ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರವಾಲ್ ಕಳೆದ 18 ವರ್ಷಗಳಿಂದ ಸಿನಿಮಾ ಮಾಡುತ್ತಿದ್ದಾರೆ. ಇಂತಿಪ್ಪ ಕಾಜಲ್ ಚಿರಂಜೀವಿ ಅವರ ಬಹು ನಿರೀಕ್ಷಿತ ಆಚಾರ್ಯ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಆದರೆ ಇದೀಗ ಅವರು ನಟಿಸಿರುವ ಪಾತ್ರವನ್ನು ಸಿನಿಮಾದಿಂದ ತೆಗೆಯಲಾಗಿದೆ.
ಇದರ ಬಗ್ಗೆ ಮಾತನಾಡಿರುವ ನಿರ್ದೇಶಕ ಕೊರಟಾಲ ಶಿವ “ಕಮರ್ಷಿಯಲ್ ಸಿನಿಮಾ ಎಂದಾಗ ನಾಯಕನ ಜೊತೆ ನಾಯಕಿ ಇರುತ್ತಾರೆ. ಈ ಸಿನಿಮಾಗಾಗಿ ತಮಾಷೆಯಾದ ನಾಯಕಿ ಪಾತ್ರ ಬರೆದಿದ್ದೆ. ಹೀಗಾಗಿ ಕಾಜಲ್ ಅವರನ್ನು ಕರೆಸಿ ಮೂರ್ನಾಲ್ಕು ದಿನ ಶೂಟಿಂಗ್ ಮಾಡಿದ್ದೆವು. ಆದರೆ ಸಿನಿಮಾದ ಕಥೆಗೂ ನಾಯಕಿಯ ಪಾತ್ರಕ್ಕೂ ಹೊಂದಾಣಿಕೆ ಆಗಲಿಲ್ಲ. ಹೀಗಾಗಿ ಕಾಜಲ್ ಪಾತ್ರ ತೆಗೆದುಬಿಟ್ಟೆ. ಕಾಜಲ್ ಅಗರವಾಲ್ ದೊಡ್ಡ ನಾಯಕಿ ಅವರನ್ನು ಸುಮ್ಮನೆ ಯಾವುದೋ ಒಂದೆರಡು ದೃಶ್ಯಗಳಲ್ಲಿ ಬಳಸಿಕೊಳ್ಳುವುದು ಸರಿಯಲ್ಲ. ಕಥೆಯಲ್ಲಿ ಸರಿಯಾದ ತೂಕ ಇದ್ದಾಗ ಮಾತ್ರ ಅವರಂತಹ ನಾಯಕಿಯನ್ನು ಬಳಸಿಕೊಳ್ಳಬೇಕು” ಎಂದಿದ್ದಾರೆ.
“ಈ ಸಿನಿಮಾದಲ್ಲಿ ಕಮರ್ಷಿಯಲ್ ಕಾರಣಕ್ಕೆ ಮಾತ್ರ ನಾಯಕಿ ಪಾತ್ರ ಸೃಷ್ಟಿಸಲಾಗಿತ್ತು. ಹೀಗಾಗಿ ನಾಯಕಿ ಪಾತ್ರ ಬೇಡ ಎಂದುಕೊಂಡೆವು. ಕಾಜಲ್ ಅವರನ್ನು ಸಿನಿಮಾದಿಂದ ಹೊರತೆಗೆಯುವ ಬಗ್ಗೆ ನಿರ್ಮಾಪಕರ ಬಳಿ ಚರ್ಚಿಸಿದೆ. ಅವರು ನಿಮಗೆ ಸೂಕ್ತ ಎನಿಸಿದರೆ ಎಲ್ಲರಿಗೂ ತಿಳಿಸಿ ಮುಂದುವರೆಯುವಂತೆ ಹೇಳಿದರು. ಸ್ವತಃ ಕಾಜಲ್ ಅವರಿಗೆ ವಿಷಯ ವಿವರಿಸಿದೆ. ನಿಮ್ಮನ್ನು ಕಾಮಿಡಿ ಪಾತ್ರದಲ್ಲಿ ತೋರಿಸಲು ಇಷ್ಟವಿಲ್ಲ ಎಂದೆ. ಕಾಜಲ್ ಕೂಡಾ ನನ್ನ ನಿರ್ಧಾರವನ್ನು ಒಪ್ಪಿಕೊಂಡು ಮುಂದೆ ಒಟ್ಟಿಗೆ ಕೆಲಸ ಮಾಡೋಣ ಎಂದರು” ಎಂದಿದ್ದಾರೆ ಕೊರಟಾಲ ಶಿವ.
ಆದರೆ ಕೆಲ ಮೂಲಗಳ ಪ್ರಕಾರ ಕಾಜಲ್ ನಟಿಸಬೇಕಿದ್ದ ದೃಶ್ಯಗಳು ಹಾಗೆಯೆ ಉಳಿದಿದೆ. ಅದೇ ವೇಳೆ ಕಾಜಲ್ ಗರ್ಭಿಣಿಯಾದ ಕಾರಣ ಸಿನಿಮಾದಿಂದ ದೂರ ಉಳಿಯುವುದಾಗಿ ಹೇಳಿದ್ದರುಮ ಇಲ್ಲವಾದರೆ ಎರಡು ತಿಂಗಳು ಕಾಯಬೇಕು ಎಂದಿದ್ದರು. ಎರಡಕ್ಕೂ ಒಪ್ಪದ ಚಿತ್ರ ತಂಡ ಅವರನ್ನು ಸಿನಿಮಾದಿಂದ ಅವರ ಪಾತ್ರವನ್ನು ತೆಗೆದಿದ್ದಾರೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.