ಸ್ಟಾರ್ ನಟಿ ನಿತ್ಯಾ ಮೆನನ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಿತ್ಯಾ ಮೆನನ್ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನುವ ವಿಚಾರ ಎಲ್ಲೆಡೆ ಹರಿದಾಡಿತ್ತು. ಮಾತ್ರವಲ್ಲ ಮದುವೆ ಆಗಲೆಂದೇ ಅವರು ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನಲಾಗಿತ್ತು. ಈ ವಿಚಾರಕ್ಕೆ ಅವರು ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಹೌದು, ನಿತ್ಯಾ ಮೆನನ್ ಅವರು ಶೀಘ್ರವೇ ಮದುವೆ ಆಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಈಗ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಾವು ಸದ್ಯಕ್ಕಂತೂ ಮದುವೆ ಆಗುವ ಆಲೋಚನೆಯಲ್ಲಿ ಇಲ್ಲ ಎಂದಿರುವ ಅವರು, ಇದು ಬ್ರೇಕ್ ತೆಗೆದುಕೊಳ್ಳುವ ಸಮಯ ಎಂದು ಹೇಳಿದ್ದಾರೆ.
‘ನಾನು ಮದುವೆ ಆಗುತ್ತಿಲ್ಲ. ಈ ಸುದ್ದಿ ನಿಜಕ್ಕೆ ಹತ್ತಿರವಿಲ್ಲ. ಯಾರೋ ಬೇಸರ ಬಂದವರು ಒಂದು ಲೇಖನ ಬರೆಯಬೇಕು ಎಂದು ಈ ರೀತಿ ಬರೆದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಪಡೆಯದೇ ಸುದ್ದಿ ಪ್ರಕಟಿಸಲಾಗಿದೆ. ಮದುವೆ ವಿಚಾರದಲ್ಲಿ ನನ್ನದು ಸದ್ಯಕ್ಕಂತೂ ಯಾವುದೇ ಪ್ಲ್ಯಾನ್ ಇಲ್ಲ’ ಎಂದು ಹೇಳುವ ಮೂಲಕ ನಿತ್ಯಾ ಎಲ್ಲ ವದಂತಿಗೆ ತೆರೆ ಎಳೆದಿದ್ದಾರೆ.
ತಾವು ನಟನೆಯಿಂದ ಬ್ರೇಕ್ ಪಡೆಯುತ್ತಿರುವ ಕುರಿತು ಮಾತನಾಡಿದ ಅವರು ‘‘ನಾನು ನಟನೆಯಿಂದ ಒಂದು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ಒಂದಷ್ಟು ಸಿನಿಮಾ ಮಾಡಿದ ಮೇಲೆ ಒಂದು ಬ್ರೇಕ್ ಪಡೆಯುತ್ತೇನೆ. ರೋಬೋಟ್ ರೀತಿ ನನಗೆ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಂದು ವಿರಾಮ ಬೇಕಿದೆ’’ ಎಂದಿದ್ದಾರೆ.
ಮುಂದುವರೆಸುತ್ತಾ ‘‘ಕಳೆದ ಒಂದು ವರ್ಷದಿಂದ ಸಾಕಷ್ಟು ಕೆಲಸ ಮಾಡಿದ್ದೇನೆ. ಐದಾರು ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ಈ ಚಿತ್ರಕ್ಕಾಗಿ ನಾನು ನಿತ್ಯ ಕೆಲಸ ಮಾಡಿದ್ದೇನೆ. ಹೀಗಾಗಿ, ವಿರಾಮದ ಅಗತ್ಯವಿದೆ. ಇದು ಬ್ರೇಕ್ ತೆಗೆದುಕೊಳ್ಳುವ ಸಮಯ. ಈ ಸಮಯದಲ್ಲಿ ಸಾಕಷ್ಟು ಸುತ್ತಾಡುತ್ತೇನೆ’’ ಎಂದು ಹೇಳಿದ್ದಾರೆ.
ಇದಲ್ಲದೆ ಮಲಯಾಳಂನ ಖ್ಯಾತ ನಟನ ಜತೆ ನಿತ್ಯಾ ಮದುವೆ ನಡೆಯಲಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಈಗ ಅವರಿಂದಲೇ ಇದಕ್ಕೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ನಿತ್ಯಾ ಮೆನನ್ ಅವರು ಮದುವೆ ಆಗುತ್ತಿಲ್ಲ ಎನ್ನುವ ವಿಚಾರ ಕೇಳಿ ಕೆಲ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಆದಷ್ಟು ಬೇಗ ಅವರು ವಿವಾಹವಾಗಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.