ಸದ್ಯ ಹಲವೆಡೆ ಚಿತ್ರಮಂದಿರಗಳನ್ನೂ, ಚಿತ್ರ ನೋಡಿದ ಪ್ರೇಕ್ಷಕರ ಮನಸ್ಸನ್ನು ತುಂಬುತ್ತಿರುವ ಸಿನಿಮಾ ‘777 ಚಾರ್ಲಿ’. ಮಾನವ ಹಾಗು ಶ್ವಾನದ ನಡುವಿನ ಕಥೆ ಹೇಳುವ ಈ ಸಿನಿಮಾವನ್ನು ಕಿರಣ್ ರಾಜ್ ಕೆ ಅವರು ರಚಿಸಿ ನಿರ್ದೇಶಸಿದ್ದು, ರಕ್ಷಿತ್ ಶೆಟ್ಟಿ ಅವರು ನಿರ್ಮಿಸಿ ನಟಿಸಿದ್ದಾರೆ. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಈ ಸಿನಿಮಾಗೆ ಹಾಗು ಸಿನಿತಂಡದ ಸದಸ್ಯರಿಗೆ ಬೇರೆ ಬೇರೆ ಭಾಷೆಗಳ ಚಿತ್ರರಂಗದಿಂದ ಬೇಡಿಕೆಗಳು ಬರುತ್ತಿವೆ.
‘777 ಚಾರ್ಲಿ’ ಸಿನಿಮಾ ಪಂಚ ಭಾಷೆಗಳಲ್ಲೂ ದೇಶ ಮಾತ್ರವಲ್ಲದೆ ಪ್ರಪಂಚದ ವಿವಿಧ ಭಾಗಗಳಲ್ಲೂ ಬಿಡುಗಡೆಯಾಗಿರೋ ಸಿನಿಮಾ. ಹಿಂದಿಯಲ್ಲೂ ಸಹ ತೆರೆಕಂಡು ಮೆಚ್ಚುಗೆ ಪಡೆಯುತ್ತಿದ್ದರೂ ಸಹ ಚಿತ್ರದ ರಿಮೇಕ್ ರೈಟ್ಸ್ ಗೆ ಎಲ್ಲೆಡೆಯಿಂದ ಬೇಡಿಕೆ ಬರುತ್ತಿದೆಯಂತೆ. ಸಿನಿಮಾವನ್ನು ರಿಮೇಕ್ ಮಾಡುತ್ತೇವೆ ಎಂದು ಹಲವಾರು ಬಾಲಿವುಡ್ ನ ನಿರ್ಮಾಪಕರು ‘777 ಚಾರ್ಲಿ’ಯ ಒಡೆಯರನ್ನೂ ಭೇಟಿಯಾಗಿದ್ದಾರಂತೆ. ಸದ್ಯ ಈ ಬಗೆಗಿನ ಯಾವುದೇ ಅಧಿಕೃತ ಘೋಷಣೆ ಚಿತ್ರತಂಡದಿಂದ ಹೊರಬಂದಿಲ್ಲ.
ಇದಷ್ಟೇ ಅಲ್ಲದೇ ಚಾರ್ಲಿ ಎಂಬ ಹೆಸರಿನಿಂದಲೇ ಪ್ರಪಂಚದಾದ್ಯಂತ ಮನೆಮಾತಾಗಿರೋ ನಾಯಿಗೂ ಕೂಡ ಎಲ್ಲೆಡೆಯಿಂದ ನಟನೆಗೆ ಅವಕಾಶಗಳು ಬರುತ್ತಿವೆ. ತನ್ನ ಮುಗ್ಧ ಕಣ್ಣುಗಳಿಂದಲೇ ಸಿನಿರಸಿಕರ ಮನಸ್ಸನ್ನು ಗೆದ್ದಿದ್ದ ಚಾರ್ಲಿಯನ್ನ ಪಳಗಿಸಿದವರು ಪ್ರಮೋದ್. ಸದ್ಯ ಚಾರ್ಲಿ ಅವರ ಅದೃಷ್ಟವನ್ನು ಬದಲಾಯಿಸುತ್ತಿದೆ. ಪ್ರಮೋದ್ ಅವರು ನಡೆಸುತ್ತಿರುವ ‘ಡಿಕೆ9 ವರ್ಕಿಂಗ್ ಡಾಗ್ ಟ್ರೈನಿಂಗ್ ಸ್ಕೂಲ್’ ಸುಮಾರು 22 ನಾಯಿಗಳನ್ನು ಹೊಂದಿದ್ದು, ಚಾರ್ಲಿ ಕೂಡ ಅಲ್ಲಿಯದೆ. ಮೈಸೂರಿನಲ್ಲಿ ನೆಲೆಯೂರಿರುವ ಈ ಸಂಸ್ಥೆಯ ನಾಯಿಗಳಿಗೆ ಇದೀಗ ಬೇರೆ ಚಿತ್ರರಂಗಗಳಿಂದಲೂ ಬೇಡಿಕೆ ಬರುತ್ತಿದೆ. ಡಾಲಿ ಧನಂಜಯ ಅವರ ನಟನೆಯ ‘ಹೊಯ್ಸಳ’ ಸಿನಿಮಗೂ ಕೂಡ ಸುಮಾರು ಐದು ನಾಯಿಗಳನ್ನು ಈ ‘ಡಿಕೆ9 ವರ್ಕ್ ಶಾಪ್’ ನಿಂದ ಆರಿಸಿಕೊಳ್ಳಲಾಗಿದೆ. ಹಾಗೆಯೇ ಶ್ವಾನಗಳ ಬಗೆಗೆ ಅಧ್ಯಯನ ನಡೆಸಿರುವ ಪ್ರಮೋದ್ ಅವರಿಗೂ ಕೂಡ ಬೇರೆ ಭಾಷೆಯ ಚಿತ್ರರಂಗಗಳಿಂದಲೂ ಅವಕಾಶಗಳ ಸಾಗರ ಹರಿದು ಬರುತ್ತಿದೆ.
ಜೂನ್ 10ರಂದು ತೆರೆಕಂಡ ‘777 ಚಾರ್ಲಿ’ ಸಿನಿಮಾ ಸದ್ಯ ಎಲ್ಲೆಡೆ ಯಶಸ್ವಿ ಪ್ರದರ್ಶನ ಪಡೆಯುತ್ತಿರೋ ಸಂತಸದಲ್ಲಿದೆ. ಹಲವು ಭಾಗಗಳಲ್ಲಿ ಹಲವು ಚಿತ್ರಮಂದಿರಗಳಲ್ಲಿ ಹೌಸಫುಲ್ ಬೋರ್ಡ್ ಜೋತು ಹಾಕಿಕೊಂಡು ಪ್ರದರ್ಶಿತಗೊಳ್ಳುತ್ತಿರುವ ಈ ಸಿನಿಮಾ ಸಿನಿರಸಿಕರ ಅಚ್ಚುಮೆಚ್ಚಾಗಿದೆ.