ಕನ್ನಡ ಚಿತ್ರರಂಗದಲ್ಲಿ ತಾಯಿಯಾದ ನಂತರ ಮರಳಿ ನಾಯಕನಟಿಯಾಗಿ ನಟಿಸಿದ ನಟಿಯರ ಸಂಖ್ಯೆ ಬೆರಳೆಣಿಕೆಯಷ್ಟು. ಈ ಸಾಲಿಗೆ ಸೇರುತ್ತಿರೋ ಈಗಿನ ನಟಿ ಎಂದರೆ ‘ಸಿಂಪಲ್ ಬೆಡಗಿ’ ಎಂದೇ ಖ್ಯಾತರಾಗಿರುವ ಶ್ವೇತ ಶ್ರಿವಾಸ್ತವ. ಸುನಿ ಅವರ ನಿರ್ದೇಶನದಲ್ಲಿ ಮೂಡಿಬಂದ ಸೂಪರ್ ಹಿಟ್ ಸಿನಿಮಾ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಸಿನಿಮಾದಿಂದ ಜನಪ್ರಿಯರಾಗಿದ್ದ ಇವರು ತಾಯಿಯಾದ ಬಳಿಕ ನಟನೆಯಿಂದ ವಿರಾಮ ಪಡೆದಿದ್ದರು. ಇದೀಗ ಮರಳಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ. ಇದೀಗ ಶ್ವೇತ ಅವರ ಹೊಸ ಸಿನಿಮಾ ತೆರೆಕಡೆಗೆ ಹೊರಟಿದೆ.
ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಗೋಪಾಲ್ ಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ ಮುಂತಾದ ಮನೋಜ್ಞ ನಟರು ಬಣ್ಣ ಹಚ್ಚಿರುವ ಹೊಸ ಸಿನಿಮಾ ‘ಹೋಪ್’. ಅಂಬರೀಶ ಎಂ ಎಂಬ ಯುವ ನಿರ್ದೇಶಕರ ಮೊದಲ ಪ್ರಯತ್ನ ಇದಾಗಿದ್ದು, ಈ ಸಿನಿಮಾಗೆ ಶ್ವೇತ ಶ್ರಿವಾಸ್ತವ ಅವರೇ ನಾಯಕಿ. ರಾಜಕೀಯದ ಏರು-ಪೇರುಗಳು, ವ್ಯವಸ್ಥೆಯಲ್ಲಿನ ಸಮಸ್ಯೆಗಳ ಬಗೆಗೆ ಮಾತನಾಡುವ ಪೊಲಿಟಿಕಲ್ ಥ್ರಿಲರ್ ಕಥೆ ಇದಾಗಿರಲಿದೆ. ಸಂಪೂರ್ಣ ಹೊಸಬರ ತಂತ್ರಜ್ಞ ತಂಡ ಇರುವ ಈ ಸಿನಿಮಾ ಜುಲೈ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಸದ್ಯ ‘ಸಿಂಪಲ್ ಬೆಡಗಿ’ ಶ್ವೇತ ಶ್ರಿವಾಸ್ತವ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’, ಕಾದಂಬರಿ ಆಧಾರಿತ ‘ಚಿಕ್ಕಿ ಮೂಗುತಿ’ ಇನ್ನು ಹಲವು ಗಮನಾರ್ಹ ಸಿನಿಮಾಗಳಲ್ಲಿ ಶ್ವೇತ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. “ನನ್ನ ಕೆರಿಯರ್ ನಲ್ಲಿ ‘ಹೋಪ್’ ಒಂದು ತಿರುವು ನೀಡಬಹುದಾದಂತಹ ಚಿತ್ರ” ಎಂದು ಸ್ವತಃ ಶ್ವೇತಾ ಹೇಳಿಕೊಂಡಿದ್ದಾರೆ. ಸುಮಲತಾ ಅಂಬರೀಷ್, ಪ್ರಕಾಶ್ ಬೆಳವಾಡಿಯಾವರಂತಹ ಹಿರಿಯ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಸಿನಿಮಾ ಇದೇ ಜುಲೈ 8ರಂದು ಬಿಡುಗಡೆ ಕಾಣುತ್ತಿದೆ.