‘777 ಚಾರ್ಲಿ’ ಈ ಹೆಸರು ಯಾರಿಗೇ ತಾನೇ ತಿಳಿದಿಲ್ಲ. ಚಾರ್ಲಿ ಎಂದ ತಕ್ಷಣ ಹೆಸರಾಂತ ಚಾರ್ಲಿ ಚಾಪ್ಲಿನ್ ಅವರನ್ನು ನೆನೆಯುತ್ತಿದ್ದ ಜನ, ಇದೀಗ ನಾಯಿಯೊಂದನ್ನ ನೆನಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಅವರ ಅಭಿನಯದ ‘777 ಚಾರ್ಲಿ’ ಸಿನಿಮಾ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಒಟಿಟಿ ಪರದೆ ಮೇಲೆ ಬರಲು ಕೂಡ ಸಜ್ಜಾಗಿದೆ. ಈ ನಡುವೆ ಥಿಯೇಟರ್ ಗಳಲ್ಲಿ ನೋಡಲು ಸಿಗದಿರುವಂತಹ ಸಿನಿಮಾದ ಅಂತಿಮ ಹಂತದಲ್ಲಿ ಡಿಲೀಟ್ ಮಾಡಲಾದ ದೃಶ್ಯವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಯೂಟ್ಯೂಬ್ ನಲ್ಲಿ, ಎಲ್ಲಾ ಭಾಷೆಗಳಲ್ಲೂ ಅಧಿಕೃತ ಚಾನೆಲ್ ಗಳಲ್ಲಿ ಈ ದೃಶ್ಯ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಜೂನ್ 10ರಂದು ಬೆಳ್ಳಿತೆರೆ ಮೇಲೆ ಬಿಡುಗಡೆಯಾದ ‘777 ಚಾರ್ಲಿ’ ಸಿನಿಮಾ ಪ್ರಪಂಚದಾದ್ಯಂತ ವಿವಿಧ ಭಾಷೆಗಳಲ್ಲಿ ಶ್ವಾನ-ಪ್ರೇಮಿಗಳನ್ನೂ, ಸಿನಿಪ್ರೇಮಿಗಳನ್ನೂ ಕಣ್ತುಂಬಿಕೊಂಡು ಸಿನಿಮಾ ನೋಡುವಂತೆ ಮಾಡಿತ್ತು. ಧರ್ಮ ಹಾಗು ಚಾರ್ಲಿಯ ಭಾವನಾತ್ಮಕ ಜೀವನಗಾಥೆಯನ್ನು ಸಾರುವ ಈ ಚಿತ್ರದ ಎರಡನೇ ಡಿಲೀಟ್ ಮಾಡಲಾದ ದೃಶ್ಯಾವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ದೃಶ್ಯದಲ್ಲಿ ರಕ್ಷಿತ್ ಶೆಟ್ಟಿಯವರ ಧರ್ಮ ಪಾತ್ರ, ತನ್ನ ಸಹೋದ್ಯೋಗಿಯಾದ ಉತ್ತರಕುಮಾರ್ ಅವರ ಜೊತೆಗೆ ನಡೆಸುವ ವಿಚಿತ್ರ ಸಂಭಾಷನೆಯೊಂದನ್ನು ಬಿಂಬಿಸಿದೆ. ಸಿನಿಮಾದಲ್ಲಿ ಚಾರ್ಲಿ ನಾಯಿಯ ಪಾತ್ರಕ್ಕೆ ಮಾತ್ರವಲ್ಲದೆ ರಕ್ಷಿತ್ ಅವರ ಈ ಧರ್ಮ ಪಾತ್ರವನ್ನು ಹಲವರು ಮೆಚ್ಚಿಕೊಂಡಿದ್ದರು. ಯಾರನ್ನು ಹಚ್ಚಿಕೊಳ್ಳದ ಧರ್ಮ, ತನ್ನಿಂದ ಕೆಲಸ ಹೇಳಿಸಿಕೊಳ್ಳಲು ಬಂದ ಉತ್ತರ ಕುಮಾರನಿಗೆ ಶಿಸ್ತಿನ ಪಾಠ ಹೇಳುವುದನ್ನು ಈ ದೃಶ್ಯದಲ್ಲಿ ಕಾಣಬಹುದಾಗಿದೆ.
ಕಿರಣ್ ರಾಜ್ ಅವರು ರಚಿಸಿ ನಿರ್ದೇಶಿಸಿರುವ ‘777 ಚಾರ್ಲಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ 50ದಿನಗಳನ್ನು ಪೂರೈಸುವತ್ತ ಹೆಜ್ಜೆ ಹಾಕುತ್ತಿದೆ. ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ಶಾರ್ವರಿ ಮುಂತಾದ ನಟರು ಹಾಗು ಚಾರ್ಲಿ ನಾಯಿಯೂ ನಟಿಸಿರುವ ಈ ಸಿನಿಮಾ ಕಂಡವರೆಲ್ಲರ ಮನಸ್ಸಿನ ಖದವನ್ನ ತಟ್ಟಿದ್ದಂತೂ ಸತ್ಯ. ಇದೇ ಜುಲೈ 29ರಿಂದ ಸಿನಿಮಾ ‘ವೂಟ್’ ಆಪ್ ನಲ್ಲಿ ಪ್ರದರ್ಶನ ಕಾಣಲಿದ್ದು, ಸದ್ಯ ಸಿನಿಮಾದ ದೃಶ್ಯವೊಂದನ್ನು ಚಿತ್ರತಂಡ ಹೊರಹಾಕಿದೆ.