ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಖಳನಾಯಕಿ ಸೌಂದರ್ಯ ತಂಗಿ ಐಶ್ವರ್ಯ ಆಗಿ ಅಭಿನಯಿಸುತ್ತಿರುವ ಐಶ್ವರ್ಯ ಶಿಂಧೋಗಿ ಹಿರಿತೆರೆ ಮೂಲಕ ನಟನಾ ಪಯಣ ಶುರು ಮಾಡಿದ ಚೆಲುವೆ.
ಹೋಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದಿರುವ ಐಶ್ವರ್ಯ ಶಿಂಧೋಗಿ ಬಾಲನಟಿ ಎಂಬ ವಿಚಾರ ಅನೇಕರಿಗೆ ಗೊತ್ತಿಲ್ಲ. ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿರುವ ಐಶ್ವರ್ಯ ಗೆ ಆಗ ಕೇವಲ ಒಂಭತ್ತು ವರ್ಷ. ಮುಂದೆ ಓದಿನ ಸಲುವಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡಿರುವ ಐಶ್ವರ್ಯ ಜಾಕ್ಸನ್ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಲೋಕಕ್ಕೆ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು.
ಮುಂದೆ ಸಪ್ನೋಂಕಿ ರಾಣಿ, ರಣತಂತ್ರ, ಮಮ್ಮಿ ಸೇವ್ ಮಿ, ಸಂಯುಕ್ತ 2, ಮಟಾಶ್ ಸಿನಿಮಾಗಳಲ್ಲಿ ಅಭಿನಯಿಸಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ರಲ್ಲಿ ಮಾಯಾಂಗನೆ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಐಶ್ವರ್ಯ ಅಭಿನಯಕ್ಕೆ ಫಿದಾ ಆಗದವರಿಲ್ಲ. ಮಾಯಾಂಗನೆ ಪಾತ್ರ ಮುಗಿದಾಗ ಇಷ್ಟು ಬೇಗ ಮುಗಿಯಿತಾ ಎಂದು ಪ್ರೇಕ್ಷಕರು ಬೇಸರಗೊಂಡಿದ್ದರು.
ತದ ನಂತರ ಮಂಗಳಗೌರಿಯಲ್ಲಿ ವಿಲನ್ ಆಗಿ ನಟಿಸುವ ಅವಕಾಶ ಪಡೆದುಕೊಂಡಿರುವ ಐಶ್ವರ್ಯ ಅಲ್ಲಿಯೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು. ಇಂತಿಪ್ಪ ಐಶ್ವರ್ಯ ಇದೀಗ ಮರಳಿ ಬಂದಿದ್ದಾರೆ. ಮಾಯಾಂಗನೆ ಆಗಿ ಮೋಡಿ ಮಾಡಲು ತಯಾರಾಗಿದ್ದಾರೆ.
ಮಾಯಾಂಗನೆ ಆಗಿ ಮರಳಿರುವ ಸಂತಸದ ವಿಚಾರವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಇದು ಅಕ್ಷರಶಃ ಕನಸಿನಂತೆ. ನಾಗಿಣಿ 2 ರಲ್ಲಿ ಮಾಯಾಂಗನೆ ಮತ್ತೆ ಬರುತ್ತಿದ್ದಾಳೆ. ಇದಕ್ಕೆ ನೀವೇ ಕಾರಣ. ಮಾಯಾಂಗನೆ ಪಾತ್ರಕ್ಕೆ ನೀವು ತೋರಿಸಿರುವ ಪ್ರೀತಿ ಅಗಾಧವಾದುದು. ಮಾಯಾಂಗನೆ ಪಾತ್ರ ಕೊನೆಗೊಂಡಾಗ ನೀವು ಬೇಸರ ವ್ಯಕ್ತಪಡಿಸಿದ್ದೀರಿ. ಇದೀಗ ಮಾಯಾಂಗನೆ ಮತ್ತೆ ಮರಳಿ ಬರುತ್ತಿರುವುದು ಈ ಪುನರಾಗಮನವನ್ನು ನಾನು ವೀಕ್ಷಕರಿಗೆ ಅರ್ಪಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ ಐಶ್ವರ್ಯ.
ಇದರ ಜೊತೆಗೆ “ಮಾಯಾಂಗನೆ ಪಾತ್ರ ನನ್ನ ಬಷ್ಣದ ಬದುಕಿನಲ್ಲಿ ತುಂಬಾ ನೆಚ್ಚಿನ ಪಾತ್ರವೂ ಆಗಿತ್ತು. ಅದು ಕೇವಲ ಪಾತ್ರವಾಗಿರಲಿಲ್ಲ. ನಾನು ಆ ಪಾತ್ರದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೆ. ಇದೀಗ ಮತ್ತೆ ಮಾಯಾಂಗನೆ ಆಗಿ ನಟಿಸುವ ಅವಕಾಶ ಕಲ್ಪಿಸಿದ ಜೀ ಕನ್ನಡ ವಾಹಿನಿಗೂ, ನಿರ್ದೇಶಕ ರಾಮ್ ಜೀ ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರು ಕಡಿಮೆಯೇ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಐಶ್ವರ್ಯ ಶಿಂಧೋಗಿ.