ಬ್ರಿಟಿಷ್ ಕಾನೂನು ಜಾರಿಗೆ ಕಾಂಗ್ರೆಸ್ ಹುನ್ನಾರ:-ಯತ್ನಾಳ ಆರೋಪ
ಕನಾರ್ಟಕ ಭಾಗ್ಯ ವಾರ್ತೆ
ಯಾದಗಿರಿ : ಕಾಂಗ್ರೆಸ್ ಪಕ್ಷ ಎ ಟೂ ಝೆಡ್ ವರೆಗೂ ಇಂಗ್ಲೀಷ್ ವರ್ಣಮಾಲೆ ಹೆಸರಿನಡಿ ಮಾಡಿದ ಹಗರಣಗಳು ಸರಾಗವಾಗಿ ಹೆಸರಿಸಲಾಗಿದೆ ಅಷ್ಟೊಂದು ಹಗರಣಗಳು ಮಾಡಿ ದೇಶದ ಸಂಪತ್ತು, ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಇಂತಹ ಬೃಹತ್ ಭ್ರಷ್ಟಾಚಾರದ ಪಕ್ಷಕ್ಕೆ ಏನಾದರೂ ಅಧಿಕಾರ ಕೊಟ್ಟರೆ ದೇಶದ ಸ್ಥಿತಿ ಅದೋಗತಿಯೇ ಗ್ಯಾರಂಟಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಶಹಾಪುರ ನಗರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ರಾಯಚೂರ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ಪರ ಪ್ರಚಾರ ಸಭೆ ಅಂಗವಾಗಿ ಬಿಜೆಪಿ ಕೈಗೊಂಡ ರೋಡ್ ಶೋ ದಲ್ಲಿ ಭಾಗವಹಿಸಿ ಬಸವೇಶ್ವರ ವೃತ್ತದಲ್ಲಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಭ್ರಷ್ಟಾಚಾರ ಮುಕ್ತ, ಭಯೋತ್ಪಾಧನಾ ಮುಕ್ತ ಕಳಂಕ ರಹಿತ ಆಡಳಿತ ಮತ್ತು ದೇಶದ ಉನ್ನತೀಕರಣಕ್ಕೆ ಶ್ರಮಿಸುವ ಪ್ರಧಾನಿ ನರೇಂದ್ರ ಮೋದಿಜೀಯವರನ್ನು ಮತ್ತೊಮ್ಮೆ ನಾವು ಪ್ರಧಾನಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ದೇಶದ ಸುಭದ್ರತೆಗಾಗಿ, ಏಳ್ಗೆಗಾಗಿ ಬಿಜೆಪಿಗೆ ಮತ ನೀಡುವ ಮೂಲಕ ಸಹಕರಿಸಬೇಕಿದೆ.
ಕಾಂಗ್ರೆಸ್ ಗ್ಯಾರಂಟಿ ಹೆಸರಿನಡಿ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಒಂದು ಕೈಯಿಂದ ದುಡ್ಡು ನೀಡಿದಂತೆ ಮಾಡಿ ಇನ್ನೊಂದಡೆ ದುಪ್ಪಟ್ಟು ಹಣ ದೋಚುವ ಕೆಲಸ ಮಾಡುತ್ತಿದೆ. ಮೋದಿಜೀ ಅವರು ವರ್ಷಕ್ಕೆ ೬ ಸಾವಿರ ಧನ ಸಹಾಯ ಸೇರಿದಂತೆ ಯಡಿಯೂರಪ್ಪ ಸಿಎಂ ಇದ್ದಾಗ ರಾಜ್ಯದಿಂದ ೪ ಸಾವಿರ ಸೇರಿ ವರ್ಷಕ್ಕೆ ೧೦ ಸಾವಿರ ರೂ. ರೈತರ ಅಕೌಂಟ್‍ಗೆ ಹಾಕಲಾಗುತಿತ್ತು. ಆದರೆ ಸಿದ್ರಾಮಯ್ಯ ಬಂದು ರಾಜ್ಯದ ೪ ಸಾವಿರ ತೆಗೆದು ಹಾಕಿದ್ದಾರೆ ಎಂದು ಗುಡುಗಿದರು. ರೈತರ ಹಿತಾಸಕ್ತಿ ಕಾಪಾಡದ ಕಾಂಗ್ರೆಸ್ ಸುಳ್ಳು ಪಳ್ಳು ಯೋಜನೆ ರೂಪಿಸಿ ರಾಜ್ಯದ ಬೊಕ್ಕಸ ಖಾಲಿ ಚೊಂಬು ಮಾಡಿಟ್ಟಿದೆ. ಮೋದಿಜೀ ಖಾಲಿ ಚೊಂಬು ಕೊಟ್ಟಿದ್ದಾರೆ ಎನ್ನುವ ಸಿದ್ರಾಮಯ್ಯ, ಖರ್ಗೆ ಮತ್ತು ಬಂಡೆಗೆ ಈ ಬಾರಿ ನಾಲ್ಕು ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ನವರ ಕೈಗೆ ಚೊಂಬು ಕೊಟ್ಟು ಕಳಿಸಬೇಕಿದೆ. ಮೋದಿಜೀಯವರು ಅಕ್ಷಯಪಾತ್ರೆ ಕೊಟ್ಟಿದ್ದಾರೆ ಕಾಂಗ್ರೆಸ್ ನವರು ಅದನ್ನು ಪೊಳ್ಳು ಗ್ಯಾರಂಟಿ ನೀಡಿ ಖಾಲಿ ಚೊಂಬು ಆಗಿಸಿದ್ದು, ಅದನ್ನೆ ಅವರು ಮುಂದಿನ ಸರ್ಕಾರ ಆಡಳಿತ ಬರುವವರಿಗೆ ನೀಡುವ ಹುನ್ನಾರವನ್ನೇ ಜಾಹಿರಾತು ಮೂಲಕ ಸಾಬೀತು ಪಡಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಎರಡು ಕೆಟ್ಟ ಕಾನೂನು ಜಾರಿಗೆ ಸಿದ್ಧತೆ ಮಾಡಿಕೊಂಡಿದೆ. ಮೊದಲನೇಯದ್ದು ಆಸ್ತಿ ಕಸಿದುಕೊಳ್ಳುವದು ಹೇಗೆ.? ಅಂದರೆ ಅಮೇರಿಕಾದಲ್ಲಿರುವ ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.೫೫ ರಷ್ಟು ಆಸ್ತಿ, ಸಂಪತ್ತನ್ನು ಕಸಿದುಕೊಂಡು ಹೆಚ್ಚು ಮಕ್ಕಳನ್ನು ಹೆತ್ತವರಿಗೆ ಅಂದರೆ ಯಾರು ಹೆಚ್ಚು ಮಕ್ಕಳನ್ನು ಹೆತ್ತವರು ಮುಸ್ಲಿಂರಿಗೆ ಹಂಚೋ ಕಾನೂನು ತರಲು ಕಾಂಗ್ರೆಸ್ ಮುಂದಾಗಿದೆ. ಇನ್ನೊಂದು ಅಟ್ರಾಸಿಟಿ ಮಾದರಿ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೂ ಕೊಡುವ ಹುನ್ನಾರ ನಡೆಸಿದ್ದಾರೆ. ಅಂದರೆ ಅಲ್ಪಸಂಖ್ಯಾತರ ವಿರುದ್ಧ ಧ್ವನಿ ಎತ್ತದಿರಲಿ ಅವರನ್ನು ಕೆಂಗಣ್ಣಿನಿಂದ ನೋಡಿದರು ಒದ್ದು ಒಳಗಾಗುವಂಥ ವಿಶೇಷ ಕಾನೂನು ತರಲು ಹೊರಟಿದೆ ಎಂದು ಕಿಡಿ ಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ತಾಲೂಕು ಮಂಡಲ ಅಧ್ಯಕ್ಷ ರಾಜೂಗೌಡ ಉಕ್ಕಿನಾಳ, ನಗರ ಅಧ್ಯಕ್ಷ ದೇವಿಂದ್ರಪ್ಪ ಕೋನೇರ, ಪ್ರಮುಖ ಹಿರಿಯರಾದ ಡಾ.ಚಂದ್ರಶೇಖರ ಸುಬೇದಾರ, ಶಿವರಾಜ ದೇಶಮುಖ, ಬಸವರಾಜ ವಿಭೂತಿಹಳ್ಳಿ ಇತರರಿದ್ದರು.