ಚಂದನವನದ ಚಿರಯುವಕ ಶಿವಣ್ಣನವರ ಜನ್ಮದಿನಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ತಮ್ಮ ಅರವತ್ತನೇ ವಸಂತಕ್ಕೆ ಕಾಲಿಡುತ್ತಿರುವ ಶಿವಣ್ಣನ ಕೈಯಲ್ಲಿ ಆರಕ್ಕಿಂತಲೂ ಹೆಚ್ಚು ಸಿನಿಮಾಗಳಿವೆ. ಈಗಾಗಲೇ 125 ಸಿನಿಮಾಗಳನ್ನು ಮಾಡಿ ಮುಗಿಸಿರುವ ಇವರು ಬಿಡುವಿಲ್ಲದೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅರ್ಜುನ್ ಜನ್ಯ ಅವರ ಜೊತೆಗೆ ಇವರು ಮಾಡಲಿರುವ ಹೊಸ ಸಿನಿಮಾದ ಬಗೆಗೆ ಹೊಸ ಸುದ್ದಿಯಿಂದು ಹೊರಬಿದ್ದಿದೆ.

ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರು ಮೊದಲನೇ ಬಾರಿಗೆ ನಿರ್ದೇಶನಕ್ಕೆ ಕೈ ಹಾಕುತ್ತಿರುವ ಸಿನಿಮಾದಲ್ಲಿ ಶಿವಣ್ಣ ನಾಯಕರಾಗಿ ನಟಿಸಲಿದ್ದಾರೆ. ಸ್ವತಃ ಅರ್ಜುನ್ ಜನ್ಯ ಬರೆದು ತೆರೆಮೇಲೆ ತರುತ್ತಿರೋ ಈ ಸಿನಿಮಾವನ್ನು ‘ಸೂರಜ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಎಂ ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಶೀರ್ಷಿಕೆಯನ್ನು ಇನ್ನೂ ಬಿಟ್ಟುಕೊಡದ ಚಿತ್ರತಂಡ, ಇದೀಗ ಶಿವಣ್ಣನವರ ಬರ್ತ್ಡೇ ಗೆ ದೊಡ್ಡ ಯೋಜನೆಯನ್ನೇ ಹಾಕಿಕೊಂಡಿದೆ. ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳಿಂದ, ನಾಲ್ಕು ಸೂಪರ್ ಸ್ಟಾರ್ ಗಳಿಂದ ಸಿನಿಮಾದ ಟೈಟಲ್ ಅನ್ನು ಡಿಜಿಟಲ್ ಮಾಧ್ಯಮದ ಮೂಲಕ ಬಿಡುಗಡೆಗೊಳಿಸಲು ಚಿತ್ರತಂಡ ಸಜ್ಜಾಗಿದೆ. ಕನ್ನಡದಲ್ಲಿ ಶಿವರಾಜಕುಮಾರ್ ಹಾಗು ಗೀತಾ ದಂಪತಿಯಾದರೆ, ತೆಲುಗಿನ ಅಕ್ಕಿನೇನಿ ನಾಗಾರ್ಜುನ ಅವರು, ತಮಿಳಿನ ಶಿವಕಾರ್ತಿಕೇಯನ್ ಅವರು ಹಾಗು ಮಲಯಾಳಂ ನ ಪೃಥ್ವಿರಾಜ್ ಸುಕುಮಾರನ್ ಅವರು ಸೇರಿ ಜುಲೈ 12ರಂದು ಶಿವಣ್ಣನ ಹುಟ್ಟಿದ ದಿನ ಬೆಳಿಗ್ಗೆ 8:07ಕ್ಕೆ ಸರಿಯಾಗಿ ಚಿತ್ರದ ಹೆಸರನ್ನು ಲೋಕಾರ್ಪಣೆ ಮಾಡಲಿದ್ದಾರೆ.
