ಕರುನಾಡಿನ ಪ್ರೀತಿಯ ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ರಿಲೀಸ್ ಆಗಿದ್ದು ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪುನೀತ್ ಅವರ ಕೊನೆ ಸಿನಿಮಾ ಇದಾಗಿದ್ದು, ಅಪ್ಪು ಇಲ್ಲದೇ ಬಿಡುಗಡೆ ಆಗಿರುವ ಈ ಚಿತ್ರ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಜೇಮ್ಸ್ ಸಿನಿಮಾದಲ್ಲಿ ಪುನೀತ್ ಅವರ ಸ್ನೇಹಿತನ ಪಾತ್ರ ನಿರ್ವಹಿಸಿರುವ ಶೈನ್ ಶೆಟ್ಟಿ ಅಪ್ಪು ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಶೈನ್ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದು ಅವರು ಈ ಸಿನಿಮಾವನ್ನು ತ್ರಿವೇಣಿ ಥಿಯೇಟರ್ ನಲ್ಲಿ ಅಭಿಮಾನಿಗಳ ಜೊತೆ ವೀಕ್ಷಿಸಿದರು. ಸಿನಿಮಾ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಶೈನ್
“ನನ್ನನ್ನು ಕೈ ಹಿಡಿದು ದಾರಿ ತೋರಿಸಿದ ದೇವರು ಅಪ್ಪು. ಅವರು ಇಲ್ಲ ಅನ್ನುವುದೇ ತುಂಬಾ ಬೇಸರ ಆಗುತ್ತಿದೆ. ಅವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ, ಸದಾ ಕಾಲ ನಮ್ಮ ಜೊತೆಯಲ್ಲಿ ಇದ್ದಾರೆ ಅನ್ನಿಸುತ್ತಿದೆ” ಎಂದು ಹೇಳುತ್ತಾರೆ ಶೈನ್ ಶೆಟ್ಟಿ.
“ಪುನೀತ್ ರಾಜ್ ಕುಮಾರ್ ಅವರೊಂದಿಗೆ ನಟಿಸಿರುವುದು, ಅವರೊಂದಿಗೆ ಕೆಲದ ಮಾಡಿರುವುದು ನನ್ನ ಪಾಲಿಗೆ ಸುವರ್ಣಾವಕಾಶ ಎಂದು ಹೇಳಿದರೆ ತಪ್ಪಾಗಲಾರದು. ನನಗೆ ಮಾತ್ರವಲ್ಲದೇ ಯಾರೇ ಹೊಸಬರಾಗಲೀ, ಅವರಿಗೆ ಅವಕಾಶ ಕೊಡುವುದುರಲ್ಲಿ ಅವರು ಯಾವತ್ತೂ ಮುಂದೆ. ಜೊತೆಗೆ ಸದಾ ಅವರು ಹೊಸಬರಿಗೆ ಸ್ಫೂರ್ತಿ ನೀಡುತ್ತಿದ್ದರು” ಎಂದು ಪುನೀತ್ ಅವರನ್ನು ನೆನಪಿಸಿಕೊಂಡಿದ್ದಾರೆ ಶೈನ್ ಶೆಟ್ಟಿ.