ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ
ಕರ್ನಾಟಕ ಭಾಗ್ಯ ವಾರ್ತೆ
ಸುರಪೂರ : ಬಿಜೆಪಿ ಎಂದರೆ ಸುಳ್ಳಿನ ಫ್ಯಾಕ್ಟರಿ ಇದ್ದಂಗೆ ಒಬ್ಬರಾದರು ಸತ್ಯವನ್ನು ಹೇಳುವುದಿಲ್ಲ,೧೦ ವರ್ಷದಲ್ಲಿ ಒಂದೇ ಒಂದು ಅಭಿವೃಧ್ಧಿ ಕಾರ್ಯ ಮಾಡಿದ್ದರೆ ತೋರಿಸಲಿ, ಆದರೆ ನಾವು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಟ್ಟ ಮಾತಿನಂತೆ ೫ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದೇವತ್ಕಲ್ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ-೨ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಅಭಿವೃಧ್ಧಿ ಗುರುತಿಸಿ ನಮ್ಮ ಕಾಂಗ್ರೆಸ್ ಪಕ್ಷದ ರಾಯಚೂರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರ ಸುಪುತ್ರನಿಗೆ ತಾವೆಲ್ಲರು ಮತ ನೀಡಿ ೫೦ ಸಾವಿರ ಮತಗಳ ಅಂತರದಿAದ ಗೆಲ್ಲಿಸಿ ಕೊಡುವಂತೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ವಿಧಾನಸಭಾ ಉಪ ಚುನಾವಣೆ ಅಭ್ಯರ್ಥಿ ರಾಜುಗೌಡ ವಿರುದ್ಧ ಹರಿಹಾಯ್ದು,ನರೇಂದ್ರ ಮೋದಿ,ಅಮಿತ್ ಶಾ ಅವರನ್ನ ನೋಡಿ ರಾಜುಗೌಡ ಕೂಡ ಸುಳ್ಳು ಹೇಳುವುದನ್ನು ಕಲಿತಿದ್ದಾನೆ,ಅವನಿಗೆ ತಕ್ಕ ಪಾಠ ಕಲಿಸಲು ಈ ಚುನಾವಣೆಯಲ್ಲಿ ಸೋಲಿಸುವಂತೆ ಕರೆ ನೀಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದರೆ ಸುಳ್ಳಿನ ಸರದಾರ ಇದ್ದಂತೆ,ಕಳೆದ ೧೦ ವರ್ಷಗಳಲ್ಲಿ ಏನೊಂದು ಅಭಿವೃಧ್ಧಿ ಕಾರ್ಯ ಮಾಡದಿದ್ದರು ಸುಳ್ಳನ್ನು ಹೇಳುವುದರಲ್ಲಿ ನಿಸ್ಸಿಮರಾಗಿದ್ದಾರೆ ಎಂದು ಕೇಂದ್ರ ಸರಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದರು.
ನಾವು ಎಂದಿಗೂ ಸುಳ್ಳು ಹೇಳುವುದಿಲ್ಲ ಏನು ಹೇಳುತ್ತೇವೆ ಅದನ್ನು ಮಾಡಿ ತೋರಿಸುತ್ತೇವೆ,ನರೇಂದ್ರ ಮೋದಿ ಎಲ್ಲರ ಖಾತೆಗೆ ೧೫ ಲಕ್ಷ ಹಾಕುತ್ತೇನೆ ಎಂದು ಸುಳ್ಳು ಹೇಳಿದರು.ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡುವುದಾಗಿ ಸುಳ್ಳು ಹೇಳಿದರು,ರೈತರ ಲಾಭ ದ್ವಿಗುಣಗೊಳಿಸುವುದಾಗಿ ಸುಳ್ಳು ಹೇಳಿದರು ಇಂತಹ ಎಲ್ಲಾ ಸುಳ್ಳು ಹೇಳುವುದರ ಮೂಲಕ ಜನರಿಗೆ ಮೋಸಗೊಳಿಸಲು ಹೊರಟಿದ್ದಾರೆ,ಆದರೆ ಜನರು ದಡ್ಡರಲ್ಲ ಈಬಾರಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಮಾತನಾಡಿ,ನಮ್ಮ ಸರಕಾರ ೫ ಗ್ಯಾರಂಟಿಗಳನ್ನು ಕೊಟ್ಟಿದೆ,ಅದರಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಲು ಅದಕ್ಕೆ ಯಾದಗಿರಿ ಜಿಲ್ಲೆಯ ಜನರು ಬೆಂಗಳೂರಲ್ಲಿ ಪಟ್ಟ ಭವಣೆಯನ್ನು ನಾನು ಕಣ್ಣಾರೆ ಕಂಡಿದ್ದು ಕಾರಣವಾಗಿದೆ ಎಂದರು.