ನಟಿ ಮೇಘನಾ ರಾಜ್ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರ ನೆಚ್ಚಿನ ಜಡ್ಜ್ ಆಗಿರುವ ಮೇಘನಾ ತನ್ನ ಸ್ಟೈಲ್ ಗೂ ಹೆಸರಾಗಿದ್ದಾರೆ. ವಿವಿಧ ಡಿಸೈನರ್ ಗಳು ರೂಪಿಸಿರುವ ಡ್ರೆಸ್ ಗಳನ್ನು ಧರಿಸಿರುವ ಮೇಘನಾ ಈ ವೀಕೆಂಡ್ ಶೋನಲ್ಲಿ ಧರಿಸಿರುವ ಸೀರೆಯ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.
ನೇರಳೆ ಬಣ್ಣದ ಅಂಚು ಇರುವ ಹಸಿರು ಬಣ್ಣದ ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅದಕ್ಕೊಪ್ಪುವ ಮ್ಯಾಚಿಂಗ್ ರವಿಕೆ ಹಾಗೂ ಆಭರಣ, ಅಲಂಕಾರದಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಮುಖ್ಯವಾದ ವಿಚಾರವೆಂದರೆ ಈ ಸೀರೆ ಜೊತೆ ಅವರಿಗೆ ಭಾವನಾತ್ಮಕವಾದ ಸಂಬಂಧವಿದೆ. ಹೌದು, ಮೇಘನಾ ಅವರ ಸೀಮಂತದ ಕಾರ್ಯಕ್ರಮಕ್ಕೆ ಅಮ್ಮ ಪ್ರಮೀಳಾ ಜೋಶಾಯ್ ನೀಡಿದ ಸೀರೆ ಇದಾಗಿದೆ.
ಇದೇ ಸೀರೆಯನ್ನು ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಡ್ಯಾನ್ಸಿಂಗ್ ಚಾಂಪಿಯನ್ ಶೋ ಗಳ ಮಹಾಮಿಲನ ಸಂಚಿಕೆಯಲ್ಲಿ ಉಟ್ಟುಕೊಂಡಿದ್ದಾರೆ. ಈ ವಿಚಾರವನ್ನು ತನ್ನ ಇನ್ಸಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಡ್ಯಾನ್ಸಿಂಗ್ ಚಾಂಪಿಯನ್ ಮಹಾಮಿಲನ. ಸೀಮಂತದ ಸೀರೆಯನ್ನು ಧರಿಸಲು ಆರಿಸಿಕೊಂಡಿದ್ದೇನೆ. ಹೆತ್ತವರು ನೀಡಿದ ಮರೆಯಲಾಗದ ಉಡುಗೊರೆ. ಈ ಸಂಚಿಕೆಯು ಖಂಡಿತವಾಗಿಯೂ ಈ ಕಾರ್ಯಕ್ರಮವು ನಮ್ಮೆಲ್ಲರ ಅತ್ಯುತ್ತಮತೆಯನ್ನು ಹೇಗೆ ಹೊರತರುತ್ತದೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ” ಎಂದಿದ್ದಾರೆ.
ಡ್ಯಾನ್ಸಿಂಗ್ ಚಾಂಪಿಯನ್ ಮಹಾಮಿಲನ ಈ ಸಂಚಿಕೆ ಮೇಘನಾ ರಾಜ್ ಅವರಿಗೆ ಭಾವನಾತ್ಮಕವಾದ ಸಂಚಿಕೆ ಆಗಿದ್ದು ತಾಯಿ ಹಾಗೂ ನಟಿ ಪ್ರಮೀಳಾ ಜೋಶಾಯ್ ಅವರ ಅನಿರೀಕ್ಷಿತ ಪ್ರವೇಶ ಮೇಘನಾ ಅವರಿಗೆ ಸರ್ಪ್ರೈಸ್ ತಂದಿದೆ. ತಾಯಿ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿರುವ ಮೇಘನಾ ತಾಯಿ ತನಗೆ ದೊಡ್ಡ ಸ್ಪೂರ್ತಿ ಎಂದು ಹೇಳಿದ್ದಾರೆ.