‘ಕೆಜಿಎಫ್ ಚಾಪ್ಟರ್ 2’ ಸದ್ಯ ಪ್ರಪಂಚದ ಹಲವೆಡೆ ಚಿತ್ರಮಂದಿರಗಳನ್ನು ಆಳುತ್ತಿದೆ. ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತ, ಯಶಸ್ವಿಯಾಗಿ 50ನೇ ದಿನದ ಕಡೆಗೆ ಹೊರಟಿದೆ. ಚಾಪ್ಟರ್ 2 ನಂತರ ಚಾಪ್ಟರ್ 3 ಬರಲಿದೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿ ಅಭಿಮಾನಿಗಳಲ್ಲಿ ಸಂತಸ ಉಂಟುಮಾಡಿತ್ತು. ಈ ಮೂರನೇ ಅಧ್ಯಾಯದ ಬಗೆಗಿನ ಉತ್ಸಾಹ ಎಲ್ಲಿವರೆಗಿತ್ತೆಂದರೆ, ಅಭಿಮಾನಿಗಳು ಹೊಸ ಹೊಸ ಪೋಸ್ಟರ್, ಟೀಸರ್ ಹಾಗು ಟ್ರೈಲರ್ ಗಳನ್ನೂ ತಾವೇ ಎಡಿಟ್ ಮಾಡಿ ಬಿಡುಗಡೆಗೊಳಿಸುವಷ್ಟು. ಈ ಬಗೆಯ ‘ಫ್ಯಾನ್-ಮೇಡ್’ ವಿಡಿಯೋಗಳು ಸದ್ಯ ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗುತ್ತಿವೆ. ಇದೀಗ ಕೆಜಿಎಫ್ ಚಾಪ್ಟರ್ 3 ಬಗೆಗಿನ ಹೊಸ ವಿಷಯಗಳು ಹೊರಬಿದ್ದಿವೆ.
ಈ ಹಿಂದೆ ‘ಕೆಜಿಎಫ್ ಚಾಪ್ಟರ್ 3’ರಲ್ಲಿ ತೆಲುಗಿನ ಖ್ಯಾತ ನಟ ರಾಣ ದಗ್ಗುಬಾಟಿ ನಟಿಸಲಿದ್ದಾರೆ. ರಾಕಿಗೆ ವಿಲನ್ ಆಗಿರಲಿದ್ದಾರೆ ರಾಣ ದಗ್ಗುಬಾಟಿ ಎಂಬ ಸುದ್ದಿಗಳು ಕೇಳಿಬಂದಿದ್ದವು. ಈಗ ಬಾಲಿವುಡ್ ನ ಹೆಸರಾಂತ ನಟ ಹೃತಿಕ್ ರೋಷನ್ ಅವರು ಚಿತ್ರದ ತಾರಾಗಣವನ್ನ ಸೇರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಎಲ್ಲ ವಿಷಯಗಳಿಗೆ ‘ಹೊಂಬಾಳೆ ಫಿಲಂಸ್’ ಸಂಸ್ಥೆಯ ಸಂಸ್ಥಾಪಕ ಹಾಗು ಕೆಜಿಎಫ್ ಚಿತ್ರಗಳ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗಷ್ಟೇ ಖಾಸಗಿ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಜಿಎಫ್ ಚಾಪ್ಟರ್ 3 ಹಾಗು ತಮ್ಮ ಮುಂದಿನ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ ನಿರ್ಮಾಪಕರು.
“ನಾವು ಕೆಜಿಎಫ್ ಚಾಪ್ಟರ್ 3 ಚಿತ್ರದ ಕಾಸ್ಟಿಂಗ್ ಬಗ್ಗೆ ಇನ್ನು ಯಾವುದೇ ರೀತಿಯ ಯೋಚನೆಯಾಗಲಿ, ನಿರ್ಧಾರವಾಗಲಿ ಮಾಡಿಲ್ಲ. ಚಿತ್ರದ ಚಿತ್ರೀಕರಣದ ಬಗ್ಗೆಯೂ ಸದ್ಯ ಯಾವುದೇ ಚರ್ಚೆಯಾಗಿಲ್ಲ. ಪ್ರಶಾಂತ್ ನೀಲ್ ಅವರು ಈಗ ‘ಸಲಾರ್’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಅವರು ಸಹ ತಮ್ಮ ಮುಂದಿನ ಚಿತ್ರವನ್ನು ಸದ್ಯದಲ್ಲೇ ಘೋಷಿಸಿ, ಅದರ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಹಾಗಾಗಿ ಸದ್ಯ ಕೆಜಿಎಫ್ ಚಾಪ್ಟರ್ 3 ಬಗೆಗಿನ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ” ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಹಾಗಾಗಿ ಕೆಜಿಎಫ್ ಚಾಪ್ಟರ್ 3ರ ರಹಸ್ಯಗಳು ಸದ್ಯಕ್ಕೆ ರಹಸ್ಯವಾಗಿಯಯೇ ಉಳಿದುಹೋಗಿವೆ. ಸದ್ಯ ಸುಳಿಯುತ್ತಿರುವಂತಹ ರಾಣ ದಗ್ಗುಬಾಟಿ ಹಾಗು ಹೃತಿಕ್ ರೋಷನ್ ಅವರ ವಿಷಯಗಳು ಸದ್ಯಕ್ಕೆ ಸುಳ್ಳಾಗಿಯೇ ಉಳಿದುಕೊಳ್ಳಲಿವೆ.
ಚಿತ್ರತಂಡದ ಪ್ಲಾನಿಂಗ್ ನಂತೆ, ಈಗಾಗಲೇ ಎರಡನೇ ವೇಳಾಪಟ್ಟಿಯ ಚಿತ್ರೀಕರಣ ಆರಂಭಿಸಿರೋ ‘ಸಲಾರ್’ ಸಿನಿಮಾವನ್ನು, ಈ ವರ್ಷದಂತ್ಯದೊಳಗೆ ಮುಗಿಸಿಕೊಂಡು, 2023ರ ಆರಂಭಕ್ಕೆ ಸಿನಿಮಾವನ್ನು ಬಿಡುಗಡೆಗೋಳಿಸೋ ತಯಾರಿ ಮಾಡಿಕೊಳ್ಳಲಿದ್ದಾರೆ. ತದನಂತರವೆ ಕೆಜಿಎಫ್ ಚಾಪ್ಟರ್ 3ರ ಕೆಲಸಗಳು ಆರಂಭವಾಗಲಿವೆ.