ಆ ನಗು, ಆ ನಟನೆ, ಆ ನೃತ್ಯ, ಆ ವ್ಯಕ್ತಿತ್ವ. ಅಪ್ಪುವನ್ನು ಮರೆಯುವುದಾದರೂ ಹೇಗೆ. ಕನ್ನಡಿಗರೆಲ್ಲರ ಮನೆಯಲ್ಲಿ ಮನದಲ್ಲಿ ಅಪ್ಪು ಎಂದೇ ಚಿರಪರಿಚಿತರಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈಗ ನಮ್ಮೊಂದಿಗಿಲ್ಲ. ಅವರು ನಾಯಕನಟನಾಗಿ ನಟಿಸಿದ ಕೊನೆಯ ಚಿತ್ರ “ಜೇಮ್ಸ್” ಇದೇ ಮಾರ್ಚ್ 17ರಂದು ಪ್ರಪಂಚದ ಹಲವೆಡೆ ಬಿಡುಗಡೆಯಾಗಲಿದೆ. ಸದ್ಯ ಚಿತ್ರತಂಡ ಬಿರುಸಿನಿಂದ ಪ್ರಚಾರ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಸಂದರ್ಶನಗಳಲ್ಲಿ ಭಾಗಿಯಾದ ಚಿತ್ರದ ಪ್ರತಿಯೊಂದು ನಟರು ಸಹ ಭಾವುಕರಾಗುತ್ತಿದ್ದಾರೆ. ಇವರಲ್ಲಿ ಚಿಕ್ಕಣ್ಣ ಸಹ ಒಬ್ಬರು.
ಪ್ರಸ್ತುತ ಕನ್ನಡದ ಬಹುಬೇಡಿಕೆಯ ಹಾಸ್ಯನಟ ಚಿಕ್ಕಣ್ಣ ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರ ಸ್ನೇಹಿತನ ಪಾತ್ರವಹಿಸಿದ್ದಾರೆ. ಅಪ್ಪುವಿನ ಕೊನೆಯ ಚಿತ್ರದಲ್ಲಿ ಅವರ ಜೊತೆ ನಟಿಸುವ ಭಾಗ್ಯ ಪಡೆದ ಕೆಲವೇ ಕೆಲವು ಕಲಾವಿದರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಈಗಾಗಲೇ ‘ರಾಜಕುಮಾರ’, ‘ದೊಡ್ಡಮನೆ ಹುಡುಗ’, ‘ನಟಸಾರ್ವಭೌಮ’, ಮೊದಲಾದ ಚಿತ್ರಗಳಲ್ಲಿ ಪುನೀತ್ ಗೆ ಜೊತೆಯಾಗಿ ನಟಿಸಿರೋ ಚಿಕ್ಕಣ್ಣ ಪುನೀತ್ ಅವರೊಂದಿಗೆ ಒಳ್ಳೆಯ ಒಡನಾಟವನ್ನ ಹೊಂದಿದ್ದರು. ‘ಜೇಮ್ಸ್’ ಪ್ರಚಾರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಏನು ಹೇಳಬೇಕೋ ತಿಳಿಯುತ್ತಿಲ್ಲ. ಇಂತಹ ಪ್ರಚಾರ ಯಾವ ನಟನ ಬದುಕಿನಲ್ಲೂ ಆಗಬಾರದು.
ಅಪ್ಪು ಅವರ ಕೊನೆಯ ಚಿತ್ರದಲ್ಲಿ ನಾವು ನಟಿಸಿರುವುದು, ನಮ್ಮ ಭಾಗ್ಯ ಎಂದು ಭಾವಿಸಿದ್ದೇವೆ. ಈ ಸಿನಿಮಾ ಕನ್ನಡದಲ್ಲಿ ಹೊಸದೊಂದು ಇತಿಹಾಸ ಬರೆಯುತ್ತದೆ. ಇದು ನನ್ನೊಬ್ಬನ ಮಾತಲ್ಲ, ಸಮಸ್ತ ಸಿನಿಪ್ರೇಕ್ಷಕರ ಮಾತು” ಎನ್ನುತ್ತಾರೆ. ಈ ವೇಳೆ ಅಪ್ಪುವಿನೊಂದಿಗಿನ ದಿನಗಳನ್ನು ನೆನೆದು ಕಣ್ತುಂಬಿಕೊಂಡರು ಚಿಕ್ಕಣ್ಣ. ಈ ಸಂಧರ್ಭ ಶಿವಣ್ಣ, ಸಂಗೀತ ನಿರ್ದೇಶಕ ಚರಣ್ ರಾಜ್, ನಿರ್ದೇಶಕರಾದ ಚೇತನ್ ಒಳಗೊಂಡಂತೆ ಚಿತ್ರತಂಡದವರು ಅಲ್ಲಿ ಸೇರಿದ್ದರು.