ರಾಕಿಂಗ್ ಸ್ಟಾರ್ ಬಿರುದಾಕಿಂತ ಕನ್ನಡ ಸಿನಿಮಾರಂಗ ಹ್ಯಾಂಡ್ ಸಮ್ ನಟ ಯಶ್ ಅಭಿನಯದ ಲಕ್ಕಿ ಸಿನಿಮಾ ನೆನಪಿಲ್ಲದವರಾರು ಹೇಳಿ? ಸ್ಟೈಲಿಶ್ ಲುಕ್ ಮೂಲಕ ಲಕ್ಕಿಯಾಗಿ ಸಿನಿಪ್ರಿಯರ ಮನ ಗೆದ್ದ ಯಶ್ ಹೆಣ್ ಮಕ್ಕಳ ಮನ ಕದ್ದದ್ದು ಕೂಡಾ ಲಕ್ಕಿಯಾಗಿ! ನಟಿ ರಾಧಿಕಾ ಕುಮಾರಸ್ವಾಮಿ ನಿರ್ಮಾಣದ, ಡಾ.ಸೂರಿ ನಿರ್ದೇಶನದ ಲಕ್ಕಿ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ ಹತ್ತು ವರ್ಷಗಳೇ ಕಳೆದಿದೆ.
ಮೋಹಕ ತಾರೆ ರಮ್ಯಾ ಹಾಗೂ ರಾಕಿಂಗ್ ಸ್ಟಾರ್ ಯಶ್ ಜೋಡಿಯ ಮೊದಲ ಸಿನಿಮಾ ಇದಾಗಿದ್ದು ನವಿರಾದ ಪ್ರೇಮಕತೆಯು ಸಿನಿಪ್ರಿಯರನ್ನು ರಂಜಿಸಿತ್ತು. ಮಾತ್ರವಲ್ಲ ಕೆಲವೊಂದು ಹಾಸ್ಯಮಯ ಸನ್ನಿವೇಶಗಳು ಕೂಡಾ ಇದರಲ್ಲಿದ್ದು ವೀಕ್ಷಕರಿಗೆ ಪಕ್ಕಾ ಮನರಂಜನೆ ನೀಡಿತ್ತು.
ಅಂದ ಹಾಗೇ ಹತ್ತು ವರ್ಷದ ಹಿಂದೆ ರಿಲೀಸ್ ಆಗಿರುವ ಸಿನಿಮಾದ ಬಗ್ಗೆ ಈಗ್ಯಾಕೆ ಮಾತು ಎಂಬ ಕುತೂಹಲ ನಿಮ್ಮನ್ನು ಕಾಡುತ್ತಿರುವುದು ಸಹಜ. ಲಕ್ಕಿ ಸಿನಿಮಾ ಇದೀಗ ತೆಲುಗಿಗೆ ಡಬ್ ಆಗಲಿದೆ. ಅದು ಹತ್ತು ವರ್ಷದ ಬಳಿಕ! ಈಗಾಗಲೇ ಸಿನಿಮಾ ಡಬ್ ಆಗಿದ್ದು ರಿಲೀಸ್ ಗೆ ತಯಾರಾಗುತ್ತಿದೆ.
ಇನ್ನು ಲಕ್ಕಿ ಸಿನಿಮಾ ತೆಲುಗುವಿನಲ್ಲಿ ಯಾವಾಗ ರಿಲೀಸ್ ಆಗುವ ದಿನಾಂಕ ಇನ್ನು ಕೂಡಾ ಬಹಿರಂಗವಾಗಿಲ್ಲ. ಕೆಜಿಎಫ್ ಚಾಪ್ಟರ್ 1 ಹಾಗೂ 2 ರ ಮೂಲಕ ಜಗತ್ತಿನಾದ್ಯಂತ ಮನೆ ಮಾತಾಗಿರುವ ರಾಕಿಂಗ್ ಸ್ಟಾರ್ ಅವರ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಯಶ್ ಅಭಿನಯದ ಚಿತ್ರಗಳು ಡಬ್ ಆದರೆ ಆಶ್ಚರ್ಯವೇನಿಲ್ಲ.