‘ನಟರಾಕ್ಷಸ’ ಡಾಲಿ ಧನಂಜಯ ಅವರು ಸದ್ಯ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವುದರ ಜೊತೆಗೆ ಈಗಾಗಲೇ ನಟಿಸಿ ಮುಗಿಸಿರುವ ಹಲವು ಸಿನಿಮಾಗಳ ಬಿಡುಗಡೆಗೂ ಕಾಯುತ್ತಿದ್ದಾರೆ. ಅವುಗಳಲ್ಲಿ ಒಂದು ಕುಶಾಲ್ ಗೌಡ ಅವರ ನಿರ್ದೇಶನದ ‘ಒನ್ಸ್ ಅಪಾನ್ ಟೈಮ್ ಇನ್ ಜಮಾಲಿಗುಡ್ಡ’ ಕೂಡ ಒಂದು. ಇದೇ ಸೆಪ್ಟೆಂಬರ್ 9ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾ, ತನ್ನ ಕಥೆಯ ಪಾತ್ರಗಳನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಿರುವುದು ಒಂದು ಕಡೆಯಾದರೆ, ಇದರ ಜೊತೆಗೆ ತನ್ನ ಮೊದಲ ಹಾಡಿನ ಟೀಸರ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.
ತನ್ನ ವಿಭಿನ್ನ ಶೀರ್ಷಿಕೆ ಹಾಗು ಪಾತ್ರಗಳ ಮೂಲಕ ಈಗಾಗಲೇ ಜನರ ಮನಸೆಳೆದಿರೊ ಈ ಸಿನಿಮಾ ಸದ್ಯ ‘ಸಾಗಿದೆ’ ಎಂಬ ಹೊಸ ಹಾಡಿನ ಮೂಲಕ ಕನ್ನಡಿಗರನ್ನು ಮತ್ತಷ್ಟು ತನ್ನತ್ತ ಆಕರ್ಷಿಸಲು ಸಿದ್ಧವಾಗಿದೆ. ಧನಂಜಯ ಹಾಗು ಪುಟ್ಟ ಹುಡುಗಿಯ ಪಾತ್ರವಿರುವ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಈ ಘೋಷಣೆ ಮಾಡಿದ್ದು, ಈ ಎರಡು ಜೀವಗಳ ಜೀವನದ ಪಯಣ ಹೇಳುವ ಹಾಡು ಇದಾಗಿರಲಿದೆ. ಅರ್ಜುನ್ ಜನ್ಯ ಅವರ ಸಂಗೀತ ಹಾಗು ವಿಜಯ್ ಪ್ರಕಾಶ್ ಅವರು ಧ್ವನಿಯಾಗಿರುವ ಈ ಹಾಡು ಇದೇ ಜುಲೈ 22ರಂದು ಸಂಜೆ 6:03ಕ್ಕೆ ಬಿಡುಗಡೆಯಾಗುತ್ತಿದೆ. ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ಸಿನಿಮಾದ ಆಡಿಯೋ ಹಕ್ಕುಗಳನ್ನು ಪ್ರಖ್ಯಾತ ‘ಸರಿಗಮ’ ಸಂಸ್ಥೆ ಕೊಂಡುಕೊಂಡಿದ್ದು, ‘ಸರಿಗಮ ಕನ್ನಡ’ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗುತ್ತಿದೆ.
‘ಹೀರೋಶಿಮಾ’ ಎಂಬ ಪಾತ್ರದಲ್ಲಿ ಡಾಲಿ ಅವರು ನಾಯಕರಾದರೆ, ನಾಯಕಿಯಾಗಿ ಅದಿತಿ ಪ್ರಭುದೇವ ಅವರು ‘ರುಕ್ಮಿಣಿ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ‘ನಾಗಸಾಕಿ’ ಪಾತ್ರದಲ್ಲಿ ಇತ್ತೀಚಿನ ಖ್ಯಾತ ನಟ ಯಶ್ ಶೆಟ್ಟಿ ಅವರು ನಟಿಸಿದ್ದಾರೆ. ಅವಳಿ ನಗರಗಳಾದ ‘ಹೀರೋಶಿಮಾ-ನಾಗಸಕಿ’ ಹೆಸರಿನಲ್ಲಿ ಅವಳಿ ಖೈದಿಗಳಾಗಿ ಡಾಲಿ ಹಾಗು ಯಶ್ ಶೆಟ್ಟಿಯವರ ಪಾತ್ರಗಲಿರುತ್ತವೆ. ಇನ್ನು ‘ಚುಕ್ಕಿ’ಎಂಬ ಪುಟ್ಟ ಹುಡುಗಿಯಾಗಿ ಪ್ರಾಣ್ಯ ಪಿ ರಾವ್, ‘ಮೊಹಮ್ಮದ್ ಶಕೀಲ್’ ಆಗಿ ಪ್ರಕಾಶ್ ಬೆಳವಾಡಿ ಅವರು, ‘ಪಾಯಲ್’ ಆಗಿ ಭಾವನ ರಾಮಣ್ಣ ಅವರು, ‘ಬಾಳೆ ಗೌಡ’ನಾಗಿ ನಂದ ಗೋಪಾಲ್ ಹಾಗು ‘ಪುಟ್ಲಿಂಗ’ನಾಗಿ ಸಂತೋಷ್ ತೆರೆಮೇಲೆ ಬರಲಿದ್ದಾರೆ. ತನ್ನ ವಿಭಿನ್ನ ಶೀರ್ಷಿಕೆ, ಹಾಗು ವಿಭಿನ್ನ ಪಾತ್ರಗಳಿಂದಾಗಿ ಎಲ್ಲರ ಗಮನ ಸೆಳೆದಿರೋ ಈ ಸಿನಿಮಾ ಸೆಪ್ಟೆಂಬರ್ 9ರಿಂದ ಬೆಳ್ಳಿತೆರೆ ಏರುತ್ತಿದೆ.