ಶರ್ಮಿಳಾ ಮಾಂಡ್ರೆ ಚಿತ್ರರಂಗಕ್ಕೆ ಕಾಲಿಟ್ಟು ಹದಿನೈದು ವರ್ಷಗಳೇ ಕಳೆದಿವೆ. 2007ರಲ್ಲಿ ಸಜನಿ ಚಿತ್ರದಲ್ಲಿ ನಾಯಕಿ ಸಜನಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಈ ಬೆಡಗಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಕೃಷ್ಣ, ನವಗ್ರಹ, ಮಸ್ತ್ ಮಜಾ ಮಾಡಿ, ಶಿವಮಣಿ, ವೆಂಕಟ ಇನ್ ಸಂಕಟ, ಸ್ವಯಂವರ, ಕರಿಚಿರತೆ, ಗೋವಾ, ಮುಮ್ತಾಜ್, ಆಕೆ, ಮಾಸ್ ಲೀಡರ್ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಶರ್ಮಿಳಾ ಮಾಂಡ್ರೆ ನಟನೆಯ ಹೊರತಾಗಿ ನಿರ್ಮಾಪಕಿ ಆಗಿಯೂ ಗುರುತಿಸಿಕೊಂಡಿದ್ದಾರೆ.
ತಮಿಳು ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿ ಭಡ್ತಿ ಪಡೆದಿರುವ ಶರ್ಮಿಳಾ ಮಾಂಡ್ರೆ ಇದೀಗ ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತಮ್ಮದೇ ಹೋಂ ಪ್ರೊಡಕ್ಷನ್ ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್ ನಡಿಯಲ್ಲಿ ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸತೀಶ್ ನೀನಾಸಂ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ಶರ್ಮಿಳಾ ನಟಿಸುತ್ತಿದ್ದಾರೆ.
“ನಿರ್ಮಾಪಕಿಯಾಗಿ ಬದಲಾದ ಮೇಲೆ ಪಾತ್ರವನ್ನು ನೋಡುವ ದೃಷ್ಟಿಕೋನವು ಬದಲಾಗಿದೆ. ಇದು ಬಹು ಮುಖ್ಯವಾದ ಬದಲಾವಣೆ ಎನ್ನಬಹುದು. ಮೊದಲೆಲ್ಲಾ ನನಗೆ ನಟಿಸುವ ಅವಕಾಶ ದೊರೆತಾಗ
ಕೇವಲ ಪಾತ್ರ ,ಕಥೆ ಇತ್ಯಾದಿ ಅಂಶಗಳನ್ನಷ್ಟೇ ನಾನು ಗಮನಿಸುತ್ತಿದ್ದೆ. ಆದರೆ ನಿರ್ಮಾಪಕಿಯಾಗಿ ಬದಲಾದ ಬಳಿಕ ಬೇರೆ ರೀತಿಯ ಅಂಶಗಳತ್ತಲೂ ಗಮನ ಸೆಳೆಯುತ್ತದೆ” ಎಂದು ಹೇಳುತ್ತಾರೆ ಶರ್ಮಿಳಾ ಮಾಂಡ್ರೆ.