ಕನ್ನಡ ಚಿತ್ರರಂಗದ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡಿಗರೆಲ್ಲರ ಅಚ್ಚುಮೆಚ್ಚು. ದಶಕಗಳಿಂದ ಕನ್ನಡ ಸಿನಿರಸಿಕರಿಗೆಲ್ಲ ವಿವಿಧ ರೀತಿಯ ಸಿನಿಮಾಗಳನ್ನು ಉಣಬಡಿಸಿರುವ ಹೆಸರಾಂತ ನಟ, ನಿರ್ದೇಶಕ ಇನ್ನು ಹಲವು ಕ್ಷೇತ್ರಗಳ ಪರಿಣಿತ ರವಿಚಂದ್ರನ್ ಅವರು ಇನ್ನು ಮುಂದೆ ಡಾ| ರವಿಚಂದ್ರನ್ ಆಗಲಿದ್ದಾರೆ. ಬೆಂಗಳೂರು ನಗರ ವಿಶ್ವವಿದ್ಯಾಲಯ ಕ್ರೇಜಿಸ್ಟಾರ್ ಗೆ ಗೌರವ ಡಾಕ್ಟಾರೇಟ್ ಕೊಟ್ಟು ಗೌರವಿಸಲಿದೆ. ರವಿಮಾಮನಿಗೆ ಸಂದಲಿರುವ ಎರಡನೇ ಗೌರವ ಡಾಕ್ಟರೇಟ್ ಪದವಿ ಇದಾಗಿದೆ. ಈ ಹಿಂದೆ ಬೆಂಗಳೂರಿನ ಸಿಎಂಆರ್ ವಿದ್ಯಾಲಯ ಕೂಡ ರವಿಚಂದ್ರನ್ ಅವರ ಸಿನಿರಂಗದ ಕೊಡುಗೆಗಳನ್ನ ಗುರುತಿಸಿ ಡಾಕ್ಟಾರೇಟ್ ಪದವಿ ನೀಡಿತ್ತು.
ಏಪ್ರಿಲ್ 11ರಂದು ತನ್ನ ಮೊದಲ ಘಟಿಕೋತ್ಸವವನ್ನು ಆಚರಿಸಿಕೊಳ್ಳಲಿರುವ ಬೆಂಗಳೂರು ವಿಶ್ವವಿದ್ಯಾಲಯ ರವಿಮಾಮನನ್ನು ಸೇರಿ ಮೂವರಿಗೆ ಗೌರವ ಡಾಕ್ಟಾರೇಟ್ ನೀಡಲಿದೆ. ಸಿನಿರಂಗಕ್ಕೆ, ಮನರಂಜನ ವರ್ಗಕ್ಕೆ ನೀಡಿದ ಕೊಡುಗೆಗಳಿಗಾಗಿ ರವಿಚಂದ್ರನ್ ಅವರಿಗೆ ಗೌರವ ಡಾಕ್ಟಾರೇಟ್ ನಿಂದ ಗೌರವಿಸಿದರೆ, ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ. ಸತ್ಯನಾರಾಯಣ ಹಾಗು ಸಮಾಜಸೇವೆಗಾಗಿ ಎಂ. ಆರ್. ಜೈಶಂಕರ್ ಅವರು ಇನ್ನಿಬ್ಬರು ಪುರಸ್ಕೃತಲಾಗಲಿದ್ದಾರೆ. 41 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನವನ್ನು ತಮ್ಮ ಚೊಚ್ಚಲ ಘಟಿಕೋತ್ಸವದಲ್ಲಿ ನೀಡಲಿದ್ದೇವೆ ಎಂದು ವಿವಿಯ ಕುಲಪತಿಗಳಾದ ಪ್ರೊ. ಲಿಂಗರಾಜ್ ಗಾಂಧಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಕರ್ನಾಟಕದ ರಾಜ್ಯಪಾಲರಾದ ತಾವರ್ಚಂದ್ ಗೆಹಲೊಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಅವರೇ ‘ಕನಸುಗಾರ’ನನ್ನು ಸೇರಿದಂತೆ ಮೂರ್ವರಿಗೆ ಗೌರವ ಡಾಕ್ಟಾರೇಟ್ ಪ್ರದಾನಿಸಲಿದ್ದಾರೆ. ಡಾ. ಕಸ್ತೂರಿ ರಂಗನ್ ಅವರು ಘಟಿಕೋತ್ಸವದಲ್ಲಿ ಭಾಷಣ ಮಾಡಲಿದ್ದಾರೆ. ಸುಮಾರು ಮೂರು ದಶಕಗಳಿಗಿಂತ ಹೆಚ್ಚಿನ ಸಮಯದಿಂದ ಕನ್ನಡದ ಪ್ರೇಕ್ಷಕರ ಮನರಂಜಿಸುತ್ತಿರೋ ಕ್ರೇಜಿ ಸ್ಟಾರ್ ನಾಳೆ(ಏಪ್ರಿಲ್ 11) ಬೆಳಿಗ್ಗೆ 10:30ಕ್ಕೆ ತಮ್ಮ ದ್ವಿತೀಯ ಗೌರವ ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ.