Karnataka Bhagya

ಕನ್ನಡ ಚಿತ್ರರಂಗಕ್ಕೆ ಹೊಸತೊಂದು ಬಣ್ಣ ತುಂಬುತ್ತಿರುವ ಮೂರು ಶೆಟ್ರು..

ಒಂದು ಕಾಲದಲ್ಲಿ ಕನ್ನಡ ಚಲನಚಿತ್ರಗಳಲ್ಲಿ ಹಾಸ್ಯಕ್ಕಷ್ಟೇ ಸೀಮಿತವಾಗಿದ್ದ ಕರಾವಳಿ ತೀರದ ಭಾಷೆ-ಕಲೆ-ಸಂಸ್ಕೃತಿಯು ಇದೀಗ ಎಲ್ಲರ ಮನಸೆಳೆಯುತ್ತಿದೆ. ಇದಕ್ಕೆ ಮುಖ್ಯ ಕಾರಣರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಹಾಗೂ ರಾಜ್ ಬಿ ಶೆಟ್ಟಿಯವರ ಬಗೆಗೆ ಒಂದು ಮೇಲ್ನೋಟ.
ನಮ್ಮೆಲ್ಲರಿಂದ ಈಗಾಗಲೇ ಸ್ಟಾರ್ ಅನ್ನೋ ಪಟ್ಟ ಪಡೆದಿರೋ ರಕ್ಷಿತ್ ಶೆಟ್ಟಿಯವರು ಹೊಸ ವಿಷಯಗಳಿರೋ ಹೊಸಬರ ಚಿತ್ರಗಳ ಕೈ ಹಿಡಿತಾರೆ ಅನ್ನೋದು ನಮಗೆಲ್ಲರಿಗೂ ಗೊತ್ತಿರೋ ವಿಷಯ. ಇತ್ತೀಚೆಗೆ ಅವರ ತಲೆಯಲ್ಲಿ ಗಾಢವಾಗಿ ಉಳಿದುಹೋದ ರಾಜ್ ಬಿ ಶೆಟ್ಟಿಯವರ “ಗರುಡ ಗಮನ ವೃಷಭ ವಾಹನ” ಚಿತ್ರವನ್ನ ತಮ್ಮ ಸಂಸ್ಥೆಯಾದ ‘ಪರಮ್ವಾಹ್ ಸ್ಟುಡಿಯೋಸ್’ ಸಹಾಯದಿಂದ ಬಿಡುಗಡೆಗೊಳಿಸುವುದಾಗಿ ಹೇಳಿದ್ದರು. ಇದು ಕನ್ನಡ ಸಿನಿ ಪ್ರೇಕ್ಷಕರಿಗೆ ಹೊಸತೊಂದು ಕುತೂಹಲಕ್ಕೆ ಕಾರಣವಾಗಿತ್ತು.
ನವೆಂಬರ್ 19ರಂದು ಬಿಡುಗಡೆಯಾದ ಈ ಚಿತ್ರ ಕರಾವಳಿಯ ಮೂರು ಹೆಸರಾಂತ ಕಲಾವಿದರ ಸಮ್ಮಿಲನಕ್ಕೆ ಸಾಕ್ಷಿಯಾಗಿತ್ತು. ರಾಜ್ ಬಿ ಶೆಟ್ಟಿ(34) ಮತ್ತು ರಿಷಬ್ ಶೆಟ್ಟಿ(38) ನಟಿಸಿರುವ ಈ ಚಿತ್ರದ ಬಿಡುಗಡೆಯ ಜವಾಬ್ದಾರಿಯನ್ನು ರಕ್ಷಿತ್ ಶೆಟ್ಟಿ(38) ಹೊತ್ತುಕೊಂಡಿದ್ದಾರೆ. 2020ರ ಜೂನ್ ಸಮಯದಲ್ಲಿ ಕೋವಿಡ್-19 ಲಾಕ್ಡೌನಿನ ನಡುವೆ ಗರುಡ ಗಮನ ವೃಷಭ ವಾಹನವನ್ನ ನೋಡಿದ್ದ ರಕ್ಷಿತ್ ಶೆಟ್ಟಿ “ಈ ಚಿತ್ರ ನನ್ನ ಮನಸ್ಸಿನಲ್ಲಿ ಸುಮಾರು ಮೂರು ದಿನ ಕೂತಿತ್ತು. ಇದರ ಜೊತೆ ಹೇಗಾದರೂ ಭಾಗಿಯಾಗಬೇಕೆಂಬ ಆಸೆಯಿತ್ತು” ಅನ್ನುತ್ತಾರೆ. ಈ ಚಿತ್ರವನ್ನ ಇದೀಗ zee5 ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಇತ್ತೀಚೆಗೆ zee5 ಪಾಲಾದ ಮೂರನೇ ಚಿತ್ರ ಇದಾಗಿದೆ. ಕನ್ನಡದಲ್ಲಿ ಬಂದಿರೋ ಒಂದು ವಿಶೇಷವಾದ ಈ ಚಿತ್ರ ಮಲಯಾಳಂ, ತಮಿಳು ಚಿತ್ರಗಳಂತೆ ದೇಶಾದ್ಯಂತ ಜನಮನ್ನಣೆಯನ್ನ ಪಡೆಯಲಿ ಎಂಬುದೇ ನಮ್ಮಾಸೆ.

