ನಟಿ ಶರ್ಮಿಳಾ ಮಾಂಡ್ರೆ ನಿರ್ಮಾಪಕಿಯಾಗಿ ಭಡ್ತಿ ಪಡೆದಿದ್ದು, ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್ ವತಿಯಿಂದ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೌದು, ನೀನಾಸಂ ಸತೀಶ್ ಮುಖ್ಯಭೂಮಿಕೆಯಲ್ಲಿರುವ ದಸರ ಸಿನಿಮಾದ ನಿರ್ಮಾಣವನ್ನು ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್ ಮಾಡುತ್ತಿದೆ. ಸದ್ಯ ಸಿನಿಮಾದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಕೂಡಾ ನಡೆಯುತ್ತಿದೆ.
ಇದೀಗ ತೆಲುಗು ಸ್ಟಾರ್ ನಟರ ಸಿನಿಮಾದ ಟೀಸರ್ ಕೂಡಾ ರಿಲೀಸ್ ಆಗಿದ್ದು ಅದಕ್ಕೂ ಅವರು ದಸರ ಎಂದು ಹೆಸರಿಟ್ಟಿದ್ದು ಶರ್ಮಿಳಾ ಮಾಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ತೆಲುಗು ಸಿನಿಮಾ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ.
ಫಿಲಂ ಛೇಂಬರ್ ಗೆ ಪತ್ರ ಬರೆದಿರುವ ಶರ್ಮಿಳಾ ಮಾಂಡ್ರೆ “ನಾನು ಮೊದಲ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು ದಸರ ಎನ್ನುವ ಟೈಟಲ್ ಅನ್ನು 2020 ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಣಿ ಮಾಡಿಸಿದ್ದೆ. ನೊಂದಣಿಗೆ ಸಂಬಂಧಪಟ್ಟಿರುವಂತಹ ದಾಖಲೆಗಳು ಎಲ್ಲವೂ ನನ್ನ ಬಳಿ ಇದೆ.
ಸದ್ಯ ಸಿನಿಮಾದ ಚಿತ್ರೀಕರಣವು ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಇಸೀಗ ಸುಧಾಕರ್ ಚೆರುಕುರಿ ಎಂಬುವರು ಎಸ್‌ಎಲ್‌ವಿ ಬ್ಯಾನರ್ ಅಡಿಯಲ್ಲಿ ‘ದಸರ’ ಹೆಸರಿನ ಸಿನಿಮಾದ ಟೀಸರ್ ನ್ನು ಕನ್ನಡದ ಜೊತೆಗೆ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಮುಂದೆ ಇದು ನಮಗೆ ಸಮಸ್ಯೆ ಆಗಲಿದೆ” ಎಂದು ಬರೆದುಕೊಂಡಿದ್ದಾರೆ.
“ಈಗಾಗಲೇ ನಾವು ನಮ್ಮ ಸಿನಿಮಾದ ಹೆಸರನ್ನು ಬಹಿರಂಗಗೊಳಿಸಿದ್ದೇವೆ. ಇದರ ಜೊತೆಗೆ ಸಿನಿಮಾದ ಪ್ರಚಾರ ಕೂಡಾ ಶುರು ಮಾಡಿದ್ದೇವೆ. ಈಗ ಇದೇ ಹೆಸರಿನಲ್ಲಿ ತೆಲುಗು ನಿರ್ಮಾಪಕರು ತಮ್ಮ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿದರೆ ನಮಗೆ ಕಷ್ಟ ಆಗುತ್ತದೆ. ಇದರಿಂದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆಯೂ ಹೊಡೆತ ಬೀಳುತ್ತದೆ” ಎಂದಿದ್ದಾರೆ ಶರ್ಮಿಳಾ.
ಇದರ ಜೊತೆಗೆ “ಕನಿಷ್ಟ ಪಕ್ಷ ಕನ್ನಡ ಡಬ್ಬಿಂಗ್
ವರ್ಷನ್ ನಲ್ಲಿಯಾದರೂ ತಮ್ಮ ಸಿನಿಮಾದ ಹೆದರನ್ನು ಬದಲಾಯಿಸುವಂತೆ ತೆಲುಗು ನಿರ್ಮಾಪಕರ ಬಳಿ ಸೂಚಿಸಿ” ಎಂದು ಮನವಿಯನ್ನು ಕೂಡಾ ಅವರು ಮಾಡಿದ್ದಾರೆ.