದಂತೆ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಮಾಡಿದ ಮನವಿಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಏ.೯ರಿಂದ೧೧ರವರೆಗೆ ವಿದ್ಯುತ್ ಸಂಪರ್ಕ ಒದಗಿಸಲು ಆದೇಶ ಹೊರಡಿಸಲಾಗಿದೆ ಎಂದು ಶಾಸಕ ಚೆನ್ನಾರೆಡ್ಡಿಗೌಡ ಪಾಟೀಲ ತುನ್ನೂರ ತಿಳಿಸಿದ್ದಾರೆ.
ನನ್ನ ಮತಕ್ಷೇತ್ರದ ರೈತರು ಸಂಕಷ್ಟ ಅನುಭವಿಸಬಾರದು ಎಂದು ಮನಗಂಡು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ ರೈತರ ಸ್ಥಿತಿಗತಿ ಕುರಿತು ಅವರಿಗೆ ಮನವರಿಕೆ ಮಾದ್ದೇ, ಈಗಾಗಲೇ ರೈತರು ಸಾಕಷ್ಟು ಹಣ ಖರ್ಚು ಮಾಡಿ ಭತ್ತ ಬೆಳೆದಿದ್ದು ಇನ್ನೇನು ಕೈಗೆ ಬರುವ ಹಂತದಲ್ಲಿದೆ ಆ ಕಾರಣ ಏಪ್ರಿಲ್ ೧೫ ರವರೆಗೆ ಕೃಷ್ಣಾ ನದಿ ಪಾತ್ರದ ರೈತರಿಗೆ ವಿದ್ಯುತ್ ಒದಗಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಸಿಎಂ ಡಿಸಿಎಂ ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಆದೇಶ ಹೊರಡಿಸಿದ್ದು ಸಂತಸ ತಂದಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ನಮ್ಮ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದ್ದು, ರೈತರಿಗಾಗಿ ನಾವು ಸದಾ ಸ್ಪಂದಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.