ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ಹರ್ಷ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ಇಂದು ತೆರೆಕಂಡಿದೆ.
ಪುರಾಣಗಳಲ್ಲಿ ಬರುವ ಸಮುದ್ರಮಥನದಲ್ಲಿ ಸೃಷ್ಟಿಯಾದ ಧನ್ವಂತರಿಯ ವೈಶಿಷ್ಟತೆ ಹಿನ್ನೆಲೆಯನ್ನು ಇಟ್ಟುಕೊಂಡು ಮಿತೋಲಜಿ ಮತ್ತು ರಿಯಾಲಿಟಿ ಯನ್ನು ತಮ್ಮ ಫ್ಯಾಂಟಸಿ ಲೋಕದಲ್ಲಿ ಬಹಳ ಅದ್ಭುತವಾಗಿ ರಚಿಸಿದ್ದಾರೆ ಡೈರೆಕ್ಟರ್ ಹರ್ಷ.
ಅರವಳ್ಳಿ ಎನ್ನುವ ಊರಲ್ಲಿ ಗೂಂಡಾಗಿರಿ ಮೂಲಕ ಹಫ್ತಾ ವಸೂಲಿ ಮಾಡುತ್ತಾ ಜನರ ಮೇಲೆ ಹಿಡಿತ ಸಾಧಿಸಿರುವ ಅಲಮೇಲಮ್ಮನ ತಮ್ಮನಾದ ಅಂಜಿ ಮದುವೆ ವಿಚಾರವಾಗಿ ಊರಿಗೆ ಬರುತ್ತಾನೆ.
ಮಾನವೀಯತೆ ಅಹಿಂಸೆ ದಯೆ ಮತ್ತು ಕರುಣ ಶೀಲತೆಯನ್ನು ನಂಬಿರುವ ಮುಗ್ದ ವ್ಯಕ್ತಿ , ನಂತರ ಒದಗುವ ತನ್ನ ಅಕ್ಕ ಮತ್ತು ಪ್ರೀತಿಸಿದವಳನ್ನು ಪಾರು ಮಾಡಲಾಗದ ಸ್ಥಿತಿಯಿಂದ ಬಿಡಿಸಲಾಗದೆ ಅಸಹಾಯಕನಾಗಿ ಸೋತು ಹೋಗುವ ಅಂಜಿಯ ಪಾತ್ರ ಮತ್ತು ” ಜೀವ ಭಗವಂತನ ಕೃಪೆ ಅದನ್ನು ಉಳಿಸಿಕೊಳ್ಳುವುದು ಮನುಷ್ಯ ಧರ್ಮ” ಎಂದು ನಂಬಿಕೊಂಡು ವಿವೇಕವಿಲ್ಲದೆ ರಾಕ್ಷಸರಂತೆ ಬದುಕುತ್ತಿದ್ದ ಧನ್ವಂತರಿ ಜನಾಂಗದವರನ್ನು ಮನುಷ್ಯರನ್ನಾಗಿ ಬದಲಾಯಿಸಿ, ಧನ್ವಂತರಿಯ ವೈಶಿಷ್ಟ್ಯವನ್ನು ವೈದ್ಯ ರಂಗದಲ್ಲಿ ಪಸರಿಸಬೇಕು ಎಂದು ಧ್ಯೇಯ ತೊಟ್ಟು ಅವರಲ್ಲಿ ಧೈರ್ಯ ತುಂಬುವ ಸಾಹಸಿ ಭಜರಂಗಿ ಈ ಎರಡು ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ಸುಂದರವಾಗಿ ನಿಭಾಯಿಸಿದ್ದಾರೆ ಹ್ಯಾಟ್ರಿಕ್ ಹೀರೋ ಶಿವಣ್ಣ.
ವಿವೇಕದ ಮೊಳಕೆ ಒಡೆದ ಬೀಜ ಬೆಳೆದು ಆಲೋಚನೆಗಳಲ್ಲಿ ತನ್ನನ್ನು ಭ್ರಷ್ಟಗೊಳಿಸಿಕೊಂಡು ಸುಂದರ ಬದುಕನ್ನು ಹೇಗೆ ದುರಂತಕ್ಕೆ ಒಳಪಡಿಸಿಕೊಳ್ಳುತ್ತಾರೆ ಮತ್ತು ಸೇವೆ ಅಪೇಕ್ಷೆಯಾಗಿ ನಂತರ ತಣಿವಿಲ್ಲದ ಆಸೆಯಾಗಿ ಹೇಗೆ ಬದಲಾಗುತ್ತದೆ ಎಂಬುದನ್ನು ಡೈರೆಕ್ಟರ್ ಹರ್ಷ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ.
