ನಟ ಯಶಸ್ ಸೂರ್ಯ ಸದ್ಯ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ರೆಸ್ಲರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಾತ್ರದ ಕುರಿತು ಮಾತನಾಡಿರುವ ಯಶಸ್ “ನಾನು ರೆಸ್ಲರ್ ಗರಡಿ ಸೂರಿ ಪಾತ್ರ ಮಾಡುತ್ತಿದ್ದೇನೆ. ನಾನು ರೆಸ್ಲರ್ ಗಳಿಗೆ ಪೌಷ್ಟಿಕ ಆಹಾರ ತಯಾರಿಸುವ ಚೆಫ್ ಆಗಿರುತ್ತೇನೆ. ನಾನು ಹೇಗೆ ರೆಸ್ಲಿಂಗ್ ಗೆ ಇಳಿಯುತ್ತೇನೆ ಎಂಬುದು ಕಥೆಯಲ್ಲಿ ಕುತೂಹಲ ಉಂಟು ಮಾಡುತ್ತದೆ” ಎಂದಿದ್ದಾರೆ.
ಪಾತ್ರಕ್ಕಾಗಿ ಹಲವು ರೀತಿಯ ತಯಾರಿಗಳನ್ನು ಮಾಡಿದ್ದಾರೆ ಯಶಸ್ ” ಗರಡಿ ಮನೆಗಳ ತವರು ಮನೆ ಆಗಿರುವ ಮೈಸೂರಿನಲ್ಲಿ ನಾವು ಒಂದು ತಿಂಗಳಿನ ಕಾಲ ನೆಲೆಸಿದ್ದೆವು. ರೆಸ್ಲರ್ ದೇಸಿ ಗೌಡರು ಅಡಿಯಲ್ಲಿ ನಾನು ತರಬೇತಿ ಪಡೆದಿದ್ದೆ. ನಾನು ಜಿಮ್ ನಲ್ಲಿ ಬೆಳಿಗ್ಗೆ ಹಾಗೂ ಸಂಜೆ ಎರಡು ಗಂಟೆ ತರಬೇತಿ ಪಡೆಯುತ್ತಿದ್ದೆ. ರೆಸ್ಲಿಂಗ್ ಗೆ ಸಿದ್ಧತೆ ಮಾಡುತ್ತಿದ್ದೆ. ಆರಂಭದಲ್ಲಿ ನಾವು ಮಟ್ಟಿ ಎಂಬ ಮಣ್ಣಿಗೆ ಪೂಜೆ ಮಾಡುತ್ತಿದ್ದೆವು. ಈ ಹಂತ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಏಕೆಂದರೆ ಅವರು ಒಂದು ರೀತಿಯ ಮಣ್ಣು, ಎಣ್ಣೆ ಹಾಗೂ ತುಪ್ಪವನ್ನು ಮಿಶ್ರಣ ಮಾಡುತ್ತಾರೆ. ಇನ್ನೊಂದು ಆಸಕ್ತಿಯ ವಿಷಯ ಎಂದರೆ ನಾವು ಗರಡಿಯಲ್ಲಿ ಸ್ನಾನ ಮಾಡುತ್ತಿದ್ದೆವು. ಡಯಟ್ ನಲ್ಲಿ ಪ್ರೊಟೀನ್ ಗೆ ಮಹತ್ವ ನೀಡಬೇಕು. ಮಸಾಲೆಯ ಆಹಾರ ತಿನ್ನಬಾರದು”ಎಂದಿದ್ದಾರೆ.
ಚಿತ್ರದ ಪ್ರಮುಖ ಅಂಶವಾಗಿರುವ ರೆಸ್ಲಿಂಗ್ ಗಾಗಿ ನಗರದ ಹೊರಗಡೆ ಸೆಟ್ ನಲ್ಲಿ ಶೂಟಿಂಗ್ ಮಾಡಲಾಗಿದೆ. ಸೋನಾಲ್ ಮೊಂತೆರೋ ನಾಯಕಿಯಾಗಿ ನಟಿಸುತ್ತಿದ್ದಾರೆ. ತುಂಬಾ ಸಮಯದ ಬಳಿಕ ಬಿ.ಸಿ ಪಾಟೀಲ್ ರೆಸ್ಲರ್ ಆಗಿ ನಟಿಸಿದ್ದಾರೆ. ಸಚಿವ ಎಸ್.ಟಿ ಸೋಮಶೇಖರ್ ಕೂಡಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.