 • ಪುನರೋತ್ಥಾನದ ಆರಂಭ..
ಕನ್ನಡ ಚಿತ್ರರಂಗದಲ್ಲಿ ತನಗಿದ್ದ ಪ್ರಾಮುಖ್ಯತೆಯನ್ನ ದಕ್ಷಿಣ ಕನ್ನಡ ಇದೀಗ ಮತ್ತೆ ಪಡೆದುಕೊಳ್ಳುತ್ತಿದೆ. ದಶಕಗಳ ಹಿಂದೆಯೇ ನಟ-ನಿರ್ದೇಶಕರಾದ ಮಾನ್ಯ ಕಾಶೀನಾಥ್ ಹಾಗೂ ಉಪೇಂದ್ರರವರು ಇದಕ್ಕೊಂದು ಅಡಿಪಾಯವನ್ನ ಹಾಕಿಕೊಟ್ಟರೂ ಸಹ ಕಾಲಕ್ರಮೇಣ ಇಲ್ಲಿನ ಭಾಷೆ-ಕಲೆ ಕೇವಲ ಹಾಸ್ಯಕ್ಕಷ್ಟೇ ಸೀಮಿತವಾಗುತ್ತಾ ಬಂತು. ಆದರೆ 2014ರಲ್ಲಿ ಬಂದ ರಕ್ಷಿತ್ ಶೆಟ್ಟಿಯವರ ಚೊಚ್ಚಲ ನಿರ್ದೇಶನದ ‘ಉಳಿದವರು ಕಂಡಂತೆ’ಯ ಮೂಲಕ ದಕ್ಷಿಣ ಕನ್ನಡದ ಸೊಗಡು ಎಲ್ಲರ ಮನೆಮಾತಾಯ್ತು. ಅಲ್ಲದೆ ಇದು ರಿಷಬ್ ಶೆಟ್ಟಿ ಹಾಗು ರಾಜ್ ಬಿ ಶೆಟ್ಟಿಯವರನ್ನು ಕೂಡ ಕರಾವಳಿಯ ಕಥೆಗಳ ಸಿನಿಮಾಗಳ ಕಡೆಗೆ ಬರಸೆಳೆಯಿತು ಅಂದರೆ ತಪ್ಪಾಗದು. ಇಂದು ಈ ತ್ರಿಮೂರ್ತಿಗಳಿಂದ ಕರಾವಳಿಯ ಹುಲಿಕುಣಿತ ಇಡೀ ರಾಜ್ಯವನ್ನೇ ಹಬ್ಬಿದೆ. ಅಲ್ಲಿನ ಭಾಷೆ ಕಲೆ ಸಂಪ್ರದಾಯಗಳ ಸಂಪೂರ್ಣ ಪರಿಚಯ ಇಡೀ ಕನ್ನಡ ನಾಡಿಗಾಗಿದೆ.

 • ಸರ್ವವೂ ಸಾಮಾನ್ಯ ಹಾಗೂ ಸ್ಥಳೀಯ..
