ರಾಧಿಕಾ ನಾರಾಯಣ್ ಸಿನಿ ಪ್ರಿಯರಿಗೆ ತೀರಾ ಪರಿಚಿತ ಹೌದು. ಇತ್ತೀಚೆಗಷ್ಟೇ ಕೋವಿಡ್ ಗೆ ತುತ್ತಾಗಿದ್ದ ರಾಧಿಕಾ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಕೊಂಚ ಗ್ಯಾಪ್ ನ ನಂತರ ಮತ್ತೆ ನಟನೆಯತ್ತ ಮುಖ ಮಾಡಿರುವ ರಾಧಿಕಾ ನಾರಾಯಣ್ ಚೇತರಿಸಿಕೊಂಡು ಸದ್ಯ ಶಿವಾಜಿ ಸುರತ್ಕಲ್ 2 ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
“ನಟನೆಯನ್ನು ನಾನು ತುಂಬಾನೇ ಪ್ರೀತಿಸುತ್ತೇನೆ. ಇದೀಗ ಮತ್ತೆ ನಾನು ಪ್ರೀತಿಸುತ್ತಿರುವ ಕೆಲಸದತ್ತ ಮರಳಿರುವುದು ನನಗೆ ಖುಷಿ ತಂದಿದೆ. ಡಿಸೆಂಬರ್ ನಲ್ಲಿ ಶಿವಾಜಿ ಸುರತ್ಕಲ್ ಸೀಕ್ವೆಲ್ ಗೆ ಕೊನೆಯ ಶಾಟ್ ನಲ್ಲಿ ಭಾಗವಹಿಸಿದ್ದೆ. ಇದೀಗ ಈ ವರ್ಷ ಮೊದಲ ಬಾರಿಗೆ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದೇನೆ. ಒಂದಷ್ಟು ದಿನಗಳ ಗ್ಯಾಪ್ ನ ನಂತರ ಮತ್ತೆ ನಟಿಸುತ್ತಿರುವುದು ಸಂತಸ ತಂದಿದೆ” ಎಂದಿದ್ದಾರೆ ರಾಧಿಕಾ ನಾರಾಯಣ್.
ಕೋವಿಡ್ ಸವಾಲನ್ನು ಎದುರಿಸಿದ ಬಗೆಯನ್ನು ಮಾತನಾಡಿರುವ ರಾಧಿಕಾ ” ಇದು ನನ್ನ ಕುಟುಂಬಕ್ಕೆ ಸವಾಲಿನ ಹಂತವಾಗಿತ್ತು. ತಂದೆಗೂ ಕೋವಿಡ್ ತಗುಲಿತ್ತು. ನಾವಿಬ್ಬರೂ ಬೇರೆ ಬೇರೆ ಕೋಣೆಗಳಲ್ಲಿ ಐಸೋಲೇಟ್ ಆದ್ವಿ. ತಾಯಿಗೆ ನೆಗೆಟಿವ್ ಬಂದಿತ್ತು. ನಮ್ಮಿಬ್ಬರನ್ನೂ ಅವರು ನೋಡಿಕೊಂಡರು. ನಾವು ಮನೆಯಲ್ಲಿ ಕಿಟ್ ತಂದು ಟೆಸ್ಟ್ ಮಾಡಿಸಿದೆವು. ಸ್ನೇಹಿತರು ಹಾಗೂ ಡಾಕ್ಟರ್ ನೈತಿಕ ಬೆಂಬಲವಾಗಿ ನಿಂತರು. ಇಂತಹ ಜನರನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ” ಎಂದಿದ್ದಾರೆ.
“ಈ ಸಂದರ್ಭದಲ್ಲಿ ಯೋಗ ನಾನು ಚೇತರಿಕೆ ಕಾಣಲು ಸಹಾಯಕವಾಯಿತು” ಎಂದು ಹೇಳಿರುವ ರಾಧಿಕಾ ನಾರಾಯಣ್ “ನಾನು ಪ್ರಾಣಾಯಾಮ ಹಾಗೂ ಧ್ಯಾನ ಮಾಡಲು ಪ್ರಾರಂಭಿಸಿದೆ. ಇದು ಬಲ ಹಾಗೂ ಏಕಾಗ್ರತೆ ಪಡೆಯಲು ಸಹಾಯ ಮಾಡಿದವು. ಮೊದಲು ನನಗೆ ದೇಹದ ಚಲನೆ ಮಾಡಲು ಕಷ್ಟವಾಗುತ್ತಿತ್ತು. ಆದರೆ ಈಗ ಸುಲಭವಾಗುತ್ತಿದೆ. ನನಗೆ ಧ್ಯಾನದ ಮಹತ್ವ ಅರಿವಾಯಿತು. ನಾನು ಈ ತಂತ್ರಗಳನ್ನು ನನ್ನ ಆಪ್ತ ಸ್ನೇಹಿತರಿಗೆ ಹೇಳುತ್ತಿದ್ದೇನೆ”ಎಂದಿದ್ದಾರೆ.
ಶಿವಾಜಿ ಸುರತ್ಕಲ್ 2 ಮಾತ್ರವಲ್ಲದೇ ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ವೀರ ಕಂಬಳ ಚಿತ್ರದಲ್ಲಿ ಡಿಸಿಪಿಯಾಗಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.