‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಜುಲೈ 28ಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಸುದೀಪ್ ಅವರನ್ನು ಹೊಸ ರೀತಿಯ ಪಾತ್ರದಲ್ಲಿ ನೋಡಲು, ಅದರಲ್ಲೂ 3ಡಿ ಯಲ್ಲಿ ಕಾಣಲು ಎಲ್ಲೆಡೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಸದ್ಯ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಗಳು ನಡೆಯುತ್ತಿದ್ದು, ಇಂತದ್ದೇ ಒಂದು ಕಾರ್ಯಕ್ರಮದಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದ ಹಾಡನ್ನು ಹಾಡಿದ್ದಾರೆ ಕಿಚ್ಚ.
‘ವಿಕ್ರಾಂತ್ ರೋಣ’ ಸಿನಿಮಾದಿಂದ ಬಿಡುಗಡೆಯಾಗಿರೋ ಟ್ರೈಲರ್ ಹಾಗು ಹಾಡುಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ಅದರಲ್ಲೂ ‘ರಾ ರಾ ರಕ್ಕಮ್ಮ’ ಹಾಗು ‘ರಾಜಕುಮಾರಿಯೇ’ ಎಂಬ ಲಾಲಿ ಹಾಡು ಎಲ್ಲರ ಮನಸಿನಲ್ಲಿ ಉಳಿದು ಹೋಗಿವೆ. ಇದೇ ಲಾಲಿ ಹಾಡನ್ನ ಕಿಚ್ಚ ಸುದೀಪ್ ಅವರು ಕಾರ್ಯಕ್ರಮದಲ್ಲಿ ಹಾಡಿದ್ದಾರೆ. ಜುಲೈ 26ರಂದು ಬೆಂಗಳೂರಿನಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿತ್ತು. ಇದರಲ್ಲಿ ಸುದೀಪ್ ಅವರ ಪುತ್ರಿ ಕೂಡ ಉಪಸ್ಥಿತರಿದ್ದರು. ನಿರೂಪಕಿ ಅನುಶ್ರೀ ಅವರು ಸುದೀಪ್ ಅವರ ಬಳಿ, ತಮ್ಮ ಮಗಳಿಗಾಗಿ ಸಿನಿಮಾದ ಲಾಲಿ ಹಾಡು ಹಾಡಬಹುದಾ ಎಂದು ಕೇಳಿದ್ದಕ್ಕೆ ಮರುಮಾತಾಡದೆ ಹಾಡಲಾರಂಭಿಸಿದ್ದಾರೆ ಕಿಚ್ಚ. ತಮ್ಮ ಸುಮಧುರ ಕಂಠದಿಂದ ಹಾಡಿನ ಕೆಲ ಸಾಲುಗಳಿಗೆ ಧ್ವನಿಯಾಗುವ ಮೂಲಕ, ಮಗಳನ್ನೂ ಭಾವುಕರಾಗಿಸಿ, ಅಲ್ಲಿ ನೆರೆದಿದ್ದ ಅಭಿಮಾನಿಗಳಲ್ಲೂ ಸಂತಸ ತುಂಬಿಸಿದ್ದಾರೆ.
ಸಿನಿಮಾದಲ್ಲಿ ಈ ಹಾಡಿಗೆ ವಿಜಯ್ ಪ್ರಕಾಶ್ ಅವರ ಧ್ವನಿಯಿದ್ದು, ಅಜನೀಶ್ ಅವರ ಸಂಗೀತದಲ್ಲಿ ತಂದೆ ಮಗಳ ಪರಿಶುದ್ಧ ಪ್ರೇಮದ ಬಗ್ಗೆ ಸಾರುತ್ತದೆ. ಇದೇ ಜುಲೈ 28ಕ್ಕೆ ಪ್ರಪಂಚದಾದ್ಯಂತ ‘3ಡಿ’ ಯಲ್ಲಿ ಸಿನಿಮಾ ಬಿಡುಗಡೆಯಗುತ್ತಿದ್ದು, ಬೃಹತ್ ಯಶಸ್ಸಿನ ನಿರೀಕ್ಷೆಯಲ್ಲಿದೆ ಚಿತ್ರತಂಡ.