ಕನ್ನಡ ಚಿತ್ರರಂಗ ಮುಂದುವರಿಯುತ್ತಿದೆ. ವಿಭಿನ್ನ ರೀತಿಯ ಸಿನಿಮಾಗಳಿಗೆ ತವರಾಗುತ್ತಿದೆ. ದೊಡ್ಡ ಬಜೆಟ್ ನ ಪಾನ್-ಇಂಡಿಯನ್ ಸಿನಿಮಾಗಳಿಂದ ಹಿಡಿದು, ಸಣ್ಣ ಮಟ್ಟದ ಹೊಸ ವಿಚಾರಗಳನ್ನೊಳಗೊಂಡ ಸಿನಿಮಾಗಳ ವರೆಗೆ ಎಲ್ಲವೂ ನಮ್ಮಲ್ಲಿದೆ. ಇದೇ ರೀತಿಯ ಹೊಸ ರೀತಿಯ ಸಿನಿಮಾಗಳಲ್ಲಿ ಒಂದು ‘ಫಿಸಿಕ್ಸ್ ಟೀಚರ್’. ಚಿತ್ರಮಂದಿರಗಳಲ್ಲಿ ದೊಡ್ಡ ಯಶಸ್ಸನ್ನು ಕಾಣದೆ ಇದ್ದರೂ ಸಹ, ಸಿನಿವಿಮರ್ಶಕರ ಮೆಚ್ಚುಗೆ ಪಡೆದ ಈ ಸಿನಿಮಾ ಇದೀಗ ಒಟಿಟಿ ಪರದೆ ಕಡೆಗೆ ಹೊರಟಿದೆ.
ಸುಮುಖ ಎಂಬ ಹೊಸ ಯುವಪ್ರತಿಭೆ ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ವಿಜ್ಞಾನ ಹಾಗು ನಂಬಿಕೆಗಳ ನಡುವಿನ ಕಥೆಯನ್ನ ಹೇಳುವಂತದ್ದು. ಒಬ್ಬ ಫಿಸಿಕ್ಸ್ ಪಾಠ ಹೇಳುವ ಶಿಕ್ಷಕನ ಬದುಕಿನಲ್ಲಾಗುವ ಗೊಂದಲಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇದೊಂದು ಸೈಕಾಲಜಿಕಲ್ ಥ್ರಿಲರ್ ಕಥೆ. ಇದೇ ಜುಲೈ 22ರಿಂದ ‘ಫಿಸಿಕ್ಸ್ ಟೀಚರ್’ ಸಿನಿಮಾ ‘ವೂಟ್ ಸೆಲೆಕ್ಟ್’ ಆಪ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಸುಮುಖ ಅವರು ನಾಯಕರಾದರೆ, ಪ್ರೇರಣಾ ಕಂಬಮ್ ಅವರು ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಜೊತೆಗೆ, ರಾಜೇಶ್ ನಟರಂಗ, ಮಂಡ್ಯ ರಮೇಶ್ ಮತ್ತು ಮುಂತಾದವರು ಮುಖ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎಲ್ಲೆಡೆ ಹೊಸತನವುಳ್ಳ ಸಿನಿಮಾ ಎಂದೂ ಪ್ರಶಂಸೆ ಪಡೆದ ಈ ಸಿನಿಮಾ ಇದೇ ಜುಲೈ 22ರಿಂದ ಕಿರುತೆರೆಯಲ್ಲಿ ತೆರೆಕಾಣಲಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದೆ ಇದ್ದವರು, ‘ವೂಟ್ ಸೆಲೆಕ್ಟ್’ ಆಪ್ ಮೂಲಕ ನೋಡಬಹುದಾಗಿದೆ.