ಜೇವರ್ಗಿ ಬಾಲಕಿ ಆತ್ಮಹತ್ಯೆ, ಬಸವೇಶ್ವರ ಮೂರ್ತಿಗೆ ಅವಮಾನ ಖಂಡಿಸಿ ಪ್ರತಿಭಟನೆ.
ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಜಿಲ್ಲಾ ಯುವ ಘಟಕದಿಂದ ಮಾನವ ಸರಪಳಿ ನಿರ್ಮಿಸಿ ಆಕ್ರೋಶ.
ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಜೇವರ್ಗಿಯಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮತ್ತು ಬಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿ ಬಸವೇಶ್ವರ ಮೂರ್ತಿಗೆ ಅವಮಾನ ಮಾಡಿದ ಘಟನೆಗಳನ್ನು ಖಂಡಿಸಿ ಕೂಡಲೇ ಕಾನೂನು ಕ್ರಮ ಜರುಗಿಸುವಂತೆಯೇ ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ಜಿಲ್ಲಾ ಯುವ ಘಟಕ, ತಾಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಇಲ್ಲಿನ ಸುಭಾಷಚಂದ್ರ ಬೋಸ್ ಸರ್ಕಲ್ ಬಳಿ ಗುರುವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ವಿವಿಧ ಘಟಕಗಳ ಜಿಲ್ಲಾಧ್ಯಕ್ಷರುಗಳಾದ ಚನ್ನಪ್ಪಗೌಡ ಮೊಸಂಬಿ, ಸುರೇಶ ಜಾಕಾ, ರಾಜಶೇಖರ ಪಾಟೀಲ್ ಚಾಮನಳ್ಳಿ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಸಮಾಜದ ಜನರು ಈ ಎರಡು ಘಟನೆಗಳಲ್ಲಿಭಾಗಿಯಾದ ಆರೋಪಿಗಳನ್ನು ಬಂಧಿಸಿ,ಕಠಿಣ ಶಿಕ್ಷೆಗೆ ಗುರಿ ಮಾಡಬೇಕೆಂದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಡಾ.ಸಿದ್ಧರಾಜ್ ರಡ್ಡಿ, ಜೇವರ್ಗಿಯಲ್ಲಿ ಅಮಾಯಕ ಅಪ್ರಾಪ್ತ್ ಬಾಲಕಿಯನ್ನು ಪ್ರೀತಿಸುವಂತೆಯೆ ಪೀಡಿಸಿ ತೊಂದರೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಕಾರಣನಾದ ಆರೋಪಿಯನ್ನು ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವ ಬದಲುಗೆ ಬಾಲ ಮಂದಿರಲ್ಲಿ ಇಟ್ಟಿದ್ದು ಯಾಕೆ?. ಆ ಕ್ರೂರಿಯನ್ನು ಅಪ್ರಾಪ್ತ ಬಾಲಕ ಎಂದು ಬಿಂಬಿಸಿ ಉಳಿಸಿಕೊಳ್ಳುವ ಯತ್ನ ನಡೆದಿದೆ. ಕಾರಣ, ಆತ ಅಪ್ರಾಪ್ತನಲ್ಲ, ಹರೆದ ಯುವಕನಾಗಿದ್ದಾನೆ,ಕಾರಣ ಕೂಡಲೇ ಆತನನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಬೇಕೆಂದು ಆಗ್ರಹಿಸಿದರು.
ದಾಡಗಿ ಕ್ರಾಸ್ ಬಳಿ ವಿಶ್ವಗುರು ಬಸವಣ್ಣನವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೆಡಿಗಳನ್ನು ಕೂಡಲೇ ಬಂಧಿಸಬೇಕು, ಪುತ್ಥಳಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು. ಯುವ ಘಟಕದ ಜಿಲ್ಲಾಧ್ಯಕ್ಷ ಸುರೇಶ ಜಾಕಾ ಮಾತನಾಡಿದರು.
ಸುಮಾರು ಅರ್ಧ ಗಂಟೆಗಳ ಕಾಲ ಪ್ರತಿಭಟನೆ ನಡೆಸಿ, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ಪದಾಧಿಕಾರಿಗಳು ಹಾಗೂ ಹಿರಿಯರಾದ ಮಹೇಶ ಆನೆಗುಂದಿ, ಪಂಪಣ್ಣಗೌಡ ಪಾಟೀಲ್ ತುನ್ನೂರು, ವಿನಾಯಕ ರಾಕಾ, ಶರಣಬಸವ ಇಡ್ಲೂರ್, ಅನ್ನಪೂರ್ಣಮ್ಮ, ಸಿದ್ದು ಕಾಮರಡ್ಡಿ, ಶ್ರೀಧರ ರಾಯಚೂರು, ಸುಭಾಷ ದೇವದುರ್ಗ, ಇಂಧೂದರ ಶೇಖರ, ರಾಜಕುಮಾರ ಬೆಲಮಂಚಿ, ವೀರಭದ್ರಯ್ಯ ಜಾಕಾಮಠ, ವಿಶ್ವನಾಥ ಕಾಜಗಾರ, ಸುರೇಶ ಮಹಾಜನಶೆಟ್ಟಿ, ಚನ್ನಪ್ಪ ಠಾಣಗುಂದಿ, ಅರವಿಂದ ಕೆಂಭಾವಿ, ಮಂಜು ಹೊಟ್ಟಿ, ನವಿನ್ ಕುಮಾರ, ಸತೀಶ ಫಲ್ ಪುಲ್ ಸೇರಿದಂತೆಯೇ ಇತರರಿದ್ದರು.
