ಗೋಲ್ಡನ್ ಸ್ಟಾರ್ ಗಣೇಶ್ ಅವರು ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಗಾಳಿಪಟ 2’ ತನ್ನ ಬಿಡುಗಡೆಯ ದಿನಾಂಕಕ್ಕೆ ಸನಿಹವಾಗುತ್ತಾ ಸಾಗುತ್ತಿದೆ. ನಿನ್ನೆಯಷ್ಟೇ(ಜುಲೈ 26) ಸಿನಿಮಾದ ಟೀಸರ್ ಒಂದು ಬಿಡುಗಡೆಯಾಗಿದ್ದು, ಹೊಟ್ಟೆಹುಣ್ಣಾಗಿಸುವಷ್ಟು ಈ ಸಿನಿಮಾ ನಗಿಸುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ. ‘ವಿಕಟಕವಿ’ ಯೋಗರಾಜ್ ಭಟ್ ಅವರಿಗೆ ಮರಳಿ ತಮ್ಮ ಯಶಸ್ಸು ಸಿಗಬಹುದೇನೋ ಎಂಬ ಆಸೆಯೂ ಒಂದಷ್ಟು ಜನರಲ್ಲಿದೆ. ಚುಟುಕಾಗಿ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿರೋ ಚಿತ್ರತಂಡ, ತನ್ನ ಟ್ರೈಲರ್ ಬಿಡುಗಡೆಯ ದಿನಾಂಕ ಹೊರಹಾಕಿದೆ.
‘ಗಾಳಿಪಟ’ ಯೋಗರಾಜ್ ಭಟ್ ಹಾಗು ಗಣೇಶ್ ಅವರ ಜೋಡಿಯಲ್ಲಿ ಮೂಡಿಬಂದಂತಹ ಒಂದು ಮರೆಯಲಾಗದ ಚಿತ್ರ. ಬಿಡುಗಡೆಯಾಗಿ ದಶಕಗಳೇ ಕಳೆದರೂ, ಇನ್ನೂ ಕೂಡ ಕನ್ನಡಿಗರ ಮನಗಳಲ್ಲಿ ವಿಶೇಷ ಸ್ಥಾನ ಪಡೆದಿದೆ ಈ ಸಿನಿಮಾ. ಸದ್ಯ ಅದೇ ಹೆಸರಿನಲ್ಲಿ ಯೋಗರಾಜ್ ಭಟ್ ಅವರೇ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಮೂವರು ಸ್ನೇಹಿತರಾಗಿ, ಗಣೇಶ್, ದಿಗಂತ್ ಹಾಗು ಪವನ್ ಕುಮಾರ್ ಅವರು ನಟಿಸಿದ್ದಾರೆ. ಜೊತೆಗೆ ಶರ್ಮಿಳಾ ಮಂಡ್ರೆ, ವೈಭವಿ ಶಾಂಡಿಲ್ಯ, ಅನಂತ್ ನಾಗ್, ರಂಗಾಯಣ ರಘು ಮುಂತಾದವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದೇ ಆಗಸ್ಟ್ 12ಕ್ಕೆ ಸಿನಿಮಾ ತೆರೆಕಾಣುತ್ತಿದ್ದು, ಇದೇ ಜುಲೈ 31ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.
ಸದ್ಯ ಬಿಡುಗಡೆಯಾಗಿರೋ ಟೀಸರ್ ಒಂದು ಗಣೇಶ್ ಅವರ ಪಾತ್ರಪರಿಚಯ ನೀಡಿದ್ದು, ‘ಗಣೇಶ’ ಎಂಬ ಹೆಸರನ್ನೇ ಈ ಪಾತ್ರಕ್ಕೂ ಇಟ್ಟಿದ್ದು, ಹಳೆ ‘ಗಾಳಿಪಟ’ವನ್ನೇ ನೆನಪಿಸಿದಂತಿದೆ. ಇದೊಂದು ಕಾಲೇಜ್ ಲವ್ ಸ್ಟೋರಿ ಆಗಿರಲಿದ್ದು, ಅನಂತ್ ನಾಗ್ ಅವರು ಶಿಕ್ಷಕನ ಪಾತ್ರವಹಿಸಲಿದ್ದಾರೆ. ಇನ್ನೂ ಗಣೇಶನ ತಂದೆ ತಾಯಿಯಾಗಿ ಮೊದಲಿನಂತೆಯೇ ರಂಗಾಯಣ ರಘು ಹಾಗು ಸುಧಾ ಬೆಳವಾಡಿ ಅವರು ನಟಿಸಿದ್ದಾರೆ. ಗಣೇಶನ ಪ್ರೇಮಕಥೆಯ ನಾಯಕಿಯಾಗಿ ವೈಭವಿ ಶಾಂಡಿಲ್ಯಾ ಬಣ್ಣ ಹಚ್ಚಿದ್ದಾರೆ. ಒಂದಷ್ಟು ಭಾಗ ಪ್ರೇಕ್ಷಕರು ಮನತುಂಬಿ ನಗಲು ಈ ಚಿತ್ರಕ್ಕಾಗಿ ಕಾಯುತ್ತಿದ್ದು, ಸಿನಿಮಾ ಹೇಗಿರಲಿದೆ ಎಂದು ತೇರಮೇಲೆಯೇ ನೋಡಬೇಕಿದೆ.