ಗರುಡ ಗಮನ ವೃಷಭ ವಾಹನ ಚಿತ್ರ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಹಾಗೂ ಶಿವರಂತಹ ಪಾತ್ರಗಳ ಸುತ್ತ ಓಡುತ್ತದೆ. ಈ ಮೂವರು ಶೆಟ್ರು ಕರಾವಳಿಯವರಾದ್ದರಿಂದ ಯಕ್ಷಗಾನ ಹಾಗೂ ಹುಲಿಕುಣಿತಗಳು ಇವರ ಮೇಲೆ ಅಗಾಧ ಪ್ರಭಾವವನ್ನ ಬೀರಿರೋದ್ರಲ್ಲಿ ಆಶ್ಚರ್ಯವೆನಿಲ್ಲ. ಉಡುಪಿಯವರಾದ ರಕ್ಷಿತ್ ಶೆಟ್ಟಿ, ಹುಲಿವೇಶಧಾರಿಗಳು ತಮ್ಮ ಮನೆಯ ಎದುರು ಬಣ್ಣ ಬಳಿದುಕೊಳ್ಳುವುದನ್ನ ನೆನಪಿಸಿಕೊಳ್ಳುತ್ತಾರೆ. “ನಾನು ಬರೆಯೋ ಎಲ್ಲ ಕಥೆಗಳಲ್ಲೂ ಇವುಗಳ ಅಂಶ ಇದ್ದೆ ಇರುತ್ತದೆ” ಎನ್ನುತ್ತಾರೆ.
ರಿಷಬ್ ಶೆಟ್ಟಿಯವರು ಬಾಲ್ಯದಿಂದಲೇ ಯಕ್ಷಗಾನದಲ್ಲಿದ್ದವರು. ತಮ್ಮ ಊರಾದ ಉಡುಪಿಯ ಕುಂದಾಪುರ ಸಮೀಪದ ಕೆರಾಡಿಯಲ್ಲಿ ಆರನೇ ತರಗತಿಯಲ್ಲೇ ಯಕ್ಷಗಾನದ ಸುಬ್ರಹ್ಮಣ್ಯನಾದವರು. ರಾಜ್ ಬಿ ಶೆಟ್ಟಿ ಬೆಳೆದದ್ದೆಲ್ಲ ಮಂಗಳೂರಿನಲ್ಲಾದರೂ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಅವರ ಪ್ರಕಾರ “ದೇಶದ ಯಾವ ಭಾಗದಲ್ಲೂ ಯಕ್ಷಗಾನ,ಭೂತಕೋಲ, ಹುಲಿಕುಣಿತದಂತಹ ಕಲೆಗಳಿಗೆ ಮಂಗಳೂರಿನಲ್ಲಿ ಸಿಗುವಂತಹ ಪ್ರಾಮುಖ್ಯತೆ ಸಿಗುವುದು ಕಷ್ಟ”.
ಹಿಂದಿ ಹಾಗೂ ಮಲಯಾಳಂನಲ್ಲಿ ಮರುಕರಣೆಯಾದಂತಹ ರಾಜ್ ಬಿ ಶೆಟ್ಟಿಯವರ ‘ಒಂದು ಮೊಟ್ಟೆಯ ಕಥೆ’ ಕೂಡ ಕರಾವಳಿಯ ಒಂದು ಸಾಮಾನ್ಯ ಕುಟುಂಬದ ತಲೆಗೂದಲಿಲ್ಲದ ಹುಡುಗನ ಬದುಕಾಗಿತ್ತು. ಕರಾವಳಿಯ ಭಾಷೆ ಬದುಕು ಭಾವನೆಗಳನ್ನ ಒಳಗೂಡಿಕೊಂಡಿತ್ತು.

 • ಭಾಷಾ-ಭಾವನೆ..
