ಜೀ ಕನ್ನಡ ವಿನೂತನ ಕಾರ್ಯಕ್ರಮಗಳ ಮೂಲಕ ಮನರಂಜಿಸುತ್ತ ನಂಬರ್ 1 ಸ್ಥಾನದಲ್ಲಿ ಮುನ್ನುಗುತ್ತಿರುವ ಕನ್ನಡಿಗರ ಹೆಮ್ಮೆಯ ವಾಹಿನಿ. ಇದರಲ್ಲಿ ಬರುವ “ಜೊತೆಜೊತೆಯಲಿ ” ಕನ್ನಡ ಕಿರುತೆರೆಗೆ ಶ್ರೀಮಂತಿಕೆಯನ್ನು ಪರಿಚಯಿಸಿದ ಧಾರಾವಾಹಿ. ವಿಭಿನ್ನ ಬಗೆಯ ಕಥೆಯ ಮೂಲಕ ಆರಂಭದಿಂದಲೇ ವೀಕ್ಷಕರ ಗಮನ ಸೆಳೆದದ್ದು ಇದರ ಹೆಗ್ಗಳಿಕೆ. ಸೀರಿಯಲ್ ನೇ ಸಿನಿಮಾ ಶೈಲಿಯಲ್ಲಿ ನಿರೂಪಿಸಿ ಎಲ್ಲರೂ ಬೆರಗಾಗುವಂತೆ ಮಾಡಿದ ಮೊದಲ ಧಾರಾವಾಹಿ. ನಂಬಿಕೆ ಎಂಬ ಮೂರಕ್ಷರವನ್ನು ಮೂಲವಾಗಿಟ್ಟುಕೊಂಡು ಸಾಗುತ್ತಿರುವ ಈ ಕಥೆ ಹಲವಾರು ರೋಚಕ , ಮನಮೋಹಕ ಸನ್ನಿವೇಶಗಳೊಂದಿಗೆ 650 ಸಂಚಿಕೆಗಳತ್ತ ಯಶಸ್ವಿಯಾಗಿ ಹೆಜ್ಜೆ ಇಟ್ಟಿದೆ.
ಆರ್ಯವರ್ಧನ್ ,ಅನು ಸಿರಿಮನೆ , ಪುಷ್ಪ , ಸುಬ್ಬು , ಝೇಂಡೆ ಹೀಗೆ ಇಲ್ಲಿ ಬರುವ ಎಲ್ಲಾ ಪಾತ್ರಗಳು ತನ್ನದೇ ಆದ ಮಹತ್ವ ಪಡೆದುಕೊಂಡು ಅನೇಕ ತಿರುವುಗಳಿಗೆ ಸಾಕ್ಷಿಯಾಗಿದೆ ಮತ್ತು ಜನರ ಮನಸ್ಸಿನಲ್ಲಿ ವಿಶೇಷವಾದ ಸ್ಥಾನ ಪಡೆದುಕೊಂಡಿದೆ.
ರಾಜನಂದಿನಿ ರಹಸ್ಯ , ಸಂಕ್ರಾಂತಿ ಸಂಭ್ರಮ , ಮದುವೆ ಸಡಗರ , ಸೀಕ್ರೆಟ್ ರೂಮ್ ಅನಾವರಣ ಹೀಗೆ ಅನೇಕ ವಿಶೇಷ , ಕುತೂಹಲಕಾರಿ ಸಂಚಿಕೆಗಳೊಂದಿಗೆ ಜನಪ್ರಿಯಗೊಂಡಿದ್ದ ಈ ಧಾರಾವಾಹಿ ಇದೀಗ ” ರಾಜನಂದಿನಿ ಅಧ್ಯಾಯ ” ದ ಹೊಸ ಲೋಕಕ್ಕೆ ನೋಡುಗರನ್ನು ಕರೆದೊಯ್ಯಲು ಸಜ್ಜಾಗಿದೆ.
ತನ್ನ ಸುತ್ತ ಸುಳ್ಳಿನ ಕೋಟೆಯನ್ನ ಕಟ್ಟಿಕೊಂಡಿರುವ ಆರ್ಯವರ್ಧನ್ ಮುಖವಾಡಗಳು ಒಂದೊಂದೇ ಕಳಚಿ ಬೀಳುವಾಗ ಅವರು ಅದರಿಂದ ಪಾರಾಗುವ ರೀತಿ, ನಂಬಿಕೆಯನ್ನೇ ಅಸ್ತ್ರವಾಗಿಸಿಕೊಂಡು ಉಳಿದ ಪಾತ್ರಗಳನ್ನು ಆಡಿಸುವ ಬಗೆ ಎಲ್ಲವೂ ಜನರನ್ನು ಆಕರ್ಷಿಸಿವೆ .
ಈ ರಾಜನಂದಿನಿಯ ಹೊಸ ಅಧ್ಯಾಯದಲ್ಲಿ ಸುಭಾಷ್ ಪಾಟೀಲ್ ಎಂಬ ಪಾತ್ರವೊಂದು ಜೀವಪಡೆದುಕೊಂಡಿದ್ದು ಈಗಾಗಲೇ ಬಿಡುಗಡೆಗೊಂಡಿರುವ ಪ್ರೋಮೋ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸುಭಾಷ್ ಪಾಟೀಲ್ ಯಾರು ? ಅವರಿಗೂ ರಾಜನಂದಿನಿಗೂ ಇರುವ ಸಂಬಂಧವೇನು ? ಈ ಸುಭಾಷ್ ಪಾಟೀಲ್ ಪಾತ್ರ ಅನು ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ? ಹೀಗೆ ಹತ್ತುಹಲವು ನಿಗೂಢತೆಗಳನ್ನೇ ಕಥೆಯುದ್ದಕ್ಕೂ ಹೊತ್ತು ತರುತ್ತಿದೆ ಜೊತೆಜೊತೆಯಲಿ. ಅಷ್ಟೇ ಅಲ್ಲದೇ ವೀಕ್ಷಕರ ತಲೆಯಲ್ಲಿ ಪ್ರಶ್ನೆಗಳ ಸುರಿಮಳೆ ಮೂಡುವ ಹಾಗೆ ಮಾಡಿದೆ.