ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಒಂದು ವರ್ಷವೇ ಕಳೆಯುತ್ತಾ ಬಂತು. ಆದರೂ ಅವರು ಅಭಿಮಾನಿಗಳ ಎದೆಯಲ್ಲಿ ಎಂದಿಗೂ ಅಜರಾಮರ. ಅವರ ನಡತೆ ಹಾಗು ವ್ಯಕ್ತಿತ್ವಗಳಿಂದ ಎಲ್ಲರ ನಡುವೆಯೇ ಜೀವಂತವಾಗಿರುವ ಅವರು, ಕಲೆಯಿಂದ ಇನ್ನೂ ಜೀವಂತ ಎನ್ನಬಹುದು. ಸದ್ಯ ಅಪ್ಪು ಅಭಿನಯಿಸಿರೋ ಹೊಸ ಚಿತ್ರಗಳು ತೆರೆಕಡೆಗೆ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸದ್ಯ ಅಪ್ಪು ಅತಿಥಿ ಪಾತ್ರದಲ್ಲಿ ನಟಿಸಿರುವ ‘ಲಕ್ಕಿ ಮ್ಯಾನ್’ ಸಿನಿಮಾದ ಟೀಸರ್ ಬಿಡುಗಡೆಗೆ ಸಿದ್ದವಾಗಿ ನಿಂತಿದೆ.
‘ಲವ್ ಮೊಕ್ಟೇಲ್’ ಸಿನಿಮಾಗಳಿಂದ ಮರಳಿ ಕೀರ್ತಿ ಗಳಿಸಿದಂತಹ ಡಾರ್ಲಿಂಗ್ ಕೃಷ್ಣ ಅವರ ನಟನೆಯ ಮುಂದಿನ ಸಿನಿಮಾವೆ ಈ ‘lucky ಮ್ಯಾನ್’.ಪ್ರಖ್ಯಾತ ನಿರ್ದೇಶಕ ಎಸ್ ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾ ಸದ್ಯ ಚಿತ್ರೀಕರಣ ಮುಗಿಸಿಕೊಂಡು ತೆರೆಕಾಣಲು ಸಿದ್ದವಾಗಿ ನಿಂತಿದೆ. ಇದೇ ಸಿನಿಮಾದಲ್ಲಿ ಅಪ್ಪು ಹಾಗು ಪ್ರಭುದೇವ ಅವರು ಅತಿಥಿ ಪಾತ್ರಗಳಿಗೆ ಬಣ್ಣ ಹಚ್ಚಿದ್ದು, ಅಪ್ಪು ‘ದೇವರ’ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅಪ್ಪುವಿನ ಪಾತ್ರದ ಬಗೆಗಿನ ಟೀಸರ್ ಲೋಕಾರ್ಪಣೆಗೊಳಿಸಲು ಚಿತ್ರತಂಡ ನಿರ್ಧರಿಸಿದ್ದು, ಇದೇ ಜುಲೈ 25ರಂದು ಮಧ್ಯಾಹ್ನ 12:15ಕ್ಕೆ ಸರಿಯಾಗಿ ‘ಎಂ ಆರ್ ಟಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಈ ಟೀಸರ್ ಬಿಡುಗಡೆ ಮಾಡುತ್ತಿರುವುದು ಬೇರಾರು ಅಲ್ಲದೇ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿಯಾದ ಅಶ್ವಿನಿ ಪುನೀತ್ ರಾಜಕುಮಾರ್ ಅವರು.
ಡಾರ್ಲಿಂಗ್ ಕೃಷ್ಣ ನಾಯಕರಾಗಿ, ಸಂಗೀತ ಶೃಂಗೇರಿ ನಾಯಾಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಸಾಧು ಕೋಕಿಲ, ನಾಗಭೂಷಣ, ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದು ಅಪ್ಪು ಹಾಗು ಪ್ರಭುದೇವ ಅವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಇಂದು ಟೀಸರ್ ಬಿಡುಗಡೆಯಗುತ್ತಿದ್ದು, ಸಿನಿಮಾ ಬಿಡುಗಡೆಯ ದಿನಾಂಕವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.