ಕನ್ನಡ ಚಿತ್ರರಂಗಕ್ಕೇ ಸದ್ಯ ಎಲ್ಲೆಡೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಲ್ಲಿಂದ ಹೊರಹೋಮ್ಮೋ ಸಿನಿಮಾಗಳಿಗೆ ಈಗ ಕೇವಲ ಕನ್ನಡಿಗರಷ್ಟೇ ಅಲ್ಲದೇ, ಭಾಷೆಯ ಭೇದಭಾವವಿಲ್ಲದೆ ಪ್ರೇಕ್ಷಕರು ಹುಟ್ಟಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ‘ಪಾನ್-ಇಂಡಿಯಾ’ ಎಂಬ ವ್ಯವಸ್ಥೆ ಎಂದರೆ ತಪ್ಪಾಗದು. ‘ಪಾನ್-ಇಂಡಿಯಾ’ ಮಟ್ಟದಲ್ಲಿ ಸ್ಯಾಂಡಲ್ವುಡ್ ನ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆದಿರುವ ಬಹುಪಾಲು ಕೀರ್ತಿ ‘ಕೆಜಿಎಫ್’ ಚಿತ್ರಗಳದ್ದು ಎಂದರೆ ಅಲ್ಲಗಳೆಯುವಂತಿಲ್ಲ. ‘ಕೆಜಿಎಫ್ ಚಾಪ್ಟರ್ 1’, ಹಾಗು ‘ಕೆಜಿಎಫ್ ಚಾಪ್ಟರ್ 2’ ಎರಡೂ ಸಿನಿಮಾಗಳು ಸಹ ಸದ್ಯ ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿವೆ. ಇದರ ಎರಡನೇ ಅಧ್ಯಾಯ ಸದ್ಯ ತನ್ನ 100 ದಿನಗಳ ಸಂಭ್ರಮದಲ್ಲಿದೆ.
2018ರ ಡಿಸೆಂಬರ್ 21ರಂದು ಬಿಡುಗಡೆಯಾದ ಕೆಜಿಎಫ್ ಕಥೆಯ ಮೊದಲನೇ ಅಧ್ಯಾಯ ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನೇ ಬರೆಯಿತು. ಅಸಂಖ್ಯ ಪ್ರೇಕ್ಷಕರ ಅಭಿಮಾನಕ್ಕೆ ಒಳಗಾದ ಈ ಸಿನಿಮಾ, ಎರಡನೇ ಭಾಗಕ್ಕೆ ಬೇಡಿಕೆ ಹೆಚ್ಚಿಸಿತ್ತು. ಅಂತೆಯೇ ಕೊರೋನ ನಿರ್ಭಂಧಗಳನ್ನೆಲ್ಲ ಮುಗಿಸಿಕೊಂಡು 2022ರ ಏಪ್ರಿಲ್ 14ರಂದು ‘ಕೆಜಿಎಫ್ ಚಾಪ್ಟರ್ 2’ ಬೆಳ್ಳಿತೆರೆ ಮೇಲೆ ಬಿಡುಗಡೆಯಾಯಿತು. ಮುಗಿಲಿನೆತ್ತರದ ನಿರೀಕ್ಷೆ ಇದ್ದ ಈ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಕೂಡ ಅಷ್ಟೇ ದೊಡ್ಡದಾಗಿತ್ತು. ಎಲ್ಲೆಲ್ಲೂ ಹೌಸ್ ಫುಲ್ ಬೋರ್ಡ್ ಹಾಕಿಕೊಂಡು ದೇಶ-ವಿದೇಶ ಎನ್ನದೇ ಎಲ್ಲೆಡೆ ಯಶಸ್ವಿ ಪ್ರದರ್ಶನ ಪಡೆಯುತ್ತಾ, ಸುಮಾರು ಒಂದು ಸಾವಿರದ ಮುನ್ನೂರು ಕೋಟಿಗಳ ಗಳಿಕೆಯೊಂದಿಗೆ ತನ್ನ ಥಿಯೇಟರ್ ಓಟವನ್ನು ಮುಗಿಸಿತ್ತು ಚಿತ್ರ. ಸದ್ಯ ಚಾಪ್ಟರ್ 2 ಬಿಡುಗಡೆಯಾಗಿ ನೂರು ದಿನಗಳು ಕಳೆದಿವೆ. ಚಿತ್ರಮಂದಿರಗಳ ನಂತರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನ ಕಾಣುತ್ತಿರೋ ಈ ಸಿನಿಮಾ ಇನ್ನು ಕೂಡ ಸದ್ದು ಕಡಿಮೆ ಮಾಡಿಲ್ಲ. ನೂರು ದಿನಗಳ ಸಂಭ್ರಮದಲ್ಲಿ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲಂಸ್’ ವಿಡಿಯೋ ಒಂದರ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಪ್ರಶಾಂಗ್ ನೀಲ್ ಅವರ ಸೃಷ್ಟಿಯಲ್ಲಿ ಮೂಡಿಬಂದ ಈ ಸಿನಿಮಾ, ಅವರ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ರಾಕಿ ಭಾಯ್ ಆಗಿ ಪ್ರಪಂಚಕ್ಕೆ ಪರಿಚಯಿಸಿತ್ತು. ರವಿ ಬಸ್ರುರ್ ಅವರ ಮೈ ನವೀರೇಳಿಸುವ ಸಂಗೀತ, ಶಿವಕುಮಾರ್ ಅವರ ಸೆಟ್ ಗಳು, ಅನ್ಬರಿವು ಅವರ ಸಾಹಸಕಲೆ ಸಿನಿಮಾದಲ್ಲಿತ್ತು. ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಮುಂತಾದ ಮೇರು ನಟರು ಸಿನಿಮಾದಲ್ಲಿದ್ದರು. ಬಿಡುಗಡೆಯಾಗಿ ನೂರು ದಿನಗಳು ಕಳೆದ ಮೇಲು ಸಹ ಒಟಿಟಿ ಪರದೆ ಮೇಲೆ ಸತತ ಪ್ರದರ್ಶನ ಕಾಣುತ್ತಿದೆ ನಮ್ಮ ಕನ್ನಡದ ಹೆಮ್ಮೆಯ ‘ಕೆಜಿಎಫ್ ಚಾಪ್ಟರ್ 2’.