ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸಿರುವ ಕೊನೆಯ ಸಿನಿಮಾ ‘ಜೇಮ್ಸ್’ ಸೂಪರ್ ಹಿಟ್ ಆಗಿತ್ತು. ಅದರ ನಿರ್ಮಾಪಕರಾದ ಕಿಶೋರ್ ಪತಿಕೊಂಡ ಅವರು ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಸುದ್ದಿ ನೀಡಿದ್ದರು. ರಾಜ್ ಕುಟುಂಬದ ಇನ್ನೊಂದು ಕುಡಿ ಧೀರನ್ ರಾಮಕುಮಾರ್ ಅವರ ಜೊತೆಗೆ ‘ಕಿಶೋರ್ ಸಿನಿಮಾಸ್’ ಮುಂದಿನ ಸಿನಿಮಾ ಮಾಡಲಿದೆ ಎಂದೂ ಘೋಷಣೆ ಮಾಡಿದ್ದರು. ಅಂತೆಯೇ ನಿರ್ದೇಶಕ ಚೇತನ್ ಕುಮಾರ್ ಅವರು ಮುಂದೆ ಯಾವ ಚಿತ್ರ, ಯಾರ ಜೊತೆ ಮಾಡಲಿದ್ದಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಇತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಚಂದನವನದಲ್ಲಿ ಸದ್ದು ಮಾಡುತ್ತಿರುವ ಹೊಸ ಯುವನಟ ಇಶಾನ್ ಅವರ ಜೊತೆಗೆ ಚೇತನ್ ಅವರು ಮುಂದಿನ ಸಿನಿಮಾ ಮಾಡಲಿದ್ದೇನೆ ಎಂದು ಘೋಷಿಸಿದ್ದಾರೆ.
ಚೇತನ್ ಕುಮಾರ್ ಅವರು ಧ್ರುವ ಸರ್ಜ ನಟನೆಯ ‘ಬಹದ್ದೂರ್’ ಸಿನಿಮಾದ ಮೂಲಕ ಮೊದಲು ನಿರ್ದೇಶಕರಾದವರು. ಇಲ್ಲಿವರೆಗೆ ಅವರ ನಿರ್ದೇಶನದಲ್ಲಿ ಮೂಡಿಬಂದ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ. ಕಮರ್ಷಿಯಲ್ ಆಕ್ಷನ್ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಇವರು, ಇದೀಗ ಮತ್ತದೇ ರೀತಿಯ ಸಿನಿಮಾ ಮಾಡುವ ಸಾಧ್ಯತೆಗಳಿವೆ. ‘ರೋಗ್’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟ ಇಶಾನ್ ಅವರು, ಪವನ್ ಒಡೆಯರ್ ಅವರ ‘ರೇಮೋ’ ಸಿನಿಮಾದಲ್ಲೂ ನಾಯಕರಾಗಿ ನಟಿಸಿದ್ದಾರೆ. ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿರೋ ‘ರೇಮೋ’ ಸಿನಿಮಾ ಆಗಸ್ಟ್ ನಲ್ಲಿ ಬಿಡುಗಡೆಯಾಗೋ ಸಾಧ್ಯತೆಗಳಿವೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿ. ಇದಷ್ಟೇ ಅಲ್ಲದೇ ತೆಲುಗಿನ ‘ಪರಂಪರ’ ಎಂಬ ವೆಬ್ ಸೀರೀಸ್ ನಲ್ಲೂ ಬಣ್ಣ ಹಚ್ಚಿದ್ದಾರೆ ಇಶಾನ್. ಸದ್ಯ ಇವರಿಬ್ಬರು ಒಂದುಗೂಡುತ್ತಿರುವುದು ನಿರೀಕ್ಷೆ ಹುಟ್ಟಿಸುವ ವಿಷಯವಾಗಿದೆ.
“ಇಶಾನ್ ಅವರ ನಟನೆಯನ್ನು ‘ರೋಗ್’ ಸಿನಿಮಾದಲ್ಲಿ ಕಂಡೇ ಇಷ್ಟ ಪಟ್ಟಿದ್ದೆ. ಅವರೊಡನೆ ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಈಗ ಅದು ಕಾರ್ಯೋನ್ಮುಖವಾಗುತ್ತಿದೆ. ಇಶಾನ್ ಗೆ ಒಬ್ಬ ಒಳ್ಳೆ ಆಕ್ಷನ್ ಹೀರೋ ಆಗೋ ಎಲ್ಲಾ ಸಾಧ್ಯತೆಗಳಿವೆ. ನಾವು ಮಾಡುತ್ತಿರೋ ಮುಂದಿನ ಸಿನಿಮಾ ಕೂಡ ಒಂದು ರೋಮ್ಯಾಂಟಿಕ್ ಆಕ್ಷನ್ ರೀತಿಯ ಕಥೆಯಾಗಿರಲಿದೆ. ‘ರೇಮೋ’ ಸಿನಿಮಾದ ಬಿಡುಗಡೆಯ ನಂತರ ಈ ಚಿತ್ರದ ಕೆಲಸಗಳು ಆರಂಭವಾಗಲಿವೆ. ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ” ಎನ್ನುತ್ತಾರೆ ಚೇತನ್ ಕುಮಾರ್.