ಚಂದನವನದ ‘ಕನಸುಗಾರ’, ‘ಪ್ರೇಮಲೋಕ’ದ ಸರದಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ದಶಕಗಳಿಂದ ಕನ್ನಡಿಗರಿಗೆ ಹಲವು ಅದ್ಭುತ ಸಿನಿಮಾಗಳನ್ನು ನೀಡಿರುವ ಇವರು, ಇದೀಗ ತಮ್ಮ ಹೊಸ ಚಿತ್ರದ ಜೊತೆಗೆ ಚಿತ್ರಮಂದಿರಕ್ಕೇ ಕಾಲಿಡುತ್ತಿದ್ದಾರೆ. ಅದು ಕೂಡ ಅವರದೇ ನಿರ್ದೇಶನದಲ್ಲಿ. ರವಿಮಾಮ ಸಿನೆಮಾ ನಿರ್ದೇಶನ ಮಾಡದೆ ವರ್ಷಗಳೇ ಕಳೆದಿವೆ. ಸದ್ಯ ಇವರ ನಿರ್ದೇಶನದಲ್ಲಿ ತಯಾರಾಗಿರುವ ‘ರವಿ ಬೋಪಣ್ಣ’ನ ಮೇಲೆ ಸಿನಿರಸಿಕರೆಲ್ಲರ ಕಣ್ಣುಗಳಿವೆ.
ರವಿಚಂದ್ರನ್ ಅವರದೇ ನಿರ್ಮಾಣ ಸಂಸ್ಥೆಯಾದ ‘ಈಶ್ವರಿ ಪ್ರೊಡಕ್ಷನ್ಸ್’ ಕಡೆಯಿಂದ ಬರುತ್ತಲಿರೋ ಐವತ್ತನೇ ಸಿನಿಮಾ ಈ ‘ರವಿ ಬೋಪಣ್ಣ’.ಇದೇ ಆಗಸ್ಟ್ 12ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ರವಿಚಂದ್ರನ್ ಅವರು ಭಾಗವಹಿಸುತ್ತಿರುವ ಜೀ ಕನ್ನಡದ ರಿಯಾಲಿಟಿ ಶೋ,’ಡ್ರಾಮಾ ಜೂನಿಯರ್ಸ್’ನಲ್ಲಿ ಸ್ವತಃ ಅವರೇ ಘೋಷಣೆ ಮಾಡಿದ್ದಾರೆ. ಚಿತ್ರದಲ್ಲಿ ನಿರ್ದೇಶನ, ನಿರ್ಮಾಣ ಮಾತ್ರವಲ್ಲದೆ, ಸಂಗೀತ ನಿರ್ದೇಶಕರಾಗಿ, ಎಲ್ಲಾ ಹಾಡುಗಳ ಬರಹಗಾರನಾಗಿ, ಎಡಿಟರ್ ಆಗಿ ಜೊತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಹಲವು ರಂಗಗಳಲ್ಲಿ ರವಿ ಸರ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸಿನಿಮಾದಲ್ಲಿನ ವಕೀಲನ ಪ್ರಮುಖ ಪಾತ್ರವೊಂದಕ್ಕೆ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ಬಣ್ಣ ಹಚ್ಚಿದ್ದಾರೆ. ಇದಷ್ಟೇ ಅಲ್ಲದೇ ಚಿತ್ರದ ತಾರಗಣದಲ್ಲಿ ರಚಿತ ರಾಮ್, ಸಂಚಿತ ಪಡುಕೋಣೆ, ರಮ್ಯಾ ಕೃಷ್ಣನ್, ಜೈ ಜಗದೀಶ್, ರವಿಶಂಕರ್ ಗೌಡ ಮುಂತಾದ ಮುಂಚೂಣಿ ನಟರಿದ್ದಾರೆ. ಇದೊಂದು ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಎಂದೂ ರವಿಚಂದ್ರನ್ ಅವರು ಹೇಳಿದ್ದು, ‘ಕರ್ಮ ಈಸ್ ಕ್ರೇಜಿ’ ಎಂಬ ಟ್ಯಾಗ್ ಲೈನ್ ಚಿತ್ರದ ಶೀರ್ಷಿಕೆಯ ಜೊತೆಗೆ ಕಾಣಸಿಗುತ್ತದೆ. ಯೋಗರಾಜ್ ಭಟ್ ಅವರ ಬಹುನಿರೀಕ್ಷಿತ ‘ಗಾಳಿಪಟ 2’ ಹಾಗು ಪ್ರಜ್ವಲ್ ದೇವರಾಜ್ ಅವರ ‘ಅಬ್ಬರ’ ಸಿನಿಮಾಗಳ ಜೊತೆಗೆ ಇದೇ ಆಗಸ್ಟ್ 12ರಂದು ‘ರವಿ ಬೋಪಣ್ಣ’ ಕಣಕ್ಕಿಳಿಯಲಿದ್ದಾರೆ.