ಧನ್ವಂತರಿ ಜನಾಂಗದವರನ್ನು ಒಳ್ಳೆ ಮಾರ್ಗದಲ್ಲಿ ಬದಲಾಯಿಸುವ ಮತ್ತು ಆಯುರ್ವೇದದ ವಿಜ್ಞಾನವನ್ನು ತಿಳಿಸುವ ಭಜರಂಗಿ ಮತ್ತು ಅದೇ ಜನಾಂಗದವರನ್ನು ನಶ್ಯಪ್ರಪಂಚದ ಬೇಡಿಕೆ ಪೂರೈಸಲು ದೌರ್ಜನ್ಯದಿಂದ ಬಳಸಿಕೊಳ್ಳುತ್ತಿರುವ ಜಾಗ್ರವ ಮತ್ತು ಅದೇ ದಾರಿಯನ್ನು ಪಾಲಿಸಿ ಇನ್ನಷ್ಟು ಕ್ರೂರಿಯಾದ ಆತನ ಮಗ ಆರಕನ ನಡುವಿನ ಪೌರಾಣಿಕ ಶೈಲಿಯ ಸಂಭಾಷಣೆಯ ಮುಖಾಮುಖಿ ಮತ್ತು ಆಕ್ಷನ್ ನೋಡುಗರಿಗೆ ಹೆಚ್ಚು ಮನರಂಜನೆ ನೀಡುತ್ತದೆ.
ಚಿತ್ರದಲ್ಲೇ ಅಂಜಿ ಮತ್ತು ಚಿನ್ಮಿನಿಕಿ ರೊಮ್ಯಾನ್ಸ್, ಅಲಮೇಲಮ್ಮನ ಪಾತ್ರವಹಿಸಿದ ಶೃತಿ, ಅಲಮೇಲಮ್ಮನ ಅಟ್ಟಹಾಸ ಖಂಡಿಸುವ ಚಿಮ್ಮಿನಿಕಿ ಪಾತ್ರದಲ್ಲಿ ಭಾವನಾ ಮೆನನ್, ಜೊತೆಯಲ್ಲಿ ಕುರಿ ಪ್ರತಾಪ್ , ಶಿವರಾಜ್ ಕೆ ಆರ್ ಪೇಟೆ , ಶಾಲಿನಿ ಅವರ ಕಾಮಿಡಿ ಚಿತ್ರದಲ್ಲಿ ಮನರಂಜನೆ ನೀಡುತ್ತದೆ.
2013ರಲ್ಲಿ ತೆರೆಕಂಡ ಭಜರಂಗಿಯಲ್ಲಿ ದುರಾಸೆಯ ಕ್ರೂರತೆಗೆ ಒಳಗಾದ ಭಯಾನಕ ಪಾತ್ರದಲ್ಲಿ ನಟಿಸಿದ್ದ ಸೌರವ್ ಲೋಕೇಶ್ ಈ ಚಿತ್ರದಲ್ಲಿ ಅದಕ್ಕೆ ವಿರುದ್ಧವಾದ ವಿಭಿನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಖಳನಾಯಕನ ಉಗ್ರ ರೂಪದ ಪಾತ್ರದಲ್ಲಿ ರಾಕ್ಷಸರಾಗಿ ಚೆಲುವರಾಜ್ ಮತ್ತು ಪ್ರಸನ್ನ ಭಾಗಿನ್ ಅಬ್ಬರಿಸಿದ್ದಾರೆ.
ಚಿತ್ರದಲ್ಲಿ ಪಾತ್ರಗಳ ಹಾಗೂ ಕಥೆಯ ಹಿನ್ನಲೆ ಮತ್ತು ಅದರ ಕಾಲಘಟ್ಟದ ಪ್ರಸ್ತುತಿಗೆ ಸ್ಪಷ್ಟನೆಯನ್ನು ನೀಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು, ಇದೆಲ್ಲದರ ಹೊರತಾಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ತಾಂತ್ರಿಕ ವಿಚಾರಕ್ಕೆ ಬಂದರೆ ಬಹಳ ಅಂತರದ ನಂತರ ಹರ್ಷ ಅವರ ಅದ್ಭುತವಾದ ಸಾಹಸಮಯ ಪ್ರಯತ್ನ, ಸ್ವಾಮಿ ಜೆ. ಅವರ ಸಿನೆಮಾಟೋಗ್ರಫಿ, ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಮತ್ತು ಅಚ್ಚರಿ ಮೂಡಿಸುವ ಅದ್ಭುತವಾದ ವಿಶುವಲ್ ಎಫೆಕ್ಟ್ಸ್ ಹರ್ಷ ಅವರ ಫ್ಯಾಂಟಸಿ ಲೋಕಕ್ಕೆ ಕರೆದೊಯ್ಯುತ್ತದೆ.
ಒಟ್ಟಾರೆ ಅಂತೂ ಬಹಳ ಸಮಯದ ನಂತರ ಕನ್ನಡದಲ್ಲಿ ಒಂದು ಫ್ಯಾಂಟಸಿ ಸಿನಿಮಾ ಪುರಾಣದ ಹಿನ್ನೆಲೆ ಜೊತೆ ಒಂದು ಸುಂದರ ಸಂದೇಶವನ್ನು ತಲುಪಿಸುತ್ತದೆ. ಶಿವರಾಜಕುಮಾರ್ ಅವರ ವೃತ್ತಿಯಲ್ಲಿ ಬಹಳ ವಿಭಿನ್ನವಾದ ಸಿನಿಮಾ ಎಂದರೂ ತಪ್ಪಾಗಲಿಕ್ಕಿಲ್ಲ.