2017ರಲ್ಲಿ ಜೊತೆಯಾದ ರಾಜ್ ಹಾಗೂ ರಿಷಬ್ ರನ್ನು ಸೇರಿಸಿದ್ದು ಇದೇ ಮಂಗಳೂರು-ಕಾಸರಗೋಡಿನ ಕರಾವಳಿ ಭಾಷೆ. ಒಂದು ಮೊಟ್ಟೆಯ ಕಥೆಯ ಸಂಭಾಷಣೆಗೆ ಮನಸೋತ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿಯವರಿಂದ 2018ರಲ್ಲಿ ಬಿಡುಗಡೆಯಾದ ತಮ್ಮ ಸ. ಹಿ. ಪ್ರಾ. ಶಾಲೆ ಕಾಸರಗೋಡಿನ ಒಂದಿಷ್ಟು ಸಂಭಾಷಣೆಗಳನ್ನು ಬರೆಸಿದ್ದರಂತೆ. ಸ. ಹಿ. ಪ್ರಾ. ಶಾಲೆ ಕಾಸರಗೋಡು ಕಾಸರಗೋಡಿನ ಗಡಿಯಲ್ಲಿ ಉಳಿವಿಗಾಗಿ ಕಷ್ಟ ಪಡುತ್ತಿದ್ದ ಒಂದು ಕನ್ನಡ ಶಾಲೆಯ ಕಥೆ. ಈ ಸಂಭಾಷಣೆಯ ಮಾತುಕತೆ ಮೀನಿಲ್ಲದ ಮೀನು ಸಾರಿನ ಊಟದಲ್ಲೇ ಮುಗಿದಿತ್ತಂತೆ. ಹತ್ತು ನಿಮಿಷದಲ್ಲಿ ಹತ್ತು ಸೀನುಗಳ ಸಂಭಾಷಣೆ ಬರೆದಿದ್ದರಂತೆ ರಾಜ್. ಅಷ್ಟು ಗಾಢವಾಗಿತ್ತು ಅವರ ಕರಾವಳಿ ಭಾಷಾಜ್ಞಾನ.
ಇನ್ನು ರಿಷಬ್-ರಕ್ಷಿತ್ ಸ್ನೇಹ ಚಿತ್ರರಂಗದಲ್ಲಿ ಅವರು ಕಷ್ಟ ಪಡುತ್ತಿದ್ದ 2011-12ರ ಕಾಲಕ್ಕೆ ಹೋಗುತ್ತದೆ. ಇಂಜಿನಿಯರಿಂಗ್ ಮುಗಿಸಿದ್ದ ರಕ್ಷಿತ್ ಶೆಟ್ಟಿ, ಬೆಂಗಳೂರಿನ ಸರ್ಕಾರಿ ಫಿಲಂ ಮತ್ತು ಟಿವಿ ಇನ್ಸ್ಟಿಟ್ಯೂಟ್ ನಿಂದ ‘ಡಿಪ್ಲೋಮ ಇನ್ ಡೈರೆಕ್ಷನ್’ ಪಡೆದಿದ್ದ ರಿಷಬ್ ಶೆಟ್ಟಿ, ಇಬ್ಬರೂ ಸಹ ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಲ್ಲಿದ್ದರು. ಅರವಿಂದ್ ಕೌಶಿಕ್ ಅವರ ತುಘಲಕ್ ಚಿತ್ರದಲ್ಲಿ ನಾಯಕ-ಖಳನಾಯಕರಾಗಿ ನಟಿಸಿ ಸ್ನೇಹಿತರಾದವರು. ತುಘಲಕ್ ಚಿತ್ರದ ಏರಿಳಿತಗಳನ್ನು ಥೀಯೇಟರ್ ನ ಹೊರಗಡೆ ಇಬ್ಬರೂ ಜೊತೆಗೇ ಕೂತು ಗಮನಿಸಿದ್ದರು.’ತುಘಲಕ್’ ರಕ್ಷಿತ್ ರವರ ಮೊದಲ ಚಿತ್ರ. ಆದರೆ ಇದು ಜನರನ್ನ ತನ್ನತ್ತ ಸೆಳೆಯುವಲ್ಲಿ ಸೋತಿತ್ತು.
