ಪುನೀತ್ ರಾಜಕುಮಾರ್, ಪ್ರತಿಯೊಬ್ಬ ಕನ್ನಡಿಗನ ಮನದಲ್ಲೂ ಅಮೃತಾಶಿಲೆಯಲ್ಲಿ ಕೆಟ್ಟಿದಂತಿರೋ ಹೆಸರು. ಅರ್ಧದಾರಿಯಲ್ಲೇ ನಮ್ಮನ್ನೆಲ್ಲ ಅಗಲಿ ಹೊರಟಿದ್ದರು, ಅವರ ವರ್ಚಸ್ಸು ಇನ್ನು ನಮ್ಮ ಮನಸಲ್ಲಿದೆ. ಆ ಅಮೋಘ ವ್ಯಕ್ತಿತ್ವ, ಆ ಅಪೂರ್ವ ವ್ಯಕ್ತಿಯನ್ನ ಇನ್ನೊಮ್ಮೆ ಭುವಿಯಲ್ಲಿ ಕಾಣಲಾಗುವುದಿಲ್ಲವೇನೋ ಎಂಬುದು ಎಲ್ಲ ಕನ್ನಡಿಗರ ಮರುಕ. ಅಪ್ಪು ನಟನೆಯ ಕೊನೆಯ ಚಿತ್ರ ಜೇಮ್ಸ್ ಇದೇ ಮಾರ್ಚ್ 17ರಂದು ತೆರೆಕಾಣುತ್ತಿದೆ. ಇದೆ ಚಿತ್ರದ ಸಂದರ್ಶನದ ವೇಳೆ ಮಾತನಾಡಿದ ಪುನೀತ್ ರಾಜಕುಮಾರ್ ಅವರ ಸಹೋದರನಾದ ಕರುನಾಡ ಚಕ್ರವರ್ತಿ ಶಿವಣ್ಣ, ತನ್ನ ಮುಂದಿನ ಚಿತ್ರ ‘ವೇದ’ದಲ್ಲಿ ಅಪ್ಪುವಿನ ನಟನಾ ಅಂಶಗಳನ್ನು ತುಂಬಿಕೊಳ್ಳುತ್ತೇನೆ ಎಂದಿದ್ದಾರೆ.
ಏನೇ ಆದರೂ ಅಪ್ಪು ನಾಯಕ ನಟನಾಗಿ ನಮ್ಮ ಕಣ್ಣ ತುಂಬಲಿರೋ ಕೊನೆಯ ಚಿತ್ರ ‘ಜೇಮ್ಸ್’ ಆಗಿರಲಿದೆ. ಶಿವಣ್ಣ ಸದ್ಯ ನಿರ್ಮಿಸಿ ನಟಿಸುತ್ತಿರೋ ‘ವೇದ’ ಚಿತ್ರದಲ್ಲಿ ಅಪ್ಪುವಿನ ಅಂಶಗಳನ್ನು ಬಳಸಿಕೊಳ್ಳುತ್ತಾರಂತೆ. “ಜೇಮ್ಸ್” ಚಿತ್ರದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಅಪ್ಪು ನನ್ನ ಮನಸ್ಸಿನಲ್ಲಿ ಸದಾ ಇರುತ್ತಾನೆ. ನನ್ನ ಮುಂದಿನ ಚಿತ್ರ “ವೇದ”ದಲ್ಲಿ ನನ್ನ ನಟನೆಯ ಮೂಲಕ ಅಪ್ಪುವನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ. ಅವನ ಹಾಸ್ಯಪ್ರಜ್ಞೆಗಳನ್ನು ನನ್ನ ಪಾತ್ರದಲ್ಲಿ ಅಳವಡಿಸಿಕೊಳ್ಳುತ್ತೇನೆ” ಎಂದಿದ್ದಾರೆ.
ರಾಜ್ ಕುಟುಂಬದ ಮೂವರು ಯುವರಾಜರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಹಾಗು ಪುನೀತ್ ರಾಜಕುಮಾರ್ ಅವರನ್ನು ಒಂದೇ ಸಿನಿಮಾದಲ್ಲಿ ಒಟ್ಟಿಗೆ ನೋಡಬೇಕೆಂಬುದು ಅಭಿಮಾನಿಗಳು ಹಲವರ ಮಹದಾಸೆಯಾಗಿತ್ತು. ಅಲ್ಲದೇ ಶಿವಣ್ಣನ ಜೊತೆ ನಟಿಸಬೇಕು, ಶಿವಣ್ಣನಿಗೆ ನಿರ್ದೇಶನ ಮಾಡಬೇಕು ಎನ್ನುವುದು ಸ್ವತಃ ಅಪ್ಪುವಿನ ಕನಸುಗಳಾಗಿತ್ತು. ಸದ್ಯ ಈಗ ಬರುತ್ತಿರೋ ‘ಜೇಮ್ಸ್’ ಚಿತ್ರದಲ್ಲಿ ಈ ಮೂವರು ಜೊತೆಯಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಅಲ್ಲದೇ ‘ಜೇಮ್ಸ್’ ಚಿತ್ರದಲ್ಲಿನ ಅಪ್ಪುವಿನ ಪಾತ್ರಕ್ಕೆ ಶಿವಣ್ಣ ಸ್ವರತುಂಬಿದ್ದಾರೆ. ಈ ಬಗ್ಗೆ ಮಾತನಾಡಿದ ಶಿವಣ್ಣ, “ನಿರ್ದೇಶಕ ಚೇತನ್ ಅವರು ನನ್ನ ಬಳಿ ಬಂದು ಅಪ್ಪು ಪಾತ್ರಕ್ಕೆ ಡಬ್ ಮಾಡಬೇಕೆಂದಾಗ, ನನ್ನಿಂದಾಗದು ಯಾವುದಾದರೂ ಮಿಮಿಕ್ರಿ ಕಲಾವಿದರನ್ನು ಬಳಸಿ ಅಪ್ಪುವಿನ ಸ್ವರವನ್ನೇ ಮಾರುಕಳಿಸುವಂತೆ ಮಾಡಿ. ಕಾರಣ ಅಪ್ಪುವಿನದ್ದು ಒಂದು ವಿಶೇಷ ಧ್ವನಿ. ಅಭಿಮಾನಿಗಳ ಎದೆಯಲ್ಲಿ ಗಡಚಿಕ್ಕುವಂತೆ ಉಳಿದಿರೋ ಆ ಧ್ವನಿಗೆ ಜೀವತುಂಬುವುದು ಸುಲಭವಲ್ಲ. ಆದರೆ ಯಾವ ಪ್ರಯತ್ನದಿಂದಲೂ ಚೇತನ್ ಅವರಿಗೆ ಸಮಾಧಾನ ಸಿಗದೇ ಇದ್ದಾಗ ನಾನೇ ಡಬ್ ಮಾಡಿದೆ” ಎನ್ನುತ್ತಾರೆ.
ಸದ್ಯ ಶಿವಣ್ಣ ಮತ್ತು ಅಪ್ಪುವನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನೋಡಬಹುದೆಂಬ ಒಂದು ಸಣ್ಣ ಸುಳಿವು ಸಹ ಅಭಿಮಾನಿಗಳಿಗೆ ಅತೀವ ಆನಂದ ನೀಡುತ್ತದೆ. ಶಿವಣ್ಣ ಇದನ್ನ ಹೇಗೆ ನೆರವೇರಿಸುತ್ತಾರೆ ಎಂದು ಕಾದುನೋಡಬೇಕಿದೆ.