ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸಾಗಿದೆ ಧಾರಾವಾಹಿಯ ವೈಷ್ಣವಿಯಾಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಶಿಲ್ಪಾ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನವರು. ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದ ಶಿಲ್ಪಾ ಅವರಿಗೆ ನಟಿಯಾಗಬೇಕು ಎಂಬುದೇ ಜೀವನದ ಬಯಕೆ. ಶಾಲಾ ದಿನಗಳಿಂದಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಈಕೆ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಾಕೆ.
ಐ.ಕೆ.ಬೊಳುವಾರು ಹಾಗೂ ಮೋಹನ್ ಸೋನಾ ಅವರಿಂದ ನಟನೆಯ ಆಗು ಹೋಗುಗಳನ್ನು ಅರಿತುಕೊಂಡ ಶಿಲ್ಪಾ ಶೆಟ್ಟಿ
ಮಳೆಹಕ್ಕಿ, ಐನ್ ಸ್ಟೈನ್, ಚಂದ್ರಮ ವೃತ್ತಾಂತ ಸೇರಿದಂತೆ ಒಂದಷ್ಟು ನಾಟಕಗಳಲ್ಲಿ ಬಣ್ಣ ಹಚ್ಚಿದರು. ಮುಂದೆ ಮಾಡೆಲಿಂಗ್ ನತ್ತ ಮುಖ ಮಾಡಿದ ಪುತ್ತೂರಿನ ಬೆಡಗಿ ಒಂದಷ್ಟು ಫ್ಯಾಷನ್ ಶೋಗಳಲ್ಲಿ ಕ್ಯಾಟ್ ವಾಕ್ ಮಾಡಿದರು.
ಮಾಡೆಲಿಂಗ್ ನ ನಂತರ ನಟನೆಯತ್ತ ಹೊರಳುವ ನಿರ್ಧಾರ ಮಾಡಿದ ಶಿಲ್ಪಾ ಶೆಟ್ಟಿ ಸಹಜವಾಗಿ ಆಡಿಶನ್ ಗಳಲ್ಲಿ ಭಾಗವಹಿಸಲಾರಂಭಿಸಿದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎರಡು ಕನಸು ಧಾರಾವಾಹಿಯಲ್ಲಿ ಸಹಜ ಆಗಿ ಅಭಿನಯಿಸುತ್ತಿರುವ ಮೂಲಕ ಕಿರುತೆರೆಯಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡರು. ಮೊದಲ ಧಾರಾವಾಹಿಯಲ್ಲಿಯೇ ನಟನೆಯ ಮೂಲಕ ಮನೆ ಮಾತಾದ ಶಿಲ್ಪಾ ಶೆಟ್ಟಿ ನಂತರ ಕಾಲಿಟ್ಟಿದ್ದು ಕೋಸ್ಟಲ್ ವುಡ್ ಗೆ.
ತುಳುವಿನ ಗಿರ್ ಗಿಟ್ಲೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕೋಸ್ಟಲ್ ವುಡ್ ನಲ್ಲೂ ಕಮಾಲ್ ಮಾಡಿದ ಶಿಲ್ಪಾ ನ್ಯೂರಾನ್ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ನಂತರ ರಮೇಶ್ ಅರವಿಂದ್ ನಿರ್ದೇಶಿಸಿ ನಟಿಸಿರುವ ನ್ಯೂರಾನ್ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದರು. ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಸಿನಿಮಾದಲ್ಲಿ ನಟಿಸುತ್ತಿರುವ ಶಿಲ್ಪಾ ಶೆಟ್ಟಿ ಅವರು ಹಿರಿತೆರೆಯ ಜೊತೆಗೆ ಕಿರುತೆರೆಯನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ.