ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ಜೆಕೆ ಆಲಿಯಾಸ್ ಜಯಕೃಷ್ಣ ಆಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಹ್ಯಾಂಡ್ ಸಮ್ ಹುಡುಗನ ಹೆಸರು ಜಯರಾಂ ಕಾರ್ತಿಕ್. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಜಯರಾಂ ಕಾರ್ತಿಕ್ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿ ಅಣ್ಣನಾಗಿ ಕಾಣಿಸಿಕೊಂಡರು.
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಜಯರಾಂ ಕಾರ್ತಿಕ್ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು ಜನ ಅವರ ಮೇಲೆ ಇಟ್ಟಿರುವ ಪ್ರೀತಿಗೆ ಉದಾಹರಣೆ.
ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲಿಯೂ ಮಿಂಚಿರುವ ಜಯರಾಂ ಕಾರ್ತಿಕ್ ಪರಭಾಷೆಯ ಕಿರುತೆರೆಯಲ್ಲಿಯೂ ಮೋಡಿ ಮಾಡಿದರು. ಹಿಂದಿಯಾ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ಅಬ್ಬರಿಸಿದ ಜಯರಾಂ ಕಾರ್ತಿಕ್ ಅವರಿಗೆ ಆ ಪಾತ್ರ ತಂದುಕೊಟ್ಟ ಜನಪ್ರಿಯತೆ ಅಷ್ಟಿಷ್ಟಲ್ಲ.
ಸಿಯಾ ಕೆ ರಾಮ್ ಧಾರಾವಾಹಿಯ ನಂತರ ಹಿಂದಿ ಕಿರುತೆರೆಯಿಂದ ದೂರವಿದ್ದ ಜಯರಾಂ ಕಾರ್ತಿಕ್ ಇದೀಗ 5 ವರ್ಷಗಳ ನಂತರ ಮತ್ತೆ ಮರಳಿ ಬರುತ್ತಿದ್ದಾರೆ. ಹಿಂದಿಯಲ್ಲಿ ಆರಂಭವಾಗಲಿರುವ ‘ಅಲಿಬಾಬಾ ದಸ್ತಾನ್-ಎ-ಕಾಬೂಲ್’ ಎನ್ನುವ ಫ್ಯಾಂಟಸಿ ಧಾರಾವಾಹಿಯಲ್ಲಿ ನಟಿಸಲಿದ್ದಾರೆ.
ಧಾರಾವಾಹಿಯ ಪಾತ್ರದ ಬಗ್ಗೆ ಮಾತನಾಡಿರುವ ಜಯರಾಂ ಕಾರ್ತಿಕ್ “ಇದೀಗ ಮತ್ತೊಮ್ಮೆ ಖಳನಾಯಕನಾಗಿ ನಿಮ್ಮನ್ನು ರಂಜಿಸಲು ಬರುತ್ತಿದ್ದೇನೆ. ಇಲ್ಲಿಯ ತನಕ ನಾನು ನಿರ್ವಹಿಸಿರುವ ಪಾತ್ರಗಳಿಗಿಂತ ಇದು ಭಿನ್ನವಾಗಿದೆ. ಆಲಿಬಾಬ ಮತ್ತು ನಲುವತ್ತು ಕಳ್ಳರು ಕಥೆಯಿಂದ ಒಂದು ಸಣ್ಣ ಎಳೆಯನ್ನು ತೆಗೆದುಕೊಂಡು ಅದನ್ನು ಧಾರಾವಾಹಿಯಾಗಿ ನಿರ್ಮಿಸಲಾಗಿದೆ” ಎಂದು ಹೇಳುತ್ತಾರೆ.
“ಹಿಂದಿ ಕಿರುತೆರೆಯ ಜನರು ನನ್ನನ್ನು ಸ್ವೀಕರಿಸಿದ್ದಾರೆ. ಇದು ನನ್ನ ಎರಡನೇ ಮನೆ ಹೌದು. ಈ ಕಿರುತೆರೆಯಲ್ಲಿ ಹೊರಗಿನಿಂದ ಬಂದ ನಟರು ನೆಲೆ ನಿಲ್ಲುವುದು ಸುಲಭದ ಮಾತಲ್ಲ. ನನಗೆ ಆ ಅವಕಾಶ ದೊರಕಿದೆ. ಹೊಸ ಧಾರಾವಾಹಿಯ ಮೂಲಕ ಮತ್ತೆ ಹೊಸ ಹವಾ ಸೃಷ್ಟಿ ಮಾಡುತ್ತೇನೆ ಎನ್ನುವ ಭರವಸೆ ನನಗಿದೆ” ಎಂದು ಹೇಳುತ್ತಾರೆ ಜಯರಾಂ ಕಾರ್ತಿಕ್.