ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಸಿನಿಮಾ ಮಾಡಿದವರು, ಮಾಡುತ್ತಲಿದ್ದಾರೆ ಕೂಡ. ಸದ್ಯ ಅವರ ಇಬ್ಬರೂ ಪುತ್ರರು ಚಂದನವನಕ್ಕೆ ಕಾಲಿಟ್ಟಿದ್ದಾರೆ. ಯಶಸ್ಸಿನ ಆರಂಭ ಕೂಡ ಪಡೆಯುತ್ತಿದ್ದಾರೆ. ಈಗ ಸುದ್ದಿಯಲ್ಲಿರುವುದು ರವಿಮಾಮನ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್. ಇತ್ತೀಚಿಗಷ್ಟೇ ತೆರೆಕಂಡ ಅವರ ಮೊದಲ ಸಿನಿಮಾ ‘ತ್ರಿವಿಕ್ರಮ’ ಇದೀಗ ಕಿರುತೆರೆಗೆ ಬರಲು ಸಜ್ಜಾಗಿ ನಿಂತಿದೆ.
ಇದೇ ಜೂನ್ 24ರಂದು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದ ‘ತ್ರಿವಿಕ್ರಮ’ ಚಿತ್ರ, ತನ್ನ ಹಾಡುಗಳು ಹಾಗು ಪ್ರೀ-ರಿಲೀಸ್ ಕಾರ್ಯಕ್ರಮಗಳಿಂದ ಎಲ್ಲೆಡೆ ಸುದ್ದಿಯಲ್ಲಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಪಡೆದ ಈ ಸಿನಿಮಾ ಇದೀಗ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಇದೇ ಆಗಸ್ಟ್ 7ನೇ ತಾರೀಕಿನ ಸಂಜೆ 5:30ಕ್ಕೆ ‘ತ್ರಿವಿಕ್ರಮ’ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಹನಾ ಹೆಚ್ ಎಸ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ವಿಕ್ರಮ್ ರವಿಚಂದ್ರನ್, ಆಕಾಂಕ್ಷ ಶರ್ಮ, ಜಯಪ್ರಕಾಶ್, ಅಕ್ಷರ ಗೌಡ ಮುಂತಾದವರು ಬಣ್ಣ ಹಚ್ಚಿದ್ದಾರೆ. ಎಲ್ಲೆಡೆ ಗುಲ್ಲೆಬ್ಬಿಸಿದ್ದ ‘ತ್ರಿವಿಕ್ರಮ’ನನ್ನ ಥೀಯೇಟರ್ ನಲ್ಲಿ ನೋಡಲಾಗದೆ ಇದ್ದವರು, ಇದೇ ಆಗಸ್ಟ್ ಏಳನೇ ತಾರೀಕಿನಂದು ಟಿವಿ ಪರದೆ ಮೇಲೆ ಸುವರ್ಣ ವಾಹಿನಿಯಲ್ಲಿ ನೋಡಬಹುದಾಗಿದೆ.