ಅಲ್ಲದೆ ತಾವೆಲ್ಲರು ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು,ರಾಜಾ ವೆಂಕಟಪ್ಪ ನಾಯಕ ಕೇವಲ ಈ ಕ್ಷೇತ್ರಕ್ಕೆ ಮಾತ್ರವಲ್ಲ,ಯಾದಗಿರಿ ಜಿಲ್ಲೆಯ ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿದ್ದರು,ಅವರನ್ನು ನಾವು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಅನಿಸಿರಲಿಲ್ಲ,ಹುಟ್ಟು ಉಚಿತ,ಸಾವು ಖಚಿತ ಆದರೆ ಅವರು ೫ ವರ್ಷಗಳ ಕಾಲ ನಿಗಮದ ಅಧ್ಯಕ್ಷರಾಗಿ ನಾಡಿನ ಸೇವೆ ಮಾಡಬೇಕಿತ್ತು ಎಂದರು.ಅಲ್ಲದೆ ಈಗ ಅವರ ಮಗ ತುಂಬಾ ವಿದ್ಯಾವಂತ ಇದ್ದಾನೆ,ರಾಯಚೂರ ಲೋಕಸಭಾ ಅಭ್ಯರ್ಥಿಯೂ ಒಬ್ಬ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿಯಾಗಿದ್ದರು,ಇಬ್ಬರು ಗೆದ್ದು ಬಂದು ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು.
ಶಾಸಕ ದಿ.ರಾಜಾ ವೆಂಕಟಪ್ಪ ನಾಯಕ ಅವರ ಪತ್ನಿ ರಾಣಿ ಲತಾ ರಾಜಾ ವೆಂಕಟಪ್ಪ ನಾಯಕ ಅವರು ಮಾತನಾಡಿ,ತಾವೆಲ್ಲರು ಹಿಂದೆ ನಿಮ್ಮ ಧಣಿ ರಾಜಾ ವೆಂಕಟಪ್ಪ ನಾಯಕ ಅವರಿಗೆ ಕೊಟ್ಟಂತ ಬೆಂಬಲವನ್ನು ಇಂದು ನನ್ನ ಮಗನಿಗೆ ಕೊಡಿ,ಅವನು ಈಗ ನಿಮ್ಮ ಮನೆಯ ಮಗನಾಗಿದ್ದಾನೆ,ಅವನನ್ನು ಗೆಲ್ಲಿಸಿ ಎಂದು ನಿಮ್ಮೆಲ್ಲರಲ್ಲಿ ಸೆರಗೊಡ್ಡಿ ವಿನಂತಿಸುವುದಾಗಿ ಭಾವುಕರಾಗಿ ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ,ಡಾ:ಯತೀಂದ್ರ ಸಿದ್ದರಾಮಯ್ಯ,ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ,ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವಿರ್ ಸೇಠ್,ವಿಜಯಪುರ ವಿಪ ಸದಸ್ಯ ಪ್ರಕಾಶ ರಾಥೋಡ,ರಾಜಾ ಕೃಷ್ಣಪ್ಪ ನಾಯಕ,ಶಂಕ್ರಣ್ಣ ವಣಿಕ್ಯಾಳ,ಚೇತನ ಗೋನಾಯಕ,ವಿಠ್ಠಲ್ ಯಾದವ್,ಶಾಂತಗೌಡ ಚನ್ನಪಟ್ಟಣ,ರಾಜಾ ಸಂತೋಷ ನಾಯಕ,ರಾಜಾ ಕುಮಾರ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾವಿರಾರು ಜನರು ಭಾಗವಹಿಸಿದ್ದರು.ರಾಜಶೇಖರಗೌಡ ವಜ್ಜಲ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಎಸ್.ಎಮ್.ಭಕ್ತ ಕುಂಬಾರ,ರಾಮುನಾಯಕ ಅರಳಹಳ್ಳಿ,ಮಾನಪ್ಪ ಸೂಗುರ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮೀ ಯೋಜನೆ ಅಡಿ ಪ್ರತಿ ಮನೆಯ ಗೃಹಿಣಿಗೆ ವರ್ಷಕ್ಕೆ ೧ ಲಕ್ಷ,ರೈತರ ೧ ಲಕ್ಷದ ವರೆಗಿನ ಸಾಲ ಮನ್ನಾ,ಉದ್ಯೋಗ ಖಾತ್ರಿ ಕೂಲಿಕಾರರ ದಿನಗೂಲಿ ೪೦೦ ರೂಪಾಯಿಗೆ ಹೆಚ್ಚಳ,ಯುವ ನ್ಯಾಯ ಸೇರಿ ೨೫ ಭಾಗ್ಯ ನೀಡುತ್ತೇವೆ- ಡಾ.ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು