2019ರಲ್ಲಿ ತೆರೆಕಂಡ ‘ಮನೆ ಮಾರಾಟಕ್ಕಿದೆ’ ಸಿನಿಮಾದ ಮೂಲಕ ಕೊನೆಯ ಬಾರಿ ತೆರೆಯಲ್ಲಿ ಕಾಣಿಸಿಕೊಂಡಿದ್ದ ನಟಿ ಕಾರುಣ್ಯ ರಾಮ್ ಇದೀಗ ಹಾಸ್ಯ ಚಿತ್ರ ‘ಪೆಟ್ರೋಮ್ಯಾಕ್ಸ್’ ಮೂಲಕ ಮತ್ತೆ ಸಿನಿರಂಗಕ್ಕೆ ಮರಳಿದ್ದಾರೆ.
ಎರಡೂವರೆ ವರ್ಷಗಳ ನಂತರ ತಮ್ಮ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ ನಟಿ ಕಾರುಣ್ಯ.
ಜುಲೈ 15ರಂದು ತೆರೆ ಕಾಣಲು ಸಿದ್ಧವಾಗಿರುವ ಪೆಟ್ರೋಮ್ಯಾಕ್ಸ್ ಬಗ್ಗೆ ಮಾತನಾಡಿದ ಅವರು ”ಯುನಿಸೆಟ್ ಸಲೂನ್ ಒಂದರಲ್ಲಿ ಬ್ಯೂಟಿಷಿಯನ್ ಆಗಿರುವ ಕವಿತಾ ಕೃಷ್ಣಮೂರ್ತಿ ಎಂಬ ಪಾತ್ರವನ್ನು ನಾನು ನಿಭಾಯಿಸುತ್ತಿದ್ದೇನೆ. ಇದು ನನ್ನ ವೃತ್ತಿ ಜೀವನದಲ್ಲಿ ತುಂಬಾ ಸವಾಲು ಭರಿತ ಪಾತ್ರವಾಗಿತ್ತು. ಅನಾಥ ಹುಡುಗಿಯಾಗಿ ಕವಿತಾ ಮೂರು ಹುಡುಗರೊಂದಿಗೆ ಬೆಳೆಯುತ್ತಾಳೆ. ಹಾಗಾಗಿ ಅವಳ ಗುಣ ನಡವಳಿಕೆಯಲ್ಲಿ ಸಾಧಾರಣ ಹುಡುಗಿಯರಂತಿರದೇ ವಿಶೇಷವಾಗಿರುತ್ತಾಳೆ. ಶೂಟಿಂಗ್ ಆರಂಭವಾದ ದಿನಗಳಲ್ಲಿ ನನ್ನ ಪಾತ್ರವನ್ನು ಆಹ್ವಾನಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿತ್ತು. ಬರು ಬರುತ್ತಾ ನನ್ನ ಪಾತ್ರವನ್ನು ತುಂಬಾ ಖುಷಿಯಿಂದ ನಿಭಾಯಿಸಲು ಕಲಿತೆ” ಎನ್ನುತ್ತಾರೆ.
”ಕಥೆಯ ಹೆಣೆ ಬೆಳೆಯುತ್ತಾ ಹೋದಂತೆ ನನ್ನ ಪಾತ್ರ ಕೂಡ ಒಂದು ಎಮೋಷನ್ ಟಚ್ ಅನ್ನು ಹೊಂದಲಿದ್ದು, ಇದೊಂದು ಸಂದೇಶಾತ್ಮಕ ಪಾತ್ರವಾಗಿದೆ. ನಾನಂತೂ ಖಂಡಿತವಾಗಿ ಹೇಳಬಲ್ಲೆ, ಏನೆಂದರೆ ಈ ಸಿನಿಮಾ ನೋಡಿದ ಮೇಲೆ ಜನರು ನನ್ನನ್ನು ಪೆಟ್ರೋಮ್ಯಾಕ್ಸ್ ಕಾರುಣ್ಯ ಎಂದು ಕರೆಯುತ್ತಾರೆ. ಯಾಕೆಂದರೆ ಇದು ಅಷ್ಟೊಂದು ಪ್ರಭಾವವನ್ನು ಬೀರಬಲ್ಲಂತಹ ಪಾತ್ರ. ಇದರೊಂದಿಗೆ ನೀನಾಸಂ ಸತೀಶ್, ನಾಗಭೂಷಣ್ ಹಾಗೂ ಅರುಣ್ ಕುಮಾರ್ ಅವರೊಂದಿಗಿನ ಚಿತ್ರೀಕರಣ ಸಂದರ್ಭ ನಮ್ಮನ್ನು ಆಪ್ತರನ್ನಾಗಿ ಮಾಡಿತು” ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.