ಸದ್ಯ ಭಾರತದಾದ್ಯಂತ ಮನೆಮಾತಾಗಿರುವ ಚಿತ್ರ ‘777 ಚಾರ್ಲಿ’. ಎಳೆಯರಿಂದ ಹಿಡಿದು ಇಳಿವಯಸ್ಕರವರೆಗೆ ಪ್ರತಿಯೊಬ್ಬರೂ ಮನಸಾರೆ ಚಿತ್ರವನ್ನ ಹಾಡಿಹೊಗಳುತ್ತಿದ್ದಾರೆ. ಧರ್ಮ-ಚಾರ್ಲಿಯ ಜೀವನದ ಕಥೆಯ ಮೂಲಕ ಮನುಷ್ಯ ಮತ್ತು ನಾಯಿಯ ನಡುವಿನ ಭಾಂದವ್ಯವನ್ನು ಸಾರುವ ಈ ಸಿನಿಮಾ ಎಲ್ಲರ ಮನಸ್ಸಿನ ಕದ ತಟ್ಟಿದೆ.ಇಂತಹ ಸಿನಿಮಾ ದಿನದಿಂದ ದಿನಕ್ಕೆ ಯಶಸ್ಸಿನ ಹೊಸ ಹೊಸ ಮೆಟ್ಟಿಲುಗಳನ್ನು ಏರುತ್ತಿದೆ.
ಪ್ರಪಂಚದ ಪ್ರಖ್ಯಾತ ಸಿನಿಮಾ ವಿಮರ್ಶಕ ಜಾಲತಾಣ ‘ಐಎಂಡಿಬಿ(IMDB)’.ಜಗತ್ತಿನಾದ್ಯಂತ ವಿವಿಧ ಭಾಷೆಗಳ ಚಿತ್ರಗಳನ್ನು ಜನರದ್ದೇ ಅಭಿಪ್ರಾಯಗಳ ಮೂಲಕ ರೇಟ್ ಮಾಡುತ್ತದೆ. ಇದೀಗ ‘IMDB’ ರೇಟಿಂಗ್ ನಲ್ಲಿ 116ನೇ ಸ್ಥಾನ ಪಡೆದಿದೆ ‘777 ಚಾರ್ಲಿ’. ಸುಮಾರು ಒಂಬತ್ತು ಸಾವಿರ ಜನರ ವೋಟ್ ಗಳ ಆಧಾರದಲ್ಲಿ 10ರಲ್ಲಿ 9.2 ರೇಟಿಂಗ್ ಅನ್ನು ಪಡೆದುಕೊಂಡು 116ನೇ ಸ್ಥಾನವನ್ನ ಅಲಂಕರಿಸಿದೆ. ಈ ಪ್ರಕ್ರಿಯೆಯಲ್ಲಿ ಭಾರತ ಚಿತ್ರರಂಗದ ದಿಗ್ಗಜ ಚಿತ್ರಗಳಾದ ‘ಕೆಜಿಎಫ್ ಚಾಪ್ಟರ್ 1, ಬಾಹುಬಲಿ 1, RRR ಮುಂತಾದವುಗಳನ್ನ ಹಿಂದಿಕ್ಕಿದೆ. RRR ಚಿತ್ರ ಇದೇ ಸಾಲಿನಲ್ಲಿ 169ನೇ ಸ್ಥಾನ ಪಡೆದಿದೆ. ಇದಷ್ಟೇ ಅಲ್ಲದೇ ಪ್ರಪಂಚದ ಅತೀ ಜನಪ್ರಿಯ ಸಿನಿಮಾಗಳ ಸಾಲಿನಲ್ಲಿ 66ನೇ ಸ್ಥಾನಕ್ಕೇರಿದೆ ‘777 ಚಾರ್ಲಿ’.
ಚಿತ್ರವನ್ನ ಕಂಡಂತಹ ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸಿನಲ್ಲೇ ಕೂರುವಂತದ್ದು ‘777 ಚಾರ್ಲಿ’, ‘ಬುಕ್ ಮೈ ಶೋ’ ಆಪ್ ನಲ್ಲೂ ಸಹ ಶೇಕಡ 97ರಷ್ಟು ಅಂಕ ಪಡೆದಿದೆ. ಕಿರಣ್ ರಾಜ್ ಕೆ ಅವರ ನಿರ್ದೇಶನದಲ್ಲಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಸಂಗೀತ ಶೃಂಗೇರಿ ಮುಂತಾದವರು ನಟಿಸಿದ್ದು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಜೂನ್ 10ರಂದು ಬಿಡುಗಡೆಯಾದ ಈ ಸಿನಿಮಾ ಸದ್ಯ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.