ನಟನೆ ನಿರ್ದೇಶನದಲ್ಲಿ ಸೈ ಎನಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಮನೋಜ್ಞ ನಟನೆಯ ಮೂಲಕ ಚಂದನವನದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ ಹ್ಯಾಂಡ್ ಸಮ್ ಹುಡುಗ. ವಿಭಿನ್ನ ಮ್ಯಾನರಿಸಂ , ಕಿಕ್ ನೀಡುವ ಡೈಲಾಗ್ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ಅವರ ಹೊಸ ಸಿನಿಮಾ “ಚಾರ್ಲಿ 777” ಹೊಸ ನಿರೀಕ್ಷೆ ಮೂಡಿಸಿದ್ದು ಜೂನ್ 10ಕ್ಕೆ ರಿಲೀಸ್ ಆಗಲಿದೆ.
ರಕ್ಷಿತ್ ಶೆಟ್ಟಿ ನಟಿಸಿರುವ ಕಿರಣ್ ರಾಜ್ ಕೆ ನಿರ್ದೇಶನದ ಈ ಚಿತ್ರದ ಕನ್ನಡ ಭಾಷೆಯ ಹಕ್ಕುಗಳು 21 ಕೋಟಿಗೆ ಕಲರ್ಸ್ ಕನ್ನಡದ ಪಾಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಇದರ ಹೊರತಾಗಿ ಡಿಜಿಟಲ್ ಹಕ್ಕು ಕಲರ್ಸ್ ಸಂಸ್ಥೆಯ ಒಡೆತನದ ವೂಟ್ ಒಟಿಟಿಗೆ ದೊರಕಿದೆ.
ಕನ್ನಡದ ಜೊತೆಗೆ ಹಿಂದಿ, ಮಲೆಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಈ ಸಿನಿಮಾ ಹಕ್ಕನ್ನು ಆಯಾ ಭಾಷೆಗಳ ಪ್ರಖ್ಯಾತ ಸಂಸ್ಥೆಗಳು ಪಡೆದುಕೊಂಡಿವೆ.
ಚಾರ್ಲಿ 777 ಚಿತ್ರದ ಟ್ರೇಲರ್ ಮೇ 10ರಂದು ಬಿಡುಗಡೆ ಆಗಲಿದ್ದು ಈ ಸಿನಿಮಾದ ಹಾಡುಗಳು ಆಗಲೇ ಜನರ ಮನ ಗೆದ್ದಿದೆ. ನಾಯಿ ಹಾಗೂ ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಈ ಸಿನಿಮಾ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಇನ್ನು ಇದೆಲ್ಲದರ ನಡುವೆ ಕಲರ್ಸ್ ಕನ್ನಡ ವಾಹಿನಿಯ ಹೆಡ್ ಪರಮೇಶ್ವರ್ ಗುಂಡ್ಕಲ್ ಆಗಲೇ ಈ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳನ್ನು ಕೂಡಾ ಹಂಚಿಕೊಂಡಿದ್ದರು. ಶೀಘ್ರದಲ್ಲಿ ತೆರೆ ಮೇಲೆ ಬರಲಿರುವ ಚಾರ್ಲಿ 777 ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.