ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡ್ತಿರುವ ಜುಗಲ್ ಬಂದಿ ಸಿನಿಮಾ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಸುದ್ದಿ ಮಾಡುತ್ತಿದೆ. ರಿಲೀಸ್ ಗೂ ಮೊದಲೇ ಭಾರೀ ಮೊತ್ತಕ್ಕೆ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡಿ ಗಮನಸೆಳೆದಿದ್ದ ಜುಗಲ್ ಬಂದಿ ಸಿನಿಮಾ ಅಂಗಳದಿಂದ ಮನಮುಟ್ಟುವ ಮೊದಲ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಮೆಚ್ಚುಗೆ ಪಡೆದುಕೊಂಡಿದೆ.
ಇಂಥವರ ಸಂತಾನ ಭಾಗ್ಯ ಎಂದು ಶುರುವಾಗುವ ಅದ್ಭುತ ಸಾಹಿತ್ಯ ಎಂತಹ ಕಲ್ಲು ಮನಸನ್ನು ಕರಿಸುವಂತಿದೆ. ನಿರ್ದೇಶಕ ದಿವಾಕರ್ ಅವರು ಪೊಣಿಸಿರುವ ಅರ್ಥಪೂರ್ಣ ಸಾಲುಗಳಿಗೆ ಪ್ರದ್ಯೋತನ್ ಸಂಗೀತದ ಕಿಕ್.. ಮಾನಸಿ ಸುಧೀರ್ ಅವರ ಅಭಿನಯದ ಮ್ಯಾಜಿಕ್.. ಎಸ್ ಕೆ ರಾವ್ ಕ್ಯಾಮೆರಾ ವರ್ಕ್.. ಡಾ.ವೈಕಂ ವಿಜಯಲಕ್ಷ್ಮೀ ಗಾಯನ ಎಲ್ಲವೂ ಅತ್ಯಧ್ಬುತವಾಗಿ ಮೂಡಿ ಬಂದಿದೆ. ತಾಯಿ ಹೃದಯವನ್ನು ವರ್ಣಿಸುವ ಈ ಹಾಡಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಅಲ್ಲು ರಘು ಸುಪುತ್ರಿ ಆರು ತಿಂಗಳ ಮಗು ಯುಕ್ತ ನಟಿಸಿದ್ದು, ಮನಸಿ ಸುಧೀರ್ ಅವರ ಮನೋಜ್ಞ ಅಭಿನಯ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
‘ಸೂಜಿದಾರ’, ‘ಸಲಗ’, ‘ಏಕ್ ಲವ್ ಯಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದಿರುವ ಯಶ್ ಶೆಟ್ಟಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದು ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ನಟಿಸುತ್ತಿದ್ದಾರೆ. ಉಳಿದಂತೆ ಅಶ್ವಿನ್ ರಾವ್ ಪಲ್ಲಕ್ಕಿ , ಸಂತೋಷ್ ಆಶ್ರಯ್ ನಟಿಸಿದ್ದಾರೆ. ಈ ಹಿಂದೆ ಹಲವು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದ ಡಿಂಡಿಮ ಜುಗಲ್ ಬಂದಿ ಸಿನಿಮಾ ಮೂಲಕ ನಿರ್ದೇಶನಾಗಿ ಬಡ್ತಿ ಪಡೆದಿದ್ದಾರೆ.
ಉಳಿದಂತೆ ಕೋ ಡೈರೆಕ್ಟರ್ ಆಗಿ ಬಾಲಕೃಷ್ಣ ಯಾದವ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಸಂತೋಷ್, ಶ್ರೀನಿವಾಸ್,ಕೆಲಸ ನಿರ್ವಹಿಸಲಿದ್ದಾರೆ. ಡಿಂಡಿಮ ಕ್ರಿಯೇಷನ್ ನಡಿ ನಿರ್ಮಾಣವಾಗ್ತಿರುವ ಜುಗಲ್ ಬಂದಿ ಸಿನಿಮಾಗೆ ದಿವಾಕರ್ ಡಿಂಡಮ ನಿರ್ದೇಶನದ ಜೊತೆ ಬಂಡವಾಳ ಕೂಡ ಹಾಕಿದ್ದಾರೆ.