ಕನ್ನಡ ಸಿನಿರಂಗದಲ್ಲಿ ನಟನಾ ಕಂಪು ಪಸರಿಸಿದ ಅನೇಕರು ಇಂದು ಪರಭಾಷೆಯ
ಸಿನಿರಂಗದಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ನಟಿ ಆಶಿಕಾ ರಂಗನಾಥ್ ಕೂಡಾ ಅದಕ್ಕೆ ಹೊರತಾಗಿಲ್ಲ. ತಮಿಳು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಆಶಿಕಾ ರಂಗನಾಥ್ ಇದೀಗ ನಟ ಅಥರ್ವ ಜೊತೆ ತಮಿಳು ಸಿನಿಮಾ ಮಾಡುತ್ತಿದ್ದಾರೆ. ತೆಲುಗು ಸ್ಕ್ರಿಪ್ಟ್ ಗಳನ್ನು ಕೇಳುತ್ತಿದ್ದಾರೆ. ಇದರ ಮಧ್ಯೆ ತಮ್ಮ ಹೃದಯಕ್ಕೆ ಹತ್ತಿರವಾಗಿರುವ ವಿಶೇಷ ಸಿನಿಮಾ 02ದಲ್ಲಿ ಆಶಿಕಾ ಅಭಿನಯಿಸುತ್ತಿದ್ದಾರೆ.
“ಈ ಸಿನಿಮಾ ನನಗೆ ಎರಡು ರೀತಿಯಲ್ಲಿ ಹತ್ತಿರವಾಗಿದೆ. ನಾನು ದ್ವಿತ್ವ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಬೇಕಿತ್ತು. ಆದರೆ ನಾನು ಅವರ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಬರುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಮುಖ್ಯವಾಗಿ ಅಪ್ಪು ಸರ್ ಅವರು ನಾನೇ ಈ ಪಾತ್ರ ಮಾಡಬೇಕೆಂದು ಉತ್ಸುಕತೆ ತೋರಿದ್ದರು. ಈ ಸಿನಿಮಾದಲ್ಲಿ ನಟಿಸಲು ಕರೆ ಬಂದಾಗ ನನಗೆ ಇಲ್ಲ ಎನ್ನಲು ಕಾರಣ ಇರಲಿಲ್ಲ” ಎಂದಿದ್ದಾರೆ.
O2 ಸಿನಿಮಾ ಮೆಡಿಕಲ್ ಥ್ರಿಲ್ಲರ್ ಆಗಿದ್ದು ಹೊಸಬರಾದ ಪ್ರಶಾಂತ್ ರಾಜ್ ಹಾಗೂ ರಾಘವ ನಾಯಕ್ ನಿರ್ದೇಶನ ಮಾಡುತ್ತಿದ್ದಾರೆ. ಆಶಿಕಾ ಹಾಗು ಪ್ರವೀಣ್ ತೇಜ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. “ಇದು ನನ್ನ ಮೊದಲ ಕಂಟೆಂಟ್ ಆಧಾರಿತ ಚಿತ್ರವಾಗಿದೆ. ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದ ನಂತರ ಇದು ನನಗೆ ವಿಭಿನ್ನವಾಗಿತ್ತು. ಆರಂಭದಲ್ಲಿ ಈ ಪ್ರಕಾರದ ಸಿನಿಮಾದಲ್ಲಿ ಹೇಗೆ ನಟಿಸುತ್ತೇನೆ ಎಂದು ಯೋಚಿಸಿದೆ. ನಂತರ ಚಲನಚಿತ್ರಕ್ಕೆ ಪ್ರವೇಶಿಸುವ ಅಂಶವನ್ನು ಅರಿತುಕೊಂಡೆ. ಸ್ಟಾರ್ ಆಗಿ ಮಾತ್ರ ಅಲ್ಲ. ಪರ್ಫಾಮರ್ ಆಗಿ ಪ್ರವೇಶಿಸುವುದನ್ನು ಅರಿತೆ. ಇವೆರಡರ ವಿವೇಚನಾಶೀಲ ಮಿಶ್ರಣವಿರಬೇಕು. ಈ ಸಿನಿಮಾದಲ್ಲಿ ನಾನು ಉದ್ದಟತನದ ನಾಯಕಿಯಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಉದ್ದೇಶವಿರುವ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಾಳೆ” ಎಂದಿದ್ದಾರೆ.
ಪ್ರಸ್ತುತ ಸಿನಿಮಾದಲ್ಲಿ ಆಶಿಕಾ ಮೊದಲ ಬಾರಿಗೆ ಡಾಕ್ಟರ್ ಪಾತ್ರ ಮಾಡುತ್ತಿದ್ದಾರೆ. “ಕಥೆ ತುಂಬಾ ಉತ್ತಮ ಕಂಟೆಂಟ್ ಹೊಂದಿದೆ. ಅಪ್ಪು ಸರ್ ಅವರ ದೃಷ್ಟಿಕೋನದ ಭಾಗವಾಗಿರುವುದಕ್ಕೆ ಅದೃಷ್ಟ ಮಾಡಿದ್ದೇನೆ. ಅಪ್ಪು ಸರ್ ಅವರು ರೂಪಿಸಿರುವ ದಿಟ್ಟ ಹಾಗೂ ಆಸಕ್ತಿಕರ ಆಯ್ಕೆ ನಿಮಗೆ ಸಿನಿಮಾ ನೋಡಿದಾಗ ಕಾಣಬಹುದು” ಎಂದಿದ್ದಾರೆ.