ನಟ ವಿಶಾಲ್ ಹೆಗ್ಡೆ ತಮ್ಮ ಹೊಸ ಸಿನಿಮಾ “ಗಣ” ದ ಶೂಟಿಂಗ್ ನಲ್ಲಿ ಮೈಸೂರಿನಲ್ಲಿ ಇದ್ದಾರೆ. ನಟಿ ವೇದಿಕಾ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಪ್ರಜ್ವಲ್ ದೇವರಾಜ್ ಹಾಗೂ ಕೃಷಿ ತಾಪಂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹರಿಪ್ರಸಾದ್ ಜಕ್ಕ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
“ನಾನು ಗಣ ಸಿನಿಮಾದಲ್ಲಿ ರೆಟ್ರೋ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದೇನೆ.ನಾನೀಗ ನನ್ನ ಪಾತ್ರದ ಬಗ್ಗೆ ಇಷ್ಟೇ ಹೇಳಲು ಸಾಧ್ಯ. ಇದರ ಹೊರತಾಗಿ ಇದೊಂದು ಆಸಕ್ತಿಕರವಾದ ಪಾತ್ರವಾಗಿದ್ದು ಎಲ್ಲರನ್ನೂ ರಂಜಿಸಲಿದೆ” ಎಂದಿದ್ದಾರೆ.
ಮೈಸೂರಿನಲ್ಲಿ ಶೂಟಿಂಗ್ ಎಂಜಾಯ್ ಮಾಡುತ್ತಿರುವ ವಿಶಾಲ್ ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದಿದ್ದಾರೆ. “ಸುತ್ತಲೂ ಹಸಿರು ಇದ್ದಾಗ ತಾಜಾತನವಾಗಿರುತ್ತದೆ. ಚಿತ್ರೀಕರಣದ ಸುಲಭದ ವಿಷಯಕ್ಕೆ ಬಂದರೆ ಯಾವುದೇ ಟ್ರಾಫಿಕ್ ಇಲ್ಲ. ಹೀಗಾಗಿ ಲೊಕೇಶನ್ ತಲುಪಲು ಅರ್ಧ ಗಂಟೆ ಸಾಕು. ನನಗೆ ಒಂದೆರಡು ದಿನಗಳ ರಜೆ ಇದ್ದರೆ ಮೈಸೂರಿನಲ್ಲಿ ಇರಲು ನಿರ್ಧರಿಸಿದ್ದೇನೆ” ಎಂದಿದ್ದಾರೆ.
ವಿಜಯ ರಾಘವೇಂದ್ರ ಜೊತೆ ರಿಂಗ ರಿಂಗ ರೋಸಸ್ ಸಿನಿಮಾದಲ್ಲಿ ಡಾಕ್ಟರ್ ಪಾತ್ರ ಮಾಡುತ್ತಿರುವ ವಿಶಾಲ್ “ನಾನು ಮೊದಲ ಬಾರಿ ಡಾಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನನ್ನ ಪಾತ್ರ ಯಾವಾಗಲೂ ಸಮಾಜಕ್ಕೆ ದುಡಿಯುವ ವ್ಯಕ್ತಿ, ಸದಾ ಶಕ್ತಿಯುತವಾಗಿದ್ದು ರೋಗಿಗಳ ಚೇತರಿಕೆಗಾಗಿ ಅವರಲ್ಲಿ ವಿಶ್ವಾಸ ತುಂಬಬೇಕು”ಎಂದಿದ್ದಾರೆ. ವಿಜಯ್ ಜೊತೆಗೆ ನಟಿಸಿರುವ ಬಗ್ಗೆ ಹೇಳಿರುವ ವಿಶಾಲ್ ” ನಾವು ನಿನಗಾಗಿ ಸಿನಿಮಾದಲ್ಲಿ ನಟಿಸುವ ಮೂಲಕ ಒಟ್ಟಿಗೆ ಕೆರಿಯರ್ ಆರಂಭಿಸಿದೆವು. ನಾವು ಉತ್ತಮ ಸ್ನೇಹಿತರು. ನಮ್ಮ ಸ್ನೇಹ ಶೂಟಿಂಗ್ ಮಾಡಲು ಸುಲಭ ಮಾಡಿಕೊಟ್ಟಿದೆ” ಎಂದಿದ್ದಾರೆ.