ನಂತರ 2014ರಲ್ಲಿ ಈಗ ‘cult’ ಅನ್ನುವ ಸ್ಥಾನ ಪಡೆದಿರೋ ‘ಉಳಿದವರು ಕಂಡಂತೆ’ ಹಾಗೂ 2016ರಲ್ಲಿ ‘ಕಿರಿಕ್ ಪಾರ್ಟಿ’ಯ ಮೂಲಕ ಇಬ್ಬರು ಜೊತೆಗೇ ಕೆಲಸ ಮಾಡಿದ್ದರು. ಅಲ್ಲದೆ ಉಳಿದವರು ಕಂಡಂತೆಯ ಆರಂಭ ಮತ್ತು ಅಂತ್ಯಗಳನ್ನು ಹೇಳಬಲ್ಲಂತ ‘ರಿಚರ್ಡ್ ಅಂಥೋನಿ’ ಎಂಬ ಚಿತ್ರ ಮಾಡುತ್ತಿದ್ದೇವೆ ಎಂದು ರಕ್ಷಿತ್ ಹೇಳುವುದರ ಮೂಲಕ ಇವರಿಬ್ಬರ ಮರುಮಿಲನವಾಗುವುದು ಖಚಿತವಾಗಿದೆ.
ಇವರ ಮಧ್ಯೆ ರಾಜ್ ಬಿ ಶೆಟ್ಟಿ ಸ್ವಲ್ಪ ವಿಭಿನ್ನ. ‘ಸ್ಟಾರ್’ ಆಗಿದ್ದ ರಕ್ಷಿತ್ ಶೆಟ್ಟಿಯವರನ್ನ ಮಾತಾಡಿಸೋದು ರಾಜ್ ಬಿ ಶೆಟ್ಟಿಯವರು ಹಿಂಜರಿಯುತ್ತಿದ್ದ ಕೆಲಸವಾಗಿತ್ತಂತೆ. “ಆದರೆ ಕೋರೋನ ಲಾಕ್ಡೌನ್ ಮಧ್ಯೆ ಅವರೊಂದಿಗೆ ಮಾತನಾಡಿ ಸಿನಿಮಾಗಳ ಬಗ್ಗೆ ವಿಮರ್ಶಿಸಿದಾಗ ನಾನು ಕಂಡದ್ದು ಒಬ್ಬ ಮುಗ್ಧ ವ್ಯಕ್ತಿ. ಅವರ OTT ಯ ಕನಸಿಗೆ ಒಂದು ಕಥೆ ಬರೆದು, ಗರುಡ ಗಮನ ಚಿತ್ರವನ್ನ ತೋರಿಸಿ ಅವರಿಂದ ಪ್ರಶಂಸೆ ಹಾಗೂ ವ್ಯವಹಾರದ ಮಾತುಗಳನ್ನು ಒಪ್ಪಿ ಅಪ್ಪಿಕೊಂಡೆ’ ಎಂದು ರಕ್ಷಿತ್ ಬಗ್ಗೆ ಹೇಳುತ್ತಾರೆ ರಾಜ್.

 • ಒಂದು ಬೆಳೆಯುತ್ತಿರೋ ಬೆಳಕು..
ಮೂವರಲ್ಲಿ ಪ್ರತಿಯೊಬ್ಬರೂ ಸಹ ಅವರದೇ ಆದ ರೀತಿಯಲ್ಲಿ ಕಲೆಯಲ್ಲಿನ ‘ಸಮಾನ ಮನಸ್ಕರ’ನ್ನ ಒಂದುಗೂಡಿಸೋ ರಾಯಭಾರಿಗಳಗಿದ್ದಾರೆ. ರಕ್ಷಿತ್ ಬರವಣಿಗೆಯ ಮೇಲೆ ಸಮಯ ಹಾಗೂ ಸಂಭಾವನೆಗಳನ್ನು ಹೆಚ್ಚಾಗಿಯೇ ನೀಡುತ್ತಾರೆ. ಇವರ ಬರವಣಿಗೆಗಾಗಿಯೇ ಇರುವ ‘ರಕ್ಷಿತ್ ಶೆಟ್ಟಿ ಅಂಡ್ ದಿ ಸೆವೆನ್ ಒಡ್ಸ್’ ತಂಡ ಪ್ರಖ್ಯಾತವಾಗಿದೆ. ಅವರೇ ಹೇಳುವ ಪ್ರಕಾರ ಅವರು ಉಳಿದವರು ಕಂಡಂತೆಯನ್ನು ದಕ್ಷಿಣ ಕನ್ನಡದ ಭಾಷೆಯಲ್ಲಿ ಮಾಡಲು ಮುಖ್ಯ ಕಾರಣ ಈ ಭಾಷೆಯ ಹಲವಾರು ಅಲ್ಲದ ಪರಿಗಳನ್ನು ಕೇಳಿದ ಬೇಜಾರು.”ಅದು ನಾವಾಡುವ ಮಂಗಳೂರು ಕನ್ನಡ ಅಲ್ಲ” ಅನ್ನುತ್ತಾರೆ ಅವರು.
