ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ಪಿಎಸ್‌ಐ ಪರಶುರಾಮ್ ಸಾವಿಗೆ ಕಾರಣರಾದ ಅಪ್ಪ ಮಗನನ್ನು ಅರೆಸ್ಟ್ ಮಾಡ್ರಿ ಎಂದು ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಲು ಬಂದ ಗೃಹ ಸಚಿವರನ್ನು ಕುಟುಂಬಸ್ಥರು ಕೇಳಿದ್ರೆ ಇನ್ನೂ ಯಾಕೆ ಬಂದಿಸಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ನಗರದ ಸುಭಾಷ್ ವೃತ್ತದಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಗಾರೆಕೆಲಸ ಮಾಡಿಕೊಂಡು ಓದು ಮುಂದುವರೆಸಿ ಪಿಎಸ್‌ಐ ಆಗಿ ಕೆಲಸ ಪಡೆದು ಯಾದಗಿರಿಗೆ ಬಂದ ಪರಶುರಾಮನನ್ನು ಬಲಿ ಪಡೆದ ಈ ವ್ಯವಸ್ಥೆಗೆ ಕಾರಣವಾದ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.
ಮಾಜಿ ಸಚಿವರಾದ ಎನ್.ಮಹೇಶ ಮಾತನಾಡಿ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿಗಿಂತ ಅಕ್ಕಿಕಳ್ಳತನ, ಭಷ್ಟಚಾರದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ, ಸಣ್ಣ ಸಣ್ಣ ಕೆಲಸಗಳನ್ನು ಬಿಟ್ಟು ದೊಡ್ಡ ದೊಡ್ಡ ಕೆಲಸ ಮಾಡಿ ಎಂದು ವ್ಯಂಗವಾಡಿದರು.
ಮಾಜಿ ಸಚಿವರಾದ ರಾಜುಗೌಡ ಮಾತನಾಡಿ, ದಲಿತರ ಹೆಸರೇಳಿ ರಾಜ್ಯಾಧಿಕಾರಕ್ಕೆ ಬಂದ ಕಾಂಗ್ರೆಸ್ ದಲಿತ ಅಧಿಕಾರಿಗಳನ್ನೇ ಬಲಿ ಪಡೆಯುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ರಾಜ್ಯ ಉಪಾಧ್ಯಕ್ಷೆ ಕು.ಲಲಿತಾ ಅನಪೂರ ಮಾತನಾಡಿ, ನಿನ್ನೆಯವರೆಗೆ ನಗರದಲ್ಲಿ ಜನರ ರಕ್ಷಣೆಯಲ್ಲಿದ್ದ ಪಿಎಸ್‌ಐ ಅವರು ಏಕಾಏಕಿ ನಿಧನ ಹೊಂದುತ್ತಾರೆ ಎಂದರೆ ಈ ಸರ್ಕಾರಕ್ಕೆ ಇನ್ನೆಷ್ಟು ಅಧಿಕಾರಿಗಳ ಬಲಿ ಬೇಕು, ಲಂಚವತಾರದಲ್ಲಿ ಮುಳುಗಿದ ಶಾಸಕ ಚೆನ್ನಾರೆಡ್ಡಿ ತುನ್ನೂರ ಮತ್ತು ಅವರ ಮಗ ಸನ್ನಿಗೌಡನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್‌ರಡ್ಡಿ ಯಾಳಗಿ ಮಾತನಾಡಿ, ಓರ್ವ ಪ್ರಾಮಾಣಿಕ ಅಧಿಕಾರಿ ಸಾವಿಗೆ ಕಾರಣರಾದ ಶಾಸಕ ಹಾಗೂ ಅವರ ಪುತ್ರನನ್ನು ಕೂಡಲೇ ಬಂಧಿಸಿ, ಸಂವಿಧಾನವನ್ನು ರಕ್ಷಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷರಾದ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಗುರುಕಾಮಾ, ಪರಶುರಾಮ ಕುರಕುಂದಿ, ಎಚ್.ಸಿ.ಪಾಟೀಲ, ಹನುಮಪ್ಪನಾಯಕ ತಾತಾ, ನಗರಸಭೆ ಸದಸ್ಯರಾದ ಮಂಜು ದಾಸನಕೇರಿ, ವಿಲಾಸ ಪಾಟೀಲ್, ವಿರೂಪಾಕ್ಷಯ್ಯಸ್ವಾಮಿ ಹೆಡಗಿಮದ್ರಾ, ಮೌನೇಶ ಬೆಳಗೇರಾ, ರಾಜಶೇಖರ ವಡಗೇರಾ, ಅಯ್ಯಣ್ಣ ಹಾಲಗೇರಾ ಸೇರಿದಂತೆ ಇತರರಿದ್ದರು.