ಬಾಲ ಕಲಾವಿದ ಆಗಿ ಮೋಡಿ ಮಾಡಿದ್ದ ಸುನೀಲ್ ರಾವ್ ಅವರಿಗೆ ಬ್ರೇಕ್ ನೀಡಿದ್ದು ಎಕ್ಸ್ ಕ್ಯೂಸ್ ಮಿ ಸಿನಿಮಾ. ಮುಂದೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದ ಸುನೀಲ್ ರಾವ್ ಮತ್ತೆ ನಟನೆಯ ಮೂಲಕ ಸದ್ದು ಮಾಡುತ್ತಿದ್ದಾರೆ. ಬರೋಬ್ಬರಿ 12 ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ಸುನೀಲ್ ರಾವ್ ತುರ್ತು ನಿರ್ಗಮನ ಸಿನಿಮಾದ ಮೂಲಕ ಕಂ ಬ್ಯಾಕ್ ಮಾಡುತ್ತಿದ್ದಾರೆ.
ಹೇಮಂತ್ ಕುಮಾರ್ ನಿರ್ದೇಶನದ ವಿಭಿನ್ನ ಕಥಾಹಂದರವನ್ನೊಳಗೊಂಡ ತುರ್ತು ನಿರ್ಗಮನ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಸಿನಿಪ್ರಿಯರು ಅದನ್ನು ಮೆಚ್ಚಿಕೊಂಡಿದ್ದರು. ಇನ್ನು ಇದೇ ತಿಂಗಳ ಜೂನ್ 24 ರಂದು ಸಿನಿಮಾ ರಿಲೀಸ್ ಆಗಲಿದ್ದು ಅದರಲ್ಲಿ ಮುಖ್ಯ ಭೂಮಿಕೆಯಲ್ಲಿ ಸುನೀಲ್ ರಾವ್ ಕಾಣಿಸಿಕೊಂಡಿದ್ದಾರೆ.
“12 ವರ್ಷಗಳ ನಂತರ ಮತ್ತೆ ನಟಿಸುತ್ತಿರುವುದು ಖುಷಿ ತಂದಿದೆ. ಸುದೀರ್ಘ ಗ್ಯಾಪ್ ನ ನಂತರ ಮತ್ತೆ ನಟಿಸಬೇಕು ಎಂದು ಅಂದುಕೊಂಡಾಗ ದೊರೆತ ಸಿನಿಮಾವೇ ತುರ್ತುನಿರ್ಗಮನ. ನಿರ್ದೇಶಕರು ಕತೆ ಹೇಳಿದಾಗ ಖುಷಿ ಆಗಿ ನಾನು ಕೂಡಲೇ ನಟಿಸಲು ಒಪ್ಪಿಕೊಂಡೆ. ನಾನು ಮಾತ್ರ ಅಲ್ಲ, ಕತೆ ಕೇಳಿದ ಯಾರೇ ಆಗಲಿ ನಟಿಸಲು ಅಸ್ತು ಎನ್ನುತ್ತಿದ್ದರು. ಅಷ್ಟರ ಮಟ್ಟಿಗೆ ಕತೆ ಉತ್ತಮವಾಗಿದೆ” ಎಂದು ಹೇಳುತ್ತಾರೆ ಸುನೀಲ್ ರಾವ್.
ಇದರ ಜೊತೆಗೆ “ತುಂಬಾ ವರ್ಷಗಳ ನಂತರ ಒಂದು ಉತ್ತಮವಾದ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ತಂದಿದೆ” ಎನ್ನುವ ಸುನೀಲ್ ರಾವ್ ಮುಂದಿನ ದಿನಗಳಲ್ಲಿ ಸಿನಿರಂಗದಲ್ಲಿ ಸಕ್ರಿಯರಾಗುತ್ತಾರಾ ಎಂದು ಕಾದು ನೋಡಬೇಕಾಗಿದೆ.