ರಿಷಬ್ ತಮ್ಮ ‘ರಿಷಬ್ ಶೆಟ್ಟಿ ಫಿಲಂಸ್’ ಮೂಲಕ ನಾಡಿನೆಲ್ಲೆಡೆಯ ಒಳ್ಳೊಳ್ಳೆ ಕಲಾವಿದರನ್ನ ತಂತ್ರಜ್ಞರನ್ನ ಬೆನ್ನೆಲುಬಾಗಿ ಕಾಯುತ್ತಿದ್ದಾರೆ. ಇದಕ್ಕೆ ಅವರು ಕೊಡೋ ವಿವರಣೆ ಅವರ ಮೊದಲ ನಿರ್ದೇಶನದ ಚಿತ್ರದ ಹಿಂದಿರೋ ಹತ್ತು ವರ್ಷಗಳ ಶ್ರಮದ ಕಥೆ. ರಿಷಬ್ ತಮ್ಮ ಚೊಚ್ಚಲ ನಿರ್ದೇಶನದ ‘ರಿಕ್ಕಿ’ ಚಿತ್ರ ಮಾಡಲಾದದ್ದು ಚಿತ್ರರಂಗ ಸೇರಿ ಹತ್ತು ವರ್ಷಗಳಾದ ಮೇಲೆ!!
ರಾಜ್ ಬಿ ಶೆಟ್ಟಿಯವರ ವಾತಾವರಣ ತುಂಬಿರೋದು ಅವರ ಸ್ನೇಹಿತರು ಮತ್ತು ಛಾಯಾಗ್ರಾಹಕ-ಸಂಕಲನಕಾರರಾದ ಪ್ರವೀಣ್ ಶ್ರೀಯಾನ್. ರಾಜ್ ಪ್ರವೀಣ್ ರವರ ಜೊತೆ ತಮ್ಮ ಮೊದಲ ಕಿರುಚಿತ್ರದಿಂದಲೂ ಕೆಲಸ ಮಾಡುತ್ತಿದ್ದಾರೆ. “ಸಮಾನ ಮನಸ್ಕರೆಲ್ಲ ಜೊತೆಯಾಗಿ ಕೆಲಸ ಮಾಡುವಾಗ ಒಂದೊಳ್ಳೆ ಪರಿಶುದ್ಧ ಕಲೆ ಹುಟ್ಟುತ್ತೆ ಅನ್ನೋ ಸ್ವಾರ್ಥ ನನ್ನದು” ಅನ್ನುತ್ತಾರೆ ರಾಜ್.

 • ಬರವಣಿಗೆ ಒಂದು ಪರಿಶುದ್ಧತೆಯ ಮಾರ್ಗ..
ನಟನೆ-ಬರವಣಿಗೆ-ನಿರ್ದೇಶನ ಇವೆಲ್ಲವನ್ನೂ ಮಾಡೋ ರಕ್ಷಿತ್ ರಿಷಬ್ ಮತ್ತು ರಾಜ್ ಇವೆಲ್ಲದರಲ್ಲೂ ಏನಾದರೊಂದು ಕಲಿಯುತ್ತಲೇ ಇರುತ್ತಾರೆ.” ಅನಂತ್ ನಾಗ್ ರಂತಹ ಮೇರು ನಟರಿಗೆ ನಿರ್ದೇಶನ ಮಾಡೋವಾಗ ಅವರಿಂದ ನಾನು ನನ್ನ ನಟನೆಗೆ ಬೇಕಾದುದನ್ನ ಪಡೆದುಕೊಳ್ತೇನೆ. ಹಾಗೆ ರಾಜ್ ಅಂತವರ ನಿರ್ದೇಶನದಲ್ಲಿ ನಟಿಸುವಾಗ ನನ್ನೊಳಗಿನ ನಿರ್ದೇಶಕನಿಗೆ ಅವರಿಂದ ಏನಾದರೂ ಕಲಿಸುತ್ತೇನೆ” ಅನ್ನುತ್ತಾರೆ ರಿಷಬ್.
ರಾಜ್ ಅವರ ಕಥೆಗಳು ಅವರ ಜೀವನದ ಅನುಭವಾದರಿತ. “ಮೊದಲು ನಾನೊಬ್ಬ ಬರಹಗಾರ, ನಂತರ ನಿರ್ದೇಶಕ, ನಟ. ನನ್ನ ಚಿತ್ರಗಳನ್ನ ನಾನೇ ನಿರ್ಮಾಣ ಮಾಡೋದರಿಂದ ಮಾರುಕಟ್ಟೆಯ ಅಡೆತಡೆಗಳನ್ನ ಮರೆತು ಸಿನಿಮಾ ಮಾಡೊ ಸ್ವಾತಂತ್ರ್ಯ ಸಿಗುತ್ತೆ. ನನ್ನ ಗೆಳೆಯರು ನಿರ್ಮಾಣದ ಬಗ್ಗೆ ನೋಡಿಕೊಳ್ಳುತ್ತಾರೆ. ಇದರಲ್ಲಿ ನನ್ನದು ಕೇವಲ ಹೆಸರಷ್ಟೇ. ಹಾಗಾಗಿ ರಕ್ಷಿತ್ ರಂತವರು ನನ್ನ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗಲು ಕೇಳಿದಾಗ ನನಗೆ ತುಂಬಾ ಖುಷಿಯಾಗತ್ತೆ.ಅದು ನನ್ನನ್ನು ಇನ್ನಷ್ಟು ಹೊಸತರ ಬಗ್ಗೆ ಯೋಚಿಸೊ ಹಾಗೆ ಮಾಡತ್ತೆ.” ಅನ್ನೋದು ರಾಜ್ ಮಾತು.
ರಕ್ಷಿತ್ ಪ್ರಕಾರ ಅವರೊಬ್ಬ ಬರಹಗಾರ. “ನಾನು ನಿರಂತರವಾಗಿ ಕಲಿತಾನೆ ಇರ್ತೀನಿ. ಅದಕ್ಕೇನೆ ಬರವಣಿಗೆ ಸಲೀಸಾಗಿ ಆಗತ್ತೆ. ಒಬ್ಬ ನಿರ್ಮಾಪಕನಾಗಿ ನನ್ನದು ಹದ್ದಿನ ಕಣ್ಣು. ಯಾವದಕ್ಕೂ ಹೆಚ್ಚು-ಕಡಿಮೆ ಮಾಡಿಕೊಳ್ಳೋದಿಲ್ಲ. ಅದೇ ಒಬ್ಬ ನಟನಾಗಿ ನಾನು ಪಾತ್ರದೊಳಗೆ ಹೋದರೆ ಸಾಕು” ಅಂತಾರೆ.

ನೀವು ಮೂವರು ಜೊತೆಯಾಗಿ ಸಿನಿಮಾ ಮಾಡ್ತೀರಾ? ಅನ್ನೋ ಪ್ರಶ್ನೆಗೆ “ಖಂಡಿತ, ಆದರೆ ಕಥೆಗೆ ನಮ್ಮ ಅವಶ್ಯಕತೆ ಇದ್ದರೆ ಮಾತ್ರ” ಅಂತಾರೆ. ಮೂವರಿಗೂ ಕರ್ನಾಟಕದೆಲ್ಲೆಡೆಯ ನಿರ್ದೇಶಕರು ಬರಹಗಾರರ ಜೊತೆ ಕೆಲಸ ಮಾಡೋ ಆಸೆ ಇದೆಯಂತೆ.

ಗರುಡ ಗಮನ ವೃಷಭ ವಾಹನ ಜನವರಿ 13ರಿಂದ zee5 ಅಲ್ಲಿ ಪ್ರಸಾರವಾಗುತ್ತಿದೆ.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap